Breaking News
Home / new delhi / ಬಿಟ್ಟು ಬ್ಯಾಸರಲೇ ಕೇಂದ್ರ ತಂಡದ ಅಧ್ಯಯನ : ವರದಿಯಿಂದ ರೈತರ ಕಣ್ಣೀರು ಒರಸತ್ತಾ ಮೂಲೆಗೆ ಸೇರುತ್ತಾ?

ಬಿಟ್ಟು ಬ್ಯಾಸರಲೇ ಕೇಂದ್ರ ತಂಡದ ಅಧ್ಯಯನ : ವರದಿಯಿಂದ ರೈತರ ಕಣ್ಣೀರು ಒರಸತ್ತಾ ಮೂಲೆಗೆ ಸೇರುತ್ತಾ?

Spread the love

ಹುಬ್ಬಳ್ಳಿ; ಆಗಸ್ಟ್​ನಿಂದ ಈವರೆಗೆ ಸುರಿದ ಭಾರಿ ಮಳೆಯಿಂದ ಜಿಲ್ಲೆಯಲ್ಲಿ ಅತಿವೃಷ್ಟಿ ಹಾಗೂ ಪ್ರವಾಹ ಉಂಟಾಗಿ ಹಾನಿಗೀಡಾದ ತಾಲೂಕಿನ ವಿವಿಧ ಪ್ರದೇಶಗಳಿಗೆ ಕೇಂದ್ರ ಅಧ್ಯಯನ ತಂಡ ನಿನ್ನೆ ಭೇಟಿ ನೀಡಿ ಪರಿಶೀಲಿಸಿತು. ತಾಲೂಕಿನ 2 ಹಳ್ಳಿಗೆ ಭೇಟಿ ನೀಡಿದ ತಂಡದ ಅಧಿಕಾರಿಗಳು, ಹಾನಿ ಪಟ್ಟಿಯಲ್ಲಿದ್ದ ರೈತರ ಜಮೀನಿಗೆ ಭೇಟಿ ನೀಡದೆ ರೈತನೊಬ್ಬನನ್ನು ತಾವಿದ್ದಲ್ಲೇ ಕರೆಸಿಕೊಂಡರು. ಕಾಲು ದಾರಿಯಲ್ಲಿ ನೀರಿದೆ ಎಂದು ರೈತ ಮಹಿಳೆಯನ್ನು ತಮ್ಮ ಹತ್ತಿರ ಕರೆಸಿಕೊಂಡಿದ್ದು ಕಾಟಾಚಾರದ ಅಧ್ಯಯನಕ್ಕೆ ಹಿಡಿದ ಕನ್ನಡಿಯಂತಿತ್ತು.
ಕೇಂದ್ರ ಕೃಷಿ ಹಾಗೂ ರೈತರ ಸಹಕಾರ ಮಾರುಕಟ್ಟೆ ಮಂತ್ರಾಲಯದ ಎಣ್ಣೆ ಬೀಜ ಅಭಿವೃದ್ಧಿ ನಿರ್ದೇಶನಾಲಯದ ನಿರ್ದೇಶಕ ಡಾ. ಮನೋಹರನ್ ಹಾಗೂ ಕೇಂದ್ರ ಜಲಶಕ್ತಿ ಮಂತ್ರಾಲಯದ ಅಧೀಕ್ಷಕ ಇಂಜಿನಿಯರ್ ಗುರುಪ್ರಸಾದ್ ಜೆ. ಅವರನ್ನೊಳಗೊಂಡ ತಂಡ ಬೆಳಗಾವಿಯಿಂದ ಆಗಮಿಸಿತು.

