Breaking News
Home / ಜಿಲ್ಲೆ / ಕಲಬುರ್ಗಿ / ಪಿಎಸ್‌ಐ ಅಕ್ರಮ: ಖಾಲಿ ಉತ್ತರ ಪತ್ರಿಕೆಯಲ್ಲಿ ಮಂಜುನಾಥ ಕರಾಮತ್ತು

ಪಿಎಸ್‌ಐ ಅಕ್ರಮ: ಖಾಲಿ ಉತ್ತರ ಪತ್ರಿಕೆಯಲ್ಲಿ ಮಂಜುನಾಥ ಕರಾಮತ್ತು

Spread the love

ಕಲಬುರಗಿ: ಪಿಎಸ್‌ಐ ನೇಮಕಾತಿ ಅಕ್ರಮದಲ್ಲಿ ಶಾಮೀಲಾದ ಮಂಜುನಾಥ ಮೇಳಕುಂದಿ ಒಎಂಆರ್‌ ಉತ್ತರ ಪತ್ರಿಕೆಗಳನ್ನು ಪರೀಕ್ಷೆ ಮುಗಿದ ಕೆಲವೇ ನಿಮಿಷಗಳಲ್ಲಿ ಪರೀಕ್ಷಾ ಸಿಬ್ಬಂದಿಯಿಂದ ಭರ್ತಿ ಮಾಡಿಸುವ ಮೂಲಕ ಅಭ್ಯರ್ಥಿಗಳು ಉತ್ತೀರ್ಣರಾಗುವಂತೆ ನೋಡಿಕೊಳ್ಳುತ್ತಿದ್ದ.

ಆ ನಂತರ ತನ್ನ ಪಾಲಿನ ಹಣ ಬರುವವರೆಗೂ ಉತ್ತರ ಪತ್ರಿಕೆಯ ಅಭ್ಯರ್ಥಿಗಳ (ಕ್ಯಾಂಡಿಡೇಟ್ ಕಾಪಿ) ಪ್ರತಿಯನ್ನು ತನ್ನ ಬಳಿಯೇ ಇಟ್ಟುಕೊಳ್ಳುತ್ತಿದ್ದ ಸಂಗತಿ ಸಿಐಡಿ ಅಧಿಕಾರಿಗಳು ನ್ಯಾಯಾಲಯಕ್ಕೆ ಸಲ್ಲಿಸಿರುವ ದೋಷಾರೋಪ ಪಟ್ಟಿಯಲ್ಲಿ ಹೊರಬಿದ್ದಿದೆ.

ಪ‍್ರಕರಣದಲ್ಲಿ ಮೊಟ್ಟಮೊದಲು ಬಂಧನಕ್ಕೊಳಗಾದ ಅಭ್ಯರ್ಥಿ, ಸೇಡಂನ ವೀರೇಶನಿಗೆ ₹ 40 ಲಕ್ಷಕ್ಕೆ ಬೇಡಿಕೆ ಇಟ್ಟಿದ್ದ ಮಂಜುನಾಥ ಆತನಿಂದ ₹ 36 ಲಕ್ಷ ಪಡೆದಿದ್ದ. ₹ 4 ಲಕ್ಷವಷ್ಟೇ ಬಾಕಿ ಉಳಿಸಿಕೊಂಡಿದ್ದರೂ ವಿದ್ಯಾರ್ಥಿಯ ಉತ್ತರ ಪತ್ರಿಕೆಯ ಕಾರ್ಬನ್ ಪ್ರತಿ ನೀಡಿರಲಿಲ್ಲ. ಅಕ್ರಮ ಹೊರಬಿದ್ದು ಕಲಬುರಗಿಯ ಚೌಕ ಠಾಣೆಯಲ್ಲಿ ಪ್ರಕರಣ ದಾಖಲಾದ ಬಳಿಕ ಆತಂಕಗೊಂಡು ನಾಲೆಯಲ್ಲಿ ಎಸೆದು ನಾಶ ಮಾಡಿದ್ದ.

