Breaking News
Home / Uncategorized / ಸೋಲ್ಲಾಪುರವೇನು ಕೊಲ್ಲಾಪುರವೂ ಒಂದು ಕಾಲಕ್ಕೆ ಕನ್ನಡ ಸೀಮೆಯೇ ಆಗಿತ್ತು!

ಸೋಲ್ಲಾಪುರವೇನು ಕೊಲ್ಲಾಪುರವೂ ಒಂದು ಕಾಲಕ್ಕೆ ಕನ್ನಡ ಸೀಮೆಯೇ ಆಗಿತ್ತು!

Spread the love

ಸೋಲ್ಲಾಪುರವೇನು ಕೊಲ್ಲಾಪುರವೂ ಒಂದು ಕಾಲಕ್ಕೆ ಕನ್ನಡ ಸೀಮೆಯೇ ಆಗಿತ್ತು! 20ನೇ ಶತಮಾನ ಕಾಲಿಡುವ ಸಮಯದಲ್ಲೂ ಬ್ರಿಟಿಷರು ಕೊಲ್ಲಾಪುರ ಜಿಲ್ಲೆಯನ್ನು ಕರ್ನಾಟಕ ಪ್ರಾಯಂತ್ಯದಲ್ಲೇ ಗುರುತಿಸಿದ್ದರು. ಆಗ ಬ್ರಿಟಿಷರ ಪ್ರತಿನಿಧಿಯನ್ನು ಕೊಲ್ಲಾಪುರದಲ್ಲಿ ಇಟ್ಟಿದ್ದರು.

ಈ ರಾಜಕೀಯ ಏಜೆಂಟ್ ಜೊತೆ ಪತ್ರ ವ್ಯವಹಾರ ನಡೆಸುವಾಗ ವಿಳಾಸದಲ್ಲಿ ಕೊಲ್ಲಾಪುರ ರಾಜಕೀಯ ಏಜೆಂಟ್, ಕರ್ನಾಟಕ ಪ್ರಾಂತ್ಯ ಎಂದೇ ಬರೆಯುತ್ತಿದ್ದರು. ಕರ್ನಾಟಕದ ಬದಲು ಕರವೀರ ಇಲಾಖಾ ಎಂದು ಕೊಲ್ಲಾಪುರವನ್ನು ಕರೆಯುತ್ತಿದ್ದುದೂ ಇದೆ. ಅಂದರೆ ಇಪ್ಪತ್ತನೇ ಶತಮಾನದ ಉದಯದ ತನಕ ಲಾಗಾಯ್ತಿನಿಂದಲೂ ಕೊಲ್ಲಾಪುರ ಕನ್ನಡಸೀಮೆಯೇ ಆಗಿತ್ತು.

