Breaking News
Home / ರಾಜಕೀಯ / ವಿಜಯಪುರದಲ್ಲಿ ಕಾಂಗ್ರೆಸ್ ಶಾಸಕರ ಜಗಳ ತಾರಕಕ್ಕೆ

ವಿಜಯಪುರದಲ್ಲಿ ಕಾಂಗ್ರೆಸ್ ಶಾಸಕರ ಜಗಳ ತಾರಕಕ್ಕೆ

Spread the love

ವಿಜಯಪುರ: ‘ಪುಣೆಯಲ್ಲಿರುವ ಬಂಥನಾಳ ಶ್ರೀಗಳ ಆಸ್ತಿ ವಿಷಯದಲ್ಲಿ ನನ್ನ ಪಾತ್ರವಿದೆ ಎಂಬ ಶಾಸಕ ಎಂ.ಬಿ.ಪಾಟೀಲ ಮಾಡಿರುವ ಆರೋಪ ಸಾಬೀತುಪಡಿಸಿದರೆ ರಾಜಕೀಯ ನಿವೃತ್ತಿ ತೆಗೆದುಕೊಳ್ಳುತ್ತೇನೆ’ ಎಂದು ಶಾಸಕ ಯಶವಂತರಾಯಗೌಡ ಪಾಟೀಲ ಸವಾಲು ಹಾಕಿದರು.

ನಗರದಲ್ಲಿ ಗುರುವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ‘ಬಂಥನಾಳ ಮಠದ ಭಕ್ತನಾದ ನಾನು ಅಲ್ಲಿ ಒಳ್ಳೆಯ ಸಂಸ್ಕಾರ ಕಲಿತಿದ್ದೇನೆ. ಆ ಮಠಕ್ಕೆ ಒಳ್ಳೆಯದನ್ನು ಬಯಸುವೆ. ನಾನು ಆ ಸಂಸ್ಥೆಯ ಸದಸ್ಯನಲ್ಲ. ವಿನಾಃಕಾರಣ ಜನರ ದಿಕ್ಕು ತಪ್ಪಿಸುವ ಕೆಲಸ ಮಾಡುವುದು ಸರಿಯಲ್ಲ’ ಎಂದರು.

‘ಭೀಮಾ ನದಿಯಲ್ಲಿ ಅಕ್ರಮ ಮರಳುಗಾರಿಕೆ ವಿಷಯಕ್ಕೆ ಸಂಬಂಧಿಸಿದಂತೆ ನನ್ನ ಮೇಲಿನ ಆರೋಪದಲ್ಲಿ ಹುರುಳಿಲ್ಲ. ಮರಳು ಅಕ್ರಮ ಸಾಗಾಟ ತಡೆಯುವಲ್ಲಿ ನನ್ನ ಪಾತ್ರವೇ ಪ್ರಮುಖವಾಗಿದೆ. ಪ್ರತಿ ಸಭೆಯಲ್ಲೂ ಅಕ್ರಮ ನಡೆಯದಂತೆ ತಡೆಯಲು ಸಂಬಂಧಿಸಿದ ಅಧಿಕಾರಿಗಳಿಗೆ ಸೂಚಿಸಿರುವೆ. ಏನಾದರೂ ಇದ್ದರೆ ಸಾಬೀತುಪಡಿಸಲಿ. ಸುಳ್ಳು ಆರೋಪ ಮಾಡುವುದು ನಿಲ್ಲಿಸಿ. ಭೀಮಾಶಂಕರ ಸಹಕಾರಿ ಸಕ್ಕರೆ ಕಾರ್ಖಾನೆಯಲ್ಲಿ ನಯಾ ಪೈಸೆ ವ್ಯತ್ಯಾಸವಾಗಿದ್ದರೂ ಆ ಸ್ಥಾನದಲ್ಲಿ ಇರುವುದಿಲ್ಲ’ ಎಂದು ಹೇಳಿದರು.

‘ಸಿದ್ದರಾಮಯ್ಯ ಮುಖ್ಯಮಂತ್ರಿಯಾಗಿದ್ದಾಗ ಎಲ್ಲ ಸರ್ಕಾರಿ ಕಚೇರಿಗಳಲ್ಲಿ ಬಸವೇಶ್ವರ ಫೋಟೊ ಅಳವಡಿಸಲು ಆದೇಶಿಸಿದಕ್ಕಾಗಿ ವೀರಶೈವ ಲಿಂಗಾಯತ ಮಹಾಸಭಾ ಅಭಿನಂದನೆ ಸಲ್ಲಿಸಿತು. ಆ ಸಂದರ್ಭದಲ್ಲಿ ಪ್ರತ್ಯೇಕ ಲಿಂಗಾಯತ ಧರ್ಮ ಮಾಡಿ ಎಂದು ಯಾರೂ ಮನವಿ ಸಲ್ಲಿಸಿರಲಿಲ್ಲ. ಆದರೆ, ಧರ್ಮ ವಿಭಜನೆ ವಿಷಯದಲ್ಲಿ ಕೈ ಹಾಕಿದ್ದೇ ನೀವು’ ಎಂದು ಎಂ.ಬಿ.ಪಾಟೀಲರಿಗೆ ತಿರುಗೇಟು ನೀಡಿದರು.

