Breaking News
Home / Uncategorized / ಜಾರಕಿಹೊಳಿ ತಂಡದಿಂದ ಲಾಬಿ; ಬಿಜೆಪಿ ರಾಷ್ಟ್ರ ನಾಯಕರ ಮೇಲೆ ಒತ್ತಡ; ಲಕ್ಷ್ಮಣ ಸವದಿ ಡಿಸಿಎಂ ಸ್ಥಾನಕ್ಕೆ ಕುತ್ತು?

ಜಾರಕಿಹೊಳಿ ತಂಡದಿಂದ ಲಾಬಿ; ಬಿಜೆಪಿ ರಾಷ್ಟ್ರ ನಾಯಕರ ಮೇಲೆ ಒತ್ತಡ; ಲಕ್ಷ್ಮಣ ಸವದಿ ಡಿಸಿಎಂ ಸ್ಥಾನಕ್ಕೆ ಕುತ್ತು?

Spread the love

ಬೆಳಗಾವಿ: ಎರಡು ವರ್ಷಗಳ ರಾಜಕೀಯ ವನವಾಸದ ಬಳಿಕ ಕಷ್ಟಪಟ್ಟು ಪರಿಷತ್‌ ಸದಸ್ಯರಾಗಿರುವ ಸಿ.ಪಿ.ಯೋಗೇಶ್ವರ್‌, ಈಗ ಸಚಿವ ಪಟ್ಟಕ್ಕಾಗಿ ಪ್ರಯತ್ನ ಆರಂಭಿಸಿದ್ದಾರೆ. ಇದರ ಜೊತೆಗೆ ರಮೇಶ್ ಜಾರಕಿಹೊಳಿ ಕೂಡ ಡಿಸಿಎಂ ಸ್ಥಾನಕ್ಕಾಗಿ ಹಪಹಪಿಸುತ್ತಿದ್ದು ಇದಕ್ಕಾಗಿ ದೆಹಲಿ ದಂಡಯಾತ್ರೆ ಕೈಗೊಂಡಿದ್ದಾರೆ.

ಕಾಂಗ್ರೆಸ್-ಜೆಡಿಎಸ್ ಸರ್ಕಾರವನ್ನು ಕೆಡವಿ ಬಿಜೆಪಿ ಸರ್ಕಾರ ರಚಿಸುವುದರಲ್ಲಿ ಮುಂಚೂಣಿಯಲ್ಲಿದ್ದ ಜಲಸಂಪನ್ಮೂಲ ಸಚಿವ ರಮೇಶ್ ಜಾರಕಿಹೊಳಿ‌ ಈಗ ಉಪ ಮುಖ್ಯಮಂತ್ರಿ ಸ್ಥಾನ ಪಡೆಯಲು ಕಸರತ್ತು ನಡೆಸಿದ್ದಾರೆ. ಮತ್ತೊಂದೆಡೆ ಸಿಪಿ ಯೊಗೇಶ್ವರ್‌ ಸಚಿವ ಸ್ಥಾನಕ್ಕೆ ಲಾಬಿಗೆ ಮುಂದಾಗಿದ್ದಾರೆ. ಈ ಕಾರಣಕ್ಕಾಗಿಯೇ ಈ ಇಬ್ಬರೂ ನಾಯಕರು ದೆಹಲಿಗೆ ತೆರಳಿ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ. ನಡ್ಡಾ ಅವರನ್ನು ಭೇಟಿ ಮಾಡಿದ್ದಾರೆ.

