Breaking News
Home / ಜಿಲ್ಲೆ / ಕಾರ್ಮಿಕರ ಊಟದಲ್ಲಿಯೂ ರಾಜಕೀಯ : ತನಿಖೆಗೆ ಸಿದ್ದರಾಮಯ್ಯ ಒತ್ತಾಯ

ಕಾರ್ಮಿಕರ ಊಟದಲ್ಲಿಯೂ ರಾಜಕೀಯ : ತನಿಖೆಗೆ ಸಿದ್ದರಾಮಯ್ಯ ಒತ್ತಾಯ

Spread the love

ಬೆಂಗಳೂರು : ಬೆಂಗಳೂರು ನಗರದಲ್ಲಿ ಕಾರ್ಮಿಕರಿಗೆ ಸಿದ್ದ ಆಹಾರ ಮತ್ತು ಆಹಾರ ಸಾಮಾಗ್ರಿಗಳನ್ನು ವಿತರಿಸುವ ಕಾರ್ಮಿಕ ಇಲಾಖೆಯ ಯೋಜನೆಯನ್ನು ಬಿಜೆಪಿ ರಾಜಕೀಯವಾಗಿ ದುರುಪಯೋಗಗೊಳಿಸುತ್ತಿದ್ದು ಪಾರದರ್ಶಕತೆ ಇಲ್ಲದೆ ನಡೆಯುತ್ತಿರುವ ಈ ಯೋಜನೆಯ ಬಗೆಗಿನ ದೂರುಗಳ ಬಗ್ಗೆ ತನಿಖೆ ನಡೆಸಬೇಕೆಂದು ವಿಧಾನಸಭೆಯ ವಿರೋಧ ಪಕ್ಷದ ನಾಯಕರಾದ ಸಿದ್ದರಾಮಯ್ಯ ಅವರು ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪನವರನ್ನು ಒತ್ತಾಯಿಸಿದ್ದಾರೆ.

ಕಟ್ಟಡ ನಿರ್ಮಾಣ ಮತ್ತು ಇತರ ನಿರ್ಮಾಣ ಕಾರ್ಮಿಕರ ಸಾಮಾಜಿಕ ಭದ್ರತಾ ಮಂಡಳಿ ನಿಧಿಯಿಂದ ನೀಡಲಾಗುತ್ತಿರುವ ಆಹಾರದ ಪೊಟ್ಟಣಗಳನ್ನು ಬಿಜೆಪಿ ಶಾಸಕರು ಮತ್ತು ಮಹಾನಗರಪಾಲಿಕೆ ಸದಸ್ಯರು ಬೇಕಾಬಿಟ್ಟಿಯಾಗಿ ಕೇಂದ್ರ ಕಿಚನ್ ನಿಂದ ತರಿಸಿಕೊಂಡು ವಿತರಿಸುತ್ತಿದ್ದಾರೆ. ಅದೇ ರೀತಿ ಆಹಾರ ಸಾಮಾಗ್ರಿಗಳ ಹ್ಯಾಂಪರ್ಸ್ ಮೇಲೆ ತಮ್ಮ ಭಾವಚಿತ್ರ-ಹೆಸರಿನ ಲೇಬಲ್ ಗಳನ್ನು ಹಚ್ಚಿ, ತಮ್ಮ ಕ್ಷೇತ್ರಗಳಲ್ಲಿ ತಮ್ಮ ಮತದಾರರಿರುವ ಪ್ರದೇಶದಲ್ಲಿ ವಿತರಣೆ ಮಾಡುತ್ತಿದ್ದಾರೆ ಎಂದು ಸಿದ್ದರಾಮಯ್ಯ ಅವರು ಹೇಳಿಕೆಯಲ್ಲಿ ತಿಳಿಸಿದ್ದಾರೆ.

