Breaking News
Home / Uncategorized / ನಾಲ್ಕು ಜಿಲ್ಲೆಗಳಿಗೆ ಸಚಿವ ಸ್ಥಾನ ಮರೀಚಿಕೆ?

ನಾಲ್ಕು ಜಿಲ್ಲೆಗಳಿಗೆ ಸಚಿವ ಸ್ಥಾನ ಮರೀಚಿಕೆ?

Spread the love

ಕಲಬುರ್ಗಿ: ಸಚಿವ ಸ್ಥಾನಕ್ಕೆ ತೀವ್ರ ಲಾಬಿ ನಡೆಸಿದ್ದ ಮೂವರೂ ಸೇರಿದಂತೆ ಕಲ್ಯಾಣ ಕರ್ನಾಟಕದ ಐವರು ಶಾಸಕರನ್ನು ಮುಖ್ಯಮಂತ್ರಿ ಬಿ.ಎಸ್‌. ಯಡಿಯೂರಪ್ಪ ಅವರು ನಿಗಮ-ಮಂಡಳಿಗೆ ನೇಮಕ ಮಾಡಿದ್ದಾರೆ. ಆ ಮೂಲಕ ಈ ಜಿಲ್ಲೆಗಳಿಗೆ ಸದ್ಯ ಸಚಿವ ಸ್ಥಾನ ದೊರೆಯುವುದಿಲ್ಲ ಎಂಬ ಸಂದೇಶವೂ ರವಾನೆಯಾದಂತಾಗಿದೆ.

ಬಳ್ಳಾರಿ ಜಿಲ್ಲೆಯ ಆನಂದ ಸಿಂಗ್‌ ಹಾಗೂ ಬೀದರ್‌ ಜಿಲ್ಲೆಯ ಏಕೈಕ ಬಿಜೆಪಿ ಶಾಸಕ ಪ್ರಭು ಚವ್ಹಾಣ್‌ ಅವರು ಸಚಿವರಾಗಿದ್ದಾರೆ. ಕಲಬುರ್ಗಿ, ಯಾದಗಿರಿ, ರಾಯಚೂರು, ಕೊಪ್ಪಳ ಜಿಲ್ಲೆಗಳಿಗೆ ಸಂಪುಟದಲ್ಲಿ ಪ್ರಾತಿನಿಧ್ಯ ದೊರೆತಿಲ್ಲ.

ಕಲಬುರ್ಗಿ ದಕ್ಷಿಣ ಕ್ಷೇತ್ರದ ಶಾಸಕ ದತ್ತಾತ್ರೇಯ ಪಾಟೀಲ ರೇವೂರ, ದೇವದುರ್ಗದ ಕೆ.ಶಿವನಗೌಡ ನಾಯಕ, ಸುರಪುರದ ರಾಜುಗೌಡ ಅವರು ಸಚಿವ ಸ್ಥಾನದ ಪ್ರಬಲ ಆಕಾಂಕ್ಷಿಗಳಾಗಿದ್ದರು. ಈ ಮೂವರೂ ಮೂರನೇ ಬಾರಿ ಶಾಸಕರಾಗಿದ್ದಾರೆ.

ಇವರಲ್ಲಿ ಶಿವನಗೌಡ ಹಾಗೂ ರಾಜುಗೌಡ ಅವರು ಸಚಿವರಾಗಿಯೂ ಕೆಲಸ ಮಾಡಿದ್ದರು. ಸರ್ಕಾರ ರಚನೆ ವೇಳೆ ರಾಜುಗೌಡ ಸಹ ಪ್ರಮುಖ ಪಾತ್ರ ವಹಿಸಿದ್ದರು.

ಯಡಿಯೂರಪ್ಪ ನೇತೃತ್ವದ ಸರ್ಕಾರಕ್ಕೆ ಒಂದು ವರ್ಷ ತುಂಬಿದೆ. ಸಂಪುಟ ಪುನಾರಚನೆಯಾಗಲಿದ್ದು, ಇವರಿಗೆ ಅವಕಾಶ ಸಿಗುವ ಸಾಧ್ಯತೆ ಇದೆ ಎಂಬ ಚರ್ಚೆ ಪಕ್ಷದ ವಲಯದಲ್ಲಿ ನಡೆದಿತ್ತು.

