ಬೆಳಗಾವಿ- ರಾಜ್ಯ ಸರಕಾರದ ಆದೇಶದಂತೆ ಬೆಳಗಾವಿ ನಗರದಲ್ಲಿ ಕರ್ಫ್ಯೂ ಇದೆ. ಯಾರೂ ಮನೆಯಿಂದ ಹೊರಗೆ ಬರಬೇಡಿ ಎಂದು ಬೆಳಗಾವಿ ಪೊಲೀಸರು ನಗರಾದ್ಯಂತ ಮೈಕ್ ಮೂಲಕ ಅನೌನ್ಸ್ ಮಾಡುತ್ತಿದ್ದಾರೆ.
ಕೊರೋನಾ ಹಿನ್ನೆಲೆಯಲ್ಲಿ ಸಂಪೂರ್ಣ ಕರ್ನಾಟಕವನ್ನು ಲಾಕ್ ಡೌನ್ ಮಾಡಲಾಗಿದ್ದು, ಬೆಳಗಾವಿಯಲ್ಲೂ ಪೊಲೀಸರು ಕಟ್ಟುನಿಟ್ಟಾಗಿ ಜಾರಿಗೊಳಿಸಿದ್ದಾರೆ. ನಿನ್ನೆ ರಾತ್ರಿಯಿಂದಲೇ ಪೊಲೀಸರು ವಾಹನಗಳಿಗೆ ಮೈಕ್ ಕಟ್ಟಿಕೊಂಡು ಜನರು ಮನೆಯಿಂದ ಹೊರಗೆ ಬಾರದಂತೆ ತಿಳಿವಳಿಕೆ ಮೂಡಿಸುತ್ತಿದ್ದಾರೆ.
ಇಂದು ಇಡೀ ನಗರ ಜನದಟ್ಟಣೆಯಿಂದ ಮುಕ್ತವಾಗಿದೆ. ಎಲ್ಲೆಡೆ ಪೊಲೀಸರು ನಿಂತು ಜನರು ಅನಗತ್ಯವಾಗಿ ಸಂಚರಿಸುವುದನ್ನು ತಡೆಯುತ್ತಿದ್ದಾರೆ. ಪ್ರತಿಯೊಬ್ಬರನ್ನೂ ವಿಚಾರಿಸಿಯೇ ಬಿಡುತ್ತಿದ್ದಾರೆ. ಸಕಾರಣ ನೀಡದವರನ್ನು ಮರಳಿ ಕಳಿಸುತ್ತಿದ್ದಾರೆ.
ಜಿಲ್ಲೆಯ ಎಲ್ಲ ಗಡಿ ಪ್ರದೇಶಗಳಲ್ಲೂ ಕಟ್ಟುನಿಟ್ಟಿನ ಕಾವಲು ಹಾಕಲಾಗಿದ್ದು, ಹೊರ ಜಿಲ್ಲೆ, ಹೊರ ರಾಜ್ಯಗಳಿಂದ ಜನರು ಪ್ರವೇಶಿಸುವುದನ್ನು ತಡೆಯಲಾಗುತ್ತಿದೆ. ಇಂದು ಬೆಳಗಾವಿ ಸಂಪೂರ್ಣ ಜನ, ವಾಹನ ಸಂಚಾರವಿಲ್ಲದೆ ಬಿಕೋ ಎನ್ನುತ್ತಿದೆ. ಅಗತ್ಯ ಸೇವೆಗೆ ಮಾತ್ರ ಅವಕಾಶ ನೀಡಲಾಗುತ್ತಿದೆ. ಕೆಲವೆಡೆ ಮಾತ್ರ ದಿನಸಿ ಅಂಗಡಿ, ತರಕಾರಿಗಳ ಮಾರಾಟಕ್ಕೆ ಅವಕಾಶ ನೀಡಲಾಗಿದೆ.
ನಗರ ಸೇರಿದಂತೆ ಜಿಲ್ಲೆಯ ಹಲವೆಡೆ ಪೊಲೀಸರ ಮಾತು ಕೇಳದವರ ಮೇಲೆ ಲಾಠಿ ಪ್ರಹಾರವೂ ನಡೆದಿದೆ.