ಬೆಳಗಾವಿ – ಖ್ಯಾತ ಕಾದಂಬರಿಕಾರ ಚಂದ್ರಕಾಂತ ಕುಸನೂರ ಇಂದು ರಾತ್ರಿ 10.15ಕ್ಕೆ ಬೆಳಗಾವಿಯಲ್ಲಿ ನಿಧನರಾದರು. ಅವರಿಗೆ 90 ವರ್ಷ ವಯಸ್ಸಾಗಿತ್ತು.
ಪತ್ನಿ, ನಾಲ್ವರು ಗಂಡುಮಕ್ಕಳು ಹಾಗೂ ಒಬ್ಬ ಮಗಳನ್ನು ಅಗಲಿದ್ದಾರೆ.
ಕನ್ನಡ ಸಾಹಿತ್ಯದಲ್ಲಿ ಅಸಂಗತ ನಾಟಕ ಮತ್ತು ಜಪಾನಿ ಮಾದರಿಯ ಹೈಕುಗಳನ್ನು ಪರಿಚಯಿಸಿದ್ದರು. ಹೈಕು ಮಾದರಿಯ ಕವಿತೆಗಳನ್ನು ಸಹ ಕನ್ನಡಕ್ಕೆ ಪರಿಚಯಿಸಿದ್ದರು.
ಗುಲಬರ್ಗಾದಲ್ಲಿ ಜನಿಸಿದ್ದ ಅವರು ಹಿಂದಿ ಉಪನ್ಯಾಸಕರಾಗಿ, ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕರಾಗಿ ಸೇವೆ ಸಲ್ಲಿಸಿದ್ದರು.
ಉರ್ದು ಭಾಷೆಯಲ್ಲಿ ಪ್ರಾಥಮಿಕ ಶಿಕ್ಷಣ ಪಡೆದಿದ್ದರೂ ಕನ್ನಡ ಮತ್ತು ಹಿಂದಿ ಸಾಹಿತ್ಯಕ್ಕೆ ದೊಡ್ಡ ಕೊಡುಗೆ ನೀಡಿದ್ದರು.
ಕಥೆ, ಕಾದಂಬರಿ, ಕವನಸಂಕಲನ. ಅನುವಾದ, ನಾಟಕ, ವಿಮರ್ಶಾ ಬರಹಗಳು ಸೇರಿ 40ಕ್ಕೂ ಹೆಚ್ಚು ಪುಸ್ತಕಗಳನ್ನು ಬರೆದಿದ್ದರು.
ಕರ್ನಾಟಕದ ಸಾಹಿತ್ಯ ಅಕಾಡೆಮಿ ಗೌರವ ಪ್ರಶಸ್ತಿ, ರಾಜ್ಯೋತ್ಸವ ಪ್ರಶಸ್ತಿ ಸೇರಿದಂತೆ ಹಲವು ಪ್ರಶಸ್ತಿಗಳು ಬಂದಿದ್ದರು.
ಬೆಳಗಾವಿ ಸಾಹಿತ್ಯ ಸಂವಾದದ ಹಾಲಿ ಅಧ್ಯಕ್ಷರಾಗಿದ್ದರು. ಅವರ ನಿಧನಕ್ಕೆ ಡಾ.ಸರಜೂ ಕಾಟ್ಕರ್, ರಾಮಕೃಷ್ಣ ಮರಾಠೆ, ಚಂದ್ರಕಾಂತ ಪೋಕಳೆ ಸೇರಿದಂತೆ ಹಲವಾರು ಗಣ್ಯರು ಸಂತಾಪ ಸೂಚಿಸಿದ್ದಾರೆ.
