Breaking News
Home / ಜಿಲ್ಲೆ / ಬೆಂಗಳೂರು / ಇಂದಿರಾ ಕ್ಯಾಂಟೀನ್ ಹೆಸರು ಬದಲಾವಣೆ ಪ್ರಯತ್ನ ದ್ವೇಷದ ರಾಜಕಾರಣ: ಸಿದ್ದರಾಮಯ್ಯ

ಇಂದಿರಾ ಕ್ಯಾಂಟೀನ್ ಹೆಸರು ಬದಲಾವಣೆ ಪ್ರಯತ್ನ ದ್ವೇಷದ ರಾಜಕಾರಣ: ಸಿದ್ದರಾಮಯ್ಯ

Spread the love

ಬೆಂಗಳೂರು: ‘ಇಂದಿರಾ ಕ್ಯಾಂಟೀನ್ ಹೆಸರು ಬದಲಾವಣೆ ಮಾಡುವ ಪ್ರಯತ್ನ ದ್ವೇಷದ ರಾಜಕಾರಣವಾಗುತ್ತದೆ’ ಎಂದು ವಿಧಾನಸಭೆಯ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಅಭಿಪ್ರಾಯಪಟ್ಟಿದ್ದಾರೆ.

ಇಂದಿರಾ ಕ್ಯಾಂಟೀನ್‍ಗೆ ಅನ್ನಪೂರ್ಣ ಎಂಬ ಹೆಸರಿಡಬೇಕೆಂಬ ಬಿಜೆಪಿ ಪ್ರಧಾನ ಕಾರ್ಯದರ್ಶಿ ಸಿ.ಟಿ. ರವಿ ಅವರ ಹೇಳಿಕೆಗೆ ಪ್ರತಿಕ್ರಿಯಿಸಿದ ಅವರು, ‘ರಸ್ತೆ, ಕ್ರೀಡಾಂಗಣ, ಸರ್ಕಾರಿ ಸಂಸ್ಥೆಗಳಿಗೆ ರಾಷ್ಟ್ರೀಯ ನಾಯಕರ ಹೆಸರು ನಾಮಕರಣ ಮಾಡುವುದು ಮೊದಲಿನಿಂದಲೂ ನಡೆದು ಬಂದಿರುವ ಪದ್ಧತಿ. ಬೆಂಗಳೂರಿನ ಮೇಲ್ಸೇತುವೆಗೆ ದೀನದಯಾಳ್ ಉಪಾಧ್ಯಾಯ, ನಗರ ಸಾರಿಗೆಗೆ ವಾಜಪೇಯಿ, ಗುಜರಾತ್ ಕ್ರೀಡಾಂಗಣಕ್ಕೆ ಪ್ರಧಾನಿ ನರೇಂದ್ರ ಮೋದಿ ಹೆಸರು ಏಕೆ ಇಡಲಾಗಿದೆ. ಬದಲಿಸುವುದಾದರೆ ಈ ಹೆಸರುಗಳನ್ನೂ ಕೇಂದ್ರ ಸರ್ಕಾರ ಬದಲಾವಣೆ ಮಾಡಲಿ’ ಎಂದರು.

‘ಮೇಜರ್ ಧ್ಯಾನ್‍ಚಂದ್ ಅವರು ಶ್ರೇಷ್ಠ ಹಾಕಿ ಪಟು ಎಂಬುದರಲ್ಲಿ ಎರಡು ಮಾತಿಲ್ಲ. ಬೇರೆ ಪ್ರಶಸ್ತಿಗೆ ಅವರ ಹೆಸರು ಇಡಬಹುದಾಗಿತ್ತು. ರಾಜೀವ್‍ ಗಾಂಧಿಯವರ ಹೆಸರೇಕೆ ಬದಲಿಸಬೇಕು. ದೇಶಕ್ಕಾಗಿ ಸೇವೆ ಸಲ್ಲಿಸಿದವರ ನೆನಪಿಗೆ ರಾಷ್ಟ್ರೀಯ ನಾಯಕರುಗಳ ಹೆಸರುಗಳನ್ನು ನಾಮಕರಣ ಮಾಡಲಾಗುತ್ತದೆ’ ಎಂದರು.

‘ಇಂದಿರಾ ಗಾಂಧಿಯವರು ಬಡವರ ಪರ ಶ್ರಮಿಸಿದ್ದರು. ಗರೀಬಿ ಹಠಾವೋ ಎಂದವರು. ಉಳುವವನೇ ಭೂಮಿ ಒಡೆಯ ಕಾನೂನು ಜಾರಿಗೆ ತಂದವರು. ಹೀಗಾಗಿ, ಇಂದಿರಾ ಕ್ಯಾಂಟೀನ್‍ ಹೆಸರು ಇಡಲಾಗಿದೆ. ಬಿಜೆಪಿಗೆ ಬಡವರ ಬಗ್ಗೆ ಕಾಳಜಿ ಇಲ್ಲ. ಇದ್ದಿದ್ದರೆ ಬಡವರಿಗೆ ಕೊಡುತ್ತಿದ್ದ ಏಳು ಕೆ.ಜಿ. ಅಕ್ಕಿ ಪ್ರಮಾಣ ಕಡಿಮೆ ಮಾಡಿದ್ದು ಯಾಕೆ? ಬಿಜೆಪಿಯವರು ಬಂಡವಾಳಶಾಹಿಗಳು ಹಾಗೂ ಕಾರ್ಪೊರೇಟ್ ಕಂಪನಿಗಳ ಪರ ಇರುವವರು’ ಎಂದು ಸಿದ್ದರಾಮಯ್ಯ ಅವರು ಟೀಕಿಸಿದರು.

