Breaking News
Home / ಜಿಲ್ಲೆ / ಬೆಳಗಾವಿ / ಪ್ರವಾಹ ನಿರ್ವಹಣೆ: ಸಿಎಂ ವಿಡಿಯೋ ಸಂವಾದ

ಪ್ರವಾಹ ನಿರ್ವಹಣೆ: ಸಿಎಂ ವಿಡಿಯೋ ಸಂವಾದ

Spread the love

ಜಲಾಶಯ ನೀರು ಬಿಡುಗಡೆ- ಮಹಾರಾಷ್ಟ್ರದ ಜತೆ ಸಮನ್ವಯ, ಮಾಹಿತಿ ವಿನಿಮಯಕ್ಕೆ ಸಿಎಂ‌ ಬೊಮ್ಮಾಯಿ ಸೂಚನೆ

ಬೆಳಗಾವಿ, ಮೇ 21(ಕರ್ನಾಟಕ ವಾರ್ತೆ): ಎಲ್ಲೆಡೆ ಮಳೆಯಾಗುತ್ತಿರುವುದರಿಂದ ನೆರೆಯ ಮಹಾರಾಷ್ಟ್ರದ ಜಲಾಶಯಗಳಿಂದ ನೀರು ಬಿಡುಗಡೆ ಸಾಧ್ಯತೆ ಇರುತ್ತದೆ. ಆದ್ದರಿಂದ ಆ ರಾಜ್ಯದ ಸಂಬಂಧಿಸಿದ ಇಲಾಖೆಯ ಅಧಿಕಾರಿಗಳ ಜತೆ ನಿರಂತರ ಸಂಪರ್ಕ ಇಟ್ಟುಕೊಳ್ಳಬೇಕು. ಅಲ್ಲಿನ ಮಳೆಯ ಪ್ರಮಾಣ, ಜಲಾಶಯಗಳ ಸಂಗ್ರಹ ಮತ್ತಿತರ ವಿಷಯಗಳ ಕುರಿತು ನಿರಂತರವಾಗಿ ಮಾಹಿತಿಯನ್ನು ವಿನಿಮಯ ಮಾಡಿಕೊಳ್ಳಬೇಕು ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಬೆಳಗಾವಿ ಜಿಲ್ಲಾಧಿಕಾರಿಗಳಿಗೆ ಸೂಚನೆ ನೀಡಿದರು.

ಸಂಭವನೀಯ ಪ್ರವಾಹ ನಿರ್ವಹಣೆಯ ಸಿದ್ಧತೆಗೆ ಸಂಬಂಧಿಸಿದಂತೆ ಶನಿವಾರ(ಮೇ 21) ಮುಖ್ಯಮಂತ್ರಿಗಳು ನಡೆಸಿದ ವಿಡಿಯೋ ಸಂವಾದದಲ್ಲಿ ಜಿಲ್ಲಾಧಿಕಾರಿ ಕಚೇರಿಯ ಸಭಾಂಗಣದಲ್ಲಿ ಪಾಲ್ಗೊಂಡು ಅವರು ಮಾತನಾಡಿದರು.

ಈ ಬಾರಿ ಒಂದು ವಾರ ಮುಂಚೆಯೇ ಮಳೆಯಾಗುತ್ತಿರುವುದರಿಂದ ನೆರೆಯ ರಾಜ್ಯದ ಅಧಿಕಾರಿಗಳ ಜತೆ ನಿರಂತರ ಸಂಪರ್ಕದಲ್ಲಿರಬೇಕು.


ಪ್ರತಿದಿನ ಮಹಾರಾಷ್ಟ್ರದಲ್ಲಿ ಮಳೆಯ ಪ್ರಮಾಣ, ಜಲಾಶಯಮಟ್ಟ ಮಾಹಿತಿ ವಿನಿಮಯ ಮಾಡಿಕೊಳ್ಳಬೇಕು.
ಬೆಳಗಾವಿ ಜಿಲ್ಲಾಡಳಿತಕ್ಜೆ ಮುಂಚಿತವಾಗಿ ಮಾಹಿತಿಯನ್ನು ನೀಡದೇ ನೀರು ಬಿಡುಗಡೆ ಮಾಡದಂತೆ ನೆರೆಯ ರಾಜ್ಯದ ಅಧಿಕಾರಿಗಳಿಗೆ ತಿಳಿಸಬೇಕು ಎಂದು ಮುಖ್ಯಮಂತ್ರಿಗಳು ನಿರ್ದೇಶನ ನೀಡಿದರು.