ಕಾಂಗ್ರೆಸ್ ‌ಪಕ್ಷದಿಂದ ಶಾಸಕರನ್ನು ಸೆಳೆದು ಸರ್ಕಾರ ರಚಿಸುವಾಗ ನನಗೆ ಡಿಸಿಎಂ ಸ್ಥಾನ ನೀಡುವ ವಾಗ್ದಾನ ಮಾಡಲಾಗಿತ್ತು. ಕೊಟ್ಟ ಮಾತಿನಂತೆ ಈಗ ನನ್ನನ್ನು ಡಿಸಿಎಂ ಮಾಡಲು‌ ಮುಖ್ಯಮಂತ್ರಿ ಯಡಿಯೂರಪ್ಪ ಅವರಿಗೆ ಸೂಚನೆ ನೀಡುವಂತೆ ನಡ್ಡ ಬಳಿ‌ ರಮೇಶ್ ಜಾರಕಿಹೊಳಿ ಒತ್ತಡ ಹೇರಿದ್ದಾರೆ. ಬಿಜೆಪಿ ಸರ್ಕಾರ ಬಂದ ಹೊಸದರಲ್ಲಿ ಹಿರಿಯ ನಾಯಕರು ಸ್ವಲ್ಪ ದಿನ‌ ಕಾಯುವಂತೆ ಸೂಚನೆ ನೀಡಿದ್ದರು. ಹಿರಿಯರ ಮಾತಿಗೆ ಬೆಲೆಕೊಟ್ಟು ಇಷ್ಟು ದಿನ ಕಾದಿದ್ದೇನೆ. ಈಗ ಉಪ ಮುಖ್ಯಮಂತ್ರಿ ಮಾಡಿ ಎಂದು ಕೇಳಿಕೊಂಡಿದ್ದಾರೆ ಎಂದು ಹೇಳಲಾಗುತ್ತಿದೆ.

ಇದಲ್ಲದೆ ರಮೇಶ್ ಜಾರಕಿಹೊಳಿ‌ ಜೊತೆ ನಡ್ಡಾ ಅವರನ್ನು ಭೇಟಿ ಮಾಡಿದ ವಿಧಾನ‌ ಪರಿಷತ್ ಸದಸ್ಯ ಸಿ.ಪಿ.‌ಯೋಗೇಶ್ವರ್, ರಾಜ್ಯದಲ್ಲಿ ಬಿಜೆಪಿ ಸರ್ಕಾರ ಬರಲು ಶ್ರಮಿಸಿದ್ದೇನೆ. ಆಗ ನನಗೆ ಮಂತ್ರಿ ಸ್ಥಾನದ ಭರವಸೆ ನೀಡಲಾಗಿತ್ತು. ಕೊಟ್ಟ ಮಾತಿನಂತೆ ನನಗೆ ಮಂತ್ರಿ ಸ್ಥಾನ ನೀಡುವಂತೆ ಸಿಎಂ ಯಡಿಯೂರಪ್ಪ ಅವರಿಗೆ ಸೂಚಿಸಿ ಎಂದು‌ ಕೇಳಿಕೊಂಡಿದ್ದಾರೆ ಎಂದು‌ ಗೊತ್ತಾಗಿದೆ.

ಬೆಳಗಾವಿ ರಾಜಕೀಯದಲ್ಲಿ ಪ್ರಮುಖ ಎದುರಾಳಿ ಎಂದೇ ಗುರುತಿಸಿಕೊಂಡಿರುವ ಲಕ್ಷ್ಮಣ ಸವದಿ ಅವರನ್ನು ರಮೇಶ್ ಜಾರಕಿಹೊಳಿ ತಂಡ ಟಾರ್ಗೆಟ್ ಮಾಡಿದೆ. ಡಿಸಿಸಿ ಬ್ಯಾಂಕ್ ಚುನಾವಣೆಗಳು ಸೇರಿದಂತೆ ಸ್ಥಳೀಯವಾಗಿ ಕೆಲವು ನಿರ್ಣಾಯಕ ಚುನಾವಣೆಗಳಲ್ಲಿ ಇಬ್ಬರೂ ರಾಜಕೀಯವಾಗಿ ಭಿನ್ನಾಭಿಪ್ರಾಯ ಹೊಂದಿದ್ದಾರೆ.

ಇದರ ಜೊತೆಗೆ ಸಿಪಿ ಯೋಗೇಶ್ವರ್ ಮತ್ತು ರಮೇಶ್ ಜಾರಕಿಹೊಳಿ ಕಾಂಗ್ರೆಸ್ ನಲ್ಲಿದ್ದಾಗ ಇಬ್ಬರು ಕೂಡ ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ ಅವರ ಜೊತೆ ಉತ್ತಮ ಸಂಬಂಧ ಹೊಂದಿರಲಿಲ್ಲ, ಶಿವಕುಮಾರ್ ಒಕ್ಕಲಿಗರ ಸಮುದಾಯದ ಸಾಮ್ರಾಜ್ಯದಲ್ಲಿ ಯೋಗೇಶ್ವರ್ ಅವರನ್ನು ಮತ್ತೊಬ್ಬ ಪ್ರಬಲ ನಾಯಕನನ್ನಾಗಿ ಮಾಡುವ ಉದ್ದೇಶದಿಂದ , ರಮೇಶ್ ಜಾರಕಿಹೊಳಿ ದೆಹಲಿಯಲ್ಲಿ ಹಿರಿಯ ನಾಯಕರ ಮುಂದೆ ಯೋಗೇಶ್ವರ್ ಪರ ಬ್ಯಾಟಿಂಗ್ ಮಾಡಿದ್ದಾರೆ,

