Breaking News
Home / ರಾಜಕೀಯ / ಕಲಬುರಗಿ ಪಾಲಿಕೆ; JDS ಜತೆ ಮೈತ್ರಿ ಮಾತುಕತೆಗೆ ಸಿದ್ದರಾಮಯ್ಯನೇ ಬರಲೀ ಎಂದು HDK ಪಟ್ಟು ಹಿಡಿದಿದ್ಯಾಕೆ?

ಕಲಬುರಗಿ ಪಾಲಿಕೆ; JDS ಜತೆ ಮೈತ್ರಿ ಮಾತುಕತೆಗೆ ಸಿದ್ದರಾಮಯ್ಯನೇ ಬರಲೀ ಎಂದು HDK ಪಟ್ಟು ಹಿಡಿದಿದ್ಯಾಕೆ?

Spread the love

ಲಬುರಗಿ ಮಹಾನಗರ ಪಾಲಿಕೆ ಚುನಾವಣೆಯಲ್ಲಿ ಯಾವ ಪಕ್ಷಕ್ಕೂ ಪೂರ್ಣ ಬಹುಮತ ಸಿಗದೆ ಅತಂತ್ರವಾಗಿದೆ. ಕಾಂಗ್ರೆಸ್, ಬಿಜೆಪಿ ಯಾರೇ ಅಧಿಕಾರಕ್ಕೆ ಬರಬೇಕಾದರೂ ಜೆಡಿಎಸ್ ಬೆಂಬಲ ಅತ್ಯಗತ್ಯ. ಆದರೆ, ಜೆಡಿಎಸ್ (JDS) ಮೇಯರ್ ಸ್ಥಾನವನ್ನು ಯಾರು ಬಿಟ್ಟುಕೊಡುತ್ತಾರೋ ಅವರಿಗೆ ನಮ್ಮ ಬೆಂಬಲ ಎಂದು ಪಟ್ಟು ಹಿಡಿದಿದೆ. ಇನ್ನು ಜೆಡಿಎಸ್ನೊಂದಿಗೆ ಯಾವುದೇ ಕಾರಣಕ್ಕೂ ಮೈತ್ರಿ ಬೇಡ ಎಂದು ಸಿದ್ದರಾಮಯ್ಯ ಹೇಳಿದ್ದಾರೆ. ಸಿದ್ದರಾಮಯ್ಯ ಹೇಳಿಕೆ ಹಿಂದೆಯೂ ಕೆಲವು ಲೆಕ್ಕಾಚಾರ ಇರುವುದನ್ನು ಅಲ್ಲಗಳೆಯುವಂತಿಲ್ಲ.

ಕಲಬುರ್ಗಿ ಮಹಾನಗರ ಪಾಲಿಕೆಯಲ್ಲಿ ಒಟ್ಟು 55 ವಾರ್ಡುಗಳ ಪೈಕಿ ಕಾಂಗ್ರೆಸ್ 27, ಬಿಜೆಪಿ 23, ಜೆಡಿಎಸ್ 4 ಕ್ಷೇತ್ರಗಳಲ್ಲಿ ಗೆದ್ದಿವೆ. ಒಬ್ಬ ಪಕ್ಷೇತರ ಅಭ್ಯರ್ಥಿ ಕೂಡ ಆಯ್ಕೆಯಾಗಿದ್ದಾರೆ. ಪಾಲಿಕೆ ಅಧ್ಯಕ್ಷರ ಚುನಾವಣೆ ಆದ್ದರಿಂದ ಕಲಬುರ್ಗಿ ಲೋಕಸಭಾ ಕ್ಷೇತ್ರದ ಸಂಸದ, ಶಾಸಕ ಹಾಗೂ ವಿಧಾನಸಭಾ ಸದಸ್ಯರಿಗೆ ಮತ ಹಾಕುವ ಹಕ್ಕು ಕೂಡ ಇದೆ. ಎಲ್ಲರೂ ಮತ ಹಾಕಿದರೂ ಪಾಲಿಕೆಯಲ್ಲಿ ಬಹುಮತಕ್ಕೆ 32 ನಂಬರ್ ಅಗತ್ಯ ಇದೆ.

