Breaking News
Home / ಸಿನೆಮಾ / ಪುಟ್ಟಕ್ಕನಾಗಿ ಕಿರುತೆರೆಗೆ ಬಂದ ಪುಟ್ಮಲ್ಲಿ ಉಮಾಶ್ರೀ

ಪುಟ್ಟಕ್ಕನಾಗಿ ಕಿರುತೆರೆಗೆ ಬಂದ ಪುಟ್ಮಲ್ಲಿ ಉಮಾಶ್ರೀ

Spread the love

ಕನ್ನಡ ಚಿತ್ರರಂಗ ಎಂದೂ ಮರೆಯಲಾಗದ ಹಲವು ಪಾತ್ರಗಳಲ್ಲಿ ನಟಿಸಿರುವ ಉಮಾಶ್ರಿ ಇದೀಗ ಮತ್ತೆ ಕಿರುತೆರೆಗೆ ಬಂದಿದ್ದಾರೆ. ಹಿರಿತೆರೆಯಲ್ಲಿ ಪುಟ್ಮಲ್ಲಿಯಾಗಿ ಈಗಾಗಲೇ ಮೋಡಿ ಮಾಡಿರುವ ಉಮಾಶ್ರೀ ಕಿರುತೆರೆಯಲ್ಲಿ ಪುಟ್ಟಕ್ಕನಾಗಿ ಕಾಣಿಸಿಕೊಳ್ಳುತ್ತಿದ್ದಾರೆ.

ಉಮಾಶ್ರೀ ಮುಖ್ಯ ಪಾತ್ರದಲ್ಲಿ ನಟಿಸುತ್ತಿರುವ ‘ಪುಟ್ಟಕ್ಕನ ಮಕ್ಕಳು’ ಧಾರಾವಾಹಿ ಪ್ರೋಮೊ ಈಗಾಗಲೇ ಬಿಡುಗಡೆ ಆಗಿದ್ದು ಕೆಲವೇ ದಿನಗಳಲ್ಲಿ ಧಾರಾವಾಹಿ ಪ್ರಸಾರ ಆರಂಭವಾಗಲಿದೆ. ಧಾರಾವಾಹಿಯ ಕೇಂದ್ರ ಪಾತ್ರ ಉಮಾಶ್ರೀ ಅವರದ್ದೇ ಆಗಿರುತ್ತದೆ.

ಉಮಾಶ್ರೀಗೆ ಕಿರುತೆರೆ ಹೊಸದೇನೂ ಅಲ್ಲ ಈಗಾಗಲೇ ಹಲವು ಧಾರಾವಾಹಿಗಳಲ್ಲಿ ಉಮಾಶ್ರೀ ನಟಿಸಿದ್ದಾರೆ. ಆದರೆ ಬಹುದಿನಗಳಿಂದ ಕಿರುತುರೆಯಿಂದ ದೂರವೇ ಉಳಿದಿದ್ದ ಉಮಾಶ್ರೀ ಇದೀಗ ಮತ್ತೆ ಕಿರುತೆರೆಗೆ ಕಾಲಿಟ್ಟಿದ್ದಾರೆ. ಕಿರುತೆರೆಯ ಯಶಸ್ವಿ ನಿರ್ದೇಶಕ ಆರೂರು ಜಗದೀಶ್ ನಿರ್ದೇಶನದ ಧಾರಾವಾಹಿ ‘ಪುಟ್ಟಕ್ಕನ ಮಕ್ಕಳು’ ಉಮಾಶ್ರೀ ನಟಿಸುತ್ತಿದ್ದಾರೆ ಎಂಬುದರ ಹೊರತಾಗಿ ಇನ್ನೂ ಕೆಲವು ಕಾರಣಗಳಿಗೆ ಗಮನ ಸೆಳೆದಿದೆ.