1890ರ ದಶಕದಲ್ಲೂ ಈ ಪ್ರದೇಶದಲ್ಲಿ ದಕ್ಷಿಣ ಮರಾಠ ದೇಶ ಎಂಬ ಮಾತೂ ಪ್ರಚಲಿತವಿತ್ತು. ಆದರೆ, ಆಡಳಿತದಲ್ಲಿ ಇದರ ಮಾನ್ಯತೆ ಇರಲಿಲ್ಲ. ಬ್ರಿಟಿಷರು ಅದನ್ನು ಒಪ್ಪಿರಲಿಲ್ಲ. ಏಕೆಂದರೆ, ವಾಸ್ತವ ಸ್ಥಿತಿಯೇ ಬೇರೆ ಇತ್ತು. ಈ ಕೊಲ್ಲಾಪುರ ಸೀಮೆಯಲ್ಲಿ ಕನ್ನಡದ್ದೇ ಕನ್ನಡಿಗರದ್ದೇ ದರ್ಬಾರು ಇತ್ತು. ಛತ್ರಪತಿ ಶಿವಾಜಿ ಆಗಮಿಸುವ ಮುನ್ನ ಈ ಪ್ರದೇಶದ ಇತಿಹಾಸ ಹೇಗಿದೆ ಒಮ್ಮೆ ನೋಡಿ. ಇಲ್ಲಿ ಪಶ್ಚಿಮ ಭಾರತದ ಭೂಭಾಗದಲ್ಲಿ ನಮಗೆ ಹೇರಳವಾಗಿ ಶಾಸನಗಳು ಕಾಣಸಿಗುತ್ತವೆ. ಅದರಲ್ಲೂ ದಕ್ಷಿಣ ಮಹಾರಾಷ್ಟ್ರದಲ್ಲಿ ಸಿಕ್ಕಿರುವ ಶಾಸನಗಳ ವಿಶೇಷವೇನೆಂದರೆ, ಇವುಗಳೆಲ್ಲಾ ಅಚ್ಚ ಸಂಸ್ಕೃತದಲ್ಲಿವೆ ಇಲ್ಲಾ ಅಚ್ಚಕನ್ನಡದಲ್ಲಿವೆ. ತಪ್ಪಿದರೆ ಕನ್ನಡ ಸಂಸ್ಕೃತ ಮಿಳಿತವಾದ ಭಾಷೆಯಲ್ಲಿವೆ. ಇದಕ್ಕೆ ಕಾರಣವೆಂದರೆ ಇದು ಕನ್ನಡದ ರಾಜ್ಯವಾಗಿತ್ತು. ಇಲ್ಲಿ ಜನಸಾಮಾನ್ಯರಲ್ಲಿ ಬಳಕೆಯಲ್ಲಿದ್ದುದು ಕನ್ನಡ ಭಾಷೆಯಾಗಿತ್ತು. ವಿಶೇಷವೆಂದರೆ ಈ ಸೀಮೆಯಲ್ಲಿ ಶಿವಾಜಿ ಕಾಲಕ್ಕೆ ಮುನ್ನ ಒಂದೇ ಒಂದು ಮರಾಠಿ ಶಾಸನವೂ ಪತ್ತೆಯಾಗಿಲ್ಲ!

ಅಷ್ಟೇ ಏಕೆ, ಬ್ರಿಟಿಷರ ಕಾಲದಲ್ಲೂ ದಕ್ಷಿಣ ಮರಾಠ ಪ್ರಾಂತ್ಯದ ಹೆಸರು ಕೇಳಿಬರುತ್ತಿದ್ದರೂ ಅದಕ್ಕೆ ಬ್ರಿಟಿಷರ ಮನ್ನಣೆ ಇರಲಿಲ್ಲ. ಕೊಲ್ಲಾಪುರ ಸೀಮೆಯನ್ನು ಅವರು ಕರ್ನಾಟಕ ಪ್ರಾಂತ್ಯ ಎಂದೇ ಗುರುತಿಸಿದ್ದರು. ಶಿವಾಜಿ ಕಾಲದ ಬಳಿಕ ಮರಾಠರ ಪ್ರಾಬಲ್ಯ ಈ ಕೊಲ್ಲಾಪುರ ಸೀಮೆಯನ್ನು ಆವರಿಸಿತು. ಕನ್ನಡವನ್ನು ಹಿಂದೆ ತಳ್ಳುವ, ಹಾಗೆಯೇ ಮರಾಠಿಯನ್ನು ಹೇರುವ ರಾಜಕೀಯ ಕಾರ್ಯವು 20ನೇ ಶತಮಾನದ ಆರಂಭದಿಂದ ಗರಿಗಟ್ಟಿತು. ಕನ್ನಡಿಗರು ಮಂಕಾದರು. ಇಷ್ಟಾದರೂ ಮರಾಠಿಗರ ಆವುಟಕ್ಕೆ ಬ್ರಿಟಿಷರು ಸೊಪ್ಪುಹಾಕಿರಲಿಲ್ಲ. ದಕ್ಷಿಣ ಮರಾಠಿ ಪ್ರಾಂತ ಎಂಬ ಕೂಗು ಇದ್ದರೂ ಕೊಲ್ಲಾಪುರದ ಮರಾಠಿ ಅಧಿಕೃತ ಪತ್ರವ್ಯವಹಾರದಲ್ಲಿ ಎಲ್ಲೂ ಬ್ರಿಟಿಷರು ದಕ್ಷಿಣ ಮರಾಠ ಪ್ರಾಂತ್ಯ ಎಂದು ಬರೆಯುತ್ತಿರಲಿಲ್ಲ. ಇದು 1900 ಇಸವಿಯವರೆಗೂ ಇದ್ದ ಸ್ಥಿತಿ. ಮರಾಠಿ ಪತ್ರವ್ಯವಹಾರದಲ್ಲೂ ವಿಳಾಸದಲ್ಲಿ ಕೊಲ್ಲಾಪುರ, ಕರ್ನಾಟಕ ಪ್ರಾಂತ್ಯ ಎಂದೋ ಕೊಲ್ಲಾಪುರ, ಕರವೀರ ಇಲಾಖಾ ಎಂದೋ ಬರೆಯಲಾಗುತ್ತಿತ್ತು.