ಕರ್ನಾಟಕ ನೀರಾವರಿ ನಿಗಮದಲ್ಲಿ ಸಹಾಯಕ ಎಂಜಿನಿಯರ್ (ಎಇ) ಆಗಿದ್ದ ಮಂಜುನಾಥ ಮೇಳಕುಂದಿಗೆ ಅಮರ್ಜಾ ಜಲಾಶಯದ ಉಸ್ತುವಾರಿ ವಹಿಸಲಾಗಿತ್ತು. ಪರೀಕ್ಷಾ ಅಕ್ರಮದಲ್ಲಿ ಪಳಗಿದ್ದ ಆರೋಪಿ ಪ್ರತಿ ಅಭ್ಯರ್ಥಿಗಳನ್ನು ವಿವಿಧ ಸ್ಥಳಗಳಲ್ಲಿ ಭೇಟಿ ಮಾಡುತ್ತಿದ್ದ. ಅಭ್ಯರ್ಥಿಗಳಿಂದ ಹಣ ಪಡೆದುಕೊಳ್ಳಲು ತನ್ನ ಸಹಚರರಿಗೂ ತಿಳಿಸಿದ್ದ. ವೀರೇಶನಿಂದ ₹ 5 ಲಕ್ಷ ಹಣವನ್ನು ಖುದ್ದಾಗಿ ಪಡೆದುಕೊಂಡಿದ್ದ. ಉಳಿದ ಹಣವನ್ನು ತನ್ನ ಸಂಬಂಧಿಗಳಿಗೆ ಕೊಡುವಂತೆ ಸೂಚನೆ ನೀಡಿದ್ದ ಎಂದು ದೋಷಾರೋಪ ಪಟ್ಟಿಯಲ್ಲಿ ದಾಖಲಾಗಿದೆ.

ಉತ್ತರ ಪತ್ರಿಕೆ ಭರ್ತಿ ಹೇಗೆ?

2021ರ ಅಕ್ಟೋಬರ್ 3ರಂದು ನಡೆದ ಪರೀಕ್ಷೆಯಲ್ಲಿ ಅಭ್ಯರ್ಥಿಗಳು ಎರಡು ಉತ್ತರ ಪತ್ರಿಕೆಗಳನ್ನು ಬರೆಯಬೇಕಿತ್ತು. ಮಧ್ಯಾಹ್ನದ ನಂತರ ಇದ್ದ ಪೇಪರ್-2 ಪತ್ರಿಕೆ ಅಂಕ ಗಳಿಕೆಯ ದೃಷ್ಟಿಯಿಂದ ಮಹತ್ವದ್ದಾಗಿದೆ. ಅಭ್ಯರ್ಥಿಗಳಿಂದ ಮುಂಚೆಯೇ ಹಣ ಪಡೆದಿದ್ದ ಮಂಜುನಾಥ ಆ ಪತ್ರಿಕೆಯಲ್ಲಿ ಅವರಿಗೆ ಗೊತ್ತಿರುವ ಸರಿ ಉತ್ತರಗಳನ್ನಷ್ಟೇ ಭರ್ತಿ ಮಾಡುವಂತೆ ಸೂಚನೆ ನೀಡಿದ್ದ. ಅದರಂತೆ ಅಭ್ಯರ್ಥಿಗಳು ಶೇ 25ರಷ್ಟು ಮಾತ್ರ ಉತ್ತರವನ್ನು ತುಂಬುತ್ತಿದ್ದರು. ಉಳಿದ ಶೇ 75ರಷ್ಟು ಉತ್ತರಗಳನ್ನು ಅಲ್ಲಿ ಪರಿವೀಕ್ಷಕರಾಗಿದ್ದ ಜ್ಞಾನಜ್ಯೋತಿ ಶಾಲೆಯ ಶಿಕ್ಷಕಿಯರ ಮೂಲಕ ಅಕ್ರಮವಾಗಿ ಭರ್ತಿ ಮಾಡಿಸಿದ್ದ.

