Breaking News
Home / ಹುಬ್ಬಳ್ಳಿ / ಸ್ವಾತಂತ್ರ್ಯ ಹೋರಾಟ; ಬಾಪು ಕೈಯಲ್ಲಿ ಹೂಂಕರಿಸಿದ್ದ ಬೆತ್ತ ಕನ್ನಡ ನೆಲದ್ದು

ಸ್ವಾತಂತ್ರ್ಯ ಹೋರಾಟ; ಬಾಪು ಕೈಯಲ್ಲಿ ಹೂಂಕರಿಸಿದ್ದ ಬೆತ್ತ ಕನ್ನಡ ನೆಲದ್ದು

Spread the love

ಹುಬ್ಬಳ್ಳಿ: ದೇಶದ ಸ್ವಾತಂತ್ರ್ಯ ಹೋರಾಟದಲ್ಲಿ ಗಾಂಧೀಜಿ ಕೈಗೊಂಡ ದಂಡಿಯಾತ್ರೆ ತನ್ನದೇ ಮಹತ್ವ ಪಡೆದುಕೊಂಡಿದೆ. ಸಾಬರಮತಿಯಿಂದ ದಂಡಿವರೆಗೆ ಸುಮಾರು 390 ಕಿ.ಮೀ. ಯಾತ್ರೆಯಲ್ಲಿ ಗಾಂಧೀಜಿ ಬಳಸಿದ್ದ ದೊಡ್ಡದಾದ ಬೆತ್ತ ಕನ್ನಡದ ನೆಲದ್ದು. ಅದನ್ನು ನೀಡಿದ್ದು ಕರ್ನಾಟಕದ ಮೊದಲ ರಾಷ್ಟ್ರಕವಿ ಎಂಬ ಖ್ಯಾತಿಯ ಮಂಜೇಶ್ವರ ಗೋವಿಂದ ಪೈಗಳು ಎನ್ನುವುದು ವಿಶೇಷ.

 

ದಂಡಿಯಾತ್ರೆಯಲ್ಲಿ ದೇಶದ ಸಹಸ್ರಾರು ಜನರು ಗಾಂಧೀಜಿ ಅವರನ್ನು ಹಿಂಬಾಲಿಸಿದ್ದರು. ಉತ್ತರ ಕನ್ನಡ, ಕರಾವಳಿ ಪ್ರದೇಶ ಸೇರಿ ದೇಶದ ವಿವಿಧೆಡೆಗಳಲ್ಲಿ ಉಪ್ಪಿನ ಸತ್ಯಾಗ್ರಹ ಭುಗಿಲೆದ್ದು ಸಂಚಲನ ಮೂಡಿಸಿತ್ತು.

ಕನ್ನಡ ನೆಲದ ಬಡಿಗೆ:
ಸ್ವಾತಂತ್ರ್ಯ ಹೋರಾಟಗಾರ, ಸಮಾಜ ಸುಧಾರಕ, ಪತ್ರಕರ್ತ ದತ್ತಾತ್ರೇಯ ಬಾಲಕೃಷ್ಣ ಕಾಲೇಲಕರ (ಕಾಕಾ ಕಾಲೇಲಕರ್‌ ಎಂದೇ ಖ್ಯಾತಿ) ಸ್ವಾತಂತ್ರ್ಯ ಹೋರಾಟಕ್ಕೆ ತಮ್ಮದೇ ಕೊಡುಗೆ ನೀಡಿದ್ದಾರೆ. ಅಷ್ಟೇ ಅಲ್ಲದೆ ರಾಷ್ಟ್ರಭಾಷೆ ಕಾರಣದಿಂದ ಇಡೀ ದೇಶಸುತ್ತಿದ್ದರು. ಕಾಲೇಲಕರ ಅವರು ಕನ್ನಡದ ನೆಲ ಮಂಜೇಶ್ವರಕ್ಕೆ ಭೇಟಿ ನೀಡಿದ್ದರು.

