Breaking News
Home / ಜಿಲ್ಲೆ / ಬೆಂಗಳೂರು / B.S..Y.ನಾಯಕತ್ವಬದಲಾವಣೆಯಾಗಲಿದೆಯ……………………?

B.S..Y.ನಾಯಕತ್ವಬದಲಾವಣೆಯಾಗಲಿದೆಯ……………………?

Spread the love

ಬೆಂಗಳೂರು,ಆ.24- ಕರ್ನಾಟಕದಲ್ಲಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರ ನಾಯಕತ್ವ ಬದಲಾವಣೆ ಮಾಡುವ ಪ್ರಸ್ತಾವನೆ ಸದ್ಯಕ್ಕಿಲ್ಲ ಎನ್ನುವ ಮೂಲಕ ಕೇಂದ್ರ ಬಿಜೆಪಿ ವರಿಷ್ಠರು ಎಲ್ಲಾ ಉಹಾಪೋಹಗಳಿಗೂ ತೆರೆ ಎಳೆದಿದ್ದಾರೆ.

ಕಳೆದ ಹಲವು ದಿನಗಳಿಂದ ಮುಖ್ಯಮಂತ್ರಿ ಯಡಿಯೂರಪ್ಪ ನಾಯಕತ್ವ ಬದಲಾವಣೆಯಾಗಲಿದೆ ಎಂಬ ವದಂತಿಗಳು ಬಿಜೆಪಿ ವಲಯದಲ್ಲಿ ಕೇಳಿ ಬಂದಿದ್ದವು. ಮುಂದಿನ ವಿಧಾನಸಭಾ ಚುನಾವಣೆ ಗಮನದಲ್ಲಿಟ್ಟುಕೊಂಡು ಸಮರ್ಥ ನಾಯಕನಿಗೆ ಪಟ್ಟ ಕಟ್ಟಲು ತೆರೆಮರೆಯಲ್ಲಿ ಸಿದ್ದತೆಗಳು ನಡೆಯುತ್ತಿವೆ ಎಂಬ ಉಹಾಪೋಹಗಳು ಎದ್ದಿದ್ದವು.

ಇದಕ್ಕೆ ಪುಷ್ಟಿ ನೀಡುವಂತೆ ಎರಡು ವಾರಗಳ ಹಿಂದೆ ಉಪಮುಖ್ಯಮಂತ್ರಿ ಹಾಗೂ ಸಾರಿಗೆ ಸಚಿವ ಲಕ್ಷ್ಣಣ್ ಸವದಿ, ಸಚಿವರಾದ ರಮೇಶ್ ಜಾರಕಿಹೊಳಿ, ಕೋಟಾ ಶ್ರೀನಿವಾಸ ಪೂಜಾರಿ, ಶಶಿಕಲಾ ಜೊಲ್ಲೆ ಮತ್ತಿತರ ನಾಯಕರು ದೆಹಲಿಗೆ ತೆರಳಿ ಪಕ್ಷದ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ.ನಡ್ಡಾ ಹಾಗೂ ಕೆಲವು ಹಿರಿಯ ಸಚಿವರನ್ನು ಭೇಟಿಯಾಗಿ ಮಾತುಕತೆ ನಡೆಸಿದ್ದು, ವದಂತಿಗಳಿಗೆ ಇಂಬು ನೀಡಿತ್ತು.

ಈ ಬೆಳವಣಿಗೆಗೆಳ ನಡುವೆಯೇ ಪಕ್ಷದ ರಾಷ್ಟ್ರೀಯ ಸಂಘಟನಾ ಪ್ರಧಾನ ಕಾರ್ಯದರ್ಶಿ ಬಿ.ಎಲ್. ಸಂತೋಷ್ ಅವರು, ಇದ್ದಕ್ಕಿದ್ದಂತೆ ಪಕ್ಷದ ಕಚೇರಿಗೆ ಕೆಲವು ಸಚಿವರನ್ನು ಕರೆಸಿಕೊಂಡು ಮಾತುಕತೆ ನಡೆಸಿದ್ದರು

ಸಚಿವರಾದ ಬಸವರಾಜ್ ಬೊಮ್ಮಯಿ, ಡಾ.ಕೆ.ಸುಧಾಕರ್, ವಿ.ಸೋಮಣ್ಣ ಸೇರಿದಂತೆ ಪಕ್ಷದ ಮುಖಂಡರ ಜೊತೆ ರಹಸ್ಯ ಚರ್ಚಿಸಿದ್ದು ಬಿಜೆಪಿಯಲ್ಲಿ ಬದಲಾವಣೆಯ ಗಾಳಿ ಬೀಸಲಿದೆ ಎಂಬ ಪುಕಾರು ಹಬ್ಬಿತ್ತು.

