ಹಾವೇರಿ: ದೇಶ ಹಾಗೂ ರಾಜ್ಯದಲ್ಲಿ ದಿನದಿಂದ ದಿನಕ್ಕೆ ಕೊರೊನಾ ಪ್ರಕರಣಗಳು ಹೆಚ್ಚುತ್ತಿವೆ. ಹೀಗಾಗಿ ಈಗಾಗಲೇ ಅನೇಕರು ಕೊರೊನಾ ಪರಿಹಾರ ನಿಧಿಗೆ ದೇಣಿಗೆ ನೀಡುವ ಮೂಲಕ ಸಹಾಯ ಮಾಡಿದ್ದಾರೆ. ಇದೀಗ ಜಿಲ್ಲೆಯ ಮೂರು ವಿದ್ಯಾರ್ಥಿಗಳು ತಾವು ಕೂಡಿಟ್ಟುಕೊಂಡಿದ್ದ ಹುಂಡಿ ಹಣವನ್ನ ಸಿಎಂ ಪರಿಹಾರ ನಿಧಿಗೆ ದೇಣಿಗೆಯಾಗಿ ನೀಡಿದ್ದಾರೆ.
7 ವರ್ಷದ ಅವನಿ, 6 ವರ್ಷದ ಸನ್ನಿಧಿ ಹಾಗೂ 7 ವರ್ಷದ ದೀಪ್ತಿ ಹುಂಡಿ ಹಣವನ್ನು ನೀಡಿದ್ದಾರೆ. ಮೂವರು ವಿದ್ಯಾರ್ಥಿಗಳು ಹಾವೇರಿ ಜಿಲ್ಲಾಧಿಕಾರಿ ಕೃಷ್ಣ ಬಾಜಪೇಯಿ ಕಚೇರಿಗೆ ತೆರಳಿ, ಮೂವರು ಸೇರಿ 25 ಸಾವಿರ ರೂಪಾಯಿ ಹಣವನ್ನ ಡಿಡಿ ಮೂಲಕ ಸಿಎಂ ಪರಿಹಾರ ನಿಧಿಗೆ ಹಸ್ತಾಂತರ ಮಾಡಿದರು.
ಮನೆಯಲ್ಲಿ ಪೋಷಕರು ನೀಡಿದ ಹಣವನ್ನ ಮೂರು ವರ್ಷದಿಂದ ಹುಂಡಿಯಲ್ಲಿ ಕೂಡಿಟ್ಟ ಹಣವನ್ನ ದೇಣಿಗೆ ನೀಡಿದ್ದಾರೆ. ಅಲ್ಲದೇ ಸಾಮಾಜಿಕ ಅಂತರವನ್ನ ಕಾಯ್ದುಕೊಂಡು ಶೇಕ್ ಹ್ಯಾಂಡ್ ಮಾಡದೆ, ಕೈ ಮುಗಿದು ಅಭಿನಂದನೆ ಸಲ್ಲಿಸಿದರು. ಎಲ್ಲರೂ ಮನೆಯಲ್ಲಿ ಇರಿ, ಎಲ್ಲರೂ ಸುರಕ್ಷಿತೆಯಿಂದ ಇರಬೇಕು. ಅನಗತ್ಯವಾಗಿ ಹೊರಗೆ ಹೋಗಬೇಡಿ ಎಂದು ಪುಟಾಣಿ ಮಕ್ಕಳು ಮನವಿ ಮಾಡಿಕೊಂಡರು.