ಚಿಕ್ಕಬಳ್ಳಾಪುರ: ಕೊರೊನಾದಿಂದ ರಾಜ್ಯ ಸರ್ಕಾರಕ್ಕೆ ಹಣಕಾಸಿನ ಸಮಸ್ಯೆ ಎದುರಾಗಿದೆ. ಸರ್ಕಾರಿ ಅಧಿಕಾರಿ ಹಾಗೂ ಸಿಬ್ಬಂದಿಗೆ ಸಂಬಳ ನೀಡಲು ಯೋಚನೆ ಮಾಡಬೇಕಾದ ಪರಿಸ್ಥಿತಿ ಇದೆ ಎಂದು ಪಂಚಾಯತ್ ರಾಜ್ ಹಾಗೂ ಗ್ರಾಮೀಣಾಭಿವೃದ್ದಿ ಸಚಿವ ಕೆ.ಎಸ್.ಈಶ್ವರಪ್ಪ ಹೇಳಿದ್ದಾರೆ.
ನಗರದ ಜಿಲ್ಲಾ ಪಂಚಾಯತ್ ಸಭಾಂಗಣದಲ್ಲಿ ಅಧಿಕಾರಿಗಳೊಂದಿಗೆ ಕುಡಿಯುವ ನೀರಿನ ಬಗ್ಗೆ ಸಭೆ ನಡೆಸಿ ಮಾತನಾಡುತ್ತಿದ್ದ ಸಚಿವವರು, ಸಭೆ ನಡುವೆ ಕೊರೊನಾದಿಂದ ಸರ್ಕಾರಿ ಅಧಿಕಾರಿಗಳಿಗೆ, ಸಿಬ್ಬಂದಿಗೆ ಸಂಬಳ ಕೊಡೋಕೆ ಯೋಚನೆ ಮಾಡಬೇಕಾದ ಪರಿಸ್ಥಿತಿ ಇದೆ. ಒಂದು ಕಡೆ ನಾವು ಜನರನ್ನು ಮನೆಯಲ್ಲಿರುವಂತೆ ಮನವಿ ಮಾಡುತ್ತೇವೆ. ಅಧಿಕಾರಿಗಳನ್ನು ಮನೆಯಲ್ಲೇ ಇರುವಂತೆ ಹೇಳುತ್ತೇವೆ. ಮತ್ತೊದೆಡೆ ಹಣಕಾಸಿನ ಸಮಸ್ಯೆ ಇದೆ. ಯಾವುದೇ ಹಳ್ಳಿಗಳಿಗೂ ಹೋದರೂ ದಾನ ಧರ್ಮ ಮಾಡುವವರ ಸಂಖ್ಯೆ ಬಹಳ ಇದೆ. ನಮ್ಮ ಸಂಸ್ಕೃತಿಯೇ ನಮ್ಮನ್ನ ಉಳಿಸುತ್ತಿದೆ. ಅಕ್ಕಿಯನ್ನು ಇಲ್ಲ ಅಂತಿದ್ದವರು ಈಗ ಮನೆಯಲ್ಲಿ ಸ್ಟಾಕ್ ಮಾಡಿಕೊಂಡಿದ್ದಾರೆ. ಬಡವರಿಗೆಲ್ಲರಿಗೂ ಸರ್ಕಾರ ಸ್ಪಂದಿಸುತ್ತಿದೆ ಎಂದರು.
ಸಭೆಯಲ್ಲಿ ಜಿಲ್ಲಾ ಪಂಚಾಯತಿ ಸದಸ್ಯರು ಕುಡಿಯುವ ನೀರು ಪೂರೈಕೆಯ ಟ್ಯಾಂಕರ್ ಗಳ ಹಣ ಸೇರಿದಂತೆ ಕೆಲ ಯೋಜನೆಗಳ ಹಣ ಇನ್ನೂ ಬಿಡುಗಡೆಯಾಗಬೇಕಿದೆ ಎಂದು ಸಚಿವರ ಗಮನಕ್ಕೆ ತಂದರು. ಈ ಬಗ್ಗೆ ಮಾತನಾಡಿದ ಈಶ್ವರಪ್ಪ, ಸರ್ಕಾರದಲ್ಲಿ ಹಣಕಾಸಿನ ಸಮಸ್ಯೆಯಿದೆ. ಹಲವು ಯೋಜನೆಗಳಿಗೆ ಸಕಾಲಕ್ಕೆ ಹಣ ಬಿಡುಗಡೆಯಾಗಿಲ್ಲ. ಸರ್ಕಾರದಲ್ಲಿ ಹಣ ಇದ್ದಿದ್ದರೇ ಒಂದು ವಾರದೊಳಗೆ ಹಣ ಬಿಡುಗಡೆ ಮಾಡಿಕೊಡಿಸುತ್ತಿದೆ. ಆದರೆ ಈಗ ಆ ರೀತಿ ಮಾಡಲು ಆಗುತ್ತಿಲ್ಲ. ಆದರೂ ಕೇಂದ್ರ ಸರ್ಕಾರದಿಂದ ಈ ಬಾರಿ ಒಂದೇ ಕಂತಿನಲ್ಲಿ ಮೊದಲ ಬಾರಿಗೆ 1,861 ಕೋಟಿ ನರೇಗಾ ಹಣ ಬಿಡುಗಡೆಯಾಗಿದೆ. ಹೀಗಾಗಿ ಬಂದ ಹಣವನ್ನು ನಿಮಗೆ ಕೊಡುತ್ತೇವೆ. ಇನ್ನೂ ಇಲ್ಲ ಅಂದಾಗಲೂ ನಿಮಗೆ ಹೇಳಬೇಕಲ್ವಾ ಎಂದು ಹೇಳುತ್ತಿರುವುದಾಗಿ ತಿಳಿಸಿದರು. ನಂತರ ಇದೇ ಮಾತಿಗೆ ಸಂಬಂಧಿಸಿದಂತೆ ಮಾಧ್ಯಮಗಳಿಗೆ ಪ್ರತಿಕ್ರಿಯಿಸಿ, ಆರ್ಥಿಕ ಸಮಸ್ಯೆ ಇರೋದು ನಿಜವಾದ್ರೂ, ಸರ್ಕಾರ ಈ ಸಮಸ್ಯೆಯನ್ನ ಬಗೆಹರಿಸುತ್ತೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.