Breaking News
Home / ಜಿಲ್ಲೆ / ಬೆಂಗಳೂರು / ಬೆಂಗಳೂರು-ಮೈಸೂರು ದಶಪಥ ಹೆದ್ದಾರಿ ಕಾಮಗಾರಿ: ಈ ವಾಹನಗಳ ಸಂಚಾರಕ್ಕೆ ನಿರ್ಬಂಧ

ಬೆಂಗಳೂರು-ಮೈಸೂರು ದಶಪಥ ಹೆದ್ದಾರಿ ಕಾಮಗಾರಿ: ಈ ವಾಹನಗಳ ಸಂಚಾರಕ್ಕೆ ನಿರ್ಬಂಧ

Spread the love

ಬೆಂಗಳೂರು, ಸೆಪ್ಟೆಂಬರ್ 14: ಬೆಂಗಳೂರು-ಮೈಸೂರು ನಡುವಿನ ದಶಪಥ ಹೆದ್ದಾರಿ ಕಾಮಗಾರಿ ಶುರುವಾಗಲಿದ್ದು, ದ್ವಿಚಕ್ರ ವಾಹನ, ಆಟೋ ಹಾಗೂ ಟ್ರ್ಯಾಕ್ಟರ್‌ಗಳ ಓಡಾಟವನ್ನು ನಿಷೇಧಿಸಲಾಗಿದೆ.

ಯೋಜನೆಗಾಗಿ ಒಟ್ಟು 8,172 ಕೋಟಿ ರೂ. ವ್ಯಯಿಸುತ್ತಿದ್ದು, 2022ರ ಅಕ್ಟೋಬರ್‌ನಲ್ಲಿ ಕಾಮಗಾರಿ ಪೂರ್ಣಗೊಳಿಸುವ ಭರವಸೆಯನ್ನು ನೀಡಲಾಗಿದೆ. ಈ ಕಾಮಗಾರಿ ಮುಗಿದಲ್ಲಿ ಬೆಂಗಳೂರು-ಮೈಸೂರು ನಡುವಿನ ಪ್ರಯಾಣ ಈಗಿರುವ 3 ಗಂಟೆಗೆ ಬದಲಾಗಿ 90 ನಿಮಿಷಕ್ಕೆ ಇಳಿಯಲಿದೆ.

2019ರಿಂದ ಕಂಪನಿಯು ರಸ್ತೆ ಅಭಿವೃದ್ಧಿ ಕಾಮಗಾರಿಯನ್ನು ಕೈಗೆತ್ತಿಕೊಂಡಿದೆ. ದಶಪಥಗಳ ಹೆದ್ದಾರಿ ವಿಸ್ತರಣೆ ಕಾಮಗಾರಿ ಲಾಕ್‌ಡೌನ್‌ ಘೋಷಣೆಗೆ ಮುನ್ನ ಭರದಿಂದ ಸಾಗಿತ್ತು. ಆದರೆ ಕೋವಿಡ್ ಲಾಕ್‌ಡೌನ್ ಕಾರಣಕ್ಕೆ ಮಧ್ಯೆ ಒಂದೆರಡು ತಿಂಗಳು ಕೆಲಸ ನಿಂತಿತ್ತು. ಇದೀಗ ಮತ್ತೆ ಭರದಿಂದ ಕೆಲಸಗಳು ಸಾಗಿವೆ.

ಬೆಂಗಳೂರು-ಮೈಸೂರು ಹೆದ್ದಾರಿ ಹಳೆಯ ನಾಲ್ಕು ಪಥದ ರಸ್ತೆ ಸುಮಾರು 25 ರಿಂದ 30 ಮೀಟರ್‌ ಅಗಲ ಇದ್ದು, ಇದನ್ನು 60 ಮೀಟರ್‌ಗೆ ಹಾಗೂ ಎಲಿವೇಟೆಡ್‌ ಕಾರಿಡಾರ್‌ ಬಳಿ 45 ಮೀಟರ್‌ಗೆ ವಿಸ್ತರಣೆ ಮಾಡಲಾಗುತ್ತಿದೆ.