ತಾಲೂಕಿನ ಹಾರೋಬೆಳವಡಿ ಗ್ರಾಮದ ಬಳಿ ಸವದತ್ತಿ- ಧಾರವಾಡ ರಾಜ್ಯ ಹೆದ್ದಾರಿಯಲ್ಲಿರುವ ಸೇತುವೆ ಬಳಿ ಜಿಲ್ಲಾಧಿಕಾರಿ ನಿತೇಶ್ ಪಾಟೀಲ ಅವರು, ಅಧಿಕಾರಿಗಳನ್ನು ಬರಮಾಡಿಕೊಂಡರು. ಧಾರವಾಡ ಶಾಸಕ ಅಮೃತ ದೇಸಾಯಿ, ಸವದತ್ತಿ ಶಾಸಕ ಆನಂದ ಮಾಮನಿ, ಬೆಳಗಾವಿ ಜಿಲ್ಲಾಧಿಕಾರಿ ಎಂ.ಜಿ. ಹಿರೇಮಠ, ಇತರರು ಸೇತುವೆ ಹಾನಿಯಿಂದ ಸ್ಥಳೀಯರು ಎದುರಿಸುತ್ತಿರುವ ಸಂಕಷ್ಟಗಳನ್ನು ವಿವರಿಸಿದರು.
2019ರ ಆಗಸ್ಟ್​ನಲ್ಲಿ ಮಳೆಯಿಂದಾದ ಅತಿವೃಷ್ಟಿಯಿಂದ ಸೇತುವೆ ಕಿತ್ತು ಹೋಗಿದೆ. ಸೇತುವೆ ಧಾರವಾಡ ತಾಲೂಕಿನ ಗಡಿಯಾಚೆ ಇರುವುದರಿಂದ ಅದನ್ನು ಬೆಳಗಾವಿ ಜಿಲ್ಲಾ ಲೋಕೋಪಯೋಗಿ ಇಲಾಖೆಯಿಂದ ಮರುನಿರ್ವಿುಸಲಾಗುತ್ತಿದೆ. ಧಾರವಾಡದಿಂದ ಸವದತ್ತಿ ಮಾರ್ಗವಾಗಿ ವಿವಿಧ ಜಿಲ್ಲೆಗಳನ್ನು ಸಂರ್ಪಸುವ ರಸ್ತೆಗೆ ಪರ್ಯಾಯವಾಗಿ ಪಕ್ಕದಲ್ಲಿ ಕಚ್ಚಾ ರಸ್ತೆ ನಿರ್ವಿುಸಲಾಗಿದೆ. ಕೆಲ ದಿನಗಳಿಂದ ಸುರಿಯುತ್ತಿರುವ ಮಳೆಯಿಂದ ರಸ್ತೆ ಸಂಪರ್ಕ ಕಡಿತಗೊಂಡಿತ್ತು. ವಾಹನಗಳ ಸಂಚಾರಕ್ಕೆ ಬದಲಿ ಮಾರ್ಗದ ವ್ಯವಸ್ಥೆ ಮಾಡಲಾಗಿದೆ ಎಂದು ಅಧಿ
ಕಾರಿಗಳು ತಿಳಿಸಿದರು.
ಅಧಿಕಾರಿಗಳ ತಂಡ ತುಪ್ಪರಿ ಹಳ್ಳ ವ್ಯಾಪ್ತಿಯಲ್ಲಿ ಬರುವ ಹಾರೋಬೆಳವಡಿ ಗ್ರಾಮದ ರೈತ ಈಶ್ವರ ಶಿವಳ್ಳಿ ಅವರ ಜಮೀನಿಗೆ ತೆರಳಿ ಮಳೆಯಿಂದ ನಾಶವಾದ ಈರುಳ್ಳಿ ಬೆಳೆಯನ್ನು ಪರಿಶೀಲಿಸಿತು. 5 ಎಕರೆ ಜಮೀನಿನಲ್ಲಿ ಬೆಳೆದ ಈರುಳ್ಳಿ ಬೆಳೆ ಸುಮಾರು 3 ತಿಂಗಳಾದರೂ ಗಡ್ಡೆ ಕಟ್ಟಿಲ್ಲ. ಜಮೀನಿಗೆ ನೀರು ನುಗ್ಗಿ ಬೆಳೆ ಹಾಳಾಗಿದೆ. ಲಕ್ಷಾಂತರ ರೂ. ಹಾನಿಯಾಗಿದೆ ಎಂದು ಅಧಿಕಾರಿಗಳಿಗೆ ರೈತ ಶಿವಳ್ಳಿ ಮಾಹಿತಿ ನೀಡಿದರು.
