Breaking News
Home / Uncategorized / ಅಖಿಲ ಭಾರತ ಕಾಂಗ್ರೆಸ್ ಸಮಿತಿ (ಎಐಸಿಸಿ) ಸಾರಥ್ಯದ ವಿಷಯ ಪಕ್ಷದಲ್ಲೀಗ ಭಾರೀ ವಿವಾದ ಮತ್ತು ಚರ್ಚೆಗೆ ಗ್ರಾಸ

ಅಖಿಲ ಭಾರತ ಕಾಂಗ್ರೆಸ್ ಸಮಿತಿ (ಎಐಸಿಸಿ) ಸಾರಥ್ಯದ ವಿಷಯ ಪಕ್ಷದಲ್ಲೀಗ ಭಾರೀ ವಿವಾದ ಮತ್ತು ಚರ್ಚೆಗೆ ಗ್ರಾಸ

Spread the love

ನವದೆಹಲಿ, ಆ.24- ಅಖಿಲ ಭಾರತ ಕಾಂಗ್ರೆಸ್ ಸಮಿತಿ (ಎಐಸಿಸಿ) ಸಾರಥ್ಯದ ವಿಷಯ ಪಕ್ಷದಲ್ಲೀಗ ಭಾರೀ ವಿವಾದ ಮತ್ತು ಚರ್ಚೆಗೆ ಗ್ರಾಸವಾಗಿದ್ದು, ಇಂದು ಕಾಂಗ್ರೆಸ್ ಕಾರ್ಯಕಾರಿಣಿ (ಸಿಡಬ್ಲ್ಯುಸಿ) ಸಭೆಯಲ್ಲಿ ಕೈಗೊಳ್ಳುವ ಅಂತಿಮ ನಿರ್ಧಾರ ಭಾರೀ ಕುತೂಹಲ ಕೆರಳಿಸಿದೆ.

ಕಾಂಗ್ರೆಸ್‍ನ ಕ್ರಿಯಾಶೀಲ ನಾಯಕ ರಾಹುಲ್‍ ಗಾಂಧಿ ಅವರೇ ಮತ್ತೆ ಪಕ್ಷದ ಸಾರಥ್ಯ ವಹಿಸಬೇಕೆಂದು ಒಂದು ಬಣ ಬಿಗಿ ಪಟ್ಟು ನೀಡಿರುವ ಬೆನ್ನಲ್ಲೇ ಅವರು ಈ ಅತ್ಯುನ್ನತ ಹುದ್ದೆ ವಹಿಸಿಕೊಳ್ಳಲು ನಿರಾಕರಿಸಿದ್ದಾರೆ.

ಪಕ್ಷದ ತಾರಾ ಆಕರ್ಷಣೆಯಾಗಿರುವ ಪ್ರಿಯಾಂಕಾ ಗಾಂ ವಾದ್ರಾ ಅವರೂ ಕೂಡ ಕಾಂಗ್ರೆಸ್ ಅಧ್ಯಕ್ಷೆಯಾಗಬೇಕೆಂಬ ಕೆಲವು ಮುಖಂಡರ ಸಲಹೆಯನ್ನು ಸೌಜನ್ಯವಾಗಿಯೇ ತಿರಸ್ಕರಿಸಿದ್ದಾರೆ ಎಂದು ಉನ್ನತ ಮೂಲಗಳು ತಿಳಿಸಿವೆ.
ಎಐಸಿಸಿ ಅಧಿನಾಯಕಿ ಸ್ಥಾನ ತ್ಯಜಿಸಲು ಸೋನಿಯಾ ಒಲವು ತೋರಿದ್ದು, ಸಾಮೂಹಿಕ ನಾಯಕತ್ವದ ಪರ ಧ್ವನಿ ಎತ್ತಿದ್ದಾರೆ.

ಈ ಎಲ್ಲ ಬೆಳವಣಿಗೆಗಳ ಹಿನ್ನಲೆಯಲ್ಲಿ ಇಂದಿನ ಸಿಡಬ್ಲ್ಯುಸಿ ಸಭೆ ಭಾರೀ ಪ್ರಾಮುಖ್ಯತೆ ಪಡೆದುಕೊಂಡಿದ್ದು,ಗಾಂಧಿ ಕುಟುಂಬೇತರ ನಾಯಕರೊಬ್ಬರು ಪಕ್ಷದ ಸಾರಥ್ಯ ವಹಿಸುವ ಸಾಧ್ಯತೆ ಇದೆ. ಇಂದು ಸಂಜೆ ವೇಳೆ ಈ ಪ್ರಶ್ನೆಗಳಿಗೆ ಉತ್ತರ ಲಭಿಸಲಿದೆ.

