ಬೆಂಗಳೂರು: ಕೊರೊನಾ ಸಮಯದಲ್ಲಿ ಕೆಎಸ್‍ಆರ್ ಟಿಸಿ ಹೊಸ ಆದೇಶವನ್ನು ಹೊರಡಿಸಿ ಸಿಬ್ಬಂದಿಯ ಆಕ್ರೋಶಕ್ಕೆ ಗುರಿಯಾಗಿದೆ. ಮೈಸೂರು ಜಿಲ್ಲೆಯ ಕೆ.ಆರ್.ನಗರ ಡಿಪೋ ನಿಗದಿತ ಆದಾಯ ತರುವಂತೆ ಆದೇಶ ಹೊರಡಿಸಿದೆ.
ಕೊರೊನಾ ಆತಂಕದ ನಡುವೆಯೇ ಸಿಬ್ಬಂದಿ ಕೆಲಸಕ್ಕೆ ಹಾಜರಾಗುತ್ತಿದ್ದಾರೆ. ಈಗಾಗಲೇ ಬಿಎಂಟಿಸಿ ಸಿಬ್ಬಂದಿಯಲ್ಲಿ ಸೋಂಕು ಕಾಣಿಸಿಕೊಂಡಿದೆ. ಇಂತಹ ಸಂದರ್ಭದಲ್ಲಿ ಸಿಬ್ಬಂದಿ ತಮ್ಮ ಒಂದು ಶಿಫ್ಟ್ ನಲ್ಲಿ ನಿಗದಿತ ಆದಾಯ ತರಬೇಕು. ಇಲ್ಲವಾದಲ್ಲಿ ಸಿಬ್ಬಂದಿಗೆ ಹಾಜರಾತಿ ನೀಡಲ್ಲ. ಡೀಸೆಲ್ ದರ ಏರಿಕೆಯ ನಷ್ಟ ತಪ್ಪಿಸಲು ಸಾರಿಗೆ ಸಂಸ್ಥೆ ಟಾರ್ಗೆಟ್ ಫಿಕ್ಸ್ ಮಾಡಿದೆ ಎಂದು ತಿಳಿದು ಬಂದಿದೆ.
ಏನದು ಟಾರ್ಗೆಟ್?
* ಸಾಮಾನ್ಯ ಬಸ್ಸುಗಳು ನಿತ್ಯ ಕನಿಷ್ಠ 280 ಕಿಮೀ ಸಂಚರಿಸಿ 7,000 ರೂ. ಆದಾಯ ತರಬೇಕು.
* ವೇಗದೂತ ಬಸ್ಸುಗಳು ನಿತ್ಯ ಕನಿಷ್ಠ 300 ಕಿಮೀ ಸಂಚರಿಸಿ 9,000 ಸಾವಿರ ರೂ. ಆದಾಯ ತರಬೇಕು.
ಕೊರೊನಾ ಆತಂಕದ ಹಿನ್ನೆಲೆ ಪ್ರಯಾಣಿಕರು ಸಾಮಾಜಿಕ ಅಂತರ ಕಾಪಾಡಿಕೊಳ್ಳಬೇಕು. ಹಾಗಾಗಿ ಎರಡು ಆಸನಗಳಿರುವ ಜಾಗದಲ್ಲಿ ಒಬ್ಬರೇ ಕುಳಿತುಕೊಳ್ಳಬೇಕೆಂಬ ನಿಯಮವನ್ನು ಸರ್ಕಾರವೇ ಜಾರಿಗೊಳಿಸಿದೆ. ಕೊರೊನಾಗೆ ಭಯಪಟ್ಟ ಬಹುತೇಕ ಜನರು ಸ್ವಂತ ವಾಹನಗಳನ್ನು ಬಳಸುತ್ತಿದ್ದಾರೆ. ಇನ್ನು ತುರ್ತು ಸಂದರ್ಭಗಳಲ್ಲಿ ಮಾತ್ರ ಸಾರಿಗೆ ವಾಹನಗಳನ್ನು ಬಳಸುತ್ತಿದ್ದಾರೆ. ಈ ಸನ್ನಿವೇಶದಲ್ಲಿ ಟಾರ್ಗೆಟ್ ನಿಗದಿ ಮಾಡಿದ್ದಕ್ಕೆ ಸಾರಿಗೆ ಸಿಬ್ಬಂದಿ ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ.