Breaking News
Home / ಜಿಲ್ಲೆ / ಸುಮಾರು 135 ವರ್ಷಗಳಿಂದ ನಡೆಯುತ್ತ ಬಂದಿದ್ದ ದಾಸೋಹ ಶನಿವಾರದಿಂದ ಸ್ಥಗಿತ:ಸಿದ್ಧಾರೂಢ ಸ್ವಾಮಿ

ಸುಮಾರು 135 ವರ್ಷಗಳಿಂದ ನಡೆಯುತ್ತ ಬಂದಿದ್ದ ದಾಸೋಹ ಶನಿವಾರದಿಂದ ಸ್ಥಗಿತ:ಸಿದ್ಧಾರೂಢ ಸ್ವಾಮಿ

Spread the love

ಹುಬ್ಬಳ್ಳಿ: ಕೋವಿಡ್ 19 ವೈರಸ್‌ ಭೀತಿಯ ಹಿನ್ನೆಲೆಯಲ್ಲಿ ಸಿದ್ಧಾರೂಢ ಸ್ವಾಮಿಗಳ ಮಠದಲ್ಲಿ ಸುಮಾರು 135 ವರ್ಷಗಳಿಂದ ನಡೆಯುತ್ತ ಬಂದಿದ್ದ ದಾಸೋಹ ಶನಿವಾರದಿಂದ ಸ್ಥಗಿತಗೊಂಡಿದೆ.

ಸದ್ಗುರು ಶ್ರೀ ಸಿದ್ಧಾರೂಢ ಸ್ವಾಮಿಗಳು ದೇಶದ ಎಲ್ಲ ಕ್ಷೇತ್ರಗಳನ್ನು ಸಂಚರಿಸುತ್ತ,ಅಜ್ಞಾನ ನಿವಾರಿಸಿ ಸನ್ಮಾರ್ಗ ತೋರುತ್ತ 1877ರಲ್ಲಿ ತಮ್ಮ 41ನೇ ವಯಸ್ಸಿನಲ್ಲಿ ಹುಬ್ಬಳ್ಳಿಗೆ ಆಗಮಿಸಿದರು. ತಮ್ಮನ್ನು ಭೇಟಿ ಮಾಡಲು ಆಗಮಿಸುವ ಭಕ್ತರು ಹಸಿವಿನಿಂದ ಹೋಗಬಾರದೆಂಬ ಉದ್ದೇಶದಿಂದ ಸುಮಾರು 1885-87ರಲ್ಲಿ ಅನ್ನಸಂತರ್ಪಣೆ ಆರಂಭಿಸಿದ್ದರು.

ಅಂದಿನಿಂದ ಅನ್ನಸಂತರ್ಪಣೆ ಪ್ರತಿದಿನ ನಿರಂತರವಾಗಿ ನಡೆಯುತ್ತ ಬಂದಿತ್ತು. 1918-20ರಲ್ಲಿ ಮಹಾಮಾರಿ ರೋಗಗಳಾದ ಪ್ಲೇಗ್‌, ಮಲೇರಿಯಾ, ಮಾರ್ಯಮ್ಮನ ರೋಗ ಬಂದಾಗಲೂ ಸಿದ್ಧಾರೂಢರು ತಮ್ಮನ್ನು ಭೇಟಿ ಮಾಡಲು ಆಗಮಿಸುವ ಭಕ್ತರಿಗೆ ದಾಸೋಹ ನಿಲ್ಲಿಸಿರಲಿಲ್ಲವಂತೆ.

ಅಷ್ಟೇ ಅಲ್ಲ ಹುಬ್ಬಳ್ಳಿಯಲ್ಲಿ ಗಲಾಟೆಗಳಾಗಿ ಕರ್ಫ್ಯೂ ಹೇರಿದ್ದಾಗಲೂ ಮಠದಲ್ಲಿನ ಅನ್ನಸಂತರ್ಪಣೆಗೆ ಮಾತ್ರ ಯಾವುದೇ ಅಡೆತಡೆ ಆಗಿರಲಿಲ್ಲ. ಆದರೀಗ ಕೋವಿಡ್ 19 ವೈರಸ್‌ ಸೋಂಕಿನಿಂದ ಭಕ್ತರ ಸುರಕ್ಷತೆ ಹಾಗೂ ಹಿತದೃಷ್ಟಿಯಿಂದ ಶ್ರೀಮಠದಲ್ಲಿ ನಿರಂತರವಾಗಿ ನಡೆಯುತ್ತಿದ್ದ ಅನ್ನಸಂತರ್ಪಣೆ(ದಾಸೋಹ)ಯನ್ನು ಶನಿವಾರದಿಂದ ಮಾ.31ರವರೆಗೆ ಸಂಪೂರ್ಣ ಸ್ಥಗಿತಗೊಳಿಸಲಾಗಿದೆ.

