Home / ರಾಜಕೀಯ / ಆಟೋರಾಜ ಬನ್ ಗಯಾ ‘ಮಹಾ’ ರಾಜ

ಆಟೋರಾಜ ಬನ್ ಗಯಾ ‘ಮಹಾ’ ರಾಜ

Spread the love

ಮಹಾರಾಷ್ಟ್ರದಲ್ಲಿ ರಾಜಕೀಯ ಸಂಚಲನ ಮೂಡಿಸಿದ ಶಿವಸೇನಾ ಬಂಡಾಯ ನಾಯಕ ಏಕನಾಥ್ ಶಿಂಧೆ ಈಗ ಮುಖ್ಯಮಂತ್ರಿ ಪಟ್ಟಕ್ಕೇರಿದ್ದಾರೆ.

ಶಿವಸೇನಾ ಮುಖಂಡ ಏಕನಾಥ್ ಶಿಂಧೆ ಇಟ್ಟಿರುವ ನಡೆ ಒಂದು ಕ್ಷಣ ಶಿವಸೇನಾ ಕಾರ್ಯಕರ್ತರನ್ನು ದಂಗು ಬಡಿಸಿತ್ತು. ಶಿವಸೇನಾ ಮುಖ್ಯಸ್ಥ ಉದ್ಧವ್ ಠಾಕ್ರೆ ಸಿಎಂ ಸ್ಥಾನ ಕಿತ್ತುಕೊಂಡಿದ್ದಲ್ಲದೆ, ರಾಜಕೀಯ ಭವಿಷ್ಯಕ್ಕೆ ಮಾರಕವಾಗುವಂಥ ಪೆಟ್ಟನ್ನು ಏಕನಾಥ್ ಕೊಟ್ಟಿದ್ದಾರೆ.

 

ಜೂನ್ 30ರಂದು ಮಹಾರಾಷ್ಟ್ರ ರಾಜ್ಯ ರಾಜಕೀಯದಲ್ಲಿ ಭಾರಿ ಬದಲಾವಣೆ ಪರ್ವ ಆರಂಭವಾಗಿದ್ದು, ಏಕನಾಥ್ ಶಿಂಧೆ ಹೊಸ ಅಧ್ಯಾಯ ಬರೆಯಲು ಮುಂದಾಗಿದ್ದಾರೆ. ಬಿಜೆಪಿ, ಹಿಂದುತ್ವ, ಬಾಳಾಠಾಕ್ರೆ ತತ್ವ ಆದರ್ಶದ ಮೇಲೆ ಶಿವಸೇನೆ ಕಾರ್ಯಕರ್ತರನ್ನು ಮುನ್ನಡೆಸುವ ಭರವಸೆಯೊಂದಿಗೆ ಶಿಂಧೆ ಸಿಎಂ ಸ್ಥಾನಕ್ಕೇರುತ್ತಿದ್ದಾರೆ.

ಮೊದ ಮೊದಲು13 ಶಾಸಕರನ್ನು ಮಾತ್ರ ತಮ್ಮ ಜೊತೆಗೆ ಹೊಂದಿದ್ದ ಏಕನಾಥ್ ಈಗ ಬಿಜೆಪಿ ಜೊತೆ ಸೇರಿ 170ಕ್ಕೂ ಅಧಿಕ ಶಾಸಕರ ಬೆಂಬಲ ಹೊಂದಿರುವ ಜನನಾಯಕ. ಗುಜರಾತಿನ ಸೂರತ್ ಪಟ್ಟಣದ ಹೋಟೆಲ್, ಗುವಾಹಟಿ ರೆಸಾರ್ಟ್, ಗೋವಾ ಪ್ರವಾಸ ಮುಗಿಸಿ ‘ಅಮ್ಚಿ ಮುಂಬೈ’ ಎನ್ನುತ್ತಾ ತುಂತುರು ಮಳೆ ನಡುವೆ ಕುಂಕುಮಧಾರಿ ಏಕನಾಥ್ ಭರ್ಜರಿಯಾಗಿ ಎಂಟ್ರಿ ಕೊಟ್ಟರು. ಮಹಾ ಸಿಎಂ ಆಗಿ ದೇವೇಂದ್ರ ಫಡ್ನವೀಸ್ ಮತ್ತೊಮ್ಮೆ ಪಟ್ಟಕ್ಕೇರುತ್ತಾರೆ ಎನ್ನುವಷ್ಟರಲ್ಲೇ ಏಕನಾಥ್ ಮಹಾ ಸಿಎಂ ಆಗಿ ಘೋಷಣೆಯಾಗಿದೆ. ಏಕನಾಥ್ ಶಿಂಧೆ ಬಗ್ಗೆ ವಿವರ ಮುಂದಿದೆ…