ಬೆಂಗಳೂರು-ಮೈಸೂರು ನಡುವೆ ಸದ್ಯ 135 ಕಿಲೋಮೀಟರ್‌ ಅಂತರವಿದೆ. ಇದರಲ್ಲಿ ಬೆಂಗಳೂರು ಹೊರವಲಯದ ನೈಸ್ ಜಂಕ್ಷನ್‌ ಬಳಿಯ 18ನೇ ಕಿ.ಮೀ. ಮೈಲಿಗಲ್ಲಿನ ಬಳಿ ಪಂಚಮುಖಿ ದೇವಸ್ಥಾನದಿಂದ ರಸ್ತೆ ವಿಸ್ತರಣೆ ಕಾರ್ಯ ಆರಂಭಗೊಂಡು ಮೈಸೂರಿನ ಕೊಲಂಬಿಯಾ ಏಷ್ಯಾ ಜಂಕ್ಷನ್‌ನಲ್ಲಿ ಮುಕ್ತಾಯಗೊಳ್ಳಲಿದೆ. ಒಟ್ಟು 118 ಕಿ.ಮೀ ಉದ್ದಕ್ಕೆ ಹತ್ತು ಪಥಗಳ ರಸ್ತೆ ನಿರ್ಮಾಣ ಆಗುತ್ತಿದೆ.

ಸದ್ಯ ಹೈದರಾಬಾದ್‌ನ ನೆಹರೂ ಔಟರ್‌ ರಿಂಗ್‌ ರೋಡ್‌ ಹಾಗೂ ಹೈದರಾಬಾದ್‌ ಪಟ್ಟಣದಿಂದ ವಿಮಾನ ನಿಲ್ದಾಣ ಸಂಪರ್ಕಿಸುವ ಪಿ.ವಿ. ನರಸಿಂಹ ರಾವ್‌ ಎಕ್ಸ್‌ಪ್ರೆಸ್‌ ಹೈವೆಗಳಲ್ಲಿ ಮಾತ್ರವೇ ದ್ವಿಚಕ್ರ ವಾಹನಗಳನ್ನು ನಿಷೇಧಿಸಲಾಗಿತ್ತು. ಇನ್ನು ರಾಜ್ಯದಲ್ಲಿ ನೆಲಮಂಗಲದಿಂದ ಬೆಂಗಳೂರಿನವರೆಗೂ ದ್ವಿಚಕ್ರ ವಾಹನಗಳನ್ನು ನಿಷೇಧಿಸುವ ಚಿಂತನೆ ನಡೆಸಲಾಗಿತ್ತಾದರೂ ವಿರೋಧ ಎದುರಾಗಿ ಸ್ಥಗಿತಗೊಂಡಿತ್ತು.

ಈ ಮೊದಲು ಬೆಂಗಳೂರು-ಮೈಸೂರು ರಸ್ತೆಗೆ ಬೈಪಾಸ್‌ ನಿರ್ಮಿಸಿ, ಹತ್ತು ಪಥದ ರಸ್ತೆ ನಿರ್ಮಾಣ ಕಾರ‍್ಯ ನಡೆಯುತ್ತಿತ್ತು. ಆದರೀಗ, ಈ ರಸ್ತೆ ಎಕ್ಸ್‌ಪ್ರೆಸ್‌ ಹೈವೆಯಾಗಿ ಮೇಲ್ದರ್ಜೆಗೇರಿದೆ. ಹೀಗಾಗಿ ಈ ಹೆದ್ದಾರಿಯ ಇಕ್ಕೆಲಗಳಲ್ಲಿ ಸುಸಜ್ಜಿತ ಸರ್ವಿಸ್‌ ರಸ್ತೆಗಳನ್ನು ನಿರ್ಮಿಸಿ, ಅಲ್ಲಿಯೇ ಬೈಕ್‌, ಆಟೋ, ಟ್ರ್ಯಾಕ್ಟರ್‌ಗಳ ಸಂಚಾರಕ್ಕೆ ಅವಕಾಶ ನೀಡಲು ಪ್ರಾಧಿಕಾರ ಮುಂದಾಗಿದೆ.

ಒಟ್ಟು ವೆಚ್ಚ 8172 ಕೋಟಿ ರೂ.
6 ಪಥದ ಎಕ್ಸ್‌ಪ್ರೆಸ್‌ ವೇ (ಮೈಸೂರು ಕಡೆಗೆ 3 ಪಥ, ಬೆಂಗಳೂರು ಕಡೆಗೆ 3 )
8 ಕಿ.ಮೀ ಉದ್ದದ ಎಲಿವೇಟೆಡ್‌ ಕಾರಿಡಾರ್‌
ರಸ್ತೆ ಉದ್ದ: 118 ಕಿ.ಮೀ
6 ಬೈಪಾಸ್‌ಗಳು
44 ಕಿರು ಸೇತುವೆಗಳು
4 ಪಥದ ಸರ್ವಿಸ್‌ ರಸ್ತೆ ನಿರ್ಮಾಣ
9 ದೊಡ್ಡ ಸೇತುವೆಗಳು