ಕೇವಲ ಕೊಲ್ಲಾಪುರ-ಸೊಲ್ಲಾಪುರ ಏಕೆ, ನೀವು ಮಹಾರಾಷ್ಟ್ರ ಇತಿಹಾಸ ಬರೆದರೆ ಕಾಣುವುದು ಕನ್ನಡ ರಾಜರದ್ದೇ ದರ್ಬಾರು ಹಾಗೂ ಕನ್ನಡ-ಸಂಸ್ಕೃತ ಭಾಷೆಗಳ ಶಾಸನಗಳದ್ದೇ ವಿಜೃಂಭಣೆ! ವಾಸ್ತವವಾಗಿ ನೋಡಿದರೆ 14ನೇ ಶತಮಾನದವರೆಗಿನ ಮಹಾರಾಷ್ಟ್ರದ ಇತಿಹಾಸ ಬರೆದರೆ ಅದು ಕನ್ನಡ ರಾಜರ ವೈಭವವೇ ಆಗಿಬಿಡುತ್ತದೆ.

ನಿಜವಾದ ಸಂಗತಿಯೆಂದರೆ ಮೌರ್ಯರ ಕಾಲದ ಬಳಿಕ ಭಾರತದಲ್ಲಿ ದೊಡ್ಡದಾಗಿ ರಾಜ್ಯಭಾರ ಮಾಡಿದವರೆಂದರೆ ಕನ್ನಡ ರಾಜರೇ ಆಗಿದ್ದಾರೆ. ಮುಸ್ಲಿಮರ ಆಕ್ರಮಣಕ್ಕೆ ಮುನ್ನ ಮೌರ್ಯರ ಕಾಲದ ಬಳಿಕ ಭಾರತದಲ್ಲಿ ಕನ್ನಡ ರಾಜರ ಪ್ರಾಬಲ್ಯ ಇತ್ತು. ಕನ್ನಡ ರಾಜರ ಪ್ರಾಬಲ್ಯ ಎಷ್ಟು ದೊಡ್ಡದಾಗಿತ್ತು ಗೊತ್ತೆ? ಮೇಲೆ ವಿಂಧ್ಯಪರ್ವತ, ಕೆಲವೊಮ್ಮೆ ಇನ್ನೂ ಮೇಲಕ್ಕೆ ಕನ್ನಡ ರಾಜರು ಮೆರೆದಿದ್ದರು. ಇತ್ತ ಅರಬ್ಬಿ ಸಮುದ್ರ ಅತ್ತ ಬಂಗಾಳಕೊಲ್ಲಿ ಅವರ ಸರಹದ್ದಾಗಿದ್ದು ಉಂಟು. ಇನ್ನು ‘ಕಾವೇರಿಯಿಂದಮಾ ಗೋದಾವರಿವರಮಿರ್ದ ನಾಡದಾ ಕನ್ನಡದೊಳ್’ ಎಂಬ ರಾಷ್ಟ್ರಕೂಟ ಚಕ್ರವರ್ತಿ ನೃಪತುಂಗನ ಮಾತು ನಮಗೆಲ್ಲಾ ಗೊತ್ತೇ ಇದೆ. ಅಶೋಕನ ಕಾಲಾನಂತರ ವಿಜಯನಗರ ಸಾಮ್ರಾಜ್ಯದ ಕಾಲದವರೆಗೆ ಕನ್ನಡ ರಾಜರು ಭಾರತದಲ್ಲಿ ದೊಡ್ಡ ಪ್ರಭಾವಶಾಲಿಗಳಾಗಿದ್ದರು ಎಂಬುದು ನಿಜಕ್ಕೂ ಮಹತ್ತರವಾದ ವಿಷಯ. ಈ ಅರ್ಥದಲ್ಲಿ ಮೊಘಲರಿಗಿಂತಲೂ ಮಿಗಿಲು ಕನ್ನಡ ರಾಜರು ಎಂದರೆ ಅದರಲ್ಲಿ ಅತಿಶಯೋಕ್ತಿ ಇಲ್ಲ.