ಸಂಘಟನಾ ಚತುರ
 ಮಹಾರಾಷ್ಟ್ರದಲ್ಲಿ ಶಿವಸೇನಾ ಕಾರ್ಯಕರ್ತರ ಸಂಘಟನೆ ಮಾಡುವಲ್ಲಿ ಎತ್ತಿದ ಕೈ ಎನಿಸಿಕೊಂಡಿರುವ ಮಾಸ್ ಲೀಡರ್ ಶಿಂಧೆ, ಠಾಕ್ರೆ ಕುಟುಂಬದ ದೊಡ್ಡ ದೊಡ್ಡ ಸಮಾವೇಶಗಳನ್ನು ಆಯೋಜಿಸಿದ್ದಾರೆ. ಬಾಳಾ ಠಾಕ್ರೆ ತತ್ವ ಆದರ್ಶಗಳನ್ನು ಪಾಲಿಸಿಕೊಂಡು ಬಂದಿರುವ ಏಕನಾಥ್ ಬಂಡಾಯವೇಳಲು ಮುಖ್ಯಕಾರಣ ಮಹಾ ಅಘಾಡಿ ಸರ್ಕಾರದ ಅಪವಿತ್ರ ಮೈತ್ರಿ ಎನ್ನಬಹುದು. ಸಂಘಟನಾ ಚತುರ ಎನಿಸಿಕೊಂಡಿರುವ ಶಿಂಧೆ, ಆದಿತ್ಯ ಠಾಕ್ರೆ ಜೊತೆ ನೆರಳಂತೆ ಚಲಿಸುತ್ತಿದ್ದವರು, ಇತ್ತೀಚೆಗೆ ಅಯೋಧ್ಯೆಗೂ ಜೊತೆಯಲ್ಲಿ ಭೇಟಿ ನೀಡಿದ್ದರು.

ಥಾಣೆ ಪಾಲ್ಘರ್ ಪ್ರದೇಶದ ಜನಾನುರಾಗಿ ನಾಯಕ

1964 ರ ಫೆಬ್ರವರಿ 9ರಂದು ಸತಾರಾದಲ್ಲಿ ಜನಿಸಿದ ಏಕನಾಥ್ ಶಿಂಧೆ, ನಂತರ ಥಾಣೆಗೆ ತೆರಳಿ 11ನೇ ತರಗತಿ ತನಕ ಮಂಗಳ ಹೈಸ್ಕೂಲಿನಲ್ಲಿ ವ್ಯಾಸಂಗ ಮಾಡಿದರು. ಕುಟುಂಬ ನಿರ್ವಹಣೆ ಕಷ್ಟವಾದಾಗ ಓದಿಗೆ ತಿಲಾಂಜಲಿ ನೀಡಿದರು. ವಿದ್ಯಾರ್ಥಿಯಾಗಿದ್ದಾಗಲೇ ಶಿವಸೇನಾ ಬಗ್ಗೆ ಆಕರ್ಷಣೆ ಬೆಳೆಸಿಕೊಂಡರು. 1980ರಲ್ಲಿ ಬಾಳಾ ಸಾಹೇಬ್ ಠಾಕ್ರೆರಿಂದ ಪ್ರಭಾವಿತರಾಗಿ ರಾಜಕೀಯಕ್ಕೆ ಎಂಟ್ರಿ ಕೊಟ್ಟರು. ಶಿವಸೈನಿಕ ಎನಿಸಿಕೊಂಡರು. ಮಹಾರಾಷ್ಟ್ರ-ಕರ್ನಾಟಕ ನಡುವಿನ ಗಡಿವಿವಾದ ಪ್ರತಿಭಟನೆಯಲ್ಲಿ ಪಾಲ್ಗೊಂಡು 40 ದಿನಗಳ ಕಾಲ ಜೈಲುವಾಸ ಅನುಭವಿಸಿದರು.