ರಾಷ್ಟ್ರಭಾಷೆಗೆ ದೇಶ ಸುತ್ತುವ ಕಾರ್ಯದ ಜತೆಗೆ ಆತ್ಮೀಯ ಸ್ನೇಹಿತ ರಾಷ್ಟ್ರಕವಿ ಗೋವಿಂದ ಪೈ ಅವರನ್ನು ಭೇಟಿಯಾಗಲೆಂದು ಮಂಜೇಶ್ವರಕ್ಕೆ ಬಂದಿದ್ದರು. ಕಾಲೇಲಕರ ಅವರು ಮಂಜೇಶ್ವರದಿಂದ ಹೊರಡುವಾಗ ಗೋವಿಂದ ಪೈ ಅವರು ಸ್ನೇಹಿತನಿಗೆ ತಮ್ಮ ನೆನಪಿಗಾಗಿ ದೊಡ್ಡ ಕೋಲು(ಬೆತ್ತ) ನೀಡಿದ್ದರು. ಗಾಂಧೀಜಿ ದಂಡಿಯಾತ್ರೆ ಕೈಗೊಂಡಾಗ ಕಾಲೇಲಕರ ಅವರು ಮಂಜೇಶ್ವರದಲ್ಲಿ ಗೋವಿಂದ ಪೈ ಅವರು ತಮಗೆ ನೀಡಿದ್ದ ಬಡಿಗೆಯನ್ನೇ ಗಾಂಧೀಜಿಗೆ ನೀಡಿದ್ದರಂತೆ. ಗಾಂಧೀಜಿ 1930ರಲ್ಲಿ ಗುಜರಾತ್‌ನ ಸಾಬರಮತಿಯಿಂದ ದಂಡಿವರೆಗೆ ಸುಮಾರು 390 ಕಿಮೀ ಯಾತ್ರೆ ಕೈಗೊಂಡಾಗ ಇದೇ ಬೆತ್ತವನ್ನು ಬಳಸಿದ್ದರು.

ಉತ್ತರ ಕರ್ನಾಟಕ ವೇದಿಕೆ: ಭಾರತೀಯ ರಾಷ್ಟ್ರೀಯ ಕಾಂಗ್ರೆಸ್‌ನ 38ನೇ ಅಧಿವೇಶನ 1923ರಲ್ಲಿ ಕಾಕಿನಾಡದಲ್ಲಿ ಗಾಂಧೀಜಿ ಅನುಪಸ್ಥಿತಿಯಲ್ಲಿಯೇ ನಡೆದಿತ್ತು. ಮುಂದಿನ ಅಧಿವೇಶನ ಎಲ್ಲಿ ಎಂಬ ವಿಚಾರಕ್ಕೆ ಅನೇಕ ಕಡೆಯವರು ಪ್ರಸ್ತಾವನೆ ಮಂಡಿಸಿದ್ದರಾದರೂ, ಕನ್ನಡದವರೇ ಆದ ಅಂದಿನ ರಾಷ್ಟ್ರೀಯ ಕಾಂಗ್ರೆಸ್‌ ಪ್ರಧಾನ ಕಾರ್ಯದರ್ಶಿಗಳಲ್ಲಿ ಒಬ್ಬರಾದ ಗಂಗಾಧರರಾವ್‌ ದೇಶಪಾಂಡೆ ಕರ್ನಾಟಕದಲ್ಲಿ ಅಧಿವೇಶನ ನಡೆಯುವಂತೆ ಸಭೆ ಸಮ್ಮತಿ ಪಡೆಯುವಲ್ಲಿ ಯಶಸ್ವಿ
ಯಾಗಿದ್ದರು. 1924ರ ಡಿಸೆಂಬರ್‌ ಕೊನೆ ವಾರದಲ್ಲಿ ಬೆಳಗಾವಿಯಲ್ಲಿ ಭಾರತೀಯ ರಾಷ್ಟ್ರೀಯ ಕಾಂಗ್ರೆಸ್‌ನ 39ನೇ ಅಧಿವೇಶನ ನಡೆದಿತ್ತು. ಅಧಿವೇಶನ ಸ್ಥಳಕ್ಕೆ ವಿಜಯನಗರ ಎಂದು ಹೆಸರಿಸಲಾಗಿತ್ತು.

