Breaking News
Home / ಜಿಲ್ಲೆ / ಬೆಂಗಳೂರು / ಕರ್ನಾಟಕ ಟಿಇಟಿ ಫಲಿತಾಂಶ ಬಿಡುಗಡೆ: 45,074 ಅಭ್ಯರ್ಥಿಗಳಿಗೆ ಅರ್ಹತೆ

ಕರ್ನಾಟಕ ಟಿಇಟಿ ಫಲಿತಾಂಶ ಬಿಡುಗಡೆ: 45,074 ಅಭ್ಯರ್ಥಿಗಳಿಗೆ ಅರ್ಹತೆ

Spread the love

ಬೆಂಗಳೂರು: ಸಾರ್ವಜನಿಕ ಶಿಕ್ಷಣ ಇಲಾಖೆಯು, ಕರ್ನಾಟಕ ಶಿಕ್ಷಕರ ಅರ್ಹತಾ ಪರೀಕ್ಷೆ(ಕೆಎಆರ್‌ಟಿಇಟಿ-2021)ಯ ಫಲಿತಾಂಶ ಬಿಡುಗಡೆ ಮಾಡಿದೆ. ವಿವಿಧ ತರಗತಿಗಳ ಬೋಧಕರಿಗೆ ನಡೆಸಲಾಗುವ ಪತ್ರಿಕೆ 1 ಹಾಗೂ 2 ರಲ್ಲಿ ಒಟ್ಟಾರೆಯಾಗಿ 2,31,886 ಅಭ್ಯರ್ಥಿಗಳು ಹಾಜರಾಗಿದ್ದರು. ಈ ಪೈಕಿ 45,074 ಜನರು ಅರ್ಹತೆ ಪಡೆದಿದ್ದು, ಶೇ.19 ಉತ್ತೀರ್ಣತೆ ದಾಖಲಾಗಿದೆ.

ಕಳೆದ ವರ್ಷ ಪರೀಕ್ಷೆಗೆ ಹಾಜರಾಗಿದ್ದ 2,02,991 ಅಭ್ಯರ್ಥಿಗಳ ಪೈಕಿ 7,980 ಅಭ್ಯರ್ಥಿಗಳು ಉತ್ತೀರ್ಣರಾಗಿದ್ದರು, ಶೇ.3.93 ಫಲಿತಾಂಶ ದಾಖಲಾಗಿತ್ತು. ಈ ಬಾರಿ ಶೇ.15 ರಷ್ಟು ಫಲಿತಾಂಶ ಹೆಚ್ಚಳವಾಗಿದೆ. ಪತ್ರಿಕೆ-1 ರಲ್ಲಿ ಒಟ್ಟು 1,02,282 ಅಭ್ಯರ್ಥಿಗಳು ಪರೀಕ್ಷೆ ತೆಗೆದುಕೊಂಡಿದ್ದರು. ಇದರಲ್ಲಿ 18,960 ಜನರು ಅರ್ಹತೆ ಪಡೆದಿದ್ದು ಶೇ.20 ಜನರು ಪಾಸಾಗಿದ್ದಾರೆ. ಆರರಿಂದ ಎಂಟನೇ ತರಗತಿಗಳಿಗೆ ಬೋಧಿಸುವ ಅರ್ಹತಾ ಪತ್ರಿಕೆ-2ರಲ್ಲಿ 1,49,552 ಜನರು ಪರೀಕ್ಷೆ ಬರೆದಿದ್ದರು. ಇದರಲ್ಲಿ 26,114 ಪರೀಕ್ಷಾರ್ಥಿಗಳು ಬೋಧನೆಗೆ ಅರ್ಹತೆ ಪಡೆದುಕೊಂಡಿದ್ದಾರೆ.

4,201 ಆಕ್ಷೇಪಣೆಗಳು: ಕಳೆದ ಆಗಸ್ಟ್ 22 ರಂದು ರಾಜ್ಯಾದ್ಯಂತ ಎಲ್ಲ ಜಿಲ್ಲಾ ಕೇಂದ್ರಗಳಲ್ಲಿ ಟಿಇಟಿ ನಡೆಸಲಾಗಿತ್ತು. ಪ್ರಥಮ ಹಾಗೂ ದ್ವಿತೀಯ ಪತ್ರಿಕೆಗೆ ಒಟ್ಟು ನೋಂದಾಯಿಸಿದ 2.51 ಲಕ್ಷ ಅಭ್ಯರ್ಥಿಗಳ ಪೈಕಿ 2.31 ಲಕ್ಷ ಜನರು ಹಾಜರಾಗಿದ್ದರು. ಸರಿಯುತ್ತರಗಳನ್ನು ಆ.24 ರಂದು ಪ್ರಕಟಿಸಿ 31 ರವರೆಗೆ ಆಕ್ಷೇಪಣೆಗಳನ್ನು ಸಲ್ಲಿಸಲು ಅವಕಾಶ ನೀಡಲಾಗಿತ್ತು. ಅದರಂತೆ ಪತ್ರಿಕೆ-1 ರಲ್ಲಿ 391 ಹಾಗೂ ಪತ್ರಿಕೆ-2 ರಲ್ಲಿ 3089 ಆಕ್ಷೇಪಣೆಗಳು ದಾಖಲಾಗಿದ್ದವು. ಇವುಗಳನ್ನು ತಜ್ಞರನ್ನು ಒಳಗೊಂಡ ಸಮಿತಿ ಪರಿಶೀಲಿಸಿ ನೀಡಿದ ವರದಿಯನ್ನು ಆಧರಿಸಿ ಸೆ.8 ರಂದು ಅಂತಿಮ ಸರಿಯುತ್ತರಗಳನ್ನು ನೀಡಲಾಗಿತ್ತು.