ಒಂದು ಕಾಲದಲ್ಲಿ ಥಾಣೆಯಲ್ಲಿ ಜೀವನೋಪಾಯಕ್ಕಾಗಿ ಆಟೋರಿಕ್ಷಾ ಓಡಿಸಿಕೊಂಡಿದ್ದರು. ಥಾಣೆ ಪಾಲ್ಘರ್ ಪ್ರದೇಶದ ಜನಾನುರಾಗಿ ನಾಯಕನಾಗಿ ಬೆಳೆದರು.

ಹಂತ ಹಂತವಾಗಿ ಮೇಲಕ್ಕೇರಿದ ಶಿಂಧೆ

1997ರಲ್ಲಿ ಶಿವಸೇನಾ ನಿಷ್ಠಾವಂತ ಸೈನಿಕ ಎನಿಸಿಕೊಂಡಿದ್ದ ಏಕನಾಥ್ ಶಿಂಧೆಗೆ ಥಾಣೆ ಮುನ್ಸಿಪಲ್ ಕಾರ್ಪೊರೇಷನ್(TMC) ಚುನಾವಣೆ ಎದುರಿಸಲು ಅವಕಾಶ ಸಿಕ್ಕಿತು. ಭರ್ಜರಿ ವಿಜಯದೊಂದಿಗೆ ಕಾರ್ಪೊರೇಟ್ ಆಗಿ ಜಯಭೇರಿ ಬಾರಿಸಿದರು.

2001ರಿಂದ 2004ರ ತನಕ TMC ನಾಯಕರಾಗಿ ಅಭಿವೃದ್ಧಿ ಕಾರ್ಯದಲಿ ಆಸಕ್ತಿ ವಹಿಸಿದ್ದಲ್ಲದೆ, ಥಾಣೆ ಜಿಲ್ಲೆಯ ಸಮಗ್ರ ಅಭಿವೃದ್ಧಿಗೆ ಕಾರಣರಾದರು.

2004ರಲ್ಲಿ ಶಿಂಧೆ ಮೊದಲ ಬಾರಿಗೆ ವಿಧಾನಸಭೆಗೆ ಸ್ಪರ್ಧಿಸಲು ಬಾಳಾ ಠಾಕ್ರೆಯಿಂದ ಆಹ್ವಾನ ಪಡೆದುಕೊಂಡರು. ಥಾಣೆಯಿಂದ ಮಹಾರಾಷ್ಟ್ರ ವಿಧಾನಸಭೆಗೆ ಆಯ್ಕೆಯಾದರು.

2005ರಲ್ಲಿ ಥಾಣೆ ಜಿಲ್ಲೆ ಪಕ್ಷದ ಮುಖ್ಯಸ್ಥರಾಗಿ ಆಯ್ಕೆಯಾದರು.

2014ರ ಚುನಾವಣೆಯಲ್ಲಿ ಶಿವಸೇನಾಯಿಂದ ಶಾಸಕಾಂಗ ಪಕ್ಷದ ನಾಯಕರಾಗಿ ಆಯ್ಕೆಯಾದರು. ಮಹಾರಾಷ್ಟ್ರ ವಿಧಾನಸಭೆಯಲ್ಲಿ ವಿಪಕ್ಷರಾಗಿ ಕೂಡಾ ಕಾರ್ಯ ನಿರ್ವಹಿಸಿದ್ದಾರೆ.

ಉದ್ಧವ್ ಠಾಕ್ರೆ ನೇತೃತ್ವದ ಮಹಾ ವಿಕಾಸ್ ಅಘಾಡಿ ಸರ್ಕಾರದಲ್ಲಿ ಲೋಕೋಪಯೋಗಿ(PWD) ಖಾತೆ ಸಚಿವರಾಗಿ ಪದಗ್ರಹಣ ಮಾಡಿದರು. 2019ರಲ್ಲಿ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಖಾತೆಯನ್ನು ಹೆಚ್ಚುವರಿಯಾಗಿ ಪಡೆದುಕೊಂಡರು.

