ಬೆಳಗಾವಿ: ಕಳೆದ 36 ವರ್ಷದಿಂದ ಬೆಳಗಾವಿ ಮಹಾನಗರ ಪಾಲಿಕೆ ಆಳಿದ MESಗೆ ಭಾರೀ ಮುಖಭಂಗ ಎದುರಾಗುವ ಸಾಧ್ಯತೆಗಳಿದ್ದು, ಬಿಜೆಪಿ ಪಾಲಿಕೆ ಚುಕ್ಕಾಣಿ ಹಿಡಿಯುವುದು ಬಹುತೇಕ ಫಿಕ್ಸ್ ಆಗ್ತಿದೆ.
ಜಿಲ್ಲೆಯಲ್ಲಿ ಪಾಲಿಕೆ ಚುನಾವಣೆಯ ಮತ ಎಣಿಕೆ ಕಾರ್ಯ ಬಿ.ಕೆ ಮಾಡೆಲ್ ಸ್ಕೂಲ್ನಲ್ಲಿ ಭರದಿಂದ ಸಾಗಿದೆ. ಈ ವೇಳೆ ತಮ್ಮ ಪಕ್ಷ ಮುನ್ನಡೆ ಪಡೆಯುತ್ತಿದಂತೆ ಕಾರ್ಯಕರ್ತರು ವಿಜಯೋತ್ಸವ ಆಚರಣೆಗೆ ಮುಂದಾಗಿದ್ದು, ಈ ವೇಳೆ ಪೊಲೀಸರು ಜನರನ್ನು ಚದುರಿಸಲು ಲಾಠಿಚಾರ್ಜ್ ಮಾಡಿದ್ದಾರೆ.
ಕೊರೊನಾ ನಿಯಮ ಉಲ್ಲಂಘಿಸಿ ಸಾವಿರಾರು ಸಂಖ್ಯೆಯ ಕಾರ್ಯಕರ್ತರು ಮತ ಏಣಿಕೆ ಕೇಂದ್ರದ ಮುಂದೆ ಜಮಾಯಿಸಿದ್ದು, ಕೊರೊನಾ ನಿಯಮಗಳನ್ನು ಉಲ್ಲಂಘಿಸಿ ವಿಜಯೋತ್ಸವ ಆಚರಣೆಗೆ ಮುಂದಾಗಿದ್ದಾರೆ. ಈ ವೇಳೆ ಪರಿಸ್ಥಿತಿ ಹತೋಟಿಗೆ ಸಿಗದೇ ಪೊಲೀಸರು ಲಾಠಿಚಾರ್ಜ್ ಆರಂಭಿಸಿದ್ದಾರೆ. ಮತ ಎಣಿಕೆಗೂ ಮುನ್ನವೇ ಕೊರೊನಾ ಕಾರಣದಿಂದ ಫಲಿತಾಂಶದ ಬಳಿಕ ವಿಜಯೋತ್ಸವ ಆಚರಣೆ ಮಾಡುವುದು, ಗೆದ್ದ ಅಭ್ಯರ್ಥಿಗಳನ್ನು ಮೆರವಣಿಗೆ ಮಾಡುವುದು ಸೇರಿದಂತೆ ಭಾರೀ ಸಂಖ್ಯೆಯಲ್ಲಿ ಜನ ಸೇರಿವುದನ್ನು ನಿಷೇಧ ಮಾಡಿ ಸೂಚನೆ ನೀಡಲಾಗಿತ್ತು. ಈ ನಡುವೆಯೂ ಭಾರೀ ಸಂಖ್ಯೆಯಲ್ಲಿ ಸೇರಿದ್ದ ವಿವಿಧ ಕಾರ್ಯಕರ್ತರು ಬಣ್ಣ ಎರಚಿಕೊಂಡು ಸಂಭ್ರಮಾಚರಣೆ ಮಾಡುತ್ತಿದ್ದ ದೃಶ್ಯಗಳು ಕಂಡು ಬಂದಿತ್ತು.