ಮಾನದಂಡ: ಅಂತಿಮ ಸರಿ ಉತ್ತರಗಳನ್ನು ಆಧರಿಸಿ ಉತ್ತರ ಪತ್ರಿಕೆಗಳನ್ನು ಮೌಲ್ಯಮಾಪನ ಮಾಡಲಾಗಿದೆ. ಅದರಂತೆ ಸಾಮಾನ್ಯ ವರ್ಗದ ಅಭ್ಯರ್ಥಿಗಳಿಗೆ ಶೇ.60 ಹಾಗೂ ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡ ಹಾಗೂ ಪ್ರವರ್ಗ-1ರ ಅಭ್ಯರ್ಥಿಗಳಿಗೆ ಶೇ.55 ಅರ್ಹತಾ ಅಂಕಗಳನ್ನು ಫಲಿತಾಂಶಕ್ಕೆ ಪರಿಗಣಿಸಲಾಗಿದೆ.

 

ಫಲಿತಾಂಶಕ್ಕೆ ತಡೆ: ಪರೀಕ್ಷೆಯಲ್ಲಿ ಅಭ್ಯರ್ಥಿಗಳಿಗೆ ನೀಡಲಾಗಿದ್ದ ಓಎಂಆರ್ ಪತ್ರಿಕೆಯಲ್ಲಿ ನೀಡಿದ ಸೂಕ್ತ ಅಂಕಣದಲ್ಲಿ ತಮ್ಮ ಸಹಿ ಮಾಡಲು ಹಾಗೂ ಎಡಗೈ ಹೆಬ್ಬೆರಳು ಗುರುತು ಒತ್ತುವಂತೆ ಸ್ಪಷ್ಟವಾಗಿ ಸೂಚಿಸಲಾಗಿತ್ತು. ಹೀಗಿದ್ದರೂ ವಿವಿಧ ಜಿಲ್ಲಾ ಕೇಂದ್ರಗಳಲ್ಲಿ 21 ಅಭ್ಯರ್ಥಿಗಳು ಸಹಿ ಮಾಡಿರುವುದಿಲ್ಲ. ನಿಯಮಾನುಸಾರ ಇವುಗಳ ಪರಿಶೀಲನೆ ನಡೆಸಲಾಗುತ್ತಿದ್ದು, ಈ ಅಭ್ಯರ್ಥಿಗಳ ಫಲಿತಾಂಶವನ್ನು ತಡೆ ಹಿಡಿಯಲಾಗಿದೆ.

ಅಂಕಪಟ್ಟಿ: ಪಾಸ್ ಆದ ಅಭ್ಯರ್ಥಿಗಳು http://www.schooleducation.kar.nic.in/ ವೆಬ್‌ಸೈಟ್‌ನಲ್ಲಿ ನೀಡಲಾಗಿರುವ ಲಿಂಕ್ ಮೂಲಕ ನೋಂದಣಿ/ಅರ್ಜಿ ಸಂಖ್ಯೆ ಮತ್ತು ಅಭ್ಯರ್ಥಿಯ ಜನ್ಮ ದಿನಾಂಕ ನಮೂದಿಸಿ, ಗಣಕೀಕೃತ ಅಂಕಪಟ್ಟಿ ಪಡೆದುಕೊಳ್ಳಬಹುದಾಗಿದೆ.


Spread the love

About Laxminews 24x7

Check Also

ಚಿದಾನಂದ ಸವದಿ‌ಗೆ ಚಿಕ್ಕೋಡಿ ಕ್ಷೇತ್ರಕ್ಕೆ ಟಿಕೆಟ್ ನೀಡುವ ಸಾಧ್ಯತೆ

Spread the loveಬೆಳಗಾವಿ, : ಲೋಕಸಭಾ ಚುನಾವಣೆ (Lok Sabha Elections )ಸಮೀಪಿಸುತ್ತಿದ್ದಂತೆ ಕಾಂಗ್ರೆಸ್ (Congress) ಎಚ್ಚರಿಕೆಯಿಂದ ಹೆಜ್ಜೆ ಇಡುತ್ತಿದೆ. ಅಳೆದು …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