ಕುಟುಂಬದ ಹಿನ್ನೆಲೆ

ಪತ್ನಿ ಲತಾ ಶಿಂಧೆ, ಪುತ್ರ ಶ್ರೀಕಾಂತ್ ಶಿಂಧೆ.

ಏಕನಾಥ್ ಶಿಂಧೆ ಅವರ ಪುತ್ರ ಶ್ರೀಕಾಂತ್ ಶಿಂಧೆ ಆರ್ಥೋಪೆಡಿಕ್ ಸರ್ಜನ್ ಹಾಗೂ ಕಲ್ಯಾಣ್ ಕ್ಷೇತ್ರದ ಹಾಲಿ ಸಂಸದರಾಗಿದ್ದಾರೆ. ಏಕನಾಥ್ ಶಿಂಧೆ 2004, 2009, 2014 ಹಾಗೂ 2019ರಲ್ಲಿ ಮಹಾರಾಷ್ಟ್ರ ವಿಧಾನಸಭೆಗೆ ಆಯ್ಕೆಯಾಗಿದ್ದಾರೆ. ಏಕನಾಥ್ ಶಿಂಧೆಯ ಇಬ್ಬರು ಮಕ್ಕಳಾದ ದೀಪೇಶ್ ಶಿಂಧೆ, ಶುಭದ ಶಿಂಧೆ ಮನೆ ಸಮೀಪದ ಕೆರೆಯಲ್ಲಿ ಆಟ ಆಡುವಾಗ ಬೋಟ್ ಮುಗಿಸಿ ಸಾವನ್ನಪ್ಪಿದ್ದರು. ಈ ವೇಳೆ ಮಾನಸಿಕ ಖಿನ್ನತೆಗೆ ಒಳಗಾಗಿದ್ದ ಏಕನಾಥ ಶಿಂಧೆ ನಂತರ ರಾಜಕೀಯದಲ್ಲಿ ತೊಡಗಿಕೊಂಡರು.

2014ರಲ್ಲಿ ಬಿಜೆಪಿ ಹಾಗೂ ಶಿವಸೇನಾ ಸಖ್ಯ ಮುರಿದ ಬಳಿಕ ಶಿವಸೇನಾದಿಂದ ಶಾಸಕಾಂಗ ಪಕ್ಷದ ನಾಯಕರಾಗಿ ಏಕನಾಥ್ ಶಿಂಧೆ ಕಾರ್ಯನಿರ್ವಹಿದ್ದಾರೆ. ಶಿವಸೇನಾ ಮೂಲ ತತ್ವದಂತೆ ಹಿಂದುತ್ವ, ರಾಷ್ಟ್ರಪ್ರೇಮ, ದೇವರು, ಕಾರ್ಮಿಕರ ಹೋರಾಟ ಎಲ್ಲವನ್ನು ಮೈಗೂಡಿಸಿಕೊಂಡಿರುವ ಶಿಂಧೆ, ಶಿವಸೇನೆಯ ಮುಂದಿನ ಭವಿಷ್ಯವನ್ನು ಬದಲಿಸಬಲ್ಲರು ಎಂದೇ ಕಾರ್ಯಕರ್ತರು ನಂಬಿದ್ದಾರೆ.


Spread the love

About Laxminews 24x7

Check Also

ಮುಂಬೈ ಹೊಟೇಲ್ ಉದ್ಯಮಿ ಕೊಲೆ ಪ್ರಕರಣದಲ್ಲಿ ಗ್ಯಾಂಗ್‌ಸ್ಟರ್ ಛೋಟಾ ರಾಜನ್‌ಗೆ ಜೀವಾವಧಿ ಶಿಕ್ಷೆ

Spread the love ಮುಂಬೈ: 2001ರಲ್ಲಿ ಮುಂಬೈನ ಹೊಟೇಲ್ ಉದ್ಯಮಿ ಜಯಾ ಶೆಟ್ಟಿ ಅವರನ್ನು ಹತ್ಯೆ ಮಾಡಿದ ಪ್ರಕರಣದಲ್ಲಿ ಗ್ಯಾಂಗ್‌ಸ್ಟರ್ ಛೋಟಾ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