ಇದೀಗ ದೆಹಲಿ ಬಿಜೆಪಿ ನಾಯಕರು ಇಂತಹ ವದಂತಿಗಳಿಗೆ ಪೂರ್ಣವಿರಾಮ ಹಾಕಿದ್ದು, ಕರ್ನಾಟಕದಲ್ಲಿ 2023ರ ವಿಧಾನಸಭಾ ಚುನಾವಣೆ ನಡೆಯುವವರಿಗೂ ಯಡಿಯೂರಪ್ಪ ನಾಯಕತ್ವ ಆಭಾದಿತ ಎಂದು ಕಡ್ಡಿ ಮುರಿದಂತೆ ಹೇಳುವ ಮೂಲಕ ಗೊಂದಲಗಳಿಗೆ ಅಂಕುಶ ಹಾಕಿದ್ದಾರೆ.

ನಿನ್ನೆ ಬೆಂಗಳೂರಿನ ಪಕ್ಷದ ಕಚೇರಿಯಲ್ಲಿ ನಡೆದ ಪದಾಕಾರಿಗಳ ಸಭೆಯಲ್ಲಿ ಇದೇ ಮಾತನ್ನು ಪುನಚ್ಚರಿಸಿರುವ ಪಕ್ಷದ ರಾಷ್ಟ್ರೀಯ ಸಂಘಟನಾ ಕಾರ್ಯದರ್ಶಿ ಬಿ.ಎಲ್.ಸಂತೋಷ್, ಯಡಿಯೂರಪ್ಪನವರ ನಾಯಕತ್ವ ಬದಲಾವಣೆಯಾಗಲಿದೆ ಎಂಬುದು ಕೇವಲ ವದಂತಿ.

ಮುಂದಿನ ಚುನಾವಣೆವರೆಗೂ ಅವರೇ ಮುಖ್ಯಮಂತ್ರಿ ಸ್ಥಾನದಲ್ಲಿ ಮುಂದುವರೆಯಲಿದ್ದಾರೆ. ಪದಾಕಾರಿಗಳು ಹಾಗೂ ಕಾರ್ಯಕರ್ತರು ಯಾವುದೇ ವದಂತಿಗಳಿಗೆ ಕಿವುಗೊಡಬಾರದೆಂದು ಸಲಹೆ ಮಾಡಿದ್ದಾರೆ.
ಈ ಕ್ಷಣದವರೆಗೂ ವರಿಷ್ಟರು ಕರ್ನಾಟಕದಲ್ಲಿ ನಾಯಕತ್ವ ಬದಲಾವಣೆ ಕುರಿತಂತೆ ಯಾವ ಸಂದರ್ಭದಲ್ಲೂ ಆಲೋಚನೆಯನ್ನೇ ಮಾಡಿಲ್ಲ.

ಸರ್ಕಾರ ಹಾಗೂ ಪಕ್ಷದಲ್ಲಿ ಗೊಂದಲ ಸೃಷ್ಟಿಸಲು ಕೆಲವರು ಉದ್ದೇಶಪೂರ್ವಕವಾಗಿ ಇಂತಹ ವದಂತಿಗಳನ್ನು ಮಾಧ್ಯಮಗಳಲ್ಲಿ ತೇಲಿಬಿಡುತ್ತವೆ. ಇದಕ್ಕೆಲ್ಲಾ ತಲೆಕೆಡಿಸಿಕೊಳ್ಳಬೇಕಾದ ಅಗತ್ಯವಿಲ್ಲ. ಯಡಿಯೂರಪ್ಪನವರ ನಾಯಕತ್ವಕ್ಕೆ ಯಾವುದೇ ಅಡ್ಡಿ , ಆತಂಕಗಳು ಇಲ್ಲ ಎಂದು ಸಂತೋಷ್ ಹೇಳಿದ್ದಾರೆ.

