Breaking News
Home / ರಾಜಕೀಯ / ಜಿಎಸ್​ಟಿ ಬಾಕಿ ಹಣ 11,400 ಕೋಟಿ ರೂ. ನೀಡಲು ಕೇಂದ್ರ ಒಪ್ಪಿಗೆ; ಕೊರೊನಾ ಲಸಿಕೆ ಪೂರೈಕೆ ಹೆಚ್ಚಿಸುವ ಭರವಸೆ: ಸಿಎಂ ಬೊಮ್ಮಾಯಿ

ಜಿಎಸ್​ಟಿ ಬಾಕಿ ಹಣ 11,400 ಕೋಟಿ ರೂ. ನೀಡಲು ಕೇಂದ್ರ ಒಪ್ಪಿಗೆ; ಕೊರೊನಾ ಲಸಿಕೆ ಪೂರೈಕೆ ಹೆಚ್ಚಿಸುವ ಭರವಸೆ: ಸಿಎಂ ಬೊಮ್ಮಾಯಿ

Spread the love

ದೆಹಲಿ: ಕರ್ನಾಟಕದ ನೂತನ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ದೆಹಲಿಗೆ ತೆರಳಿದ್ದು, ಅಲ್ಲಿ ಕೇಂದ್ರ ಆರೋಗ್ಯ ಸಚಿವ ಮನಸುಖ್​ ಮಾಂಡವೀಯ ಜತೆ ಚರ್ಚೆ ನಡೆಸಿ ಮುಂದಿನ ತಿಂಗಳಿಂದ ರಾಜ್ಯಕ್ಕೆ 1.5 ಕೋಟಿ ಡೋಸ್​ ಕೊರೊನಾ ಲಸಿಕೆ ಪೂರೈಸಲು ಮನವಿ ಸಲ್ಲಿಸಿದ್ದಾರೆ. ಕೊರೊನಾ ಲಸಿಕೆ ಬಗ್ಗೆ ಆರೋಗ್ಯ ಸಚಿವರ ಜತೆ ಚರ್ಚಿಸಿರುವ ಅವರು, ಪ್ರಸ್ತುತ 60ರಿಂದ 65 ಲಕ್ಷ ಡೋಸ್​ ಲಸಿಕೆಯಷ್ಟಿರುವ ಪೂರೈಕೆಯನ್ನು 1.5 ಕೋಟಿ ಡೋಸ್​ಗೆ ಹೆಚ್ಚಳ ಮಾಡಲು ಬೇಡಿಕೆ ಇಟ್ಟಿದ್ದಾಗಿ ತಿಳಿಸಿದ್ದಾರೆ. ಅಲ್ಲದೇ, ಈ ತಿಂಗಳಲ್ಲಿ 1 ಕೋಟಿ ಡೋಸ್ ಲಸಿಕೆ ನೀಡುವ ಗುರಿ ಇದೆ. ಕೊವಿಡ್ ಸಂಬಂಧ​ ಮೂಲಸೌಕರ್ಯಕ್ಕೆ 800 ಕೋಟಿ ರೂ. ಬಿಡುಗಡೆ ಮಾಡುವುದಾಗಿ ಆರೋಗ್ಯ ಸಚಿವ ಮನಸುಖ್​ ಮಾಂಡವೀಯ ಭರವಸೆ ನೀಡಿದ್ದಾರೆ ಎಂದು ಹೇಳಿದ್ದಾರೆ.