ಸಚಿವ ಸಂಪುಟದ ಬಗ್ಗೆ ನಿರೀಕ್ಷೆಗಳಿಲ್ಲ: ‘ಹೊಸ ಸಚಿವ ಸಂಪುಟದ ಬಗ್ಗೆ ಯಾವ ಆಶಾಭಾವನೆಯೂ ಇಲ್ಲ. ಬಹುತೇಕ ಹಳಬರೇ ಸಂಪುಟದಲ್ಲಿದ್ದಾರೆ. ಹೀಗಾಗಿ, ಹೊಸದನ್ನು ನಿರೀಕ್ಷಿಸಲು ಹೇಗೆ ಸಾಧ್ಯ? ಸಚಿವ ಸಂಪುಟದಲ್ಲಿ 13 ಜಿಲ್ಲೆಗಳಿಗೆ ಪ್ರಾತಿನಿಧ್ಯ ಇಲ್ಲ. ಹಳೆಯ ಮೈಸೂರು ಭಾಗಕ್ಕೆ ಅವಕಾಶ ಕಡಿಮೆಯಾಗಿದೆ. ರಾಜ್ಯದಲ್ಲಿ ಶೇ 24.1ರಷ್ಟು ದಲಿತರಿದ್ದಾರೆ. ಆದರೆ, ಪರಿಶಿಷ್ಟರಿಗೆ ನಾಲ್ಕು ಸ್ಥಾನ ಮಾತ್ರ ನೀಡಲಾಗಿದೆ. ಭೋವಿಗಳಿಗೆ, ಕೊರಚ, ಕೊರಮರಿಗೆ ಅವಕಾಶ ಕೊಟ್ಟಿಲ್ಲ. ನಾವು ಅಧಿಕಾರದಲ್ಲಿ ಇದ್ದಾಗ ಪ್ರಮಖ ಖಾತೆಗಳನ್ನು ಆ ಸಮುದಾಯದವರಿಗೆ ನೀಡಲಾಗಿತ್ತು. ಒಟ್ಟಾರೆ ಸಂಪುಟದಲ್ಲಿ ಪ್ರಾದೇಶಿಕ ಸಮೋತಲನ ಹಾಗೂ ಸಾಮಾಜಿಕ ನ್ಯಾಯಕ್ಕೆ ಅವಕಾಶವೇ ಇಲ್ಲ’ ಎಂದರು.

ರಾಜಕೀಯ ದುರುದ್ದೇಶ: ‘ಆದಾಯ ಮೀರಿ ಆಸ್ತಿ ಗಳಿಸಿದ್ದರೆ, ಅಕ್ರಮವಾಗಿ ಹಣ ವರ್ಗಾವಣೆ ಅಥವಾ ದುರುಪಯೋಗವಾಗಿದ್ದರೆ ಮಾತ್ರ ಸಾಮಾನ್ಯವಾಗಿ ಐಟಿ ದಾಳಿಯಾದ ಬಳಿಕ ಅವರ ಶಿಫಾರಸು ಪ್ರಕಾರ ಇಡಿಯವರು ದಾಳಿ ಮಾಡುತ್ತಾರೆ. ಜಮೀರ್ ಅಹಮದ್ ಮನೆಯ ಮೇಲೆ ಇಡಿಯವರು ಏಕಾಏಕಿ ದಾಳಿ ನಡೆಸಿದ್ದಾರೆ. ಇದು ರಾಜಕೀಯ ಪ್ರೇರಿತ’ ಎಂದು ಸಿದ್ದರಾಮಯ್ಯ ಆಕ್ರೋಶ ವ್ಯಕ್ತಪಡಿಸಿದರು.

‘ಜಮೀರ್ ಮನೆ ಕಟ್ಟಿದ್ದಾರೆ ಅಷ್ಟೆ. ಹಣ ದುರುಪಯೋಗ ಅಥವಾ ಅಕ್ರಮ ವರ್ಗಾವಣೆ ಎಲ್ಲಿ ಆಗಿದೆ. ಬಿಜೆಪಿಯವರ ಮೇಲೆ ಏಕೆ ದಾಳಿ ನಡೆಯುವುದಿಲ್ಲ. ಅವರೆಲ್ಲ ಬಡವರೇ, ಬಿಪಿಎಲ್ ಕಾರ್ಡುದಾರರೇ. ಕಾಂಗ್ರೆಸ್ಸಿಗರನ್ನೇ ಟಾರ್ಗೆಟ್ ಮಾಡುವುದೇಕೆ? ಜಮೀರ್‌ ನನ್ನ ಆಪ್ತರು. ಅದೇ ರೀತಿ ನನಗೆ ಹಲವರು ಆಪ್ತರಿದ್ದಾರೆ. ಬಿಜೆಪಿಯಲ್ಲಿಯೂ ಇದ್ದಾರೆ. ಆದರೆ, ಸ್ನೇಹ ಬೇರೆ, ರಾಜಕೀಯ ಬೇರೆ’ ಎಂದೂ ಹೇಳಿದರು.


Spread the love

About Laxminews 24x7

Check Also

ಚಿದಾನಂದ ಸವದಿ‌ಗೆ ಚಿಕ್ಕೋಡಿ ಕ್ಷೇತ್ರಕ್ಕೆ ಟಿಕೆಟ್ ನೀಡುವ ಸಾಧ್ಯತೆ

Spread the loveಬೆಳಗಾವಿ, : ಲೋಕಸಭಾ ಚುನಾವಣೆ (Lok Sabha Elections )ಸಮೀಪಿಸುತ್ತಿದ್ದಂತೆ ಕಾಂಗ್ರೆಸ್ (Congress) ಎಚ್ಚರಿಕೆಯಿಂದ ಹೆಜ್ಜೆ ಇಡುತ್ತಿದೆ. ಅಳೆದು …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