ಸಚಿವ ಸ್ಥಾನ ನೀಡಿದ್ದರೂ ಈ ಮೂವರಿಗೂ ಪ್ರಮುಖ ಅಂದರೆ, ರಾಜುಗೌಡರಿಗೆ ಕರ್ನಾಟಕ ನಗರ ನೀರು ಸರಬರಾಜು ಮತ್ತು ಒಳಚರಂಡಿ ಮಂಡಳಿ, ಕೆ.ಶಿವನಗೌಡ ನಾಯಕ್‌ ಅವರಿಗೆ ಕರ್ನಾಟಕ ರಸ್ತೆ ಅಭಿವೃದ್ಧಿ ನಿಗಮ ಹಾಗೂ ದತ್ತಾತ್ರೇಯ ಅವರಿಗೆ ಕಲ್ಯಾಣ ಕರ್ನಾಟಕ ಪ್ರದೇಶ ಅಭಿವೃದ್ಧಿ ಮಂಡಳಿ ಅಧ್ಯಕ್ಷ ಸ್ಥಾನ ನೀಡಿ ‘ತೃಪ್ತಿ ಪಡಿಸುವ’ ಕೆಲಸವನ್ನು ಮುಖ್ಯಮಂತ್ರಿ ಮಾಡಿದ್ದಾರೆ.

ರಾಯಚೂರು ನಗರ ಶಾಸಕ ಡಾ.ಎಸ್‌.ಶಿವರಾಜ ಪಾಟೀಲ ಅವರು ಹಿಂದಿನ ಅವಧಿಗೆ ಜೆಡಿಎಸ್‌ನಿಂದ ಆಯ್ಕೆಯಾಗಿದ್ದರು. ಅವಧಿಗೂ ಮುನ್ನವೇ ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಿ ಬಿಜೆಪಿ ಸೇರಿದ್ದರು. 2ನೇ ಅವಧಿಗೆ ಬಿಜೆಪಿಯಿಂದ ಸ್ಪರ್ಧಿಸಿ ಆಯ್ಕೆಯಾದವರು. ಅವರನ್ನು ಕರ್ನಾಟಕ ರಾಜ್ಯ ಜೈವಿಕ ಇಂಧನ ಅಭಿವೃದ್ಧಿ ಮಂಡಳಿಯ ಅಧ್ಯಕ್ಷರನ್ನಾಗಿ ನೇಮಿಸಲಾಗಿದೆ.

ಬಯಸಿದ್ದು ಒಂದು ಬಂದಿದ್ದು ಇನ್ನೊಂದು: ಕಲ್ಯಾಣ ಕರ್ನಾಟಕ ಪ್ರದೇಶ ಅಭಿವೃದ್ಧಿ ಮಂಡಳಿ (ಕೆಕೆಆರ್‌ಡಿಬಿ)ಯ ಅಧ್ಯಕ್ಷ ಸ್ಥಾನಕ್ಕೆ ತಮ್ಮನ್ನು ನೇಮಿಸಬೇಕು ಎಂದು ಕಲಬುರ್ಗಿ ಜಿಲ್ಲೆ ಸೇಡಂ ಶಾಸಕ ರಾಜಕುಮಾರ ಪಾಟೀಲ ತೇಲ್ಕೂರ ಲಾಬಿ ನಡೆಸಿದ್ದರು. ಅಷ್ಟೇ ಅಲ್ಲ, ಈ ಭಾಗದ ಬಿಜೆಪಿ ಶಾಸಕರು ಒಂದೇ ಪತ್ರದಲ್ಲಿ ಸಹಿ ಹಾಕುವ ಮೂಲಕ ರಾಜಕುಮಾರ ಅವರ ಹೆಸರನ್ನೇ ಮುಖ್ಯಮಂತ್ರಿ ಅವರಿಗೆ ಶಿಫಾರಸು ಮಾಡಿದ್ದರು. ಆದರೆ, ಆ ಕಡತಕ್ಕೆ ಮುಖ್ಯಮಂತ್ರಿ ಸಹಿ ಹಾಕಿರಲಿಲ್ಲ. ‘ಭಿನ್ನರೊಡನೆಯ ಒಡನಾಟ’ದಿಂದ ಮುಖ್ಯಮಂತ್ರಿ ಇವರ ಮೇಲೆ ಮುನಿಸಿಕೊಂಡಿದ್ದಾರೆ ಎಂದೇ ವ್ಯಾಖ್ಯಾನಿಸಲಾಗುತ್ತಿತ್ತು. ರಾಜಕುಮಾರ ಅವರನ್ನು ಈಶಾನ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆಯ ಅಧ್ಯಕ್ಷ ಸ್ಥಾನಕ್ಕೆ ನೇಮಿಸಲಾಗಿದ್ದು, ಅವರು ಬಯಸಿದ ಮಂಡಳಿಯೂ ಕೈತಪ್ಪಿದೆ.