ಯೋಗೇಶ್ವರ್ ಗೆ ಅವಕಾಶ ಕಲ್ಪಿಸಲು ಬಿಜೆಪಿ ಸವದಿಯನ್ನು ತೆಗೆದುಹಾಕುವ ಸಾಧ್ಯತೆಯಿಲ್ಲ, ಆದರೆ ಶಿವಕುಮಾರ್ ಅವರ ವಿರುದ್ಧ ರಾಜಕೀಯ ದಾಳ ಉರುಳಿಸಲು ಯೋಗೇಶ್ವರ್ ಗೆ ಸಚಿವ ಸ್ಥಾನ ನೀಡುವ ಸಾಧ್ಯತೆಯಿದೆ, ರಮೇಶ್ ಜಾರಕಿಹೊಳಿ ಬಂಡಾಯ ಶಾಸಕರೊಡನೆ ಕಾಂಗ್ರೆಸ್ ಗೆ ರಾಜಿನಾಮೆ ನೀಡಿ ಬಿಜೆಪಿ ಸೇರುವ ಮುನ್ನ ಡಿಸಿಎಂ ಹುದ್ದೆಗಾಗಿ ಬೇಡಿಕೆ ಇಟ್ಟಿದ್ದರು. ಅದಾದ ನಂತರ ಅವರಿಗೆ ಜಲ ಸಂಪನ್ಮೂಲ ಖಾತೆ ನೀಡಲಾಗಿತ್ತು. ತಮ್ಮ ಜೊತೆಗೆ ಸಾಥ್ ನೀಡಿದ್ದ ಎ ಎಚ್ ವಿಶ್ವನಾಥ್ ಮತ್ತು ಎಂಟಿಬಿ ನಾಗರಾಜ್ ಅವರಿಗೂ ಸಹ ಸಂಪುಟದಲ್ಲಿ ಸ್ಥಾನ ನೀಡುವಂತೆ ಜಾರಕಿಹೊಳಿ ದೆಹಲಿಯಲ್ಲಿ ಲಾಬಿ ನಡೆಸುತ್ತಿದ್ದಾರೆ.

ಸಂಪುಟ ವಿಸ್ತರಣೆ ಸಂದರ್ಭದಲ್ಲಿ ಕೆಲವು ಸಚಿವರನ್ನು ಕೈಬಿಟ್ಟು ಜಾರಕಿಹೊಳಿ ಆಪ್ತರನ್ನು ಸಚಿವ ಸಂಪುಟಕ್ಕೆ ಸಿಎಂ ಯಡಿಯೂರಪ್ಪ ಸೇರಿಸಿಕೊಳ್ಳುವ ಸಾಧ್ಯತೆ ಯಿದೆ ಎಂದು ಮೂಲಗಳು ತಿಳಿಸಿವೆ. ಹೀಗಾಗಿ ಸಿಎಂ ಯಡಿಯೂರಪ್ಪ ಅವರಿಗೆ ಸಂಪುಟ ವಿಸ್ತರಣೆ ಸುಲಭದ ಕೆಲಸವಾಗಿಲ್ಲ.


Spread the love

About Laxminews 24x7

Check Also

ಸೋಷಿಯಲ್‌ ಮೀಡಿಯಾ ವಿರುದ್ಧ ಶಿವರಾಜ್ ಕುಮಾರ್ ಬೇಸರ

Spread the love ಸೋಷಿಯಲ್‌ ಮೀಡಿಯಾ ಕುರಿತು ಹಲವು ನಟ-ನಟಿಯರು ಅಸಮಾಧಾನ ವ್ಯಕ್ತಪಡಿಸಿದ್ದಾರೆ. ತಮ್ಮ ಮಾತುಗಳನ್ನು ತಿರುಚುವ, ಥಂಬ್‌ನೈಲ್‌ ಮೂಲಕ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