Breaking News
Home / ರಾಜಕೀಯ / ಬಿಜೆಪಿ ಸೋಲಿಸಲು ಜಾಣ ನಡೆ ಇಡಬೇಕಿದೆ; ವಿಪಕ್ಷಗಳಿಗೆ ಶಿವಸೇನಾ ಸಲಹೆ

ಬಿಜೆಪಿ ಸೋಲಿಸಲು ಜಾಣ ನಡೆ ಇಡಬೇಕಿದೆ; ವಿಪಕ್ಷಗಳಿಗೆ ಶಿವಸೇನಾ ಸಲಹೆ

Spread the love

ಮುಂಬೈ, ಆಗಸ್ಟ್‌ 23: ಮುಂಬರುವ ಚುನಾವಣೆಯಲ್ಲಿ ಬಿಜೆಪಿಯನ್ನು ಸೋಲಿಸಲು ವಿರೋಧ ಪಕ್ಷಗಳು ಆತುರಪಡದೇ ಚುರುಕು ಹಾಗೂ ಜಾಣ ನಡೆ ಇಡಬೇಕು ಎಂದು ಶಿವಸೇನೆ ಸಲಹೆ ನೀಡಿದೆ. 2024ರ ಲೋಕಸಭಾ ಚುನಾವಣೆಗೆ ಈಗಾಗಲೇ ವಿರೋಧ ಪಕ್ಷಗಳು ಅಣಿಯಾಗುತ್ತಿದ್ದು, ಬಿಜೆಪಿ ಮಣಿಸಲು ಕಾರ್ಯತಂತ್ರಗಳ ರೂಪಿಸುವ ಕುರಿತು ಸಭೆಯೂ ನಡೆದಿದೆ.

‘ನರೇಂದ್ರ ಮೋದಿ-ಶಾ ಅವರನ್ನು ಯುದ್ಧದಲ್ಲಿ ಸೋಲಿಸಬಹುದು. ಆದರೆ ಹೋರಾಟಕ್ಕೆ ಬೇಕಿರುವ ಒಂದೇ ಒಂದು ಆಯುಧ ಎಂದರೆ ಬಲವಾದ ಆತ್ಮವಿಶ್ವಾಸ’ ಎಂದು ಶಿವಸೇನೆ ಹೇಳಿದೆ. ತನ್ನ ಪಕ್ಷದ ಮುಖವಾಣಿ ‘ಸಾಮ್ನಾ’ದಲ್ಲಿ ಸಂಪಾದಕೀಯದಲ್ಲಿ ವಿರೋಧ ಪಕ್ಷಗಳು ಕೈಗೊಳ್ಳಬೇಕಾದ ಕಾರ್ಯತಂತ್ರಗಳ ಕುರಿತು ವಿವರಣೆ ನೀಡಿದೆ.

ಬಿಜೆಪಿ ವಿರುದ್ಧ ಕಾರ್ಯತಂತ್ರ ರೂಪಿಸುವುದು ಸದ್ಯದ ತುರ್ತು ಎಂದು ಅಭಿಪ್ರಾಯ ವ್ಯಕ್ತಪಡಿಸಿದೆ.

2019ರ ಮಹಾರಾಷ್ಟ್ರ ವಿಧಾನಸಭೆ ಚುನಾವಣೆಯಲ್ಲಿ ಮುಖ್ಯಮಂತ್ರಿ ಸ್ಥಾನಕ್ಕೆ ಸಂಬಂಧಿಸಿದಂತೆ ಶಿವಸೇನೆ ಹಾಗೂ ಬಿಜೆಪಿ ನಡುವೆ ಭಿನ್ನಾಭಿಪ್ರಾಯ ಉಂಟಾಗಿದ್ದು, ಕೊನೆಗೆ ಎನ್‌ಸಿಪಿ ಹಾಗೂ ಮಹಾ ವಿಕಾಸ ಅಘಡಿ ಜೊತೆ ಮೈತ್ರಿಯೊಂದಿಗೆ ಅಧಿಕಾರ ಸ್ಥಾಪನೆ ಮಾಡಿಕೊಂಡಿದೆ. ಈಚೆಗೆ ನಡೆದ ಪಶ್ಚಿಮ ಬಂಗಾಳ ವಿಧಾನಸಭೆಯಲ್ಲಿ ಕೂಡ ತೃಣಮೂಲ ಕಾಂಗ್ರೆಸ್ ಬಿಜೆಪಿ ವಿರುದ್ಧ ಗೆಲುವು ಪಡೆದುಕೊಂಡಿತ್ತು.