ಮೈಸೂರು-ಬೆಂಗಳೂರು ನಡುವೆ ಒಟ್ಟು ಎರಡು ಹಂತದಲ್ಲಿ ಕಾಮಗಾರಿ ಕೈಗೆತ್ತಿಕೊಳ್ಳಲಾಗಿದೆ. ಬೆಂಗಳೂರು ನೈಸ್‌ ಜಂಕ್ಷನ್‌ ರಸ್ತೆ ಸಮೀಪದಿಂದ ಮಂಡ್ಯ ಜಿಲ್ಲೆಯ ನಿಡಘಟ್ಟವರೆಗಿನ ಮೊದಲ ಹಂತದ ಕಾಮಗಾರಿಯು ಭಾಗಶಃ ಮುಕ್ತಾಯ ಹಂತ ತಲುಪಿದೆ. ಇಲ್ಲಿ ಒಟ್ಟಾರೆ 56.2 ಕಿ.ಮೀ ಉದ್ದದ ರಸ್ತೆಯು ವಿಸ್ತರಣೆ ಆಗುತ್ತಿದೆ.

ಬಿಡದಿ, ರಾಮನಗರ- ಚನ್ನಪಟ್ಟಣ ಮಾರ್ಗದಲ್ಲಿ ಒಟ್ಟು 29.33 ಉದ್ದದ ಬೈಪಾಸ್ ರಸ್ತೆಯನ್ನು ಹೊಸತಾಗಿ ನಿರ್ಮಾಣ ಮಾಡಲಾಗುತ್ತಿದೆ. ಈ ಕೆಲಸ ಈಗಾಗಲೇ ಪೂರ್ಣವಾಗಿದ್ದು, ಹೊಸ ರಸ್ತೆಯಲ್ಲಿ ವಾಹನಗಳು ಓಡಾಡುತ್ತಿವೆ. ಬಿಡದಿ ಸಮೀಪದ ಕೆರೆ ಮೇಲೆ, ರಾಮನಗರ-ಚನ್ನಪಟ್ಟಣ ನಡುವೆ ಅರ್ಕಾವತಿ ನದಿ ಮೇಲೆ, ಕಣ್ವ ನದಿ ಮೇಲೆ ಹಾಗೂ ಮತ್ತೊಂದು ಕೆರೆಯ ಮೇಲೆ ಈ ಸೇತುವೆಗಳನ್ನು ನಿರ್ಮಿಸಲಾಗುತ್ತಿದೆ. ಈ ಸೇತುವೆಗಳು ಹಾಗೂ ಅಲ್ಲಲ್ಲಿ ಅಂಡರ್‌ಪಾಸ್‌ಗಳ ನಿರ್ಮಾಣ ಕಾಮಗಾರಿಗಳಷ್ಟೇ ಸದ್ಯ ಬಾಕಿ ಉಳಿದುಕೊಂಡಿವೆ.

ಹೆದ್ದಾರಿಗಳಲ್ಲಿ ವಾಹನಗಳು ಶರವೇಗದಲ್ಲಿ ಸಾಗುತ್ತಿದ್ದು, ಬೈಕ್‌ ಮತ್ತು ಆಟೋದಂಥ ಮಂದಗತಿಯ ವಾಹನಗಳಿಂದ ಸಮಸ್ಯೆಯಾಗುತ್ತಿದೆ. ಜತೆಗೆ ಈ ಸಣ್ಣ ವಾಹನಗಳು ಅಪಘಾತಕ್ಕೆ ಒಳಗಾಗುವ ಸಾಧ್ಯತೆ ಹೆಚ್ಚು. ಸರ್ವೀಸ್‌ ರಸ್ತೆಯಲ್ಲಿ ಓಡಾಡುವ ವಾಹನಗಳಿಗೆ ಟೋಲ್‌ನಿಂದಲೂ ಮುಕ್ತಿ ಸಿಗಲಿದೆ.


Spread the love

About Laxminews 24x7

Check Also

ಚಿದಾನಂದ ಸವದಿ‌ಗೆ ಚಿಕ್ಕೋಡಿ ಕ್ಷೇತ್ರಕ್ಕೆ ಟಿಕೆಟ್ ನೀಡುವ ಸಾಧ್ಯತೆ

Spread the loveಬೆಳಗಾವಿ, : ಲೋಕಸಭಾ ಚುನಾವಣೆ (Lok Sabha Elections )ಸಮೀಪಿಸುತ್ತಿದ್ದಂತೆ ಕಾಂಗ್ರೆಸ್ (Congress) ಎಚ್ಚರಿಕೆಯಿಂದ ಹೆಜ್ಜೆ ಇಡುತ್ತಿದೆ. ಅಳೆದು …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