ಬೆಂಗಳೂರು, ಫೆ.20- ರಾಜ್ಯದಲ್ಲಿ ಪ್ರವಾಹದಿಂದ ಹಾನಿಗೊಳಗಾಗಿರುವ 6,648 ಶಾಲೆಗಳ ಮರು ನಿರ್ಮಾಣಕ್ಕೆ 758 ಕೋಟಿ ರೂ. ಬಿಡುಗಡೆ ಮಾಡಿರುವುದಾಗಿ ಪ್ರಾಥಮಿಕ ಮತ್ತು ಪ್ರೌಢಶಿಕ್ಷಣ ಸಚಿವ ಸುರೇಶ್‍ಕುಮಾರ್ ತಿಳಿಸಿದರು. ವಿಧಾನಸಭೆಯಲ್ಲಿ ರಾಜ್ಯಪಾಲರ ಭಾಷಣದ ಮೇಲೆ ವಂದನಾ ನಿರ್ಣಯ ಸಲ್ಲಿಸುವ ಸಲುವಾಗಿ ಮಾತನಾಡಿದ ಪ್ರತಿಪಕ್ಷದ ನಾಯಕ ಸಿದ್ದರಾಮಯ್ಯ ಅವರು 7,770 ಶಾಲಾ ಕೊಠಡಿಗಳು ಬಿದ್ದು ಹೋಗಿವೆ.
ಅವುಗಳ ರಿಪೇರಿಗೆ 1500 ಕೋಟಿ ರೂ. ಪ್ರಸ್ತಾವನೆ ಸಲ್ಲಿಸಬೇಕಾಗಿದೆ ಎಂದಾಗ ಸಚಿವ ಸುರೇಶ್‍ಕುಮಾರ್ ಮಾತನಾಡಿ, 7,770 ಕೊಠಡಿಗಳ ದುರಸ್ತಿಗೆ 199.50 ಕೋಟಿ ರೂ.ಗಳ ಬಿಡುಗಡೆ ಮಾಡಲಾಗಿದೆ ಎಂದರು.ಇನ್ನಷ್ಟು ಶಾಲೆಗಳ ಪುನರ್ ನಿರ್ಮಾಣಕ್ಕೆ 750 ಕೋಟಿ ನೀಡಲಾಗಿದೆ. ಈಗಾಗಲೇ ಶಾಲೆಗಳ ಪುನರ್ ನಿರ್ಮಾಣ ಕಾರ್ಯವು ಆರಂಭವಾಗಿದೆ ಎಂದರು.
ಪ್ರವಾಹ ಸಂಭವಿಸಿ 6 ತಿಂಗಳು ಕಳೆದಿದೆ. ಮಕ್ಕಳು ಅಂಗವಾಡಿ, ಮರದ ಕೆಳಗೆ, ದೇಗುಲಗಳ ಬಳಿ ಪಾಠ ಕೇಳುತ್ತಿದ್ದಾರೆ. ಹೀಗಾದರೆ ಗುಣಮಟ್ಟದ ಶಿಕ್ಷಣ ಹೇಗೆ ಎಂದು ಸಿದ್ದರಾಮಯ್ಯ ಪ್ರಶ್ನಿಸಿದರು.ಈ ವೇಳೆ ಮಧ್ಯ ಪ್ರವೇಶಿಸಿದ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ , ಇಂತಹ ಪರಿಸ್ಥಿತಿಯಲ್ಲಿ ನೀವಿದಿದ್ದರೆ ಏನು ಮಾಡುತ್ತಿದ್ದಿರಿ ಎಂದು ಕೇಳಿದರು.
ಆದ್ಯತೆ ಮೇರೆ ತಕ್ಷಣ ಪಠ್ಯ ಪೂರೈಸುತ್ತಿದ್ದೆವು ಎಂದು ಸಿದ್ದರಾಮಯ್ಯ ಹೇಳಿದಾಗ, ನಾವೂ ಅದನ್ನೇ ಮಾಡಿದ್ದೇವೆ ಎಂದು ಸಿಎಂ ಉತ್ತರಿಸಿದರು.ತಾವು ಈ ನಿಟ್ಟಿನಲ್ಲಿ ಕೆಲಸ ಮಾಡಿಲ್ಲ ಎಂದು ಸಿದ್ದರಾಮಯ್ಯ ತಕರಾರು ತೆಗೆದಾಗ ಸುರೇಶ್‍ಕುಮಾರ್ ಮಾತನಾಡಿ, ಮಕ್ಕಳಿಗೆ 11 ಲಕ್ಷ ಪಠ್ಯ ಪುಸ್ತಕಗಳನ್ನು ಮುದ್ರಿಸಿ ತಕ್ಷಣ ಪೂರೈಸಿದ್ದೇವೆ. ಅದಕ್ಕೆ ಸಮಯಾವಕಾಶ ಹಿಡಿದಿದೆ ನಿಜ. ಆದರೆ ವಿದ್ಯಾರ್ಥಿಗಳಿಗೆ ತೊಂದರೆಯಾಗುವಂತಹ ವಿಳಂಬವಾಗಿಲ್ಲ ಎಂದರು.