ಗಾಂ ಕುಟುಂಬದ ನಾಯಕತ್ವದ ವಿರುದ್ಧ ಕಾಂಗ್ರೆಸ್ ವಲಯದಲ್ಲೇ ವಿರೋಧ ವ್ಯಕ್ತವಾಗಿರುವುದರಿಂದ ಪಕ್ಷದಲ್ಲಿ ಆಂತರಿಕ ಭಿನ್ನಮತದ ಬಿರುಗಾಳಿ ಎದ್ದಿದ್ದು, ರಾಜಕೀಯ ಚಟುವಟಿಕೆಗಳಿಗೆ ಎಡೆ ಮಾಡಿಕೊಟ್ಟಿದೆ.

ಪಕ್ಷದ ಹಿರಿಯ ಧುರೀಣರೇ ಗಾಂ ಕುಟುಂಬದ ನಾಯಕತ್ವ ಕುರಿತು ಪ್ರಶ್ನಿ ಮಾಡಿರುವುದು ಪಕ್ಷದ ಅಧಿನಾಯಕಿ ಸೋನಿಯಾ ಗಾಂಧಿ ಅಸಮಾಧಾನಕ್ಕೆ ಕಾರಣವಾಗಿದ್ದು, ತಾವು ಅಧ್ಯಕ್ಷ ಸ್ಥಾನದಿಂದ ಕೆಳಗಿಳಿದು ಹೊಸ ನಾಯಕನ ಆಯ್ಕೆಗೆ ಅನುವು ಮಾಡಿಕೊಡುವ ಇಂಗಿತ ವ್ಯಕ್ತಪಡಿಸಿದ್ದಾರೆ.

ನಾಯಕತ್ವ ಬದಲಾವಣೆಗೆ ಆಗ್ರಹಿಸಿ ಪಕ್ಷದ ಹಿರಿಯ ಮುಖಂಡರು ತಮಗೆ ಬರೆದಿರುವ ಪತ್ರಕ್ಕೆ ಪ್ರತಿಕ್ರಿಯಿಸಿರುವ ಸೋನಿಯಾ ಗಾಂಧಿ, ತಾವು ಅಧ್ಯಕ್ಷರಾಗಿ ಮುಂದುವರಿಸಯಲು ಇಚ್ಚಿಸುವುದಿಲ್ಲ. ಪಕ್ಷದ ನಾಯಕರು ಒಟ್ಟಾಗಿ ಸೇರಿ ಹೊಸ ಮುಖಂಡನನ್ನು ಆಯ್ಕೆ ಮಾಡಬೇಕೆಂದು ಅವರು ಮನವಿ ಮಾಡಿದ್ದಾರೆ.

ನಿನ್ನೆ ಮಧ್ಯರಾತ್ರಿ ನಂತರದ ಬೆಳವಣಿಗೆಯಲ್ಲಿ ರಾಹುಲ್ ಗಾಂ ಮತ್ತೆ ಎಐಸಿಸಿ ಅಧ್ಯಕ್ಷರಾಗಲು ನಿರಾಕರಿಸಿದ್ದಾರೆ. ಮತ್ತೊಂದೆಡೆ ವಿಶೇಷ ವರ್ಚಸ್ಸು ಹೊಂದಿರುವ ಪ್ರಿಯಾಂಕಾ ಗಾಂಧಿ ಕಾಂಗ್ರೆಸ್ ಸಾರಥ್ಯ ವಹಿಸಿಕೊಳ್ಳಬೇಕೆಂಬುದು ಇನ್ನೊಂದು ಬಣದ ಆಗ್ರಹವಾಗಿದೆ. ಆದರೆ ಇದಕ್ಕೆ ಪ್ರಿಯಾಂಕಾ ಸಮ್ಮತಿ ನೀಡಿಲ್ಲ.