‘ಕೆಕೆಆರ್‌ಡಿಬಿಗೆ ವಾರ್ಷಿಕ ₹ 1500 ಕೋಟಿ ಅನುದಾನ ಮೀಸಲಿಡಲಾಗಿದೆ. ಕೆಲ ಸಚಿವರ ಖಾತೆಗಳಿಗೂ ಇಷ್ಟೊಂದು ಅನುದಾನ ಇಲ್ಲ. ಹೀಗಾಗಿ ಕಲ್ಯಾಣ ಕರ್ನಾಟಕ ಪಾಲಿಗೆ ಅತ್ಯಂತ ಪ್ರಮುಖವಾಗಿರುವ ಈ ಮಂಡಳಿಗೆ ಹಿರಿತನದ ಆಧಾರದ ಮೇಲೆ ದತ್ತಾತ್ರೇಯ ಪಾಟೀಲ ರೇವೂರ ಅವನ್ನು ನೇಮಿಸಲಾಗಿದೆ’ ಎನ್ನುವುದು ಅವರ ಬೆಂಬಲಿಗರು ಹೇಳುವ ಮಾತು.

ಕೊಟ್ಟು ಕಿತ್ತುಕೊಂಡರು: 2ನೇ ಬಾರಿ ಶಾಸಕರಾಗಿರುವ ಕೊಪ್ಪಳ ಜಿಲ್ಲೆ ಗಂಗಾವತಿಯ ಪರಣ್ಣ ಮುನವಳ್ಳಿ ಅವರನ್ನು ಕರ್ನಾಟಕ ರಾಜ್ಯ ಹಣಕಾಸು ಸಂಸ್ಥೆಗೆ ಹಾಗೂ ಮೊದಲ ಬಾರಿ ಆಯ್ಕೆಯಾಗಿರುವ ಕನಕಗಿರಿ ಶಾಸಕ ಬಸವರಾಜ ದಢೇಸೂರ್‌ ಅವರನ್ನು ಕರ್ನಾಟಕ ರಾಜ್ಯ ಸಮಾಜ ಕಲ್ಯಾಣ ಮಂಡಳಿಗೆ ಅಧ್ಯಕ್ಷರನ್ನಾಗಿ ನೇಮಿಸಿ ಬೆಳಿಗ್ಗೆ ಹೊರಡಿಸಿದ್ದ ಆದೇಶವನ್ನು ಮುಖ್ಯಮಂತ್ರಿ ಸಂಜೆ ವಾಪಸ್‌ ಪಡೆದಿದ್ದಾರೆ.

