Breaking News
Home / new delhi / ಮಕ್ಕಳಿಗೆ ಆರೋಗ್ಯ ಕಾರ್ಡ್‌; ಈ ವರ್ಷವೇ ಲಭ್ಯ ರಾಜೀವ್‌ ಗಾಂಧಿ ವಿ.ವಿ.ಯೋಜನೆ

ಮಕ್ಕಳಿಗೆ ಆರೋಗ್ಯ ಕಾರ್ಡ್‌; ಈ ವರ್ಷವೇ ಲಭ್ಯ ರಾಜೀವ್‌ ಗಾಂಧಿ ವಿ.ವಿ.ಯೋಜನೆ

Spread the love

ಬೆಂಗಳೂರು: ಶಾಲೆಗಳಲ್ಲಿ ವಿದ್ಯಾರ್ಥಿಗಳ ಶೈಕ್ಷಣಿಕ ಪ್ರಗತಿಪತ್ರ ಸಾಮಾನ್ಯ. ಇನ್ನು ಅದರ ಜತೆ ಆರೋಗ್ಯದ ಮಾಹಿತಿಯನ್ನು ಒಳಗೊಂಡಿರುವ “ಆರೋಗ್ಯ ಕಾರ್ಡ್‌’ ಕೂಡ ನೀಡಲಾಗುತ್ತದೆ. ಪ್ರಸಕ್ತ ಶೈಕ್ಷಣಿಕ ವರ್ಷದಿಂದಲೇ ಆರೋಗ್ಯ ಕಾರ್ಡ್‌ ದೊರೆಯಲಿದೆ.

ಕೊರೊನಾದಿಂದ ಶಾಲೆಗಳ ಆರಂಭ ವಿಳಂಬವಾಗುತ್ತಿದೆ. ಇಂದಿನ ಪರಿಸ್ಥಿತಿಯಲ್ಲಿ ಮಕ್ಕಳ ಆರೋಗ್ಯದ ಬಗ್ಗೆ ಅತಿಯಾದ ಗಮನ ಅಗತ್ಯವಾಗಿರುವುದರಿಂದ ರಾಜೀವ್‌ ಗಾಂಧಿ ಆರೋಗ್ಯ ವಿಜ್ಞಾನಗಳ ವಿಶ್ವವಿದ್ಯಾನಿಲಯವು ಸರಕಾರಿ ಶಾಲಾ ಮಕ್ಕಳ ಆರೋಗ್ಯ ತಪಾಸಣೆ ಮತ್ತು ಸ್ವಾಸ್ಥ್ಯ ನಿಗಾವಣೆಗೆ ಯೋಜನೆ ಸಿದ್ಧಪಡಿಸಿದೆ. ಪ್ರತಿ ವಿದ್ಯಾರ್ಥಿಯ ಆರೋಗ್ಯ ತಪಾಸಣೆ, ಚಿಕಿತ್ಸೆ ಮತ್ತು ಉತ್ತಮ ಆರೋಗ್ಯ ಕಾಪಾಡಿಕೊಳ್ಳುವ ಮಾಹಿತಿಯನ್ನು ವಿ.ವಿ.ಯು ತನ್ನ ಅಂತಿಮ ವರ್ಷದ ವಿದ್ಯಾರ್ಥಿಗಳ ಸಹಯೋಗದಲ್ಲಿ ನೀಡಲಿದೆ.

ವೈದ್ಯ ವಿದ್ಯಾರ್ಥಿಗಳ ತಂಡ ಶಾಲೆಗೆ ಭೇಟಿ ನೀಡಿ, ಮಕ್ಕಳ ಪೂರ್ಣ ತಪಾಸಣೆ ನಡೆಸಲಿದೆ.