ನೆರೆಯ ಮಹಾರಾಷ್ಟ್ರದ ನೀರಾವರಿ ಇಲಾಖೆಯ ಜತೆ ಸಮನ್ವಯ ಸಾಧಿಸಿ ನಿರಂತರವಾಗಿ ನಿಗಾ ವಹಿಸಲು ಅನುಕೂಲವಾಗುವಂತೆ ಕ್ರಮ ಕೈಗೊಳ್ಳಬೇಕು.

ಮಳೆಯ ಪ್ರಮಾಣ ಜಾಸ್ತಿಯಾದಾಗ ರಸ್ತೆ ಸಂಪರ್ಕಕ್ಕೆ ತೊಂದರೆಯಾಗದಂತೆ ಕ್ರಮ ಕೈಗೊಳ್ಳಬೇಕು.
ಮಳೆಗಾಲ ಆರಂಭದಲ್ಲಿಯೇ ನದಿತೀರದ ಗ್ರಾಮಗಳು ಹಾಗೂ ಪ್ರವಾಹದಿಂದ ಪೀಡಿತ ಗೊಳ್ಳಬಹುದಾದ ಗ್ರಾಮಗಳಿಗೆ ಅಧಿಕಾರಿಗಳು ಕಡ್ಡಾಯವಾಗಿ ಭೇಟಿ ನೀಡಿ ಗ್ರಾಮದಲ್ಲಿರುವ ಮನೆಗಳ ಸ್ಥಿತಿಗತಿಯ ಬಗ್ಗೆ ಸೂಕ್ತ ಸಮೀಕ್ಷೆ ನಡೆಸಿ ಸಮಗ್ರ ವರದಿ ಸಿದ್ಧಪಡಿಸಬೇಕು ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ತಿಳಿಸಿದರು.

ಅತಿವೃಷ್ಟಿ, ಸಿಡಿಲು ಮತ್ತಿತರ ಕಾರಣಗಳಿಂದ ಜನರ ಪ್ರಾಣಹಾನಿ ಹಾಗೂ ಜಾನುವಾರು ಜೀವಹಾನಿಯಾದಾಗ 24 ಗಂಟೆಗಳಲ್ಲಿ ನಿಯಮಾವಳಿ ಪ್ರಕಾರ ಪರಿಹಾರ ಒದಗಿಸುವಂತೆ ಜಿಲ್ಲಾಧಿಕಾರಿಗಳಿಗೆ ಸೂಚನೆ ನೀಡಿದರು.
ಬೆಳೆಹಾನಿ ಕುರಿತು ಕೃಷಿ, ತೋಟಗಾರಿಕೆ ಇಲಾಖೆಗಳು ಜಂಟಿ ಸಮೀಕ್ಷೆ ನಡೆಸಿ ನಿಖರ ವರದಿ ನೀಡಬೇಕು ಎಂದು ತಿಳಿಸಿದರು.

ಮಳೆ ಮುನ್ಸೂಚನೆ ಆಧರಿಸಿ ಮುಂಜಾಗ್ರತಾ ಕ್ರಮಕ್ಕೆ ನಿರ್ದೇಶನ:

