Breaking News
Home / ರಾಜಕೀಯ / ಮಾನವೀಯ ಮೌಲ್ಯ ಮರುಸ್ಥಾಪನೆಯೇ ಅಭಿವೃದ್ಧಿಯ ಹಾದಿ!

ಮಾನವೀಯ ಮೌಲ್ಯ ಮರುಸ್ಥಾಪನೆಯೇ ಅಭಿವೃದ್ಧಿಯ ಹಾದಿ!

Spread the love

ಕಳೆದ 75 ವರ್ಷಗಳನ್ನು ಗಮನಿಸಿದರೆ ಪರಿವರ್ತನೆಗಳು ನಿಧಾನವಾಗಿ ಆರಂಭವಾಗಿ ಈಚೆಗಿನ ದಶಕಗಳಲ್ಲಿ ತೀವ್ರಗತಿ ಪಡೆದಿವೆ. ಬದಲಾವಣೆ ಮುಂದಿನ ದಶಕಗಳಲ್ಲಿ ಇನ್ನೂ ವೇಗವನ್ನು ಗಳಿಸಲಿದೆ ಎನ್ನುವುದು ಶತಸ್ಸಿದ್ಧ. ಸ್ವಾತಂತ್ರ್ಯದ ಶತಮಾನೋತ್ಸವ ಸಮಯಕ್ಕೆ ಭಾರತ ಹೇಗಿರಬೇಕು ಎಂಬ ಹೊಂಗನಸು ಕಾಣುವ ಲೇಖನ ಸರಣಿ ಇದು.

ಅಧಿಕಾರ ಮತ್ತು ಶ್ರೀಮಂತಿಕೆಯನ್ನು ಪೂಜಿಸುವ ಸಮಾಜವನ್ನು ನಾವಿಂದು ಕಾಣುತ್ತಿದ್ದೇವೆ. ಇಂದರಿಂದ ಭ್ರಷ್ಟರು ಮತ್ತು ಭ್ರಷ್ಟ ವ್ಯವಸ್ಥೆಗೆ ಗೌರವ ಹೆಚ್ಚಾಗುತ್ತಿದೆ. ಭ್ರಷ್ಟರನ್ನು ಬಹಿಷ್ಕರಿಸಿ, ಭ್ರಷ್ಟಾಚಾರ ಮುಕ್ತ ಸಮಾಜವನ್ನು ನಿರ್ಮಾಣ ಮಾಡ ಬೇಕು. ಇದಕ್ಕೆ ಸಾಮಾಜಿಕವಾಗಿ ಮತ್ತು ವೈಯಕ್ತಿಕ ನೆಲೆಗಟ್ಟಿನಲ್ಲಿ ಮೌಲ್ಯಗಳ ಅಳವಡಿಕೆ ಯಾಗಬೇಕು.