23 ಪಾಲಿಕೆ ಸದಸ್ಯರು, ಒಬ್ಬ ಸಂಸದ, ಇಬ್ಬರು ಶಾಸಕರು ಹಾಗೂ ವಿಧಾನಪರಿಷತ್ ಸದಸ್ಯರೊಂದಿಗೆ ಬಿಜೆಪಿ (BJP) ಬಲ 30 ಆಗುತ್ತದೆ. ಮ್ಯಾಜಿಕ್ ನಂಬರ್ ಆದ 32ಕ್ಕೆ ಇನ್ನೂ ಇಬ್ಬರು ಸದಸ್ಯರ ಬೆಂಬಲ ಅಗತ್ಯ ಇದೆ. ಜೆಡಿಎಸ್ನ ನಾಲ್ವರು ಸದಸ್ಯರಲ್ಲಿ ಇಬ್ಬರ ಬೆಂಬಲ ಸಿಕ್ಕರೂ ಬಿಜೆಪಿ ಅಧಿಕಾರದ ಗದ್ದುಗೆಗೆ ಏರಬಲ್ಲದು.

ಹಾಗೆಯೇ ಪಾಲಿಕೆಯಲ್ಲಿ ಗೆಲುವು ಸಾಧಿಸಿರುವ ಏಕೈಕ ಪಕ್ಷೇತರ ಅಭ್ಯರ್ಥಿ ವಾಸ್ತವವಾಗಿ ಬಿಜೆಪಿಯ ಬಂಡಾಯ ಅಭ್ಯರ್ಥಿ. ಬಿಜೆಪಿ ಟಿಕೆಟ್ ಸಿಗದ ಹಿನ್ನೆಲೆಯಲ್ಲಿ ಸ್ವತಂತ್ರವಾಗಿ ಅವರು ಸ್ಪರ್ಧಿಸಿದ್ದರು. ಇವರನ್ನ ಮನವೊಲಿಸಿ ಬಿಜೆಪಿ ಬೆಂಬಲ ಗಿಟ್ಟಿಸುವ ನಿರೀಕ್ಷೆ ಇದೆ.

ಕಾಂಗ್ರೆಸ್ (Congress) ಪಕ್ಷ ಕಲಬುರ್ಗಿ ಪಾಲಿಕೆಯಲ್ಲಿ 27 ಸದಸ್ಯರನ್ನ ಹೊಂದಿದೆ. ಒಬ್ಬ ಶಾಸಕ ಹಾಗೂ ಒಬ್ಬ ರಾಜ್ಯಸಭಾ ಸದಸ್ಯರನ್ನ ಸೇರಿಸಿದರೆ ಅದರ ಸಂಖ್ಯಾಬಲ 29ಕ್ಕೆ ಏರುತ್ತದೆ. ಮ್ಯಾಜಿಕ್ ನಂಬರ್ಗೆ ಇನ್ನೂ 3 ಸದಸ್ಯರ ಬೆಂಬಲ ಅಗತ್ಯ ಇದೆ. ಅಧಿಕಾರ ಹಿಡಿಯಲು ಕಾಂಗ್ರೆಸ್ ಪಕ್ಷಕ್ಕೆ ಜೆಡಿಎಸ್ ಸದಸ್ಯರ ಬೆಂಬಲ ಅತಿ ಮುಖ್ಯವಾಗಿದೆ. ಹೀಗಿರುವಾಗಲೇ ಕಲಬುರಗಿ ಪಾಲಿಕೆ ಮೈತ್ರಿ ವಿಚಾರದಲ್ಲಿ ಹೆಚ್ಡಿಕೆ, ಕೈ ನಾಯಕರಾದ ಸಿದ್ದು-ಡಿಕೆಶಿಯೇ ಮನೆ ಬಾಗಿಲಿಗೆ ಬರಬೇಕು ಅನ್ನೋ ಹಠಕ್ಕೆ ಬಿದ್ದಂತಿದೆ.