ದೆಹಲಿ ಪ್ರವಾಸದ 2ನೇ ದಿನವಾದ ಇಂದು ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರನ್ನು ಭೇಟಿಯಾಗಿ ಚರ್ಚೆ ನಡೆಸಿರುವ ಅವರು, ರಾಜ್ಯಕ್ಕೆ ಬರಬೇಕಿರುವ ಬಾಕಿ ಹಣ ಬಿಡುಗಡೆ ಬಗ್ಗೆ ಮಾತನಾಡಿದ್ದಾಗಿ ಹೇಳಿದ್ದಾರೆ. ಜಿಎಸ್​ಟಿ ಪರಿಹಾರ ಬಾಕಿ ಹಣ 11,400 ಕೋಟಿ ರೂಪಾಯಿ ಕೊಡಲು ನಿರ್ಮಲಾ ಸೀತಾರಾಮನ್ ಒಪ್ಪಿಗೆ ಸೂಚಿಸಿದ್ದಾರೆ. ಪ್ರತಿ ತಿಂಗಳು ಕಂತಿನ ರೂಪದಲ್ಲಿ ಅದನ್ನು ಕೊಡಲಿದ್ದಾರೆ. ಕೃಷಿ ಸಂಬಂಧ ಯೋಜನೆಗಳ ಪ್ರಸ್ತಾಪ ಮಾಡಿದ್ದೇವೆ. ನಬಾರ್ಡ್ ಅಡಿಯಲ್ಲಿ ಸಹಾಯ ಮಾಡುವ ಭರವಸೆ ಸಿಕ್ಕಿದೆ ಎಂದು ಹೇಳಿದ್ದಾರೆ.

ಇನ್ನು ಮೇಕೆದಾಟು ವಿಚಾರವಾಗಿ ತಮಿಳುನಾಡು ಬಿಜೆಪಿ ಘಟಕದ ಅಧ್ಯಕ್ಷ ಅಣ್ಣಾಮಲೈ ಉಪವಾಸ ಕೂರುವ ವಿಚಾರಕ್ಕೆ ಸಂಬಂಧಿಸಿದಂತೆ ಪ್ರತಿಕ್ರಿಯಿಸಿದ ಬಸವರಾಜ ಬೊಮ್ಮಾಯಿ, ಅವರು ಏನಾದರೂ ಮಾಡಿಕೊಳ್ಳಲಿ. ಊಟನಾದರೂ ಮಾಡಲಿ, ಉಪವಾಸವನ್ನಾದರೂ ಮಾಡಲಿ, ಮೇಕೆದಾಟು ನಮ್ಮ ಹಕ್ಕು. ನಮ್ಮ ಯೋಜನೆಯನ್ನು ನಾವು ಮಾಡುತ್ತೇವೆ. ಅವರು ಏನು ಮಾಡುತ್ತಾರೆ ಎಂಬುದು ಅವರಿಗೆ ಬಿಟ್ಟಿದ್ದು ಎಂದು ಅಭಿಪ್ರಾಯಪಟ್ಟಿದ್ದಾರೆ.

ರಾಜ್ಯದ ಹಲವು ಜಿಲ್ಲೆಗಳಲ್ಲಿ ಅತಿವೃಷ್ಟಿ ಮತ್ತು ಪ್ರವಾಹ ಪರಿಸ್ಥಿತಿ ತಲೆದೋರಿರುವ ಹಿನ್ನೆಲೆ ಹಾನಿಗೊಳಗಾದ ಜಿಲ್ಲೆಗಳ ಜಿಲ್ಲಾಧಿಕಾರಿಗಳೊಂದಿಗೆ ಸಂಪರ್ಕದಲ್ಲಿದ್ದೇನೆ. ಆದ್ಯತೆ ಮೇರೆಗೆ ಎಲ್ಲಾ ರೀತಿಯ ಕ್ರಮ ಕೈಗೊಳ್ಳಲಾಗುವುದು. ರಕ್ಷಣೆ, ಪರಿಹಾರ, ಮುಂಜಾಗ್ರತಾ ಕ್ರಮ ತೆಗೆದುಕೊಳ್ಳಲು ಸೂಚನೆ ನೀಡಲಾಗಿದೆ. ಸಂತ್ರಸ್ತರಿಗೆ ತೊಂದರೆಯಾಗದಂತೆ ನೋಡಿಕೊಳ್ಳುತ್ತೇವೆ ಎಂದು ಬಸವರಾಜ ಬೊಮ್ಮಾಯಿ ತಿಳಿಸಿದ್ದಾರೆ.