ಗಾಂಧಿ ಕುಟುಂಬವನ್ನು ಹೊರತುಪಡಿಸಿ ಬೇರೆ ಯಾರಾದರೂ ದುರೀಣರು ಕಾಂಗ್ರೆಸ್ ಅಧ್ಯಕ್ಷರಾಗಬೇಕೆಂಬುದು ರಾಹುಲ್ ಮತ್ತು ಪ್ರಿಯಾಂಕಾ ಅವರ ಇಂಗಿತವಾಗಿದೆ.

ಈ ಎಲ್ಲ ವಿದ್ಯಮಾನಗಳ ಬೆನ್ನಲ್ಲೇ ಇಂದು ನಡೆಯುತ್ತಿರುವ ಸಿಡಬ್ಲ್ಯುಸಿ ಸಭೆಯಲ್ಲಿ ನಾಯಕತ್ವ ಬದಲಾವಣೆ ಮತ್ತು ಪಕ್ಷದ ಪುನರ್‍ಸಂಘಟನೆ ಕುರಿತು ಯಾವ ನಿರ್ಧಾರ ಕೈಗೊಳ್ಳಬಹುದೆಂಬ ಬಗ್ಗೆ ಭಾರೀ ಆಸಕ್ತಿ ಕೆರಳಿಸಿದೆ.

ಸೋನಿಯಾ ಅಧ್ಯಕ್ಷತೆಯಲ್ಲಿ ಪ್ರಗತಿಯಲ್ಲಿರುವ ಈ ಸಭೆಯಲ್ಲಿ ಸಿಡಬ್ಲ್ಯುಸಿ ಸದಸ್ಯರು, ಪಕ್ಷದ ಧುರೀಣರು, ಹಾಲಿ ಸಂಸದರು ಭಾಗವಹಿಸಿದ್ದು ಗಹನ ಸಮಾಲೋಚನೆ ಮುಂದುವರಿದಿದೆ.

ಪತ್ರ ಎಬ್ಬಿಸಿದ ಬಿರುಗಾಳಿ : ಹಾಲಿ ಸಂಸದರು, ಕೇಂದ್ರದ ಮಾಜಿ ಸಚಿವರು, ಮಾಜಿ ಮುಖ್ಯಮಂತ್ರಿಗಳು, ಎಐಸಿಸಿ ಪದಾಕಾರಿಗಳು ಮತ್ತು ಸಿಡಬ್ಲ್ಯುಸಿ ಸದಸ್ಯರೂ ಸೇರಿದಂತೆ ಕಾಂಗ್ರೆಸ್‍ನ 23 ಹಿರಿಯ ಮುಖಂಡರು ಪಕ್ಷದ ಸಂಘಟನೆ ಮತ್ತು ಶಕ್ತಿ ಗಣನೀಯವಾಗಿ ಕಡಿಮೆಯಾಗುತ್ತಿರುವ ಬಗ್ಗೆ ಆತಂಕ ವ್ಯಕ್ತಪಡಿಸಿ ಸೋನಿಯಾ ಅವರಿಗೆ ಬರೆದ ಪತ್ರ ಪಕ್ಷದಲ್ಲಿ ಭಿನ್ನಮತದ ಬಿರುಗಾಳಿಯನ್ನೇ ಎಬ್ಬಿಸಿದೆ.

ಗುಲಾಂ ನಬಿ ಆಜಾದ್, ಕಪಿಲ್ ಸಿಬಲ್, ಶಶಿ ತರೂರ್, ಆನಂದ್ ಶರ್ಮಾ, ಮನೀಶ್ ತಿವಾರಿ, ವಿವೇಕ್ ತಂಖಾ, ಮುಕುಲ್ ವಾಸ್ನಿಕ್, ಜತೀನ್ ಪ್ರಸಾದ್, ಭೂಪಿಂದರ್ ಸಿಂಗ್ ಹೂಡಾ, ರಾಜೀಂದರ್ ಕೌರ್ ಭಟ್ಟಲ್, ಡಾ.ಎಂ.ವೀರಪ್ಪ ಮೊಯ್ಲಿ, ಪೃಥ್ವಿರಾಜ್ ಚವಾಣ್, ಪಿ.ಜಿ. ಕುರಿಯನ್, ಅಜಯ್ ಸಿಂಗ್, ರೇಣುಕಾ ಚೌಧರಿ, ಮಿಲಿಂದ್ ದೌದರಿ, ರಾಜ್ ಬಬ್ಬರ್, ಅರವಿಂದ್ ಸಿಂಗ್, ಕೌಲ್ ಸಿಂಗ್ ಠಾಕೂರ್, ಅಖಿಲೇಶ್ ಪ್ರತಾಪ್ ಸಿಂಗ್ ಕುಲದೀಪ್ ಶರ್ಮಾ, ಯೋಗಾನಂದ ಶಾಸ್ತ್ರಿ ಹಾಗೂ ಸಂದೀಪ್ ದೀಕ್ಷಿತ್ ಈ ಪತ್ರಕ್ಕೆ ಸಹಿ ಮಾಡಿದ್ದಾರೆ.