ಇದರಿಂದಾಗಿ ಅರ್ಹ ಫಲಾನುಭವಿಗಳಾದ ಕಟ್ಟಡ ಮತ್ತು ಇತರ ನಿರ್ಮಾಣ ಕಾರ್ಮಿಕರು ಹಾಗೂ ಅಸಂಘಟಿತ ಕ್ಷೇತ್ರದ ಕಾರ್ಮಿಕರು ತಮ್ಮದೇ ಕಲ್ಯಾಣ ಮಂಡಳಿಯ ನಿಧಿಯಿಂದ ನೀಡಲಾಗುತ್ತಿರುವ ಸಿದ್ದ ಆಹಾರ ಪೊಟ್ಟಣ ಮತ್ತು ಆಹಾರ ಸಾಮಗ್ರಿಗಳಿಂದ ವಂಚಿತರಾಗಿದ್ದಾರೆ.

ರಾಜ್ಯದಲ್ಲಿ ಸುಮಾರು 30 ಲಕ್ಷ ಕಟ್ಟಡ ಮತ್ತು ಇತರ ನಿರ್ಮಾಣ ಕಾರ್ಮಿಕರಿದ್ದು ಬೆಂಗಳೂರು ಮಹಾನಗರದಲ್ಲಿಯೇ ಸುಮಾರು 15 ಲಕ್ಷ ಕಾರ್ಮಿಕರು ನೊಂದಾಯಿಸಿಕೊಂಡಿದ್ದಾರೆ. ರಾಜ್ಯದಲ್ಲಿ ಸುಮಾರು ಒಂದು ಕೋಟಿಯಷ್ಟು ಅಸಂಘಟಿತ ಕ್ಷೇತ್ರದ ಕಾರ್ಮಿಕರಿದ್ದಾರೆ. ಇವರಲ್ಲಿ ಬಹುಸಂಖ್ಯೆಯ ಕಾರ್ಮಿಕರು ಸರ್ಕಾರದ ಯಾವುದೇ ನೆರವಿಲ್ಲದೆ ಉಪವಾಸ ಕೂರುವ ಪರಿಸ್ಥಿತಿ ಎದುರಾಗಿದೆ.

ರಾಜ್ಯ ಕಟ್ಟಡ ಮತ್ತು ಇತರ ನಿರ್ಮಾಣ ಕಾರ್ಮಿಕರ ಸಾಮಾಜಿಕ ಭದ್ರತಾ ಮಂಡಳಿಯ ನಿಧಿಯಿಂದ ಆಹಾರ ಒದಗಿಸಬೇಕೆಂಬ ಬೇಡಿಕೆಯನ್ನು ಪುರಸ್ಕರಿಸಿ ಕೊನೆಗೂ ರಾಜ್ಯ ಸರ್ಕಾರ ಕಾರ್ಮಿಕ ಇಲಾಖೆ ಅಧಿಕೃತ ಕಾರ್ಮಿಕ ಸಂಘಗಳ ಸಹಯೋಗದೊಡನೆ ಈ ಕಾರ್ಯಕ್ರಮವನ್ನು ಪ್ರಾರಂಭಿಸಿತ್ತು.

ಆದರೆ ಕಾರ್ಮಿಕ ಸಚಿವರೇ ಉದ್ಘಾಟಿಸಿದ ಈ ಯೋಜನೆಯನ್ನು ನಗರದ ಬಿಜೆಪಿ ಶಾಸಕರು ಮತ್ತು ಮಹಾನಗರಪಾಲಿಕೆ ಸದಸ್ಯರು ಮುಖ್ಯಮಂತ್ರಿಗಳ ಮೇಲೆ ಒತ್ತಡ ಹೇರಿ ಈಗ ಕಾರ್ಮಿಕ ಇಲಾಖೆಯಿಂದ ಮಹಾನಗರಪಾಲಿಕೆಗೆ ವರ್ಗಾಯಿಸಿವಂತೆ ಮಾಡಿದ್ದಾರೆ/ ಮತ್ತು ಈ ಯೋಜನೆಅನುಷ್ಠಾನದಲ್ಲಿ ಕಾರ್ಮಿಕ ಸಂಘಗಳನ್ನು ಹೊರಗಿಟ್ಟು ಬಿಜೆಪಿ ಮತ್ತು ಸಂಘ ಪರಿವಾರದ ಕಾರ್ಯಕರ್ತರನ್ನು ಸೇರಿಸಿಕೊಂಡಿದ್ದಾರೆ.