‘ಕಳೆದ ವಿಧಾನಸಭಾ ಚುನಾವಣೆಯಲ್ಲಿ ಸೋತ ವಿವಿಧ ಜಿಲ್ಲೆಗಳ ಹಲವು ಕಾಂಗ್ರೆಸ್ ಅಭ್ಯರ್ಥಿಗಳು, ಪ್ರತ್ಯೇಕ ಲಿಂಗಾಯತ ಧರ್ಮ ಹೋರಾಟದ ಕಾರಣದಿಂದಲೇ ನಾವು ಸೋತದ್ದು ಎಂದು ಕಾಂಗ್ರೆಸ್ ಸಭೆಯಲ್ಲೇ ಹೇಳಿದ್ದಾರೆ. ಇದು ನನ್ನ ಆರೋಪವಲ್ಲ’ ಎಂದರು.

‘ಸಿದ್ಧೇಶ್ವರ ಶ್ರೀಗಳ ಹೆಸರು ಹೇಳಿಕೊಂಡು ಪ್ರಚಾರ ಪಡೆಯುವುದು ಬಿಟ್ಟು, ಅವರ ಆದರ್ಶಗಳನ್ನು ಕಿಂಚಿತ್ತಾದರೂ ಅಳವಡಿಸಿಕೊಳ್ಳಿ. ಅವರೊಬ್ಬ ದೇವರು. ಎಲ್ಲರಿಗೂ ಒಳ್ಳೆಯದಾಗಲಿ ಎಂದು ಬಯಸುತ್ತಾರೆ. ಅದನ್ನೇ ನೀವು ಬೇರಾವುದಕ್ಕೋ ಬಳಸಿಕೊಳ್ಳುವುದು ಸರಿಯಲ್ಲ’ ಎಂದರು.

ಏನೆಲ್ಲ ಮಾಡಿದರೂ ನಾನೇ ಗೆದ್ದೆ

‘ಅವರಿಗಿಂತ ಮೊದಲೇ ನಮ್ಮ ಕುಟುಂಬದವರೂ ರಾಜಕಾರಣದಲ್ಲಿದ್ದರು. ಹೊಸದಾಗಿ ಜಿಲ್ಲಾ ಪರಿಷತ್ ರಚನೆಯಾದಾಗ ನಮ್ಮ ತಂದೆ ದಿ.ವಿಠ್ಠಲಗೌಡ ಪಾಟೀಲರು ಅಗರಖೇಡ ಕ್ಷೇತ್ರದಿಂದ ಗೆದ್ದ ಜಿಲ್ಲೆಯ ಏಕೈಕ ಕಾಂಗ್ರೆಸ್ ಅಭ್ಯರ್ಥಿಯಾಗಿದ್ದರು’ ಎಂದರು.

‘ನಾನು ಜಿ.ಪಂ.ಸದಸ್ಯ, ಅಧ್ಯಕ್ಷ ಆಗಿರುವುದರಲ್ಲಿ ನಿಮ್ಮ ಪಾತ್ರವೇನೂ ಇಲ್ಲ. ನನ್ನ ರಾಜಕೀಯ ಬೆಳವಣಿಗೆಯಲ್ಲಿ ಬಿ.ಕೆ.ಗುಡದಿನ್ನಿ, ಮಿಸಾಳೆ ಅವರಂತಹ ನಾಯಕರ ಕೊಡುಗೆ ಇದೆ. ನನ್ನ ವಿರುದ್ಧ ಚುನಾವಣೆಯಲ್ಲಿ ನೀವು ಏನೇನು ಮಾಡಿದ್ದೀರಿ ಎಂಬುವುದಕ್ಕೆ ನಾನು ಸಾಕ್ಷಿ ಕೊಡಬಲ್ಲೆ’ ಎಂದರು.

***

ನನ್ನನ್ನು ಸೋಲಿಸಲು ನೀವು ಏನೆಲ್ಲ ಕಸರಸತ್ತು ಮಾಡಿದರೂ ಗೆದ್ದಿರುವೆ. ನೀವು ಕಾಡಿದಂತೆಲ್ಲ ಜನ ಹೆಚ್ಚಿನ ಪ್ರಮಾಣದಲ್ಲಿ ನನ್ನ ಕೈ ಹಿಡಿದಿದ್ದಾರೆ. ಮುಂದೂ ಅದು ಮರುಕಳಿಸಲಿದೆ
-ಯಶವಂತರಾಯಗೌಡ ಪಾಟೀಲ, ಶಾಸಕರು


Spread the love

About Laxminews 24x7

Check Also

ಮಾಜಿ ಪ್ರಧಾನಿಗಳ ಮೊಮ್ಮಗ, ಸಂಸದ ದೇಶ ಬಿಟ್ಟು ಪರಾರಿಯಾಗಿರುವುದು ನಾಚಿಕೆಗೇಡು : ಡಿಕೆಶಿ

Spread the loveಬೆಂಗಳೂರು,ಏ.28- ತಲೆ ತಗ್ಗಿಸುವ ಕೆಲಸ ಮಾಡಿ ಮಾಜಿ ಪ್ರಧಾನಿಗಳ ಮೊಮ್ಮಗ ಹಾಗೂ ಸಂಸದ ದೇಶ ಬಿಟ್ಟು ಪರಾರಿಯಾಗಿರುವುದು ನಾಚಿಕೆಗೇಡಿನ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