ಮಸ್ಕಿ ಮತ್ತು ಸಚಿವ ಸ್ಥಾನ
ರಾಯಚೂರು ಜಿಲ್ಲೆ ಮಸ್ಕಿಯ ಶಾಸಕರಾಗಿದ್ದ ಪ್ರತಾಪ‌ಗೌಡ ಪಾಟೀಲ ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಿ ಸರ್ಕಾರ ರಚನೆಗೆ ನೆರವಾಗಿದ್ದರು. ಆ ಕ್ಷೇತ್ರದ ಪರಾಜಿತ ಅಭ್ಯರ್ಥಿ ಹೂಡಿದ್ದ ದಾವೆ ವಾಪಸ್‌ ಪಡೆಯುವುದಾಗಿ ಹೈಕೋರ್ಟ್‌ಗೆ ಅರ್ಜಿ ಸಲ್ಲಿಸಿದ್ದರೂ ಪ್ರಕರಣ ಇನ್ನೂ ಇತ್ಯರ್ಥವಾಗಿಲ್ಲ. ಹೀಗಾಗಿ ಆ ಕ್ಷೇತ್ರಕ್ಕೆ ಉಪ ಚುನಾವಣೆ ನಡೆದಿಲ್ಲ. ಆ ಕ್ಷೇತ್ರಕ್ಕೆ ಉಪ ಚುನಾವಣೆ ನಡೆದು, ಅದರಲ್ಲಿ ಪ್ರತಾಪಗೌಡ ಆಯ್ಕೆಯಾದರೆ ಅವರಿಗೆ ಸಚಿವ ಸ್ಥಾನ ಒಲಿಯಬಹುದು. ಅಲ್ಲಿಯವರೆಗೂ ಈ ನಾಲ್ಕು ಜಿಲ್ಲೆಗಳವರಿಗೆ ಸಚಿವ ಸ್ಥಾನ ಎಂಬುದು ಮರೀಚಿಕೆಯೇ ಎಂಬುದು ಬಿಜೆಪಿ ವಲಯದಲ್ಲಿ ಕೇಳಿಬರುತ್ತಿರುವ ಮಾತು.

ವರ್ಷದ ನಂತರ ಭರ್ತಿ
ಕಲ್ಯಾಣ ಕರ್ನಾಟಕ ಪ್ರದೇಶ ಅಭಿವೃದ್ಧಿ ಮಂಡಳಿಗೆ ಈ ಭಾಗದ ಜಿಲ್ಲೆಗಳ ಉಸ್ತುವಾರಿ ಸಚಿವರು ಅಧ್ಯಕ್ಷರಾಗಬೇಕು ಎಂಬ ನಿಯಮ ಇತ್ತು. ಬಿಜೆಪಿ ಸರ್ಕಾರ, ‘ಈ ಭಾಗದ ಶಾಸಕರು ಅಥವಾ ವಿಧಾನ ಪರಿಷತ್‌ ಸದಸ್ಯರು ಅಧ್ಯಕ್ಷರಾಗಬಹುದು’ ಎಂದು ನಿಯಮ ಬದಲಿಸಿತು. ‘ಅಭಿವೃದ್ಧಿಗೆ ಹಿನ್ನೆಡೆ ಆಗುತ್ತಿದೆ, ಅಧ್ಯಕ್ಷರನ್ನು ನೇಮಿಸಿ’ ಎಂಬ ಕೂಗಿಗೆ ವರ್ಷದ ನಂತರ ಸರ್ಕಾರ ಸ್ಪಂದಿಸಿದೆ.


Spread the love

About Laxminews 24x7

Check Also

3ನೇ ಬಾರಿ ಬಿಜೆಪಿ ಅಧಿಕಾರಕ್ಕೆ ಬಂದ್ರೆ ಅಲ್ಪಸಂಖ್ಯಾತರನ್ನು ಮುಗಿಸುತ್ತಾರೆ: ಸಚಿವ ಜಮೀರ್ ಅಹ್ಮದ್‌

Spread the loveಇದು ದೇಶ ಬಚಾವ್ ಎಲೆಕ್ಷನ್. ಬಿಜೆಪಿ ಒಳಗೆ ಒಂದು ರೋಗ ಇದೆ, ಬಿಜೆಪಿ ಎಂದರೆ ಕ್ಯಾನ್ಸರ್ ಇದ್ದಂತೆ. …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