 

ಸಂಪುಟ ರಚನೆ ಬಗ್ಗೆ ಮಾತನಾಡಿದ ಅವರು ಜೆ.ಪಿ.ನಡ್ಡಾ ಜತೆ ಚರ್ಚೆ ನಡೆಸುವೆ. ರಾಷ್ಟ್ರೀಯ ಅಧ್ಯಕ್ಷ ಜೆ.ಪಿ.ನಡ್ಡಾ ಸಭೆಯಲ್ಲಿ ಬ್ಯುಸಿಯಾಗಿದ್ದಾರೆ. ಸಭೆ ಮುಗಿದ ಬಳಿಕ ಸಂಪುಟ ರಚನೆ ಬಗ್ಗೆ ಚರ್ಚೆ ಮಾಡಲಾಗುವುದು ಎಂದಿದ್ದಾರೆ. ಮುಂದಿನ ಗುರುವಾರ ನೂತನ ಸಚಿವರ ಪ್ರಮಾಣವಚನ ಆಗಬಹುದು ಎಂಬ ಲೆಕ್ಕಾಚಾರಗಳು ಕೇಳಿಬರುತ್ತಿದ್ದು, ಒಂದೇ ಹಂತದಲ್ಲಿ ಸಂಪುಟ ವಿಸ್ತರಣೆಗೆ ಹೈಕಮಾಂಡ್ ಚಿಂತನೆ ನಡೆಸಿದೆ. ಗೊಂದಲ ಹೆಚ್ಚಾದರೆ ಎರಡು ಹಂತದಲ್ಲಿ ಸಂಪುಟ ವಿಸ್ತರಣೆ ಆಗಲಿದೆಯಷ್ಟೇ. ಹೀಗಾಗಿ ಸೋಮುವಾರ ಅಥವಾ ಮಂಗಳವಾರ ಸಿಎಂ ಮತ್ತೆ ದೆಹಲಿಗೆ ಬರುವ ಸಾಧ್ಯತೆ ಇದೆ ಎನ್ನಲಾಗಿದೆ.

ಗಮನ ಸೆಳೆದ ಬೊಮ್ಮಾಯಿ ಧಿರಿಸು!
ದೆಹಲಿ ಭೇಟಿ ವೇಳೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಧರಿಸಿದ್ದ ಉಡುಪು ಗಮನ ಸೆಳೆದಿದೆ. ಜುಬ್ಬಾ ಹಾಗೂ ಶಾಲು ಧರಿಸಿ ಕಂಗೊಳಿಸಿದ ಬೊಮ್ಮಾಯಿ, ತಮ್ಮ ಎಂದಿನ ಉಡುಗೆ, ತೊಡುಗೆಗಿಂತ ಕೊಂಚ ವಿಭಿನ್ನ ಶೈಲಿಯನ್ನು ಅನುಸರಿಸಿದ್ದು ಕಂಡುಬಂದಿತು.

 


Spread the love

About Laxminews 24x7

Check Also

ಜನರು ತಿಂಗಳುಗಟ್ಟಲೆ ಓಡಾಡಿದರು ವೀಸಾ ಸಿಗಲ್ಲ, ಪ್ರಜ್ವಲ್ ಗೆ ಒಂದೇ ದಿನದಲ್ಲಿ ಹೇಗೆ ಸಿಕ್ಕಿತು? : ವಿನಯ್ ಕುಲಕರ್ಣಿ

Spread the loveಹಾವೇರಿ : ಸಂಸದ ಪ್ರಜ್ವಲ್ ರೇವಣ್ಣ ವಿರುದ್ಧ ಲೈಂಗಿಕ ದೌರ್ಜನ್ಯ ಪ್ರಕರಣಕ್ಕೆ ಸಂಬಂಧಿಸಿದಂತೆ ಹಾವೇರಿಯಲ್ಲಿ ಕೆಪಿಸಿಸಿ ಕಾರ್ಯಾಧ್ಯಕ್ಷ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