ಪ್ರವೇಶ ದ್ವಾರಕ್ಕೆ ಹಂಪಿಯ ವಿರೂಪಾಕ್ಷ ದೇವಸ್ಥಾನದ ಗೋಪುರ ಮಾದರಿಯ ಬೃಹತ್‌ ಕಮಾನು ನಿರ್ಮಿಸಲಾಗಿತ್ತು. ಅಧಿವೇಶನದಲ್ಲಿ ಹುಯಿಲಗೋಳ ನಾರಾಯಣರಾವ್‌ ಅವರ “ಉದಯವಾಗಲಿ ಚೆಲುವ ಕನ್ನಡ ನಾಡು’ ಹಾಡು ಮೊಳಗಿದ್ದು, ಹಿಂದೂಸ್ಥಾನಿ ಗಾಯಕಿ ಡಾ|ಗಂಗೂಬಾಯಿ ಹಾನಗಲ್ಲ ತಮ್ಮ 11ನೇ ವಯಸ್ಸಿನಲ್ಲಿಯೇ ಇದೇ ಅಧಿವೇಶನದಲ್ಲಿ ಪ್ರಾರ್ಥನೆ ಹಾಡು ಹಾಡಿದ್ದು ಉತ್ತರ ಕರ್ನಾಟಕದ ಹೆಮ್ಮೆಯ ಸಂಗತಿಗಳಾಗಿವೆ.

ಸ್ವದೇಶಿ ಕ್ರಾಂತಿಗೆ ಕಿಡಿ ಹೊತ್ತಿಸಿದ್ದ ಅಧಿವೇಶನ
ಬೆಳಗಾವಿಯಲ್ಲಿ 1924ರಲ್ಲಿ ಗಾಂಧೀಜಿ ಅಧ್ಯಕ್ಷತೆಯಲ್ಲಿ ನಡೆದ ಅಧಿವೇಶನದಲ್ಲಿ ಪ್ರಮುಖವಾಗಿ ಹಿಂದೂ-ಮುಸ್ಲಿಂರ ಐಕ್ಯತೆ, ವಿದೇಶಿ ವಸ್ತ್ರ ಬಹಿಷ್ಕಾರ, ಸ್ವದೇಶಿ ಉತ್ಪನ್ನಗಳ ಬಳಕೆಗೆ ಒತ್ತು ನೀಡುವ ಚರ್ಚೆ, ಘೋಷಣೆಗಳು ಮೊಳಗಿದ್ದವು.

ಸ್ವದೇಶಿ ಮಂತ್ರ ಘೋಷಣೆ ಪರಿಣಾಮ ಬೆಂಗಳೂರಿನಲ್ಲಿ ಪೇಪರ್‌ ಸಂಸ್ಕರಣೆ , ಕಡ್ಡಿಪೆಟ್ಟಿಗೆ ತಯಾರಿಕೆ, ಮೇಣ ಮತ್ತು ಅರಗ ತಯಾರಿಕೆ ಉದ್ಯಮ ಆರಂಭವಾದರೆ, ಬೆಳಗಾವಿಯಲ್ಲಿ ಚರ್ಮ ಸಂಸ್ಕರಣೆ, ಮೈಸೂರಿನಲ್ಲಿ ಅಗರಬತ್ತಿಗಳ ತಯಾರಿಕೆ, ಬಳ್ಳಾರಿಯಲ್ಲಿ ಇಟ್ಟಿಗೆ ತಯಾರಿಕೆ, ಹುಬ್ಬಳ್ಳಿಯಲ್ಲಿ ಆಹಾರ ಸಂಸ್ಕರಣೆ, ಮಂಗಳೂರಿನಲ್ಲಿ ತೈಲ ಉದ್ಯಮ, ಧಾರವಾಡದಲ್ಲಿ ಬಟ್ಟೆ ಉತ್ಪಾದನೆ ಉದ್ಯಮಗಳು ಆರಂಭಗೊಂಡಿದ್ದವು.


Spread the love

About Laxminews 24x7

Check Also

ನೇಹಾ ಹತ್ಯೆ ಖಂಡಿಸಿ ಮುಸ್ಲಿಂ ಸಮುದಾಯದ ಅಂಗಡಿ-ಮುಂಗಟ್ಟು ಬಂದ್‌: ಮೌನ ಮೆರವಣಿಗೆ

Spread the loveಧಾರವಾಡ : ಹುಬ್ಬಳ್ಳಿಯ ನೇಹಾ ಹಿರೇಮಠ ಹತ್ಯೆಯ ಆರೋಪಿ ಫಯಾಜ್‌ಗೆ ಶೀಘ್ರ ಕಠಿನ ಶಿಕ್ಷೆ ಕೊಡಿಸಿ ಅವರ ಕುಟುಂಬಕ್ಕೆ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