ವಸತಿ ಇಲಾಖೆ ಬಗ್ಗೆ ಮಾತನಾಡಿದ ಸಿದ್ದರಾಮಯ್ಯ, ರಾಜ್ಯದಲ್ಲಿ 2.57 ಲಕ್ಷ ಮನೆಗಳು ಹಾನಿಗೊಳಗಾಗಿರುವುದನ್ನು ಸರ್ಕಾರ ಗುರುತಿಸಿದೆ. ಆದರೆ ಪರಿಹಾರ 1.24 ಲಕ್ಷ ಮನೆಗಳಿಗೆ ಮಾತ್ರ ದೊರೆತಿದೆ. ಆಶ್ರಯ ಮನೆಗಳಂತೆ ಕಂತಿನ ರೂಪದಲ್ಲಿ ಹಣ ಬಿಡುಗಡೆ ಮಾಡಿದರೆ ಪ್ರಯೋಜನವಿಲ್ಲ. ವಿಶೇಷ ಅನುದಾನವನ್ನು ತಕ್ಷಣ ಬಿಡುಗಡೆ ಮಾಡುವಂತೆ ಸಲಹೆ ಮಾಡಿದರು.
ಕೆಲವು ಕಡೆ ಮನೆಗಳಿಗೆ ಮತ್ತು ಮೃತಪಟ್ಟಿರುವ ಕುಟುಂಬದವರಿಗೆ ಪರಿಹಾರ ನೀಡುವಾಗ ಡಿಎನ್‍ಎ ಪರೀಕ್ಷೆ ನಡೆಸುತ್ತಿರುವ ಬಗ್ಗೆ ಆಕ್ಷೇಪ ವ್ಯಕ್ತಪಡಿಸಿದರು.ಮಡಿಕೇರಿ ಜಿಲೆಯಲ್ಲಿ ಪರಿಹಾರ ಸಿಗದ ಕಾರಣ ನಿರಂತರ ಪ್ರತಿಭಟನೆ ನಡೆಯುತ್ತಿದೆ. ಇದನ್ನು ಹತ್ತಿಕ್ಕಲು ಪಿಡಿಒಗಳು ಯತ್ನಿಸುತ್ತಿದ್ದಾರೆ. ವಿದ್ಯುತ್ ಕಡಿತ ಮಾಡಿದ್ದಾರೆ ಎಂದು ಆರೋಪಿಸಿದರು.
ಮಧ್ಯಪ್ರವೇಶ ಮಾಡಿದ ಶಾಸಕ ಕೆ.ಜಿ.ಬೋಪಯ್ಯ ಅವರು, ಸಂತ್ರಸ್ತರಿಗೆ ಪ್ರವಾಹ ಪರಿಸ್ಥಿತಿ ಉಂಟಾದ ಜಾಗದಲ್ಲಿ ಎಲ್ಲ ಸೌಲಭ್ಯಗಳನ್ನು ಹೊಂದಿರುವ ಮನೆ ನಿರ್ಮಿಸಲಾಗಿದೆ. ಆದರೆ ಅಲ್ಲಿಗೆ ಅವರು ಹೋಗಲು ಸಿದ್ದರಿಲ್ಲ. ಪ್ರವಾಹದಿಂದ ತೊಂದರೆಗೊಳಗಾದಾಗ ಎಲ್ಲ ಸವಲತ್ತುಗಳನ್ನು ಪಡೆಯುತ್ತಾರೆ. ನಂತರ ಪ್ರತಿಭಟನೆ ಮಾಡುತ್ತಾರೆ ಎಂದು ಸಿದ್ಧ್ದಾಪುರ ಗ್ರಾಮಸ್ಥರ ಪ್ರತಿಭಟನೆ ಉಲ್ಲೇಖಿಸಿ ನಡೆಯುತ್ತಿದ್ದ ಚರ್ಚೆಗೆ ಅಸಮಾಧಾನ ವ್ಯಕ್ತಪಡಿಸಿದರು.
ವಸತಿ ಸಚಿವ ಸೋಮಣ್ಣ ಮಾತನಾಡಿ, ಹಿಂದಿನ ಸರ್ಕಾರ ಗುರುತಿಸಿದ ಜಾಗದಲ್ಲಿ ವ್ಯವಸ್ಥಿತ ಮನೆಗಳನ್ನು ನಿರ್ಮಿಸಲಾಗಿದೆ. ಜನ ಅಲ್ಲಿಗೆ ಸ್ಥಳಾಂತರಗೊಂಡರೆ ಶೇ.80ರಷ್ಟು ಸಮಸ್ಯೆ ಬಗೆಹರಿಯುತ್ತದೆ ಎಂದು ಹೇಳಿದರು.