ಮರಾಠಿಗರಿಗೆ ಒಂದು ಕಿವಿಮಾತು. ಮರಾಠಿಗರಿಗೆ ತಾಯಿ ಕೊಟ್ಟಿರುವುದೇ ಕನ್ನಡ! ಕೇವಲ ತಾಯಿ ಪದವಷ್ಟೇ ಅಲ್ಲ, ಮರಾಠಿ ಭಾಷೆಯ ಪ್ರತಿಶತ ನಲವತ್ತರಷ್ಟು ಪದಗಳು ಕನ್ನಡದ ಬಳುವಳಿಯಾಗಿವೆ. ಹೀಗಾಗಿ ಕನ್ನಡ -ಮರಾಠಿ ಸಂಬಂಧ ತಾಯಿ-ಮಗಳ ಸಂಬಂಧವಾಗಿದೆ. ಇದು ಅಣ್ಣತಮ್ಮಂದಿರ ದಾಯಾದಿಗಳ ಸಂಬಂಧ ಅಲ್ಲ. ಮಾತೃಸಂಹಿತೆ -ಪುತ್ರಿಸಂಹಿತೆ ಇಲ್ಲಿ ಇರಬೇಕಾದುದು ಸಹಜ ಸ್ವಾಭಾವಿಕ ಹಾಗೂ ಸಮುಚಿತವಾದದ್ದು. ಒಬ್ಬರನ್ನೊಬ್ಬರು ಮೀರಿಸುವ ಸೋಲಿಸುವ ಪ್ರಶ್ನೆ ಇಲ್ಲಿ ಬರಬಾರದು. ಇತಿಹಾಸವನ್ನು ಒಪ್ಪಿಕೊಳ್ಳಬೇಕು; ವರ್ತಮಾನವನ್ನು ಅರ್ಥ ಮಾಡಿಕೊಳ್ಳಬೇಕು. ಇದು ಇಂದಿನ ಅಗತ್ಯ ಹಾಗೂ ಅನಿವಾರ್ಯತೆ.

(ಲೇಖಕರು ಹಿರಿಯ ಪತ್ರಕರ್ತರು, ಅಂಕಣಕಾರರು)


Spread the love

About Laxminews 24x7

Check Also

ಮಾಜಿ ಮುಖ್ಯಮಂತ್ರಿ ಎಸ್.ಎಂ.ಕೃಷ್ಣ ಅವರ ಆರೋಗ್ಯದಲ್ಲಿ ಏರು ಪೇರು.!

Spread the loveಬೆಂಗಳೂರು: ಮಾಜಿ ಮುಖ್ಯಮಂತ್ರಿ ಎಸ್.ಎಂ.ಕೃಷ್ಣ ಅವರ ಅನಾರೋಗ್ಯದ ಹಿನ್ನೆಲೆಯಲ್ಲಿ ಬೆಂಗಳೂರಿನ ಓಲ್ಡ್ ಏರ್ಪೋರ್ಟ್ ರಸ್ತೆಯಲ್ಲಿರುವ ಮಣಿಪಾಲ್ ಆಸ್ಪತ್ರೆಯ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