‘ಮೋದಿ ಸಾಲು ಸಾಲು ಮೆರವಣಿಗೆಗಳು, ಅಮಿತ್‌ ಶಾ ರಾಜಕೀಯ ಕಾರ್ಯತಂತ್ರದ ಹೊರತಾಗಿಯೂ ಪಶ್ಚಿಮ ಬಂಗಾಳದಲ್ಲಿ ಬಿಜೆಪಿ ಸೋಲನ್ನು ಕಂಡಿತು. ಎರಡು ವರ್ಷದ ಹಿಂದೆಯೂ ಬಿಜೆಪಿ ಮಹಾರಾಷ್ಟ್ರದಲ್ಲಿ ಅಧಿಕಾರ ಸ್ಥಾಪಿಸುವಲ್ಲಿ ಸೋಲುಂಡಿತು’ ಎಂದು ಸಂಪಾದಕೀಯದಲ್ಲಿ ಉಲ್ಲೇಖಿಸಲಾಗಿದೆ.

‘ರಾಜಕೀಯ ರಣರಂಗದಲ್ಲಿ ಹಾಗೂ ಚದುರಂಗದಾಟದಲ್ಲಿ ಬಿಜೆಪಿಯನ್ನು ಸೋಲಿಸಬಹುದು ಎಂಬುದನ್ನು ಮಹಾರಾಷ್ಟ್ರ ಹಾಗೂ ಪಶ್ಚಿಮ ಬಂಗಾಳ ತೋರಿಸಿಕೊಟ್ಟಿದೆ’ ಎಂದು ಹೇಳಿದೆ.

‘ಬಿಜೆಪಿ ಕೇಂದ್ರ ಸಚಿವರು ಚುನಾವಣಾ ಯಾತ್ರೆಗಳಲ್ಲಿ ವಿರೋಧ ಪಕ್ಷಗಳನ್ನು ಟೀಕಿಸುವ ಬದಲು ಬೇರೇನನ್ನೂ ಮಾಡುತ್ತಿಲ್ಲ. ಈ ಕೆಲಸ ಮಾಡುತ್ತಿರುವವರೆಲ್ಲಾ ಬಿಜೆಪಿಗೆ ಹೊರಗಿನಿಂದ ಬಂದವರು. ಬದ್ಧವಾಗಿರುವ ಬಿಜೆಪಿ ಕಾರ್ಯಕರ್ತರು ಮೂರ್ಖರಂತೆ ಈ ಮೆರವಣಿಗೆಗಳಲ್ಲಿ ಪಾಲ್ಗೊಳ್ಳುತ್ತಿದ್ದಾರೆ’ ಎಂದು ಶಿವಸೇನೆ ಟೀಕಿಸಿದೆ.

ಇಂಥ ಸಮಯದಲ್ಲಿ ವಿರೋಧ ಪಕ್ಷಗಳು ಜಾಣ ಹಾಗೂ ಚತುರ ನಡೆ ಇಡಬೇಕು. ನಾವು ನಮ್ಮ ಹೆಜ್ಜೆಯನ್ನು ಎಷ್ಟು ಜಾಗರೂಕತೆಯಿಂದ, ಜಾಣತನದಿಂದ ಇಡುತ್ತೇವೆ ಎಂಬುದರ ಮೇಲೆ 2024ರ ಚುನಾವಣಾ ಫಲಿತಾಂಶ ಅವಲಂಬಿತವಾಗಿದೆ. ವಿರೋಧ ಪಕ್ಷಗಳು ಈ ಕೆಲಸವನ್ನು ಮಾಡಬೇಕಿದೆ. ಇದಕ್ಕೆ ತಕ್ಕ ಸಿದ್ಧತೆಗಳನ್ನು ಮಾಡಿಕೊಳ್ಳಬೇಕಿದೆ. ಮೊದಲು ವಿರೋಧ ಪಕ್ಷಗಳು ಜನರ ನಂಬಿಕೆಯನ್ನು ಗಳಿಸಿಕೊಳ್ಳಬೇಕು. ಆ ನಂತರ ಅವರ ಮುಂದೆ ಬಿಜೆಪಿ ಹೊರತಾಗಿ ಮತ್ತೊಂದು ಆಯ್ಕೆಯನ್ನು ಇಡಬೇಕಿದೆ ಎಂದು ಸಲಹೆ ನೀಡಿದೆ.

 

 

ವಿರೋಧ ಪಕ್ಷಗಳ ಒಗ್ಗಟ್ಟು ಸಡಿಲ ತಳಹದಿಯನ್ನು ಹೊಂದಿರಬಾರದು ಎಂದು ಅಭಿಪ್ರಾಯ ವ್ಯಕ್ತಪಡಿಸಿದೆ.