ನಂತರ ತಂಡ ಅಮ್ಮಿನಭಾವಿ ಗ್ರಾಮ ವ್ಯಾಪ್ತಿಯ ಅನ್ವರ್​ಸಾಬ ನೂರ್​ಅಹ್ಮದ್ ಶೇಖ್ ಎಂಬುವರ ಜಮೀನಿನಲ್ಲಿಯ ಹೆಸರು, ಉದ್ದಿನ ಬೆಳೆಯನ್ನು ವೀಕ್ಷಿಸಿತು. ಅತಿಯಾದ ಮಳೆಯಿಂದ ಜಮೀನಿನಲ್ಲಿ ನೀರು ನಿಂತು ಬೆಳೆ ಹಾನಿಯಾಗಿದೆ. ಕೈಗೆ ಬಂದ ಹೆಸರು, ಉದ್ದು ಬೆಳೆಯನ್ನು ಕಟಾವು ಮಾಡಲೂ ಮಳೆ ಬಿಡುವು ನೀಡಲಿಲ್ಲ ಎಂದು ರೈತ ಅನ್ವರ್​ಸಾಬ ಅಲವತ್ತುಕೊಂಡರು.
ಜಿ.ಪಂ. ಅಧ್ಯಕ್ಷೆ ವಿಜಯಲಕ್ಷ್ಮೀ ಪಾಟೀಲ, ಉಪ ವಿಭಾಗಾಧಿಕಾರಿ ಡಾ. ಗೋಪಾಲಕೃಷ್ಣ, ಜಂಟಿ ಕೃಷಿ ನಿರ್ದೇಶಕ ರಾಜಶೇಖರ ಬಿಜಾಪುರ, ಪಂಚಾಯತ್​ರಾಜ್ ಇಂಜಿನಿಯರಿಂಗ್ ವಿಭಾಗದ ಕಾರ್ಯನಿರ್ವಾಹಕ ಇಂಜಿನಿಯರ್ ಮನೋಹರ ಮಂಡೋಳಿ, ತಹಸೀಲ್ದಾರ್ ಡಾ. ಸಂತೋಷಕುಮಾರ ಬಿರಾದಾರ, ಇತರರಿದ್ದರು.
ಜಮೀನಿನಿಂದ ಶೇಂಗಾ ತಂದ ರೈತ
ಅಮ್ಮಿನಭಾವಿ ಗ್ರಾಮದ ಚಂದ್ರಶೇಖರ ಶಿಂಧೆ ಎಂಬುವರ ಹಾನಿಗೀಡಾದ ಶೇಂಗಾ ಬೆಳೆ ವೀಕ್ಷಿಸಲು ನಿಗದಿಯಾಗಿತ್ತು. ಆದರೆ ಸ್ಥಳೀಯ ಅಧಿಕಾರಿಗಳು ರೈತನಿಗೆ ಅಮ್ಮಿನಭಾವಿ ಆಚೆಯ ಮುಖ್ಯ ರಸ್ತೆಯಲ್ಲಿರುವ ಮಹಾದೇವಿ ಪಟ್ಟಣಶೆಟ್ಟಿ ಎಂಬುವರ ಹೊಲಕ್ಕೆ ಹಾನಿಗೊಳಗಾದ ಶೇಂಗಾ ಬೆಳೆ ತರುವಂತೆ ಸೂಚಿಸಿದ್ದರು. ಅಲ್ಲಿದ್ದ ಅಧಿಕಾರಿಗಳು ಶೇಂಗಾ ಬೆಳೆಯನ್ನು ವೀಕ್ಷಿಸಿದರು. ಶೇಂಗಾ ಬೆಳೆ ಕಾಯಿ ಕಟ್ಟಿಲ್ಲ. ಸೂಕ್ತ ಪರಿಹಾರ ನೀಡಬೇಕು ಎಂದು ರೈತ ಚಂದ್ರಶೇಖರ ಕೋರಿದರು.