ನಮ್ಮ ಹಿರಿಯರು, ಪೂರ್ವಜರು ನೀಡಿ ರುವ ಹಲವಾರು ಮೌಲ್ಯಗಳಲ್ಲಿ ಕನಿಷ್ಠ ಎರಡು ಮೌಲ್ಯಗಳನ್ನು ವ್ಯವಸ್ಥಿತ ರೀತಿಯಲ್ಲಿ ಅಳವಡಿಸುವ ಮೂಲಕ ಹಲವು ರೀತಿಯ ಬದಲಾವಣೆ ತರಲು ಸಾಧ್ಯವಿದೆ. ಒಂದು ತೃಪ್ತಿ, ಇನ್ನೊಂದು ಮಾನವೀಯತೆ.
ಮನುಷ್ಯ ಅಥವಾ ವ್ಯವಸ್ಥೆಯಲ್ಲಿ ತೃಪ್ತಿಯಿದ್ದರೆ ದುರಾಸೆ ಇರುವುದಿಲ್ಲ. ದುರಾಸೆ ಹೆಚ್ಚಾದಂತೆ ಸಮಾಜದಲ್ಲಿ ಶಾಂತಿ ಕಡಿಮೆಯಾಗುತ್ತ ಹೋಗುತ್ತದೆ. ಶಾಂತಿ ಇಲ್ಲದೆ ಇದ್ದಾಗ ಬೇರೆ ಯಾವುದನ್ನೂ ನಿರೀಕ್ಷಿಸಲು ಸಾಧ್ಯವಿಲ್ಲ. ಹೀಗಾಗಿ ಪ್ರತಿಯೊಬ್ಬರೂ ದುರಾಸೆ ಇಲ್ಲದ ತೃಪ್ತಿಕರ ಬದುಕು ನಡೆಸಬೇಕು. ಇದಕ್ಕೆ ಮಾನವೀಯತೆ ಆವಶ್ಯಕ. ನಮ್ಮ ಜೀವನ ಪಥದಲ್ಲಿ ಮಾನವೀಯತೆಯನ್ನು ಅಳವಡಿಸಿಕೊಂಡಾಗ ಸಮಾಜದಲ್ಲಿ ಶಾಂತಿ ಸೌಹಾರ್ದ ತಾನಾಗಿಯೇ ಸೃಷ್ಟಿಯಾಗುತ್ತದೆ. ಈ ಮೂಲಕ ಭ್ರಷ್ಟರನ್ನು ಬಹಿಷ್ಕರಿಸುವ ಸಮಾಜ ನಿರ್ಮಾಣ ಸಾಧ್ಯವಿದೆ.

ನಾವೀಗ ಸ್ವಾತಂತ್ರ್ಯದ ಅಮೃತ ಮಹೋತ್ಸವ ವನ್ನು ವರ್ಷಪೂರ್ತಿ ಆಚರಿಸಲಿದ್ದೇವೆ. ಮುಂದಿನ 25 ವರ್ಷಗಳಲ್ಲಿ ಸ್ವಾತಂತ್ರ್ಯದ ಶತ ಮಾನೋ ತ್ಸವವನ್ನು ಆಚರಿಸಲಿದ್ದೇವೆ. ಈ ಹಿನ್ನೆಲೆಯಲ್ಲಿ ಮುಂದಿನ 25 ವರ್ಷಗಳಲ್ಲಿ ಬಹಳಷ್ಟು ಬದಲಾವಣೆಗಳು ಸಾಮಾಜಿಕ ಮತ್ತು ವೈಯಕ್ತಿಕ ನೆಲೆಗಟ್ಟಿನಲ್ಲಿ ಆಗಬೇಕಿವೆ. ಈಗ ಇರುವ ಭ್ರಷ್ಟಾಚಾರ ಮುಂದಿನ 25 ವರ್ಷಗಳಲ್ಲಿ ಶೂನ್ಯಕ್ಕೆ ಇಳಿಯಬೇಕು ಅಥವಾ ಕನಿಷ್ಠ ಮಟ್ಟಕ್ಕೆ ಬರಬೇಕು. ಇದಕ್ಕಾಗಿ ಸಾಮಾಜಿಕ ಬದಲಾವಣೆ ಮತ್ತು ಸಾಮಾಜಿಕ ಮೌಲ್ಯಗಳ ಅನುಷ್ಠಾನ ಆಗಲೇ ಬೇಕು. ತೃಪ್ತಿ ಮತ್ತು ಮಾನವೀಯತೆ ಮನುಷ್ಯರಲ್ಲಿ ಜಾಸ್ತಿಯಾದಾಗ ಮುಂದಿನ 25 ವರ್ಷಗಳಲ್ಲಿ ನಾವಿದನ್ನು ಖಂಡಿತ ಸಾಧಿಸಬಹುದು.