ಕಳೆದ ಶುಕ್ರವಾರವಷ್ಟೆ ಕಾಂಗ್ರೆಸ್ ಅಧ್ಯಕ್ಷೆ ಸೋನಿಯಾ ಗಾಂಧಿ ವರ್ಚುಯಲ್ ಆಗಿ ವಿರೋಧ ಪಕ್ಷಗಳ ಸಭೆ ನಡೆಸಿದ್ದಾರೆ. 2024ರ ಸಾರ್ವತ್ರಿಕ ಚುನಾವಣೆಯಲ್ಲಿ ಬಿಜೆಪಿಯನ್ನು ಸೋಲಿಸಲು ಪ್ರಬಲ ಒಕ್ಕೂಟ ರಚಿಸುವ ಉದ್ದೇಶದೊಂದಿಗೆ ಮೊದಲ ಬಾರಿಗೆ ಸೋನಿಯಾ ಗಾಂಧಿ ಸಭೆ ನಡೆಸಿದ್ದಾರೆ.

ಬಿಜೆಪಿ ಮಣಿಸಲು ಬೇರೆ ಆಯ್ಕೆಯೇ ಇಲ್ಲ; ವಿಪಕ್ಷಗಳ ಮುಂದೆ ಹೊಸ ದಾರಿ ತೆರೆದಿಟ್ಟ ಸೋನಿಯಾ

ಶುಕ್ರವಾರ ಒಟ್ಟಾರೆ ಹತ್ತೊಂಬತ್ತು ವಿರೋಧಪಕ್ಷಗಳ ನಾಯಕರೊಂದಿಗೆ ಸಭೆ ನಡೆಸಿದ ಸೋನಿಯಾ ಗಾಂಧಿ, ಮುಂದಿನ ಚುನಾವಣೆಯಲ್ಲಿ ಬಿಜೆಪಿಯನ್ನು ಸೋಲಿಸುವ ಅಗತ್ಯ, ಅದಕ್ಕೆ ಬೇಕಾದ ಸಿದ್ಧತೆ ಹಾಗೂ ಕಾರ್ಯತಂತ್ರವನ್ನು ರೂಪಿಸಲು ಮುನ್ನುಡಿ ಹಾಕಿದ್ದರು. ಮುಂಬರುವ ಚುನಾವಣೆಯಲ್ಲಿ ಬಿಜೆಪಿ ಮಣಿಸಲು ಕಂಡುಕೊಳ್ಳಬೇಕಾದ ಮಾರ್ಗಗಳ ಬಗ್ಗೆ ಚರ್ಚೆ ನಡೆಸಿದರು.

‘ಬಿಜೆಪಿಯನ್ನು ಹಣಿಯಲು ಎಲ್ಲಾ ವಿರೋಧಪಕ್ಷಗಳು ಒಟ್ಟಾಗಲೇಬೇಕು. 2024ರ ಲೋಕಸಭಾ ಚುನಾವಣೆಗೆ ಎಲ್ಲಾ ವಿಪಕ್ಷಗಳು ಒಟ್ಟಾಗಿ ವ್ಯವಸ್ಥಿತ ಕಾರ್ಯತಂತ್ರ ರೂಪಿಸಬೇಕು. ಇದರ ಹೊರತಾಗಿ ನಮಗೆ ಪರ್ಯಾಯ ಆಯ್ಕೆಯೇ ಇಲ್ಲ’ ಎಂದು ಕಾಂಗ್ರೆಸ್ ಅಧ್ಯಕ್ಷೆ ಸೋನಿಯಾ ಗಾಂಧಿ ವಿಪಕ್ಷಗಳ ನಾಯಕರಿಗೆ ಕರೆಕೊಟ್ಟಿದ್ದರು.


Spread the love

About Laxminews 24x7

Check Also

ಜನರು ತಿಂಗಳುಗಟ್ಟಲೆ ಓಡಾಡಿದರು ವೀಸಾ ಸಿಗಲ್ಲ, ಪ್ರಜ್ವಲ್ ಗೆ ಒಂದೇ ದಿನದಲ್ಲಿ ಹೇಗೆ ಸಿಕ್ಕಿತು? : ವಿನಯ್ ಕುಲಕರ್ಣಿ

Spread the loveಹಾವೇರಿ : ಸಂಸದ ಪ್ರಜ್ವಲ್ ರೇವಣ್ಣ ವಿರುದ್ಧ ಲೈಂಗಿಕ ದೌರ್ಜನ್ಯ ಪ್ರಕರಣಕ್ಕೆ ಸಂಬಂಧಿಸಿದಂತೆ ಹಾವೇರಿಯಲ್ಲಿ ಕೆಪಿಸಿಸಿ ಕಾರ್ಯಾಧ್ಯಕ್ಷ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