ಮುಖ್ಯವಾಗಿ ಉಸಿರಾಟದ ಸಮಸ್ಯೆ, ಕಣ್ಣುಗಳ ಸಮಸ್ಯೆ, ತೂಕದಲ್ಲಿ ಏರಿಳಿತ, ದೇಹದ ಎತ್ತರ, ದಿಢೀರ್‌ ಅಸ್ವಾಸ್ಥ್ಯಕ್ಕೆ ಕಾರಣ ಹೀಗೆ ಆರೋಗ್ಯದ ಪ್ರಾಥಮಿಕ ಅಂಶಗಳನ್ನು ಕಾರ್ಡ್‌ ನಲ್ಲಿ ದಾಖಲಿಸಲಾಗುತ್ತದೆ. ಪ್ರತಿ ಮೂರು ಯಾ ಆರು ತಿಂಗಳಿಗೊಮ್ಮೆ ಅಪ್‌ಡೇಟ್‌ ಮಾಡಲಾಗುತ್ತದೆ. ಒಂದನೇ ತರಗತಿಯಲ್ಲಿ ನೀಡಿದ ಆರೋಗ್ಯ ಕಾರ್ಡ್‌ ವಿದ್ಯಾರ್ಥಿಯು ಪ್ರೌಢಶಾಲೆ ಮುಗಿಸುವವರೆಗೂ ಮುಂದುವರಿಯುತ್ತದೆ. ಶೈಕ್ಷಣಿಕ ಪ್ರಗತಿಯ ಮಾದರಿಯಲ್ಲಿ ಆರೋಗ್ಯದ ಪ್ರಗತಿ ಪರಿಶೀಲನೆ ಇದಾಗಿದೆ ಎಂದು ರಾಜೀವ್‌ ಗಾಂಧಿ ಆರೋಗ್ಯ ವಿಜ್ಞಾನಗಳ ವಿ.ವಿ.ಯ ಹಿರಿಯ ಅಧಿಕಾರಿಯೊಬ್ಬರು ಮಾಹಿತಿ ನೀಡಿದರು.

ಆರೋಗ್ಯ ತಪಾಸಣೆ ಹೇಗೆ?
ವಿದ್ಯಾರ್ಥಿಗಳ ಆರೋಗ್ಯ ತಪಾಸಣೆ ಅತ್ಯಂತ ಸೂಕ್ಷ್ಮ ವಿಚಾರವಾಗಿದ್ದು, ವಿ.ವಿ.ಯು ಅಂತಿಮ ಸೆಮಿಸ್ಟರ್‌ ವಿದ್ಯಾರ್ಥಿಗಳಿಗೆ ಇಂಟರ್ನ್ಶಿಪ್‌ ಕಾರ್ಯಕ್ರಮದಲ್ಲಿ ಕಮ್ಯೂನಿಟಿ ಮೆಡಿಸಿನ್‌ ಭಾಗವಾಗಿ ನಡೆಸಲಿದೆ. ಇದೊಂದು ನಿರಂತರ ಪ್ರಕ್ರಿಯೆ ಆಗಿರುತ್ತದೆ ಎಂದು ವಿ.ವಿ. ಉಪ ಕುಲಸಚಿವ ಡಾ| ವಸಂತ ಶೆಟ್ಟಿ ಹೇಳಿದ್ದಾರೆ.

ಹಲವು ವರ್ಷಗಳ ಬಳಿಕ
ಕೆಲವು ವರ್ಷಗಳ ಹಿಂದೆ ಶಾಲೆಗಳಲ್ಲಿ ಆರೋಗ್ಯ ತಪಾಸಣೆ ನಡೆಯುತ್ತಿತ್ತು. ಕೊರೊನಾ ಆತಂಕ ಹೆಚ್ಚಾಗುವ ಜತೆಗೆ ಆರೋಗ್ಯದ ಕಾಳಜಿಯೂ ಹೆಚ್ಚುತ್ತಿರುವುದರಿಂದ ಶಾಲಾ ಮಕ್ಕಳ ನಿರಂತರ ಆರೋಗ್ಯ ತಪಾಸಣೆಗೆ ಸರಕಾರ ಹಾಗೂ ಸಾರ್ವಜನಿಕ ಶಿಕ್ಷಣ ಇಲಾಖೆ ಚಿಂತನೆ ನಡೆಸುತ್ತಿವೆ ಎಂದು ಇಲಾಖೆಯ ಹಿರಿಯ ಅಧಿಕಾರಿ ಮಾಹಿತಿ ನೀಡಿದ್ದಾರೆ.