ಬೇಡಿಕೆ ಏನು ? : ಪಕ್ಷದ ನಾಯಕತ್ವ ಸಂಪೂರ್ಣ ಬದಲಾವಣೆ, ಅಕಾರ ವಿಕೇಂದ್ರೀಕರಣ, ರಾಜ್ಯ ಘಟಕಗಳ ಸಬಲೀಕರಣ, ಎಲ್ಲ ಹಂತಗಳಲ್ಲೂ ಕಾಂಗ್ರೆಸ್ ಸಂಘಟನೆಗೆ ಚುನಾವಣೆ ಸೇರಿದಂತೆ ಪ್ರಮುಖ ಬೇಡಿಕೆಗಳನ್ನು ಈ ಪತ್ರದಲ್ಲಿ ಪ್ರಮುಖವಾಗಿ ಪ್ರಸ್ತಾಪಿಸಲಾಗಿದೆ.

ಈ ಪತ್ರಕ್ಕೆ ರಾಜಸ್ತಾನ ಮುಖ್ಯಮಂತ್ರಿ ಅಶೋಕ್ ಗೆಲ್ಹೋಟ್, ಪಂಜಾಬ್ ಮುಖ್ಯಮಂತ್ರಿ ಅಮರೀಂದರ್ ಸಿಂಗ್, ಛತ್ತೀಸ್‍ಗಢ ಮುಖ್ಯಮಂತ್ರಿ ಭೂಪೇಶ್ ಬಾಗೆಲ್, ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಮೊದಲಾದವರು ಗಾಂ ಕುಟುಂಬದ ನಾಯಕತ್ವ ಪ್ರಶ್ನಿಸಿರುವುದು ದುರದೃಷ್ಟಕರ. ಪಕ್ಷದ ಒಗ್ಗಟ್ಟಿಗೆ ಗಾಂ ಕುಟುಂಬದ ಕೊಡುಗೆ ಅಮೂಲ್ಯ. ಈ ಸಂದರ್ಭದಲ್ಲಿ ಈ ವಿಷಯದಲ್ಲಿ ಭಿನ್ನಾಭಿಪ್ರಾಯ ಸಲ್ಲದು ಎಂದು ಪ್ರತಿಕ್ರಿಯಿಸಿದ್ದಾರೆ.

ಕಾಂಗ್ರೆಸ್‍ನಲ್ಲಿ ಈಗ ಎರಡು ಬಣಗಳ ಭಿನ್ನಮತ ಭುಗಿಲೆದ್ದಿದ್ದು, ಇದನ್ನು ಶಮನಗೊಳಿಸುವ ನಿಟ್ಟಿನಲ್ಲಿಯೂ ಇಂದಿನ ಸಿಡಬ್ಲ್ಯುಸಿ ಸಭೆ ಭಾರೀ ಮಹತ್ವ ಪಡೆದುಕೊಂಡಿದೆ.


Spread the love

About Laxminews 24x7

Check Also

ಕ್ಯಾನ್ಸರ್‌ ರೋಗಿಗಳಿಗೆ ಸಿಹಿಸುದ್ದಿ: 72 ಲಕ್ಷ ರೂ. ನ Cancer ಔಷಧ ಇನ್ಮುಂದೆ 3 ಲಕ್ಷಕ್ಕೆ ಸಿಗುತ್ತೆ

Spread the love ನವದೆಹಲಿ : ಕ್ಯಾನ್ಸರ್‌ ರೋಗಿಗಳಿಗೆ ಝೈಡಸ್‌ ಕಂಪನಿ ಭರ್ಜರಿ ಗುಡ್‌ ನ್ಯೂಸ್‌ ನೀಡಿದೆ. ಹೌದು 72 ಲಕ್ಷ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