ಇತ್ತ ಸಿದ್ದುಗೆ ಆತ್ಮಾಭಿಮಾನದ ಪ್ರತಿಷ್ಠೆ ಕಾಡ್ತಿದ್ದು, ದಳಪತಿಗಳಿಗೆ ಖುದ್ದಾಗಿ ಮೈತ್ರಿಯ ಆಹ್ವಾನ ಕೊಡ್ತಿಲ್ಲ. ಇದು ಕೈ, ದಳದ ಪಾಲಿಕೆ ಮೈತ್ರಿಯ ಕುತೂಹಲವನ್ನ ಮತ್ತಷ್ಟೂ ಹೆಚ್ಚಿಸಿದೆ. ಕಲಬುರಗಿ ಪಾಲಿಕೆಯ ಮೈತ್ರಿ ವಿಚಾರ ಕೈ ದಳ ನಾಯಕರ ನಡುವಿನ ಹಠ-ಪ್ರತಿಷ್ಠೆಗೆ ಸಾಕ್ಷಿಯಾಗಿದೆ. ಮಲ್ಲಿಕಾರ್ಜುನ ಖರ್ಗೆ ಮಾತನಾಡಿದ್ರೂ ಕಾಂಗ್ರೆಸ್ನ ರಾಜ್ಯ ನಾಯಕರೇ ಚರ್ಚಿಸಲಿ ಅಂತ ಹಠಕ್ಕೆ ಬಿದ್ದಿರೋ ಕುಮಾರಸ್ವಾಮಿ, ಸಿದ್ದು ವಿರುದ್ಧ ಹಳೇ ಸೇಡಿನ ಪ್ರತೀಕಾರಕ್ಕೆ ಕಾಯ್ತಿರುವಂತಿದೆ.

ಕಲಬುರಗಿ ಮಹಾನಗರ ಪಾಲಿಕೆ ಮೈತ್ರಿ ವಿಚಾರದಲ್ಲಿ ಹೆಚ್ಡಿಕೆ ಹಠ ಮುಂದುವರೆದೇ ಇದೆ. ದೊಡ್ಡಗೌಡರ ಜೊತೆ ಮಲ್ಲಿಕಾರ್ಜುನ ಖರ್ಗೆ ಮೈತ್ರಿ ಮಾತುಕತೆ ನಡೆಸಿದ್ದರೂ ಹೆಚ್. ಡಿ. ಕುಮಾರಸ್ವಾಮಿ ಮಾತ್ರ ರಾಜ್ಯ ನಾಯಕರೇ ಮಾತಾಡಲಿ ಅಂತಿದ್ದಾರೆ. ಆ ಮೂಲಕ ಸಿದ್ದರಾಮಯ್ಯ ಮೈತ್ರಿ ಪ್ರಸ್ತಾಪಿಸಲು ಹೆಚ್ಡಿಕೆ ಪಟ್ಟು ಹಿಡಿದಂತಿದೆ.

ಪದೇ ಪದೇ ರಾಜ್ಯದಲ್ಲಿ ಜೆಡಿಎಸ್ ಅಸ್ತಿತ್ವದಲ್ಲಿಲ್ಲ ಎನ್ನುತ್ತಿರುವ ಸಿದ್ದು, ಜೆಡಿಎಸ್ ಅನ್ನು ಬಿಜೆಪಿಯ ಬಿ ಟೀಂ ಅಂತ ಹೇಳಿಕೆ ನೀಡಿದ್ದಾರೆ. ಹೀಗಾಗಿ ಲಘು ಮಾತಿನ ಬಗ್ಗೆ ಸಿದ್ದು ಬಹಿರಂಗ ಹೇಳಿಕೆ ನೀಡಲಿ ಎಂಬ ಉದ್ದೇಶ ಹೆಚ್ಡಿಕೆಯದ್ದಾಗಿದೆ. ಅಲ್ಲದೆ ಮೈತ್ರಿ ಬಗ್ಗೆ ಸಿದ್ದರಾಮಯ್ಯ ನಮ್ಮ ಬಳಿ ಚರ್ಚಿಸಲೆಂಬ ಲೆಕ್ಕಾಚಾರದಲ್ಲಿ ಮೈತ್ರಿ ಬೇಕೋ? ಬೇಡ್ವೋ? ಸಿದ್ದರಾಮಯ್ಯರಿಂದ ಹೇಳಿಸೋ ಹಠಕ್ಕೆ ಹೆಚ್ಡಿಕೆ ಬಿದ್ದಿದ್ದಾರೆ.