ಉನ್ನತ ಚಿಕಿತ್ಸೆಗೂ ಶಿಫಾರಸು
ತಪಾಸಣೆ ಸಂದರ್ಭ ಯಾವುದೇ ವಿದ್ಯಾರ್ಥಿಯ ಆರೋಗ್ಯ ಏರುಪೇರಾಗಿರುವುದು ಕಂಡುಬಂದರೆ ಅಲ್ಲಿಯೇ ಚಿಕಿತ್ಸೆಯನ್ನೂ ನೀಡುತ್ತಾರೆ. ಉನ್ನತ ಚಿಕಿತ್ಸೆಯ ಅಗತ್ಯ ಕಂಡುಬಂದಲ್ಲಿ ಜಿಲ್ಲಾ ಆಸ್ಪತ್ರೆಗೆ ಶಿಫಾರಸು ಮಾಡುತ್ತಾರೆ. ತಪಾಸಣೆ ವೇಳೆ ನೀಡುವ ಮಾಹಿತಿ ಪತ್ರದ ಆಧಾರದಲ್ಲಿ ಮಕ್ಕಳು ಪಾಲಕರೊಂದಿಗೆ ಜಿಲ್ಲಾಸ್ಪತ್ರೆಗೆ ದಾಖಲಾಗಿ ಉನ್ನತ ಮಟ್ಟದ ಚಿಕಿತ್ಸೆ ಪಡೆಯಬಹುದು. ಅಲ್ಲದೆ ಯಾವ ಕಾಲೇಜು ಮತ್ತು ಆಸ್ಪತ್ರೆಯಿಂದ ತಪಾಸಣೆಗೆ ಬಂದಿರುತ್ತಾರೋ ಅಲ್ಲಿಯೂ ಚಿಕಿತ್ಸೆ ಪಡೆಯಲು ಅವಕಾಶ ಇರುತ್ತದೆ ಎಂದು ಡಾ| ವಸಂತ ಶೆಟ್ಟಿ ಮಾಹಿತಿ ನೀಡಿದರು.

ರಾಜೀವ್‌ ಗಾಂಧಿ ಆರೋಗ್ಯ ವಿಜ್ಞಾನಗಳ ವಿಶ್ವವಿದ್ಯಾನಿಲಯದ ಅಧೀನದ ಕಾಲೇಜುಗಳು ಆಯಾ ಜಿಲ್ಲೆಯಲ್ಲೇ ಈ ಕಾರ್ಯ ಮಾಡಲಿವೆ. ಅಂತಿಮ ವರ್ಷದ ಅಂತಿಮ ಸೆಮಿಸ್ಟರ್‌ ವಿದ್ಯಾರ್ಥಿಗಳು ಕಮ್ಯೂನಿಟಿ ಮೆಡಿಸಿನ್‌ ಇಂಟರ್ನ್ಶಿಪ್‌ ಕಾರ್ಯಕ್ರಮವಾಗಿ ನಿರಂತರವಾಗಿ ನಡೆಸಲಿದ್ದಾರೆ.
– ಡಾ| ಎಸ್‌. ಸಚ್ಚಿದಾನಂದ ರಾಜೀವ್‌ ಗಾಂಧಿ ಆರೋಗ್ಯ ವಿಜ್ಞಾನಗಳ ವಿ.ವಿ. ಕುಲಪತಿ


Spread the love

About Laxminews 24x7

Check Also

ಮೇ 7ರಂದು ಮತದಾನ: ಮದ್ಯ ಮಾರಾಟ ನಿರ್ಬಂಧ ಮಾಹಿತಿ

Spread the loveಚಿಕ್ಕಮಗಳೂರು, ಮೇ 04: ಕರ್ನಾಟಕದ 14 ಲೋಕಸಭಾ ಕ್ಷೇತ್ರಗಳಲ್ಲಿ ಮೇ 7ರ ಮಂಗಳವಾರ ಮತದಾನ ನಡೆಯಲಿದೆ. ಮತದಾನಕ್ಕೆ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