ಸಿದ್ಧಾರೂಢ ಸ್ವಾಮಿಗಳ ಮಠಕ್ಕೆ ಕರ್ನಾಟಕ, ಮಹಾರಾಷ್ಟ್ರ, ಆಂಧ್ರಪ್ರದೇಶ, ಗೋವಾ ಒಳಗೊಂಡಂತೆ ದೇಶ-ವಿದೇಶಗಳಿಂದಲೂ ಬರುತ್ತಾರೆ. ಪ್ರಸಾದ ಸ್ವೀಕರಿಸುತ್ತಾರೆ. ಆದರೀಗ ಕೋವಿಡ್ 19 ವೈರಸ್‌ ಶ್ರೀಮಠದಲ್ಲಿನ ಅನ್ನಸಂತರ್ಪಣೆ ಸ್ಥಗಿತಗೊಳಿಸುವಂತೆ ಮಾಡಿದೆ.

# 90ವರ್ಷಗಳ ನಂತರ ಗರ್ಭಗುಡಿಗೆ ಬೀಗ:
ಆರಾಧ್ಯದೈವ ಸದ್ಗುರು ಶ್ರೀ ಸಿದ್ಧಾರೂಢ ಸ್ವಾಮಿಗಳ ಗರ್ಭಗುಡಿಯನ್ನು ಸುಮಾರು 90 ವರ್ಷಗಳ ನಂತರ ಮೊದಲ ಬಾರಿಗೆ ಮುಚ್ಚಲಾಗಿದೆ. ಸದ್ಗುರು ಶ್ರೀ ಸಿದ್ಧಾರೂಢ ಸ್ವಾಮಿಗಳು 1929ರ ಆಗಸ್ಟ್‌ 21ರಂದು ಬ್ರಹ್ಮೈಕ್ಯರಾದರು. ಅಲ್ಲದೆ ಸಿದ್ಧಾರೂಢರ ಪರಮಶಿಷ್ಯ ಸದ್ಗುರು ಶ್ರೀ ಗುರುನಾಥರೂಢ ಸ್ವಾಮಿಗಳು 1962ರ ಮೇ 13ರಂದು ಬ್ರಹ್ಮೈಕ್ಯರಾದರು. ಅಂದಿನಿಂದ ಭಕ್ತರು ಉಭಯ ಸದ್ಗುರುಗಳ ಗರ್ಭಗುಡಿಗೆ ಭೇಟಿ ಕೊಟ್ಟು ದರ್ಶನಾಶೀರ್ವಾದ ಪಡೆಯುತ್ತಿದ್ದರು.

ಆದರೀಗ ಕೊರೊನಾ ವೈರಸ್‌ನಿಂದ ಸದ್ಗುರು ಶ್ರೀ ಸಿದ್ಧಾರೂಢರ ಗರ್ಭಗುಡಿ 90ವರ್ಷಗಳ ನಂತರ ಹಾಗೂ ಸದ್ಗುರು ಶ್ರೀ ಗುರುನಾಥರೂಢರ ಗರ್ಭಗುಡಿಯನ್ನು 57 ವರ್ಷಗಳ ನಂತರ ಮುಚ್ಚಲಾಗಿದೆ. ಶ್ರೀಮಠದ ಆಡಳಿತ ಮಂಡಳಿ ಸರಕಾರದ ನಿರ್ದೇಶನದಂತೆ ಮಾ.19ರಿಂದಲೇ ಉಭಯ ಶ್ರೀಗಳ ಗರ್ಭಗುಡಿಗಳನ್ನು ಬಂದ್‌ ಮಾಡಿವೆ.

ಓಂ ನಮಃ ಶಿವಾಯ ಮಂತ್ರ ಪಠಣಕ್ಕೆ ಇಲ್ಲ ಅಭ್ಯಂತರ : ಸದ್ಗುರು ಶ್ರೀ ಸಿದ್ಧಾರೂಢರ ನಿರ್ವಿಕಲ್ಪ ಸಮಾಧಿ ಮಂದಿರದಲ್ಲಿ ಅಹೋರಾತ್ರಿ “ಓಂ ನಮಃ ಶಿವಾಯ’ ಮಂತ್ರಪಠಣವು ಅವಿರತವಾಗಿ ನಡೆಯುತ್ತ ಬಂದಿದ್ದು, ಅದು ಮುಂದುವರಿಯಲಿದೆ.