ಕೋವಿಡ್-19 ಇಡೀ ಮನುಕುಲ ಎದುರಿಸುತ್ತಿರುವ ಹಾವಳಿ. ಇದನ್ನು ನಾವೆಲ್ಲರೂ ಜಾತಿ-ಧರ್ಮ-ಪಕ್ಷ-ಪ್ರದೇಶಗಳನ್ನು ಮೀರಿ ಒಂದಾಗಿ ಎದುರಿಸಬೇಕಾಗಿದೆ. ಇದರಲ್ಲಿ ರಾಜಕೀಯ ಲಾಭ-ನಷ್ಟದ ಲೆಕ್ಕ ಹಾಕುತ್ತಾ ಕೂರುವುದು ಅಮಾನವೀಯವಾದುದು.

ಕಳೆದೆರಡು ದಿನಗಳಿಂದ ಪ್ರತಿದಿನ ಸುಮಾರು ಎರಡು ಲಕ್ಷ ಆಹಾರದ ಪೊಟ್ಟಣಗಳನ್ನು ಕೇಂದ್ರ ಕಿಚನ್ ನಿಂದ ಪೂರೈಸಲಾಗಿದೆ. ಅದೇ ರೀತಿ ಒಂದು ಲಕ್ಷ ಆಹಾರ ಸಾಮಾಗ್ರಿಗಳ ಹ್ಯಾಂಪರ್ಸ್ ಗಳನ್ನು ವಿತರಿಸಲಾಗಿದೆ.

ಇವುಗಳು ಯಾರಿಗೆ ನೀಡಲಾಗಿದೆ ಎನ್ನುವ ವಿವರ ಯಾರ ಬಳಿಯೂ ಇಲ್ಲ. ಕೆಲವು ಬಿಜೆಪಿ ಶಾಸಕರು ಆಹಾರ ಪೊಟ್ಟಣಗಳನ್ನು ವಿತರಿಸುವಅವರ ಜಾತಿ-ಧರ್ಮವನ್ನು ವಿಚಾರಿಸುತ್ತಿರುವ ದೂರುಗಳು ಕೇಳಿಬಂದಿವೆ. ಬೇರೆ ರಾಜ್ಯಗಳಿಂದ ಬಂದವರೆಲ್ಲರನ್ನೂ ಬಾಂಗ್ಲಾದೇಶೀಯರೆಂದು ದೂರ ಇಟ್ಟಿರುವ ಆರೋಪಗಳಿವೆ.

ಈ ಯೋಜನೆಯನ್ನು ಪಾರದರ್ಶಕ ರೀತಿಯಲ್ಲಿ ಅನುಷ್ಠಾನಗೊಳಿಸಬೇಕಾಗಿದೆ. ಈ ಹಿನ್ನೆಲೆಯಲ್ಲಿ ಕಾರ್ಮಿಕ ಇಲಾಖೆ ಮತ್ತು ಮಹಾನಗರಪಾಲಿಕೆಯ ಮೂಲಕ ಆಹಾರ ಪೊಟ್ಟಣ ಮತ್ತು ಆಹಾರ ಸಾಮಗ್ರಿಗಳ ಫಲಾನುಭವಿಗಳ ಪಟ್ಟಿಯನ್ನು ಬಿಡುಗಡೆ ಮಾಡಬೇಕೆಂದು ನಾನು ಒತ್ತಾಯಿಸುತ್ತಿದ್ದೇನೆ.

ಇದರ ಜೊತೆಗೆ ಆಹಾರ ಸಾಮಗ್ರಿಗಳನ್ನು ವಿತರಣೆಯ ಹೊಣೆಯನ್ನು ಬಿಜೆಪಿ ನಾಯಕರ ನೇತೃತ್ವದ ಸೇವಾ ಸಂಸ್ಥೆಗಳಿಗೆ ವಹಿಸಲಾಗಿದೆ. ಹಲವಾರು ಕಡೆಗಳಲ್ಲಿ ಆರ್ ಎಸ್ ಎಸ್ ಗೆ ಸೇರಿದ ಸಂಸ್ಥೆಗಳು ಕೂಡಾ ಇದರಲ್ಲಿ ಭಾಗವಹಿಸಿವೆ. ಈ ಮೂಲಕ ಕಟ್ಟಡ ಮತ್ತು ಇತರ ನಿರ್ಮಾಣ ಕಾರ್ಮಿಕರ ಭದ್ರತಾ ಮಂಡಳಿಯ ನಿಧಿಯಲ್ಲಿರುವ ಸುಮಾರು 8000 ಕೋಟಿ ರೂಪಾಯಿಗಳನ್ನು ಈ ಸಂಸ್ಥೆಗಳಿಗೆ ಧಾರೆಯೆರೆಯಲು ಸರ್ಕಾರ ನಿರ್ಧರಿಸಿದಂತಿದೆ.