ಉಮಾಶ್ರೀ ಅಭಿನಯದ ‘ಪುಟ್ಟಕ್ಕನ ಮಕ್ಕಳು’ ಹೊಸ ಧಾರಾವಾಹಿಯ ಪ್ರೋಮೊ ಈಗಾಗಲೇ ಬಿಡುಗಡೆ ಆಗಿದ್ದು, ಪ್ರೋಮೊ ಪ್ರಕಾರ ಗಂಡು ಹಡೆಯಲಿಲ್ಲವೆಂದು ಪುಟ್ಟಕ್ಕನನ್ನು ಗಂಡ ಬಿಟ್ಟು ಹೋಗಿದ್ದಾನೆ. ಮೂವರು ಹೆಣ್ಣು ಮಕ್ಕಳನ್ನು ಒಬ್ಬಳೇ ಬೆಳೆಸಿ ಸಾಕಿದ್ದಾಳೆ ಪುಟ್ಟಕ್ಕ. ಈಕೆಗೆ ಮಕ್ಕಳ ಮೇಲೆ ಇನ್ನಿಲ್ಲದ ಪ್ರೇಮ. ಹೋಟೆಲ್ ನಡೆಸುತ್ತಾ ಮಕ್ಕಳನ್ನು ಸಾಕುತ್ತಿರುವ ಪುಟ್ಟಕ್ಕನಿಗೆ ಎದುರಾಗುವ ಸಮಸ್ಯೆಗಳೇನೂ, ಮಕ್ಕಳು ಪಟ್ಟಕ್ಕನನ್ನು ಆಕೆಯಷ್ಟೆ ಪ್ರೀತಿಸುತ್ತಾರಾ? ಇತ್ಯಾದಿಗಳು ಧಾರಾವಾಹಿಯ ಕತೆ ಎಳೆಗಳಾಗಿವೆ.

ಪುಟ್ಟಕ್ಕ ಕೇವಲ ಹೆಣ್ಣಲ್ಲ ಆಕೆ ಶಕ್ತಿ: ಆರೂರು ಜಗದೀಶ್

ಮೇ ತಿಂಗಳಲ್ಲಿ ಧಾರಾವಾಹಿಯ ಮುಹೂರ್ತ ನಡೆದು ಚಿತ್ರೀಕರಣ ಪ್ರಾರಂಭವಾಗಿತ್ತು. ಆ ಸಂದರ್ಭದಲ್ಲಿ ಮಾತನಾಡಿದ್ದ ನಿರ್ದೇಶಕ ಆರೂರು ಜಗದೀಶ್, ”ಪುಟ್ಟಕ್ಕ ಎಂದರೆ ಹೆಣ್ಣು, ಹೆಣ್ಣೆಂದರೆ ಶಕ್ತಿ, ಹೆಣ್ಣಿನ ಬಗ್ಗೆ ಈಗಾಗಲೇ ಸಾಕಷ್ಟು ಧಾರಾವಾಹಿಗಳು ಬಂದಿವೆ. ಆದರೆ ಈ ಧಾರಾವಾಹಿಯಲ್ಲಿ ಪುಟ್ಟಕ್ಕ ಎಂಬ ಶಕ್ತಿ, ಹೇಗೆ ತನ್ನ ಮೂವರು ಹೆಣ್ಣು ಮಕ್ಕಳನ್ನು ಕಾಪಾಡಿಕೊಳ್ಳುತ್ತಾಳೆ. ಅವರನ್ನು ಹೇಗೆ ಸರಿದಾರಿಯಲ್ಲಿ ನಡೆಸುತ್ತಾಳೆ. ದುಷ್ಟರಿಂದ ತನ್ನ ಕುಟುಂಬವನ್ನು ಹೇಗೆ ಕಾಪಾಡಿಕೊಳ್ಳುತ್ತಾಳೆ ಎಂಬುದು ಕತೆ. ಜೊತೆಗೆ ಸಮಾಜದಲ್ಲಿ ಗಂಡಿಗಿಂತಲೂ ಹೆಣ್ಣು ಯಾವ ವಿಭಾಗದಲ್ಲಿಯೂ ಕಡಿಮೆಯಲ್ಲ ಎಂಬುದನ್ನು ಸಹ ಧಾರಾವಾಹಿಯಲ್ಲಿ ತೋರಿಸಲಾಗಿದೆ” ಎಂದಿದ್ದರು.