ಶ್ರೀ ಸಿದ್ಧಾರೂಢರ ಹಾಗೂ ಶ್ರೀ ಗುರುನಾಥರೂಢರ ಗರ್ಭಗುಡಿ, ಸಿದ್ಧಾರೂಢರ ಶಯನ ಮಂದಿರ, ಅಂತಿಮ ದರ್ಶನ ಕೊಠಡಿ, ಪ್ರಸಾದ ನಿಲಯ (ದಾಸೋಹ), ಭಕ್ತ ನಿಲಯ (ವಿಶ್ರಾಂತಿ ಕೊಠಡಿ, ಚೌಟ್ರಿ), ಈಶ್ವರ ದೇವಸ್ಥಾನ, ಅಭಿಷೇಕ, ತೀರ್ಥ ಸೇರಿದಂತೆ ಶ್ರೀಮಠದಲ್ಲಿನ ಸೇವಾ ಕಾರ್ಯಗಳು ಸ್ಥಗಿತಗೊಂಡಿವೆ.

ಆದರೆ ಪ್ರತಿದಿನ ನಡೆಯುತ್ತಿರುವ ಓಂ ನಮಃ ಶಿವಾಯ ಮಂತ್ರ ಪಠಣ, ಭಜನೆ, ಬೆಳಗಿನ ಜಾವದ ಕಾಕಡಾರತಿ, ಮಧ್ಯಾಹ್ನದ ನೈವೇದ್ಯ, ಸಂಜೆಯ ಮಹಾಮಂಗಳಾರತಿ ಹಾಗೂ ರಾತ್ರಿಯ ಅಂತಿಮ ಪೂಜೆ ಯಥಾವತ್ತಾಗಿ ನಡೆಯಲಿವೆ. ಭಕ್ತರು ಬೇಕಾದರೆ ಒಬ್ಬೊಬ್ಬರಾಗಿ ಸದ್ಗುರು ಶ್ರೀ ಸಿದ್ಧಾರೂಢರ ಕೈಲಾಸ ಮಂಟಪಕ್ಕೆ ತೆರಳಿ ದರ್ಶನ ಪಡೆಯಬಹುದು ಎನ್ನುತ್ತಾರೆ ಶ್ರೀಮಠದವರು.

ಸಿದ್ಧಾರೂಢರ ಮಠಕ್ಕೆ ಬರುವ ಭಕ್ತರಿಗೆ ಅನ್ನ, ಜ್ಞಾನದಾಸೋಹ, ಓಂ ನಮಃ ಶಿವಾಯ ಮಂತ್ರ ಘೋಷಣೆ ನಿಲ್ಲಬಾರದೆಂಬ ಉದ್ದೇಶ ಹೊಂದಿದ್ದರು. ಅಜ್ಜನ ಕಾಲದಿಂದ ದೊಡ್ಡ ಪರಂಪರೆ ಹಾಕಿಕೊಂಡು ಬರಲಾಗಿತ್ತು. ಆದರೆ ಈಗ ಕೊರೊನಾ ವೈರಸ್‌ ಭೀತಿಯಿಂದ ಮಠಕ್ಕೆ ಕಳಂಕ ಬರಬಾರದೆಂಬ ಉದ್ದೇಶದಿಂದ ದಾಸೋಹ ನಿಲ್ಲಿಸಲಾಗಿದೆ. ಮನಸ್ಸಿಗೆ ತುಂಬಾ ವ್ಯಥೆ ಆಗುತ್ತಿದೆ. –
– ಡಿ.ಡಿ. ಮಾಳಗಿ, ಶ್ರೀಮಠದ ಟ್ರಸ್ಟ್‌ ಕಮಿಟಿ ಚೇರ್ಮೇನ್‌.


Spread the love

About Laxminews 24x7

Check Also

ಗ್ಯಾರಂಟಿ ಯೋಜನೆಗಳ ಟೀಕೆಗೆ ತಾಯಂದಿರೇ ಉತ್ತರ ನೀಡುತ್ತಾರೆ: ಡಿಕೆ ಶಿ

Spread the love ಬೆಂಗಳೂರು: ನಿರೀಕ್ಷೆಯಂತೆ ಬಿಜೆಪಿ ಮಾಜಿ ಸಂಸದ ಕರಡಿ ಸಂಗಣ್ಣ ಸೇರಿದಂತೆ ನಿವೃತ್ತ ಐಎಎಸ್ ಅಧಿಕಾರಿ ಎ.ಎಸ್. ಪುಟ್ಟಸ್ವಾಮಿ, …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