ಲಾಕ್ ಡೌನ್ ಘೋಷಣೆಯ ದಿನದಿಂದಲೇ ಇಂದಿರಾ ಕ್ಯಾಂಟೀನ್ ಮೂಲಕ ಬಡವರಿಗೆ ಉಚಿತ ಊಟ-ತಿಂಡಿ ನೀಡುವಂತೆ ರಾಜ್ಯ ಸರ್ಕಾರವನ್ನು ಆಗ್ರ ಹಪಡಿಸಿದ್ದೆ. ಕೆಲವು ದಿನ ಪ್ರಾರಂಭವಾದ ಈ ಉಚಿತ ಊಟವನ್ನು ನಂತರ ನಿಲ್ಲಿಸಿ ಅದಕ್ಕೆ ದರ ನಿಗದಿಪಡಿಸಲಾಯಿತು. ಇದರಿಂದಾಗಿ ಆ ಕ್ಯಾಂಟೀನ್ ಗಳಿಗೆ ಬರುವವರ ಸಂಖ್ಯೆ ಅರ್ಧದಷ್ಟು ಇಳಿದಿದೆ.

ಕೇಂದ್ರ ಕಿಚನ್ ಮತ್ತು ಊಟದ ಮನೆಯನ್ನೊಳಗೊಂಡ ಇಂದಿರಾ ಕ್ಯಾಂಟೀನ್ ಗಳನ್ನು ಕಾರ್ಮಿಕ ಇಲಾಖೆ ಈಗಲೂ ಆಹಾರ ವಿತರಣೆಗೆ ಬಳಸಿಕೊಳ್ಳಲು ಸಾಧ್ಯ ಇದೆ. ಕಾರ್ಮಿಕ ಇಲಾಖೆಯ ಆಹಾರ ವಿತರಣೆಯ ಯೋಜನೆಯಲ್ಲಿ ಕಾರ್ಮಿಕರ ಜೊತೆ ಸಂಬಂಧವೇ ಇಲ್ಲದ ಸಂಸ್ಥೆಗಳಿಗೆ ಕೊಟ್ಟಿರುವ ಜವಾಬ್ದಾರಿಯನ್ನು ಹಿಂದಕ್ಕೆ ಪಡೆದು ಅದನ್ನು ಇಂದಿರಾ ಕ್ಯಾಂಟೀನ್ ಮೂಲಕ ಅಧಿಕೃತ ಕಾರ್ಮಿಕ ಸಂಘಗಳ ಸಹಯೋಗದೊಡನೆ ಮುಂದುವರೆಸಬೇಕೆಂದು ಸಿದ್ದರಾಮಯ್ಯ ಅವರು ಒತ್ತಾಯಿಸಿದ್ದಾರೆ.


Spread the love

About Laxminews 24x7

Check Also

ಉತ್ತರ ಪತ್ರಿಕೆಗಳಲ್ಲಿ ‘ಜೈ ಶ್ರೀ ರಾಮ್’ ಎಂದು ಬರೆದಿದ್ದ ವಿದ್ಯಾರ್ಥಿಗಳನ್ನು ಪಾಸ್‌ ಮಾಡಿದ ಇಬ್ಬರು ಶಿಕ್ಷಕರ ಅಮಾನತು

Spread the love ನವದೆಹಲಿ: ಪರೀಕ್ಷಾರ್ಥಿಗಳಿಗೆ ಅವರ ಉತ್ತರಗಳ ಗುಣಮಟ್ಟದ ಆಧಾರದ ಮೇಲೆ ಅಂಕಗಳನ್ನು ನೀಡಲಾಗುತ್ತದೆ. ಆದಾಗ್ಯೂ, ಉತ್ತರ ಪ್ರದೇಶದ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