ಹಲವು ಆಯಾಮಗಳ ಕತೆಯನ್ನು ಧಾರಾವಾಹಿ ಹೊಂದಿದೆ: ಉಮಾಶ್ರೀ

 

ಉಮಾಶ್ರೀ ಮಾತನಾಡಿ, ”ಆರೂರು ಜಗದೀಶ್ ಈಗಾಗಲೇ ಹಲವು ಜನಪ್ರಿಯ ಮತ್ತು ಒಳ್ಳೆಯ ಧಾರಾವಾಹಿಗಳನ್ನು ಕನ್ನಡಕ್ಕೆ ನೀಡಿದ್ದಾರೆ. ಈ ಧಾರಾವಾಹಿಯ ಕತಾ ಹಂದರ ಭಿನ್ನವಾಗಿದೆ. ಒಬ್ಬಂಟಿ ತಾಯಿ ಹೇಗೆ ತನ್ನ ಹೆಣ್ಣು ಮಕ್ಕಳನ್ನು ಕಾಪಾಡುತ್ತಾಳೆ ಹೇಗೆ ಅವರನ್ನು ಯೋಗ್ಯರನ್ನಾಗಿ ಮಾಡುತ್ತಾಳೆ. ಹೇಗೆ ಬಾಹ್ಯ ಶಕ್ತಿಗಳು ಆಕೆಯ ಮಕ್ಕಳ ಆಲೋಚನೆಗಳ ಮೇಲೆ ಪ್ರಭಾವ ಬೀರಲು ಯತ್ನಿಸುತ್ತವೆ ಹಾಗೂ ಹೇಗೆ ಪುಟ್ಟಕ್ಕ ಅವುಗಳನ್ನು ತಡೆದು ಮಕ್ಕಳನ್ನು ತನ್ನ ನೆರಳಿನಲ್ಲಿಯೇ ಸಾಕುತ್ತಾಳೆ, ಸಮಾಜಕ್ಕೆ ಉತ್ತಮ ವ್ಯಕ್ತಿಗಳಾಗಿ ಅವರನ್ನು ಹೇಗೆ ರೂಪಿಸುತ್ತಾಳೆ” ಎಂಬುದೇ ಕತೆ ಎಂದಿದ್ದಾರೆ.

ಯಶಸ್ವಿ ಧಾರವಾಹಿ ನಿರ್ದೇಶಕ ಆರೂರು ಜಗದೀಶ್

 

ಉಮಾಶ್ರೀ ಮಕ್ಕಳ ಪಾತ್ರದಲ್ಲಿ ಹಾಗೂ ಮುಖ್ಯ ಪುರುಷ ಪಾತ್ರಗಳಲ್ಲಿ ಹೊಸ ನಟ-ನಟಿಯರು ಅಭಿನಯಿಸುತ್ತಿದ್ದಾರೆ. ಉಮಾಶ್ರೀ ಅಂಥಹಾ ಹಿರಿಯ ನಟಿಯೊಂದಿಗೆ ನಟಿಸಿರುವುದು ನಮ್ಮ ಪುಣ್ಯ ಎಂಬ ಭಾವ ಅವರದ್ದಂತೆ. ಧಾರಾವಾಹಿಯು ಜೀ ಚಾನೆಲ್‌ನಲ್ಲಿ ಪ್ರಸಾರವಾಗಲಿದ್ದು, ಆರೂರು ಜಗದೀಶ್ ನಿರ್ದೇಶಿಸಿದ್ದ ಇತರ ಧಾರಾವಾಹಿಗಳ ಮುಖ್ಯ ನಟ-ನಟಿಯರು ಹೊಸ ಧಾರಾವಾಹಿ ‘ಪುಟ್ಟಕ್ಕನ ಮಕ್ಕಳು’ಗೆ ಶುಭ ಹಾರೈಸಿದ್ದಾರೆ. ‘ಅಶ್ವಿನಿ ನಕ್ಷತ್ರ’, ‘ಜೊತೆ-ಜೊತೆಯಲಿ’, ‘ಅರುಂಧತಿ’, ‘ಜೋಡಿ ಹಕ್ಕಿ’, ‘ಶುಭವಿವಾಹ’ ಮುಂತಾದ ಧಾರವಾಹಿಗಳನ್ನು ನಿರ್ದೇಶನ ಮಾಡಿರುವ ಆರೂರು ಜಗದೀಶ್ ಇದೀಗ ‘ಪುಟ್ಟಕ್ಕನ ಮಕ್ಕಳು’ ಧಾರಾವಾಹಿ ನಿರ್ದೇಶನ ಮಾಡುತ್ತಿದ್ದಾರೆ.