ತೃಪ್ತಿ ಮತ್ತು ಮಾನವೀಯತೆಗಳ ಮರು ಅಳವಡಿಕೆ
ಇವತ್ತಿನ ಪರಿಸ್ಥಿತಿಯಲ್ಲಿ ಭ್ರಷ್ಟಾಚಾರದಿಂದ ದೇಶಕ್ಕೆ ಬಹಳಷ್ಟು ರೀತಿಯ ಕಂಟಕಗಳು ಎದುರಾಗುತ್ತಿರುವುದು ಮಾತ್ರವಲ್ಲದೆ ಅನೇಕ ಸಮಸ್ಯೆಗಳಿಗೂ ಭ್ರಷ್ಟಾಚಾರವೇ ಕಾರಣವಾಗುತ್ತಿದೆ. ದೇಶದ ಅಭಿವೃದ್ಧಿ ಕಾರ್ಯ ಅಥವಾ ಯೋಜನೆಗೆ ಭಾರತ ಸರಕಾರ ಒಂದು ರೂಪಾಯಿ ಬಿಡುಗಡೆ ಮಾಡಿದರೆ ಅದರಲ್ಲಿ 15 ಪೈಸೆ ಮಾತ್ರ ಯೋಜನೆ ಅಥವಾ ಫಲಾನುಭವಿಗೆ ತಲುಪುತ್ತಿತ್ತು ಎಂದು1985ರಲ್ಲಿ ಅಂದಿನ ಪ್ರಧಾನಿ ರಾಜೀವ್‌ ಗಾಂಧಿಯವರು ಹೇಳುತ್ತಿದ್ದರು. ನಾವೀಗ 2021ರಲ್ಲಿದ್ದೇವೆ. ಆದರೆ ಈ ವ್ಯವಸ್ಥೆಯಲ್ಲಿ ನಿರೀಕ್ಷಿತ ಪ್ರಮಾಣದಲ್ಲಿ ಬದಲಾವಣೆ ಆಗಿಲ್ಲ. ಯೋಜನೆಗೆ ಬಿಡುಗಡೆಯಾಗುವ ಹಣ ಶೇ. 100ರಷ್ಟು ಅದರ ಅನುಷ್ಠಾನಕ್ಕೆ ಉಪಯೋಗ ಆಗುತ್ತಿಲ್ಲ. ಇದರಿಂದಾಗಿ ದೇಶದ ಸಮಗ್ರ ಅಭಿವೃದ್ಧಿಗೆ ಹಲವು ಕಂಟಕ ಎದುರಾಗುತ್ತಿವೆ. ಇದರ ನಿವಾರಣೆ ಯಾವುದೇ ಕಾನೂನಿನಿಂದ ಸಾಧ್ಯವಿಲ್ಲ. ಸಾಮಾಜಿಕ ಮತ್ತು ವೈಯಕ್ತಿಕ ಜೀವನದಲ್ಲಿ ತೃಪ್ತಿ ಮತ್ತು ಮಾನವೀಯ ಮೌಲ್ಯಗಳ ಮರು ಅಳವಡಿಕೆಯಿಂದ ಮಾತ್ರ ಬದಲಾವಣೆ ಸಾಧ್ಯವಿದೆ. ಈ ನಿಟ್ಟಿನಲ್ಲಿ ಪ್ರಯತ್ನ ನಡೆಯಬೇಕು.

