ಒಗ್ಗಟ್ಟಿನಿಂದ ಹೋರಾಡಲು KAS ನೊಂದ ಅಭ್ಯರ್ಥಿಗಳ ನಿರ್ಧಾರ; ಜ.12 ಕ್ಕೆ ಪತ್ರಿಕಾಗೋಷ್ಠಿ…!!
ಕೆಎಎಸ್ ಹುದ್ದೆಗಳ ಆಯ್ಕೆ ಪಟ್ಟಿಯಲ್ಲಿ ವ್ಯಾಪಕ ಅಕ್ರಮ ಎಸಗಲಾಗಿದೆ ಎಂಬ ಗಂಭೀರ ಆರೋಪ ಕೇಳಿಬಂದಿದ್ದರಿಂದ ಇಡೀ ನೇಮಕಾತಿಯನ್ನು ನ್ಯಾಯಾಂಗ ತನಿಖೆಗೆ ಮತ್ತು ಮರು ಮೌಲ್ಯಮಾಪನಕ್ಕೆ ಆಗ್ರಹಿಸಿ ಎಲ್ಲ ನೊಂದ ಅಭ್ಯರ್ಥಿಗಳು ಒಗ್ಗಟ್ಟಿನಿಂದ ಹೋರಾಟ ನಡೆಸಲು ಜನೇವರಿ 12 ರಂದು ಬೆಳಗಾವಿ ನಗರದ ಹೃದಯಭಾಗದಲ್ಲಿರುವ ಕನ್ನಡ ಸಾಹಿತ್ಯ ಭವನದಲ್ಲಿ ಪತ್ರಿಕಾಗೋಷ್ಠಿ ಆಯೋಜಿಸಲು ನಿರ್ಧರಿಸಿದರು.
ಕೆಎಎಸ್ ತಾತ್ಕಾಲಿಕ ಆಯ್ಕೆ ಪಟ್ಟಿಯಿಂದ ಹೊರಗುಳಿದ ಬೆಳಗಾವಿ ಜಿಲ್ಲೆಯಲ್ಲಿರುವ ನೊಂದ ಪ್ರತಿಭಾವಂತ ಅಭ್ಯರ್ಥಿಗಳಿಗೆ ನ್ಯಾಯ ದೊರಕಿಸಿಕೊಡುವ ಉದ್ದೇಶದಿಂದ ಅಖಿಲ ಭಾರತ ಮಾನವ ಹಕ್ಕುಗಳ ಸಂಘಟನೆ ವತಿಯಿಂದ ನೊಂದ ಅಭ್ಯರ್ಥಿಗಳ ಅಭಿಪ್ರಾಯ ಸಂಗ್ರಹಿಸಲು ಸಭೆ ಆಯೋಜಿಸಲಾಗಿತ್ತು.ಈ ಸಭೆಗೆ 20 ಕ್ಕೂ ಹೆಚ್ಚು ಅಭ್ಯರ್ಥಿಗಳು ಭಾಗವಹಿಸಿದ್ದರು. ಹಾಗೂ 100 ಕ್ಕೂ ಹೆಚ್ಚು ಅಭ್ಯರ್ಥಿಗಳು ಪೋನ್ ಕರೆ ಮೂಲಕ ತಮ್ಮ ಅಭಿಪ್ರಾಯ ಹಾಗೂ ಬೆಂಬಲ ವ್ಯಕ್ತಪಡಿಸಿದರು.
ಸಭೆಯಲ್ಲಿ ಭಾಗವಹಿಸಿದ್ದ ನೊಂದ ಅಭ್ಯರ್ಥಿಗಳು ಒಬ್ಬೊಬ್ಬರಾಗಿ ತಮ್ಮ ಅಳಲನ್ನು ತೊಡಿಕೊಂಡರು. ಹಾಗೂ 30 ಅಭ್ಯರ್ಥಿಗಳು ಪರೀಕ್ಷಾ ನಿಯಮ ಉಲ್ಲಂಘಿಸಿ ಕೆಎಟಿ ಮೆಟ್ಟಿಲೇರಿ ವ್ಯಕ್ತಿತ್ವ ಪರೀಕ್ಷೆಗೆ ಅರ್ಹತೆ ಪಡೆದಿದ್ದರಿಂದ ಕೆಎಟಿ ಆದೇಶದ ವಿರುದ್ಧ ಕೆಪಿಎಸ್ ಸಿ ಹೈಕೋರ್ಟ್ ಗೆ ಅರ್ಜಿ ಸಲ್ಲಿಸದಿರುವುದು, ಮೌಲ್ಯಮಾಪಕರಿಗೆ ಕೆಪಿಎಸ್ ಸಿ ಪರೀಕ್ಷಾ ವಿಭಾಗವೇ ಪಾಸ್ವರ್ಡ್ ಒದಗಿಸಿರುವ ಬಗ್ಗೆ ಮಾಹಿತಿ ಕೇಳಿ ಬಂದಿದ್ದು,ತಾತ್ಕಾಲಿಕ ಪಟ್ಟಿಯಲ್ಲಿ ಒಂದೆರಡು ಸಮುದಾಯಗಳ 150 ಅಭ್ಯರ್ಥಿಗಳು ಆಯ್ಕೆಯಾಗಿರುವುದು, ಮೌಲ್ಯಮಾಪನದಲ್ಲಿ ಮಾನವಶಾಸ್ತ್ರ ವಿಷಯಕ್ಕೆ ಹೆಚ್ಚು ಒತ್ತು ಕೊಟ್ಟಿದ್ದು,ಕನ್ನಡ ಸಾಹಿತ್ಯಕ್ಕೆ ಕಡೆಗಣಿಸಿದ್ದು, ಡಿಜಿಟಲ್ ಮೌಲ್ಯಮಾಪನ ನಡೆಸಿದ್ರು ಫಲಿತಾಂಶಕ್ಕೆ ವಿಳಂಬ ಮಾಡಿರುವುದು ಸೇರಿದಂತೆ ಅನೇಕ ವಿಷಯಗಳು ಅನುಮಾನಕ್ಕೆ ಎಡೆಮಾಡಿಕೊಟ್ಟಿವೆ.