ಇದಕ್ಕಾಗಿ ಶಾಲೆಯ ಮುಖ್ಯ ಶಿಕ್ಷಕ ಕಾಶಿನಾಥ ಚಿಳ್ಳ, ಶಾಲೆಯ ಕಾರ್ಯದರ್ಶಿ ದಿವ್ಯಾ ಹಾಗರಗಿ, ಭದ್ರತೆಗೆ ನಿಯೋಜನೆಗೊಂಡಿದ್ದ ಎಸ್ಪಿ ಕಚೇರಿಯ ಬೆರಳಚ್ಚು ವಿಭಾಗದ ಸಿಪಿಐ ಆಗಿದ್ದ ಆನಂದ ಮೇತ್ರೆ ಸಹಕಾರ ನೀಡಿದ್ದರು ಎಂದು ಸಿಐಡಿ ತನ್ನ ದೋಷಾರೋಪ ಪಟ್ಟಿಯಲ್ಲಿ ತಿಳಿಸಿದೆ.

ಹಣ ಕೊಟ್ಟಿದ್ದ ಐವರೂ ಪಾಸ್!

ಪರೀಕ್ಷಾ ಅಕ್ರಮದಲ್ಲಿ ಪಳಗಿದ್ದ ಮಂಜುನಾಥ ಮೇಳಕುಂದಿ ತಾನು ಹಣ ಪಡೆದುಕೊಂಡಿದ್ದ ಎಲ್ಲ ಅಭ್ಯರ್ಥಿಗಳನ್ನು ಪಾಸ್ ಮಾಡಿಸುವಲ್ಲಿ ಯಶಸ್ವಿಯಾಗಿದ್ದ.

ವೀರೇಶ, ಚೇತನ ನಂದಗಾಂವ, ಪ್ರವೀಣಕುಮಾರ್, ಅರುಣಕುಮಾರ್ ಹಾಗೂ ಶಾಂತಿಬಾಯಿ ಅವರ ಹೆಸರುಗಳು ಜನವರಿ 19ರಂದು ಪ್ರಕಟವಾದ ಪಿಎಸ್‌ಐ ತಾತ್ಕಾಲಿಕ ಆಯ್ಕೆಪಟ್ಟಿಯಲ್ಲಿ ಇದ್ದವು.

ಪರೀಕ್ಷೆಯ ದಿನ ವಾಟ್ಸ್ ಆಯಪ್ ಮೂಲಕ ತನ್ನ ಸಹಚರರನ್ನು ಸಂಪರ್ಕಿಸಲು ಹಾಗೂ ಪ್ರಶ್ನೆಗಳಿಗೆ ಉತ್ತರ ಹುಡುಕಲು ಬಳಸಿದ್ದ ಮೂರು ಮೊಬೈಲ್‌ ಫೋನ್‌ಗಳನ್ನು ಅಮರ್ಜಾ ಜಲಾಶಯದಲ್ಲಿ ಮಂಜುನಾಥ ಎಸೆದಿದ್ದ. ಆ ನಂತರ ಸಿಐಡಿ ಅಧಿಕಾರಿಗಳು ಹುಡುಕಾಟ ನಡೆಸಿದ್ದರೂ ಅವು ಸಿಗಲಿಲ್ಲ.


Spread the love

About Laxminews 24x7

Check Also

ಕಲ್ಯಾಣ ಕರ್ನಾಟಕ ಪ್ರತ್ಯೇಕ ರಾಜ್ಯಕ್ಕಾಗಿ ಆಗ್ರಹಿಸಿ ಪ್ರತ್ಯೇಕ ರಾಜ್ಯ ಧ್ವಜಾರೋಹಣ; ಬಿಗಿ ಪೊಲೀಸ್ ಬಂದೋಬಸ್ತ್

Spread the loveಒಂದೆಡೆ ಕಲಬುರಗಿಯಲ್ಲಿ ಪ್ರತ್ಯೇಕ ಕಲ್ಯಾಣ ಕರ್ನಾಟಕ ರಾಜ್ಯಕ್ಕಾಗಿ ಆಗ್ರಹಿಸಲಾಗುತ್ತಿದ್ದು, ಬೆಳಗಾವಿಯಲ್ಲಿ ರಾಜ್ಯೋತ್ಸವಕ್ಕೆ ವಿರುದ್ಧವಾಗಿ ನಾಡದ್ರೋಹಿ ಎಂಇಎಸ್‌ನಿಂದ ಕರಾಳ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