ಅಧಿಕಾರಿಗಳ ತಂಡ ಧಾರವಾಡ- ಸವದತ್ತಿ ಮುಖ್ಯರಸ್ತೆಯಲ್ಲಿ ಕೆಲಕಾಲ ನಿಂತಿತ್ತು. ರೈತ ಮಹಿಳೆ ಮಹಾದೇವಿ ಪಟ್ಟಣಶೆಟ್ಟಿ ಎಂಬುವರ ಈರುಳ್ಳಿ ಬೆಳೆ ವೀಕ್ಷಣೆಗೆ ಹೋಗಬೇಕಿತ್ತು. ಆದರೆ, ಕಾಲುದಾರಿಯಲ್ಲಿ ಮಳೆ ನೀರು ನಿಂತಿದ್ದರಿಂದ ಅಧಿಕಾರಿಗಳು ಮಹಾದೇವಿಯವರ ಜಮೀನಿಗೆ ಹೋಗಲಿಲ್ಲ. ತನ್ನ ಜಮೀನಿಗೆ ಅಧಿಕಾರಿಗಳು ಬರುತ್ತಾರೆ ಎಂದು ಕಾದು ಕುಳಿತಿದ್ದ ಮಹಿಳೆಯನ್ನು ಸ್ಥಳೀಯ ಅಧಿಕಾರಿಗಳು ಕೂಗಿ ಕರೆದರು. ಕಂದಾಯ ಇಲಾಖೆ ಸಿಬ್ಬಂದಿ ಹಾಗೂ ರೈತ ಮಹಿಳೆ ಹಾನಿಯಾದ ಈರುಳ್ಳಿ ಬೆಳೆ ಹಿಡಿದುಕೊಂಡು ಓಡೋಡಿ ಬಂದು ತೋರಿಸಿದರು. ಬೆಳೆ ಹಾನಿಗೆ ಸೂಕ್ತ ಪರಿಹಾರ ನೀಡಿ ಎಂದು ಮಹಿಳೆ ಕೋರಿದರು.
ಅಳ್ನಾವರದಲ್ಲಿ ಹಾನಿ ಪರಿಶೀಲನೆ
ಅಳ್ನಾವರ ಸುತ್ತಮುತ್ತಲಿನ ಪ್ರದೇಶ, ಹುಲಿಕೆರೆ ಗ್ರಾಮದ ಇಂದಿರಮ್ಮನ ಕೆರೆಗೆ ಭೇಟಿಯಾಗುವ ನೀಡಿ, ಇತ್ತೀಚೆಗೆ ಸುರಿದ ಮಳೆಯಿಂದಾದ ಹಾನಿ ಹಾಗೂ ಕಳೆದ ವರ್ಷ ಉಂಟಾಗಿದ್ದ ಪರಿಸ್ಥಿತಿಯ ಮಾಹಿತಿ ಪಡೆದರು.
ಅಂದಾಜು 2.3 ಚದರ ಕಿ.ಮೀ. ವಿಸ್ತೀರ್ಣದ ಕೆರೆಯು ಅಳ್ನಾವರ ಪಟ್ಟಣಕ್ಕೆ ಕುಡಿಯುವ ನೀರಿನ ಮೂಲವಾಗಿದೆ ಹಾಗೂ ಅಂದಾಜು 1099 ಹೆಕ್ಟೇರ್ ಅಚ್ಚುಕಟ್ಟು ಪ್ರದೇಶ ಹೊಂದಿದೆ. ಪ್ರತಿವರ್ಷ ಮಳೆಯಿಂದ ಉಂಟಾಗುವ ಹಾನಿ ತಪ್ಪಿಸಲು ಅಂದಾಜು4.5 ಕೋಟಿ ರೂ. ವೆಚ್ಚದ ಕಾಮಗಾರಿ ರೂಪಿಸಲಾಗಿದೆ ಎಂದು ಸಣ್ಣ ನೀರಾವರಿ ಇಲಾಖೆಯ ಇಂಜಿನಿಯರ್ ಕೇಂದ್ರ ತಂಡಕ್ಕೆ ಮಾಹಿತಿ ನೀಡಿದರು. ಅಳ್ನಾವರದ ಡೌಗಿನಾಲಾ ಕೊಚ್ಚಿ ಹೋಗಿ ಅಪಾರ ಪ್ರಮಾಣದ ನೀರು ವ್ಯರ್ಥವಾಗಿ ಹರಿದು ಹೋಗುತ್ತಿರುವುದು ಹಾಗೂ ಅರವಟಗಿಯ ಪಶುವೈದ್ಯ ಚಿಕಿತ್ಸಾಲಯ ಸಂಪೂರ್ಣ ಬಿದ್ದಿರುವುದನ್ನು ಅಧಿಕಾರಿಗಳು ವೀಕ್ಷಿಸಿದರು.
ತಹಸೀಲ್ದಾರರಾದ ಅಮರೇಶ ಪಮ್ಮಾರ, ಅಳ್ನಾವರ ಪ.ಪಂ. ಮುಖ್ಯಾಧಿಕಾರಿ ವೈ.ಜಿ. ಗದ್ದಿಗೌಡರ, ಇತರರಿದ್ದರು.

 


Spread the love

About Laxminews 24x7

Check Also

ಅನಾರೋಗ್ಯದ ನಡುವೆಯೂ ಆಸ್ಪತ್ರೆಯಿಂದ ಬಂದು ಮತ ಚಲಾಯಿಸಿದ ಇನ್ಫೋಸಿಸ್ ಎನ್. ಆರ್. ನಾರಾಯಣ ಮೂರ್ತಿ!

Spread the loveಅನಾರೋಗ್ಯದ ನಡುವೆಯೂ ಆಸ್ಪತ್ರೆಯಿಂದ ಬಂದು ಮತ ಚಲಾಯಿಸಿದ ಇನ್ಫೋಸಿಸ್ ಎನ್. ಆರ್. ನಾರಾಯಣ ಮೂರ್ತಿ!   ಬೆಂಗಳೂರು: ಇನ್ಫೋಸಿಸ್ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