ಇದರಿಂದ ಕೆ.ಎ.ಎಸ್ ಹುದ್ದೆಗಳ ನೇಮಕದಲ್ಲಿ ಆಕ್ರಮ ನಡೆದಿದೆ ಎಂಬ ಸಂಶಯ ಹುಟ್ಟುಹಾಕಿರುವುದರಿಂದ ಸರ್ಕಾರ ಕೂಡಲೇ ಈ ಬಗ್ಗೆ ನ್ಯಾಯಾಂಗ ತನಿಖೆ ನಡೆಸಬೇಕು ಎಂದು ನೊಂದ ಅಭ್ಯರ್ಥಿಗಳು ಆಗ್ರಹಿಸಿದರು.ಹಾಗೂ ಅಭ್ಯರ್ಥಿಗಳು ಪರೀಕ್ಷೆ ಬರೆದ ವಿಷಯಗಳ ಅಂಕಗಳನ್ನು ಪ್ರತ್ಯೇಕ, ಪ್ರತ್ಯೇಕವಾಗಿ ಒದಗಿಸಬೇಕು,ಎಲ್ಲಿಯೂ ಕೂಡ ಯಶಸ್ವಿಯಾಗದ ಡಿಜಿಟಲ್ ಮೌಲ್ಯಮಾಪನ ರದ್ದುಮಾಡಬೇಕು,ಅಂತಿಮ ಆಯ್ಕೆ ಪಟ್ಟಿಯನ್ನು ತರಾತುರಿಯಲ್ಲಿ ಪ್ರಕಟಿಸದೆ ಮರು ಮೌಲ್ಯಮಾಪನ ನಡೆಸಬೇಕು ಎಂದು ಕೆಪಿಎಸ್ ಸಿ ಗೆ ಒತ್ತಾಯಿಸಿದರು.
ಎಲ್ಲ ಅಭ್ಯರ್ಥಿಗಳ ಅಭಿಪ್ರಾಯ ಸಂಗ್ರಹಿಸಿದ ನಂತರ ಮರು ಮೌಲ್ಯಮಾಪನಕ್ಕೆ ಆಗ್ರಹಿಸಿ ಮುಖ್ಯಮಂತ್ರಿಗಳಿಗೆ ಮನವಿ ನೀಡುವ ಬಗ್ಗೆ ಹಾಗೂ ಕಾನೂನಾತ್ಮಕ ಹೋರಾಟದ ಬಗ್ಗೆ ಗಂಭೀರವಾಗಿ ಚರ್ಚಿಸಲಾಯಿತು. ಆದರೆ ಅದಕ್ಕೂ ಮುಂಚೆ ಜನೇವರಿ 12 ರಂದು ಬೆಳಗಾವಿಯ ಚೆನ್ನಮ್ಮ ವೃತದ ಪಕ್ಕದಲ್ಲಿರುವ ಕನ್ನಡ ಸಾಹಿತ್ಯ ಭವನದಲ್ಲಿ ಸುದ್ದಿಗೋಷ್ಟಿ ನಡೆಸುವ ಬಗ್ಗೆ ನಿರ್ಧಾರ ಕೈಗೊಳ್ಳಲಾಯಿತು.
ಈ ಸಂದರ್ಭದಲ್ಲಿ ಮಾತನಾಡಿದ ಅಖಿಲ ಭಾರತೀಯ ಮಾನವ ಹಕ್ಕುಗಳ ಸಂಘಟನೆಯ ಮುಖಂಡರು ರಾಜ್ಯದ ವಿವಿಧ ಭಾಗಗಳಿಂದ ನೊಂದ ನೂರಾರು ಅಭ್ಯರ್ಥಿಗಳು ತಮ್ಮ ಅಳಲನ್ನು ತೊಡಿಕೊಂಡಿದ್ದರಿಂದ ಅನ್ಯಾಯಕ್ಕೆ ಒಳಗಾದವರಿಗೆ ನ್ಯಾಯ ದೊರಕಿಸಿ ಕೊಡುವ ಉದ್ದೇಶದಿಂದ ಬರುವ ಭಾನುವಾರ ದಂದು ಪತ್ರಿಕಾಗೋಷ್ಠಿ ಆಯೋಜಿಸಲಾಗಿದೆ.ಆದ್ದರಿಂದ ಈ ಪತ್ರಿಕಾಗೋಷ್ಠಿಗೆ ಕೆಎಎಸ್ ತಾತ್ಕಾಲಿಕ ಆಯ್ಕೆ ಪಟ್ಟಿಯಿಂದ ಹೊರಗುಳಿದ ನೊಂದ ಅಭ್ಯರ್ಥಿಗಳು ಭಾಗವಹಿಸಬೇಕೆಂದು ಮನವಿ ಮಾಡಿಕೊಂಡರು.
ಹೆಚ್ಚಿನ ಮಾಹಿತಿಗಾಗಿ ಈ ಕೆಳಗಿನ ಮೊಬೈಲ್ ಸಂಖ್ಯೆಗೆ ಸಂಪರ್ಕಿಸಿ: ಮೊ.9686616555,