ಮಳೆಯ‌ ಮುನ್ಸೂಚನೆ ಆಧರಿಸಿ ಸೂಕ್ತ ಮುಂಜಾಗ್ರತಾ ಕ್ರಮಗಳನ್ನು ಕೈಗೊಳ್ಳಬೇಕು.ಮುಳುಗಡೆ, ಭೂಕುಸಿತ ಸೇರಿದಂತೆ ಆಯಾ‌ ಜಿಲ್ಲೆಯ ಸಮಸ್ಯೆಗಳನ್ನು ಗಮನದಲ್ಲಿಟ್ಟುಕೊಂಡು ಕ್ರಮ ಕೈಗೊಳ್ಳಬೇಕು.
ಬೆಳೆಹಾನಿ ಬಗ್ಗೆ ಹೆಚ್ಚಿನ ನಿಗಾ ವಹಿಸಬೇಕು. ನಿಖರವಾಗಿ ಸಮೀಕ್ಷೆ ನಡೆಸಿ ವಾಸ್ತವ ವರದಿಯನ್ನು ನೀಡಬೇಕು. ಜಿಲ್ಲಾ ಉಸ್ತುವಾರಿ ಕಾರ್ಯದರ್ಶಿಗಳು ಹಾಗೂ ಜಿಲ್ಲಾಧಿಕಾರಿಗಳು ಸೇರಿದಂತೆ ಜಿಲ್ಲಾ ಮಟ್ಟದ ಎಲ್ಲ ಇಲಾಖೆಯ ಅಧಿಕಾರಿಗಳು ಕಡ್ಡಾಯವಾಗಿ ಕ್ಷೇತ್ರಕ್ಕೆ ಭೇಟಿ ನೀಡಿ ಪರಿಶೀಲಿಸಬೇಕು ಎಂದು ರಾಜ್ಯದ ಎಲ್ಲ ಜಿಲ್ಲಾಧಿಕಾರಿಗಳಿಗೆ ಕಟ್ಟುನಿಟ್ಟಿನ ಸೂಚನೆ ನೀಡಿದರು.

ಇದೇ ಸಂದರ್ಭದಲ್ಲಿ ಮಾತನಾಡಿದ ಜಿಲ್ಲಾ ಉಸ್ತುವಾರಿ ಸಚಿವರಾದ ಗೋವಿಂದ ಕಾರಜೋಳ ಅವರು, ಜಿಲ್ಲೆಯಲ್ಲಿ ನಿಗದಿಗಿಂತ ಮಳೆಯ ಪ್ರಮಾಣ ಜಾಸ್ತಿಯಾಗಿದೆ. ಬೆಳೆಹಾನಿಯ ಕುರಿತು ನಿಖರ ವರದಿ ನೀಡುವಂತೆ ಅಧಕಾರಿಗಳಿಗೆ ಸೂಚನೆ ನೀಡಲಾಗಿದೆ ಎಂದು ವಿವರಿಸಿದರು.

ವಿಜಯಪುರ ಜಿಲ್ಲೆಯ ಕುರಿತು ಮಾಹಿತಿ ನೀಡಿದ ಅರಣ್ಯ, ಆಹಾರ ನಾಗರಿಕ ಸರಬರಾಜು ಹಾಗೂ ಗ್ರಾಹಕರ‌ ವ್ಯವಹಾರಗಳ ಇಲಾಖೆಯ ಸಚಿವರಾದ ಉಮೇಶ್ ಕತ್ತಿ, ವಿಜಯಪರದಲ್ಲಿ ಮಳೆ ಜಾಸ್ತಿಯಾಗಿದ್ದು, ಯಾವುದೇ ಹಾನಿಯಾಗಿಲ್ಲ ಎಂದು ತಿಳಿಸಿದರು.

ಮಾನವ ಜೀವಹಾನಿ ಆಗಿಲ್ಲ- ಜಿಲ್ಲಾಧಿಕಾರಿ ಮಾಹಿತಿ:

ಕಳೆದ ಒಂದು ವಾರದಿಂದ ಜಿಲ್ಲೆಯಲ್ಲಿ ವಾಡಿಕೆಗಿಂತ ಅಧಿಕ ಮಳೆಯಾಗಿದೆ. ಮೇ 15 ರಿಂದ 21 ರವರೆಗೆ 14 ಮಿ.ಮೀ. ವಾಡಿಕೆ ಮಳೆಯಾಗಬೇಕಿತ್ತು.ಆದರೆ 114 ಮಿ.ಮೀ. ಮಳೆಯಾಗಿದ್ದು, ಯಾವುದೇ ಮಾನವ ಜೀವಹಾನಿಯಾಗಿಲ್ಲ; ಎರಡು ಜಾನುವಾರ ಜೀವಹಾನಿಯಾಗಿದೆ. ಈಗಾಗಲೇ ಪರಿಹಾರವನ್ನು ನೀಡಲಾಗಿದೆ ಎಂದು ಜಿಲ್ಲಾಧಿಕಾರಿ ನಿತೇಶ್ ಪಾಟೀಲ ಮಾಹಿತಿ ನೀಡಿದರು.