# ಸರಳವಲ್ಲ ನಾಯಕತ್ವ ಬದಲಾವಣೆ:
ಒಂದು ಹಂತದಲ್ಲಿ ಬಿಜೆಪಿ ವರಿಷ್ಟರು ಕರ್ನಾಟಕದಲ್ಲಿ ಯಡಿಯೂರಪ್ಪ ನಾಯಕತ್ವ ಬದಲಾಯಿಸಿ, ಪ್ರಬಲ ಸಮುದಾಯದ ಹಾಗೂ ಎಲ್ಲರನ್ನು ವಿಶ್ವಾಸಕ್ಕೆ ತೆಗೆದುಕೊಂಡು ಹೋಗುವ ನಾಯಕರೊಬ್ಬರಿಗೆ ಪಟ್ಟ ಕಟ್ಟಲು ಮುಂದಾಗಿದ್ದು ಗುಟ್ಟಾಗೇನೂ ಉಳಿದಿಲ್ಲ.

ಪಕ್ಷದ ನಿಯಮದಂತೆ 75 ವರ್ಷ ದಾಟಿದವರಿಗೆ ಯಾವುದೇ ಸ್ಥಾನಮಾನ ನೀಡದೆ, ಅವರನ್ನು ಮಾರ್ಗದರ್ಶಕ ಮಂಡಳಿಗೆ ನೇಮಕ ಮಾಡುವುದು ಇಲ್ಲವೇ ತೆರವಾಗಿರುವ ಯಾವುದಾದರೊಂದು ರಾಜ್ಯಕ್ಕೆ ರಾಜ್ಯಪಾಲರನ್ನಾಗಿ ನೇಮಕ ಮಾಡುವ ಕುರಿತು ಗಂಭೀರ ಚಿಂತನೆ ನಡೆಸಿತ್ತು.

ಪಕ್ಷದ ಆಧಾರ ಸ್ತಂಭ ಎನಿಸಿದ್ದ ಅಡ್ವಾಣಿ, ಮುರಳಿಮನೋಹರ ಜೋಶಿ, ಕಲ್ಯಾಣ್ ಸಿಂಗ್, ಉಮಾ ಭಾರತಿ, ಸುಮಿತ್ರ ಮಹಾಜನ್ ಅವರಂತಹ ನಾಯಕರಿಗೆ ಕಳೆದ ಲೋಕಸಭಾ ಚುನಾವಣೆಯಲ್ಲಿ ಟಿಕೆಟ್ ನೀಡದೆ ಪಕ್ಷದ ಚಟುವಟಿಕೆಗಳಿಂದ ದೂರ ಇಡಲಾಗಿತ್ತು.

ಈಗಾಗಲೇ 79 ವರ್ಷ ದಾಟಿರುವ ಯಡಿಯೂರಪ್ಪನವರಿಗೂ ಇದೇ ನಿಯಮ ಅನ್ವಯವಾಗಲಿದೆ. ಕರ್ನಾಟಕದಲ್ಲಿ ಹೊಸ ನಾಯಕತ್ವವನ್ನು ಅವರೇ ಸೂಚಿಸಲಿ ಎಂದು ದೆಹಲಿ ನಾಯಕರು ಹುಕ್ಕುಂ ಹೊರಡಿಸಲು ಮುಂದಾಗಿದ್ದರು.

ಆದರೆ ವರಿಷ್ಟರ ಲೆಕ್ಕಚಾರ ಅಂದುಕೊಂಡಂತೆ ನಡೆಯಲಿಲ್ಲ. ಇಡೀ ದಕ್ಷಿಣ ಭಾರತದಲ್ಲಿ ಬಿಜೆಪಿ ಅಕಾರದಲ್ಲಿರುವ ಏಕೈಕ ರಾಜ್ಯವೆಂದರೆ ಕರ್ನಾಟಕ ಮಾತ್ರ. ತಮಿಳುನಾಡಿನಲ್ಲಿ ಮುಂದಿನ ವರ್ಷ ಚುನಾವಣೆ ನಡೆದರೂ ಬಿಜೆಪಿ ದ್ರಾವಿಡರ ನಾಡಿನಲ್ಲಿ ಖಾತೆ ತೆರೆದರೆ ಅದೇ ದೊಡ್ಡ ಸಾಧನೆ.

