ಬೆಂಗಳೂರು : ಕೊರೋನಾ ವೈರಾಣುವಿನ ಅಬ್ಬರದ ನಡುವೆಯೇ ಜನರ ಜೀವ ಹೈರಾಣಾಗಿಸುವ ಬರಗಾಲ ಸದ್ದಿಲ್ಲದೇ ರಾಜ್ಯಕ್ಕೆ ಕಾಲಿಟ್ಟಿದೆ. ಏಪ್ರಿಲ್ ತಿಂಗಳು ಆರಂಭದಲ್ಲಿ ರಾಜ್ಯದಲ್ಲಿ ಹಲವಾರು ಪ್ರದೇಶಗಳಲ್ಲಿ ಬರಗಾಲದ ಛಾಯೆ ಆವರಿಸಲು ಆರಂಭಿಸಿದೆ.
ಬೇಸಗೆಯ ತೀವ್ರತೆಯ ಜೊತೆಗೇ ರಾಜ್ಯದ 9 ಜಿಲ್ಲೆಗಳಲ್ಲಿ ಈಗಾಗಲೇ ಬರದ ಕರಿ ನೆರಳು ಆವರಿಸಿದೆ. ಅದಾಗಲೇ ನೀರಿಗಾಗಿ ತತ್ವಾರ ಆರಂಭವಾಗಿದೆ. ಒಂಭತ್ತು ಜಿಲ್ಲೆಗಳಲ್ಲಿ ಈಗಾಗಲೇ ಕುಡಿಯುವ ನೀರಿಗೆ ಹಾಹಾಕಾರ ಆರಮಭವಾಗಿದ್ದು ಮುಂದಿನ ದಿನಗಳಲ್ಲಿ ಇದು ತಾರಕಕ್ಕೇರುವ ಲಕ್ಷಣಗಳು ದಟ್ಟವಾಗಿವೆ.
ಹಾವೇರಿ, ದಾವಣಗೆರೆ, ಚಿತ್ರದುರ್ಗ, ತುಮಕೂರು, ಕೋಲಾರ, ಚಿಕ್ಕಬಳ್ಳಾಪುರ, ಬೆಂಗಳೂರು ಗ್ರಾಮಾಂತರ, ಬೆಂಗಳೂರು ನಗರ ಮತ್ತು ರಾಮನಗರ ಜಿಲ್ಲೆಗಳಲ್ಲಿ ಕುಡಿಯುವ ನೀರಿನ ತೀವ್ರ ಅಭಾವ ತಲೆದೋರಿದೆ. ಇರುವ ಬೋರ್‌ವೆಲ್‌ಗಳು ಬತ್ತಿ ಹೋಗಿದ್ದು, ಹೊಸದಾಗಿ ಕೊಳವೆ ಬಾವಿ ಕೊರೆಯಲು ಲಾಕ್‌ಡೌನಿನಿಂದಾಗಿ ಕಾರ್ಮಿಕರ ಅಭಾವ ಎದುರಾಗಿದೆ ಎಂದು ಪತ್ರಿಕಾ ವರದಿ ಹೇಳಿದೆ.
ಇನ್ನು ಪರಿಸ್ಥಿತಿ ನಿಭಾಯಿಸಲು ಅಗತ್ಯ ಸಂಪನ್ಮೂಲದ ಕೊರತೆಯೂ ಎದುರಾಗಿದೆ. ಕೊರೋನಾ ಲಾಕ್‌ಡೌನಿನಿಂದಾಗಿ ರಾಜ್ಯದ ಬೊಕ್ಕಸ ಪೆಟ್ಟು ತಿಂದಿದೆ. ಇದರ ಬೆನ್ನಿಗೇ ಬರ ಪರಿಹಾರಕ್ಕೆಂದು ಹಣಕಾಸು ಒದಗಿಸುವ ಗುರುತರ ಜವಾಬ್ದಾರಿ ಸರಕಾರ ಮೇಲೆ ಬಿದ್ದಿದೆ.
ಕೊರೋನಾ ಕದನದಲ್ಲಿ ನಿರತವಾಗಿರುವ ಸರಕಾರಕ್ಕೆ ಬರ ದೊಡ್ಡ ತಲೆನೋವಾಗಿ ಪರಿಣಮಿಸಲಿದೆ. ಕೊರೋನಾ ವೈರಾಣು ಹರಡುವಿಕೆ ತಡೆಯುವ ಸಲುವಾಗಿ ಜಾರಿಯಲ್ಲಾಲಿರುವ ಕ್‌ಡೌನ್ ಮುಗಿಯುವ ವೇಳೆಗೆ ಪರಿಸ್ಥಿತಿ ಇನ್ನಷ್ಟು ಬಿಗಡಾಯಿಸಲಿದ್ದು ಈಗಲೇ ಅಗತ್ಯ ತಯಾರಿ ಮಾಡಿಕೊಳ್ಳುವಂತೆ ಸರಕಾರದ ಮೇಲೆ ಒತ್ತಡ ಹೇರಲಾಗುತ್ತಿದೆ.
ಇದೇ ವೇಳೆ ಬೇಸಗೆಯ ತಾಪಮಾನ ಮತ್ತು ಜನ ವಿರಳ ಪರಿಸ್ಥಿತಿಯನ್ನು ಲಾಭಕ್ಕೆ ಬಳಸಿಕೊಳ್ಳುವ ಉದ್ದೇಶದಿಂದ ಕಿಡಿಗೇಡಿಗಳು ಅರಣ್ಯಕ್ಕೆ ಬೆಂಕಿ ಇಡುವ ಕಾರ್‍ಯಕ್ಕೆ ಮುಂದಾಗಿರುವುದು ಸಹ ವರದಿಯಾಗಿದೆ. ಕಳೆದೆರಡು ವಾರಗಳಲ್ಲಿ ಅರಣ್ಯ ಬೆಂಕಿಯ ಸುಮಾರು 2 ಸಾವಿರಕ್ಕೂ ಹೆಚ್ಚಿನ ದೂರುಗಳು ದಾಖಲಾಗಿದ್ದು ಅರಣ್ಯ ಇಲಾಖೆ ತೀವ್ರ ಒತ್ತಡದಲ್ಲಿದೆ ಎನ್ನಲಾಗಿದೆ.
ಕಾಡಿಗೆ ಬೆಂಕಿ ಇಟ್ಟು ಅರಣ್ಯ ಪ್ರದೇಶವನ್ನು ಅತಿಕ್ರಿಮಿಸಿಕೊಳ್ಳಲು ಕಿಡಿಗೇಡಿಗಳು ಸತತ ಪ್ರಯತ್ನ ನಡೆಸುತ್ತಿದ್ದಾರೆ.