ಈ ಎರಡು ಮೌಲ್ಯಗಳನ್ನು ಸಮಾಜ ಮತ್ತು ವ್ಯಕ್ತಿಯಲ್ಲಿ ಕಾನೂನಿನ ಮೂಲಕ ಅಳವಡಿಸಲು ಸಾಧ್ಯವಿಲ್ಲ. ಬದಲಾಗಿ ಕೌಟುಂಬಿಕ ಸಂಸ್ಕಾರದಿಂದ ಸಾಧ್ಯವಿದೆ. ವ್ಯಕ್ತಿ ತಾನು ಈ ಮೌಲ್ಯಗಳನ್ನು ಅಳವಡಿಸಿಕೊಂಡು ತನ್ನ ಮಕ್ಕಳಿಗೂ ಅದನ್ನು ಕಲಿಸಬೇಕು. ಹಿಂದೆ ಮನೆಗಳಲ್ಲಿ ಹೆತ್ತವರು, ಕುಟುಂಬದ ಹಿರಿಯರು ಮಕ್ಕಳಿಗೆ ಯಾವ ರೀತಿಯ ಜೀವನ ಮೌಲ್ಯಗಳನ್ನು ಅಳವಡಿಸಿಕೊಳ್ಳಲು ಹೇಳುತ್ತಿದ್ದರೋ ಅಂಥ ವ್ಯವಸ್ಥೆ ಪುನರ್‌ನಿರ್ಮಾಣವಾಗಬೇಕು. ಇದು ಒಂದು ಭಾಗವಾದರೆ, ಶಿಕ್ಷಣ ವ್ಯವಸ್ಥೆಯಲ್ಲೂ ಬದಲಾವಣೆ ಆಗಬೇಕು.

ಮುಂದಿನ 25 ವರ್ಷಗಳಲ್ಲಿ ಆಗಬೇಕಿರುವ ಬದಲಾವಣೆಗಳಿಗೆ ಮೌಲ್ಯಗಳ ಅಳವಡಿಕೆಯೇ ಪ್ರಧಾನವಾಗಿರುತ್ತದೆ. ಯಾವುದೇ ಕಾನೂನು ಅಥವಾ ಸರಕಾರದ ನಿಯಮಗಳಿಂದ ಇದರ ಅನುಷ್ಠಾನ ಸಾಧ್ಯವಿಲ್ಲ. ಪ್ರತಿಯೊಬ್ಬರು ತಮ್ಮ ತಮ್ಮ ಮನೆಯಲ್ಲಿ ಮೌಲ್ಯಗಳನ್ನು ಮರುಸ್ಥಾಪಿಸಿ, ಅದನ್ನು ಮಕ್ಕಳಲ್ಲಿ ತುಂಬುವ ಕೆಲಸ ಮಾಡಬೇಕು. ಭ್ರಷ್ಟ ವ್ಯವಸ್ಥೆಯ ನಿರ್ಮೂಲನೆಯಿಂದ ಅಭಿವೃದ್ಧಿ ಹೊಂದಿದ ಸದೃಢ ದೇಶ ನಿರ್ಮಾಣ ಸಾಧ್ಯವಿದೆ. ಇದಕ್ಕೆ ತೃಪ್ತಿ ಮತ್ತು ಮಾನವೀಯತೆ ಎಂಬ ಎರಡು ಮೌಲ್ಯಗಳು ಅತೀ ಅವಶ್ಯ.

- ಎನ್‌. ಸಂತೋಷ್‌ ಹೆಗ್ಡೆ, ನಿವೃತ್ತ ಲೋಕಾಯುಕ್ತರು, ಕರ್ನಾಟಕ


Spread the love

About Laxminews 24x7

Check Also

ನಾಡಗೀತೆ ಕಡ್ಡಾಯ ಪ್ರಶ್ನಿಸಿದ್ದ ಅರ್ಜಿ ವಜಾಗೊಳಿಸಿದ ಹೈಕೋರ್ಟ್

Spread the loveಬೆಂಗಳೂರು: ದಿವಂಗತ ಮೈಸೂರು ಅನಂತಸ್ವಾಮಿ ಸಂಯೋಜಿಸಿದ ಧಾಟಿಯಲ್ಲಿ ನಾಡಗೀತೆ ಹಾಡುವುದನ್ನು ಪ್ರಶ್ನಿಸಿ ಸಲ್ಲಿಸಿದ್ದ ಅರ್ಜಿಯನ್ನು ಕರ್ನಾಟಕ ಹೈಕೋರ್ಟ್‌ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