ಆಂಧ್ರಪ್ರದೇಶ, ತೆಲಾಂಗಣ ಕೇರಳದಲ್ಲೂ ಪಕ್ಷದ ಸ್ಥಿತಿಗತಿ ಹೇಳಿಕೊಳ್ಳುವಂತಿಲ್ಲ. ಮಹಾರಾಷ್ಟ್ರದಲ್ಲಿ ಶಿವಸೇನೆ- ಕಾಂಗ್ರೆಸ್-ಎನ್‍ಸಿಪಿ ಮೈತ್ರಿಕೂಟ ಅಕಾರದಲ್ಲಿರುವುದರಿಂದ ಇನ್ನು ನಾಲ್ಕು ವರ್ಷ ಪ್ರತಿಪಕ್ಷದ ಸ್ಥಾನವಷ್ಟೇ ಗಟ್ಟಿ.

ಒಂದು ವೇಳೆ ಬಿಎಸ್‍ವೈ ಅವರನ್ನು ಬದಲಾವಣೆ ಮಾಡಿದರೂ ಅವರು ಸುಮ್ಮನೆ ಕೂರುವ ಜಾಯಮಾನದವರಲ್ಲ. 2013ರ ವಿಧಾನಸಭಾ ಚುನಾವಣೆಯಲ್ಲಿ ಕೆಜೆಪಿ ಕಟ್ಟಿ ಬಿಜೆಪಿಯನ್ನು ಸೋಲಿಸಿದ್ದು ವರಿಷ್ಟರಿಗೂ ಗೊತ್ತಿದೆ. ಹಠಮಾರಿ ಸ್ವಾಭಾವದ ಯಡಿಯೂರಪ್ಪ ಅಂದುಕೊಂಡಿದ್ದನ್ನು ಸಾಸುವವರಿಗೂ ಸುಮ್ಮನೆ ಕೂರುವವರಲ್ಲ.

ಅಲ್ಲದೆ, ರಾಜ್ಯದಲ್ಲಿ ಪ್ರಬಲವಾಗಿರುವ ವೀರಶೈವ ಸಮುದಾಯ ಬಿಜೆಪಿ ಬೆನ್ನಿಗೆ ನಿಂತಿರುವ ಕಾರಣ, ಬಿಎಸ್ ವೈ ಅವರನ್ನು ಅಕಾರಿದಂದ ಕೆಳಗಿಳಿಸಿದರೆ, ವಿರೋಧ ಕಟ್ಟಿಕೊಳ್ಳಬೇಕಾಗುತ್ತದೆ ಎಂಬುದು ಮನವರಿಕೆಯಾಗಿದೆ.

ಇವೆಲ್ಲವನ್ನು ಪರಿಗಣಿಸಿಯೇ ದೆಹಲಿ ಬಿಜೆಪಿ ನಾಯಕರು ಸದ್ಯಕ್ಕೆ ಯಡಿಯೂರಪ್ಪ ನಾಯಕತ್ವ ಬದಲಾವಣೆ ಎಂಬ ಗಾಳಿಸುದ್ದಿಗೆ ಪೂರ್ಣವಿರಾಮ ಹಾಕಿದ್ದಾರೆ.


Spread the love

About Laxminews 24x7

Check Also

ಚಿದಾನಂದ ಸವದಿ‌ಗೆ ಚಿಕ್ಕೋಡಿ ಕ್ಷೇತ್ರಕ್ಕೆ ಟಿಕೆಟ್ ನೀಡುವ ಸಾಧ್ಯತೆ

Spread the loveಬೆಳಗಾವಿ, : ಲೋಕಸಭಾ ಚುನಾವಣೆ (Lok Sabha Elections )ಸಮೀಪಿಸುತ್ತಿದ್ದಂತೆ ಕಾಂಗ್ರೆಸ್ (Congress) ಎಚ್ಚರಿಕೆಯಿಂದ ಹೆಜ್ಜೆ ಇಡುತ್ತಿದೆ. ಅಳೆದು …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