ಇದೇ ಹಠದಲ್ಲಿ ಖುದ್ದು ಸಿದ್ದರಾಮಯ್ಯರೇ (Siddaramiah) ಮೈತ್ರಿ ಬಗ್ಗೆ ಪ್ರಸ್ತಾಪಿಸಿ ಆಹ್ವಾನ ನೀಡಬೇಕು, ಖರ್ಗೆ ಅವರದ್ದು ವೈಯಕ್ತಿಕ ಮಾತುಕತೆ ಅಷ್ಟೇ ಅಂತ ಹೆಚ್ಡಿಕೆ ಹೇಳ್ತಿದ್ದಾರೆ. ಇತ್ತ ಮೈತ್ರಿ ಬೇಕನಿಸಿದರೂ ಸಿದ್ದರಾಮಯ್ಯಗೆ ಖುದ್ದು ಮೈತ್ರಿ ಪ್ರಸ್ತಾಪಿಸಲು ಆತ್ಮಾಭಿಮಾನ ಅಡ್ಡಿಯಾಗ್ತಿದೆ. ಇದೇ ಕಾರಣಕ್ಕೆ ಮಲ್ಲಿಕಾರ್ಜುನ ಖರ್ಗೆ ನಮ್ಮ ಪಕ್ಷದ ದೊಡ್ಡ ಲೀಡರ್ ಅಲ್ವಾ? ಅನ್ನೋ ಮೂಲಕ ನಿನ್ನೆಯ ಹೆಚ್ಡಿಕೆ ಹೇಳಿಕೆಗೆ ಸಿದ್ದು ಟಾಂಗ್ ಕೊಟ್ಟಿದ್ದಾರೆ.

ಅತ್ತ ಸಿದ್ದರಾಮಯ್ಯ ಪ್ರಸ್ತಾಪಿಸಲಿ ಅಂತ ಹೆಚ್ಡಿಕೆ ಹಠಕ್ಕೆ ಬಿದ್ದಿದ್ರೆ, ಇತ್ತ ಸಿದ್ದು ಮಾತ್ರ ತಾನು ಪ್ರಸ್ತಾಪಿಸಲ್ಲ ಅಂತ ನಿರ್ಧರಿಸಿದಂತಿದೆ. ಇದೇ ಕಾರಣಕ್ಕೆ ಖರ್ಗೆ ಮಾತಾಡಿದ್ದಾರೆ ಅಂತ ಹೇಳಿದ್ದಾರೆಯೇ ಹೊರತು ದಳಪತಿಗಳಿಗೆ ಖುದ್ದು ಮೈತ್ರಿಯ ಆಹ್ವಾನ ಕೊಡ್ತಿಲ್ಲ. ಸದ್ಯ ಕಲಬುರಗಿ ಪಾಲಿಕೆ ಮೈತ್ರಿಯಲ್ಲಿನ ಹೆಚ್ಡಿಕೆ-ಸಿದ್ದು ನಡುವಿನ ಈ ಹಠ-ಪ್ರತಿಷ್ಠೆ ಸಮರ ಸದ್ಯಕ್ಕೆ ಮುಗಿಯೋ ಲಕ್ಷಣವೂ ಕಾಣ್ತಿಲ್ಲ. ಹೀಗಾಗಿ ಪಾಲಿಕೆ ಮೈತ್ರಿಯ ಕುತೂಹಲ ಇನ್ನೂ ನಿಗೂಢವಾಗಿಯೇ ಉಳಿದುಬಿಟ್ಟಿದೆ.


Spread the love

About Laxminews 24x7

Check Also

ಮೋದಿ ಆಡಳಿತದಲ್ಲಿ ಆರ್ಥಿಕವಾಗಿ ಜಪಾನ್- ಇಂಗ್ಲೆಂಡ್‌ ಕಿಂತ ಮುಂದೆ ಭಾರತ ಇದೆ: ಮಾಜಿ ಸಚಿವ ಮುರಗೇಶ ನಿರಾಣಿ…!!

Spread the love ಮೋದಿ ಆಡಳಿತದಲ್ಲಿ ಆರ್ಥಿಕವಾಗಿ ಜಪಾನ್- ಇಂಗ್ಲೆಂಡ್‌ ಕಿಂತ ಮುಂದೆ ಭಾರತ ಇದೆ: ಮಾಜಿ ಸಚಿವ ಮುರಗೇಶ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