ಉಮಾಶ್ರೀಗೆ ಕಿರುತೆರೆ ಹೊಸದಲ್ಲ

 

ಇನ್ನು ನಟಿ ಉಮಾಶ್ರೀಗೆ ಕಿರುತೆರೆ ಹೊಸದೇನೂ ಅಲ್ಲ. ದೂರದರ್ಶನದಲ್ಲಿ ಪ್ರಸಾರವಾಗಿದ್ದ ‘ನೊಂದವರ ಹಾಡು’ ಸಾಕ್ಷ್ಯಚಿತ್ರದಲ್ಲಿ ನಟಿಸಿದ್ದ ಉಮಾಶ್ರೀ, ದೂರದರ್ಶನದಲ್ಲಿ ಪ್ರಸಾರವಾದ ‘ಹತ್ಯೆ’ ಕಿರು ಧಾರಾವಾಹಿ, ಉದಯ ಟಿವಿಯಲ್ಲಿ ಪ್ರಸಾರವಾಗಿದ್ದ ಟಿ.ಎಸ್.ನಾಗಾಭರಣ ನಿರ್ದೇಶಿಸಿದ್ದ ‘ಮುಸ್ಸಂಜೆ’ ಧಾರಾವಾಹಿ. ಈಟಿವಿಗಾಗಿ ಪ್ರಕಾಶ್ ಬೆಳವಾಡಿ ನಿರ್ದೇಶನ ಮಾಡಿದ್ದ ‘ಮುಸ್ಸಂಜೆ ಕಥಾ ಪ್ರಸಂಗ’, ಚೈತನ್ಯ ನಿರ್ದೇಶಿಸಿದ್ದ ‘ಕಿಚ್ಚು’, ಈಟಿವಿಯಲ್ಲಿ ಪ್ರಸಾರವಾಗಿದ್ದ ‘ಅಮ್ಮ ನಿನಗಾಗಿ’, ಸ್ಟಾರ್ ಸುವರ್ಣದಲ್ಲಿ ಪ್ರಸಾರವಾಗಿದ್ದ ‘ಆರತಿಗೊಬ್ಬ ಕೀರುತಿಗೊಬ್ಬ’ ಧಾರಾವಾಹಿಗಳಲ್ಲಿ ನಟಿಸಿದ್ದರು. ಉದಯ ಟಿವಿಯಲ್ಲಿ ಪ್ರಸಾರವಾದ ‘ಚಿಣ್ಣರ ಚಿಲಿಪಿಲಿ’ ಶೋ ಅನ್ನು ನಿರೂಪಣೆ ಸಹ ಮಾಡಿದ್ದರು ಉಮಾಶ್ರೀ.


Spread the love

About Laxminews 24x7

Check Also

ಪುನೀತ್​ ರಾಜ್​ಕುಮಾರ್ ಅವರು​ ಇಹಲೋಕ ತ್ಯಜಿಸಿ ಇಂದಿಗೆ 2 ವರ್ಷ

Spread the love ಕನ್ನಡದ ಹೆಸರಾಂತ ನಟ ಪುನೀತ್​ ರಾಜ್​ಕುಮಾರ್ ಅವರು​ ಇಹಲೋಕ ತ್ಯಜಿಸಿ ಇಂದಿಗೆ 2 ವರ್ಷವಾಗುತ್ತಿದೆ. ಪುಣ್ಯಸ್ಮರಣೆಯ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