ಜಿಲ್ಲೆಯಲ್ಲಿ ರಸ್ತೆ, ಸೇತುವೆ ಹಾನಿಯಾಗಿಲ್ಲ. ಆದರೆ ಮೇ 15 ರಿಂದ 21 ರ ಅವಧಿಯಲ್ಲಿ 1 ಮನೆ ಪೂರ್ಣವಾಗಿ ಕುಸಿದಿದ್ದು, 193 ಮನೆಗಳು ಭಾಗಶಃ ಕುಸಿದಿವೆ. 30 ಹೆಕ್ಟೇರ್ ಕೃಷಿ ಬೆಳೆ ಮತ್ತು 15.3 ಹೆಕ್ಟೇರ್ ಪ್ರದೇಶದಲ್ಲಿ ತೋಟಗಾರಿಕೆ ಬೆಳೆಹಾನಿಯಾಗಿದೆ ಎಂದು ಮುಖ್ಯಮಂತ್ರಿಗಳ ಗಮನಕ್ಕೆ ತಂದರು.

ರಾಜ್ಯಮಟ್ಟದಲ್ಲಿ ಕಳೆದ ಐದು ದಿನಗಳ ಮಳೆಯ ಪ್ರಮಾಣ, ಜಲಾಶಯಗಳ ನೀರಿನಮಟ್ಟ, ಮನೆಹಾನಿ, ಬೆಳೆಹಾನಿಯ ಪ್ರಮಾಣದ ಕುರಿತು ಅಧಿಕಾರಿಗಳು ಮಾಹಿತಿಯನ್ನು ನೀಡಿದರು.
19 ಜಿಲ್ಲೆಗಳಲ್ಲಿ ವಾಡಿಕೆಗಿಂತ 500 ಪಟ್ಟು ಅಧಿಕ ಮಳೆಯಾಗಿದೆ. ಹತ್ತು ದಿನಗಳಲ್ಲಿ ಮಾನ್ಸೂನ್ ಆರಂಭಗೊಳ್ಳಲಿರುವುದರಿಂದ ಅಗತ್ಯ ಮುಂಜಾಗ್ರತಾ ಕ್ರಮಗಳ ಬಗ್ಗೆ ವಿವರಿಸಿದರು.
ಪ್ರವಾಹಪೀಡಿತಗೊಳ್ಳಬಹುದಾದ ತಾಲ್ಲೂಕು, ಹೋಬಳಿ, ಗ್ರಾಮವಾರು ಮಾಹಿತಿಯನ್ನು ಸಿದ್ಧಪಡಿಸಿ ಸೂಕ್ತ ಮುನ್ನೆಚ್ಚರಿಕೆ ಕೈಗೊಳ್ಳುವಂತೆ ತಿಳಿಸಿ ಸಂಬಂಧಿಸಿದ ಜಿಲ್ಲಾಧಿಕಾರಿಗಳಿಗೆ ಕಳಿಸಲಾಗಿದೆ ಎಂದು ತಿಳಿಸಿದರು.

ಪೊಲೀಸ್ ಆಯುಕ್ತರಾದ ಡಾ.ಎಂ.ಬಿ.ಬೋರಲಿಂಗಯ್ಯ, ಜಿಲ್ಲಾ ಪಂಚಾಯತ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ದರ್ಶನ್ ಎಚ್.ವಿ., ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಲಕ್ಷ್ಮಣ ನಿಂಬರಗಿ ಸೇರಿದಂತೆ ವಿವಿಧ ಇಲಾಖೆಗಳ ಜಿಲ್ಲಾ ಮಟ್ಟದ ಅಧಿಕಾರಿಗಳು ಸಭೆಯಲ್ಲಿ ಉಪಸ್ಥಿತರಿದ್ದರು.
**


Spread the love

About Laxminews 24x7

Check Also

ಬಹುಭಾಷಾ ನಟ ಪ್ರಕಾಶ್ ರೈ ಮತ ಚಲಾಯಿಸಿದ್ದು ಯಾರಿಗೆ ಗೊತ್ತಾ?

Spread the love ಲೋಕಸಭೆ ಚುನಾವಣೆ 2024 ರ ಎರಡನೇ ಹಂತದಲ್ಲಿ ಇಂದು ಶುಕ್ರವಾರ (ಏಪ್ರಿಲ್ 26) ಆರಂಭವಾಗಿದೆ. 13 …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