ಚಿಕ್ಕಮಗಳೂರು: ಜಿಲ್ಲೆಯ ಕಡೂರಿನ ಮಾಜಿ ಶಾಸಕ ವೈ.ಎಸ್.ವಿ. ದತ್ತ ಲಾಕ್‍ಡೌನ್ ಹಿನ್ನೆಲೆ ಮೇಷ್ಟ್ರಾಗಿ ಮಕ್ಕಳಿಗೆ ಪಾಠ ಮಾಡುತ್ತಿದ್ದಾರೆ. ಎಸ್.ಎಸ್.ಎಲ್.ಸಿ. ಮಕ್ಕಳಿಗೆ ಫೇಸ್ ಬುಕ್ ಲೈವ್‍ನಲ್ಲಿ ಪ್ರತಿ ದಿನ ಸಂಜೆ 7.30 ರಿಂದ 8.30ರವೆಗೆ ಪಾಠ ಮಾಡುತ್ತಿದ್ದಾರೆ.
ಒಂದು ವಾರ ಗಣಿತ, ಮತ್ತೊಂದು ವಾರ ಭೌತಶಾಸ್ತ್ರ ಪಾಠ ಮಾಡಲು ಮುಂದಾಗಿದ್ದಾರೆ. ಈಗಾಗಲೇ ಎಸ್.ಎಸ್.ಎಲ್.ಸಿ. ಪರೀಕ್ಷೆಗೆ ದಿನಗಣನೆ ಆರಂಭವಾಗಿದೆ. ಜೂನ್ ಮೊದಲ ವಾರದಲ್ಲಿ ಪರೀಕ್ಷೆ ನಡೆಯಬಹುದು ಎಂದು ಹೇಳಲಾಗುತ್ತಿದೆ. ಪರೀಕ್ಷೆ ನಡೆಸಲು ಸರ್ಕಾರ ಕೂಡ ಎಲ್ಲಾ ಸಿದ್ಧತೆ ಮಾಡಿಕೊಳ್ಳುತ್ತಿದೆ. ಹಾಗಾಗಿ ಶೀಘ್ರದಲ್ಲೇ ಎಸ್.ಎಸ್.ಎಲ್.ಸಿ. ಮಕ್ಕಳಿಗೆ ಪರೀಕ್ಷೆ ನಡೆಯುವ ಹಿನ್ನೆಲೆ, ದತ್ತ ಮೇಷ್ಟ್ರು ಫೇಸ್‍ಬುಕ್ ನಲ್ಲಿ ಈಗಾಗ್ಲೇ ಮಕ್ಕಳಿಗೆ ಗಣಿತ ಪಾಠವನ್ನು ಆರಂಭಿಸಿದ್ದಾರೆ.
ಎರಡು ವಾರಗಳ ಕಾಲ ಮಕ್ಕಳಿಗೆ ಫೇಸ್‍ಬುಕ್ ಲೈವ್‍ನಲ್ಲಿ ಪಾಠ ಮಾಡಲಿದ್ದಾರೆ. ವೈ.ಎಸ್.ವಿ ದತ್ತ ಫೇಸ್‍ಬುಕ್ ಖಾತೆಯಿಂದ ದಿನ ಸಂಜೆ 7.30 ರಿಂದ 8.30ರವರಗೆ ಒಂದು ಗಂಟೆ ಮಕ್ಕಳಿಗೆ ಪಾಠ ಮಾಡಲಿದ್ದಾರೆ. ಜೆಡಿಎಸ್ ಮುಖಂಡ ಹಾಗೂ ಮಾಜಿ ಶಾಸಕ ವೈ.ಎಸ್.ವಿ. ದತ್ತ ಮೂಲತಃ ಶಿಕ್ಷಕರು. ನಂತರ ಶಿಕ್ಷಕ ವೃತ್ತಿಯಿಂದ ರಾಜಕಾರಣಕ್ಕೆ ಬಂದಿದ್ದರು. ಈ ಹಿಂದೆ ಅವರು ಶಾಸಕರಾಗಿದ್ದಾಗಲೂ ಕೂಡ ಶಿಕ್ಷಕರ ದಿನಾಚರಣೆಯಂದು ಮಕ್ಕಳಿಗೆ ಪಾಠ ಮಾಡಿದ್ದರು.
ಈಗ ಕೊರೊನಾ ಆತಂಕದಿಂದ ದೇಶವೇ ಲಾಕ್‍ಡೌನ್ ಆದ ಮೇಲೆ 10ನೇ ತರಗತಿಯ ಪರೀಕ್ಷೆ ಕೂಡ ಮುಂದೂಡಲಾಗಿತ್ತು. ಈಗ ಜೂನ್ ತಿಂಗಳಿನಲ್ಲಿ ಪರೀಕ್ಷೆ ನಡೆಯುವ ಸಾಧ್ಯತೆ ಇರುವ ಕಾರಣ ಮಕ್ಕಳಿಗೆ ಪುನರ್ ಮನನ ತರಗತಿ ಅಗತ್ಯವೆಂದು ವರ್ಷಗಳ ಬಳಿಕ ಕೈಯಲ್ಲಿ ಮತ್ತೆ ಚಾಕ್‍ಪೀಸ್ ಹಿಡಿದು ಬದಲಾದ ಜಗದಲ್ಲಿ ಫೇಸ್‍ಬುಕ್ ಮೂಲಕ ಮತ್ತೆ ಶಿಕ್ಷಕ ವೃತ್ತಿಗೆ ಕಾಲಿಟ್ಟಿದ್ದಾರೆ.