ಹಾಸನ/ಕೊಡಗು: ಕೊರೊನಾ ಆತಂಕದ ನಡುವೆ ಕೊಡಗು ಮತ್ತು ಹಾಸನ ಜಿಲ್ಲೆಯ ಕೆಲವು ಭಾಗಗಳಲ್ಲಿ ಭೂಮಿ ಕಂಪಿಸಿರುವ ಅನುಭವವಾಗಿದೆ.
ಹಾಸನ ಜಿಲ್ಲೆಯ ಅರಕಲಗೂಡು ತಾಲೂಕಿನ ಕೆಲವೆಡೆ ಭೂಮಿ ಕಂಪಿಸಿದ ಅನುಭವವಾಗಿ ಜನ ಭಯಭೀತರಾಗಿದ್ದಾರೆ. ಕಾಳೇನಹಳ್ಳಿ, ಗರುಡನಹಳ್ಳಿ ಸುತ್ತಮುತ್ತಲಿನ ಗ್ರಾಮದಲ್ಲಿ ಭೂಮಿ ಕಂಪನದ ಅನುಭವವಾಗಿದೆ. ಇಂದು ಸಂಜೆ 5.20ರ ಸಮಯದಲ್ಲಿ ಭೂಮಿ ಕಂಪಿಸಿ ನಡುಗಿದ ಅನುಭವವಾಗಿದ್ದು, ಬೆಚ್ಚಿಬಿದ್ದ ಜನ ಮನೆಯಿಂದ ಹೊರ ಓಡಿ ಬಂದಿದ್ದಾರೆ.
ಕೊಡಗು ಜಿಲ್ಲೆಯ ಕುಶಾಲನಗರ, ಕೂಡಿಗೆ, ಹೆಬ್ಬಾಲೆ ಸೇರಿದಂತೆ ಹಲವೆಡೆ ಭೂಮಿ ಕಂಪಿಸಿರುವ ಅನುಭವವಾಗಿದೆ.ಕೊರೊನಾ ಭೀತಿಯ ನಡುವೆ ಭೂಮಿ ಕಂಪಿಸಿರುವುದು ಸ್ಥಳೀಯರಲ್ಲಿ ಮತ್ತಷ್ಟು ಆತಂಕ ಸೃಷ್ಟಿಸಿದೆ. ಅಲ್ಲದೇ ಮೈಸೂರು-ಹಾಸನ ಭಾಗವಾದ ಕೆ.ಆರ್.ನಗರ, ಅರಕಲಗೂಡು ವ್ಯಾಪ್ತಿಯಲ್ಲಿ ಲಘು ಭೂಕಂಪನದ ಅನುಭವಾಗಿದೆ. ಸಂಜೆ 5.30ಕ್ಕೆ ಹಾರಂಗಿ, ಬೆಂಗಳೂರು ಸಿಸ್ಮೋಗ್ರಾಫ್ ಕೇಂದ್ರಗಳಲ್ಲಿ 2.6ರ ತೀವ್ರತೆ ದಾಖಲಾಗಿದೆ ಎಂದು ಆಣೆಕಟ್ಟು ಅಧಿಕಾರಿಗಳು ಸ್ಪಷ್ಟಪಡಿಸಿದ್ದಾರೆ.