Breaking News
Home / Uncategorized / ಬೆಳಗಾವಿ | ಕಾಣೆಯಾದ ಬೆಳಗಾವಿಯ ಜಡಿಮಳೆ..!

ಬೆಳಗಾವಿ | ಕಾಣೆಯಾದ ಬೆಳಗಾವಿಯ ಜಡಿಮಳೆ..!

Spread the love

ಬೆಳಗಾವಿ: ಮಳೆಗಾಲ ಆರಂಭದ ಮೊದಲ ತಿಂಗಳು, ಕಳೆದ ಜೂನ್‌ನಲ್ಲಿ ಜಿಲ್ಲೆಯಲ್ಲಿ ಅಬ್ಬರಿಸಿದ್ದ ಮಳೆರಾಯ ಜುಲೈನಲ್ಲಿ ತಣ್ಣಗಾಗಿದ್ದಾನೆ. ಪ್ರತಿವರ್ಷ ಜೂನ್‌ಗಿಂತಲೂ ಜುಲೈನಲ್ಲಿಯೇ ಹೆಚ್ಚು ಮಳೆಯಾಗುತ್ತಿತ್ತು. ವಾರಗಟ್ಟಲೆ ಜಿಟಿಜಿಟಿ ಸುರಿಯುತ್ತಿತ್ತು. ಆದರೆ, ಈ ಸಲ ಬೆಳಗಾವಿಯ ಜಡಿಮಳೆ ಕಾಣೆಯಾಗಿದೆ. ವಾಡಿಕೆಗಿಂತ ಶೇ 20ರಷ್ಟು ಕಡಿಮೆ ಮಳೆಯಾಗಿದ್ದು, ರೈತರಲ್ಲಿ ಆತಂಕ ಸೃಷ್ಟಿಸಿದೆ.

ಜೂನ್‌ನಲ್ಲಿ 180.9 ಸೆಂ.ಮೀ ವಾಡಿಕೆ ಮಳೆಗೆ ಹೋಲಿಸಿದರೆ 228.4 ಸೆಂ.ಮೀ.ನಷ್ಟು (ಶೇ 25ರಷ್ಟು ಹೆಚ್ಚು) ಮಳೆಯಾಗಿತ್ತು. ಅದೇ ರಭಸ ಜುಲೈನಲ್ಲಿ ಕಂಡುಬರಲಿಲ್ಲ. ಮೊದಲ ವಾರದಲ್ಲಿ ಹಾಗೂ ಮೂರನೇ ವಾರದಲ್ಲಿ ಜೋರಾಗಿ ಸುರಿದಿದ್ದ ಮಳೆಯ ರಭಸ, ತಿಂಗಳ ಕೊನೆಯ 10 ದಿನಗಳಲ್ಲಿ ತೀವ್ರವಾಗಿ ಕಡಿಮೆಯಾಗಿತ್ತು. ತಿಂಗಳಾಂತ್ಯಕ್ಕೆ 215.7 ಸೆಂ.ಮೀ ಮಳೆಯಾಗಿದೆ. ಇದು ವಾಡಿಕೆ ಮಳೆ 257.8 ಸೆಂ.ಮೀ. ಗಿಂತ ಶೇ 20ರಷ್ಟು ಕಡಿಮೆಯಾಗಿದೆ.

 

ಖುಷ್ಕಿ ಪ್ರದೇಶದಲ್ಲಿ ಹೆಚ್ಚು ಮಳೆ: ಖುಷ್ಕಿ ಪ್ರದೇಶದಲ್ಲಿ ಹೆಚ್ಚು ಮಳೆಯಾಗಿರುವುದು ಆಶ್ಚರ್ಯ ಮೂಡಿಸಿದೆ. ಸವದತ್ತಿ, ರಾಮದುರ್ಗ, ರಾಯಬಾಗ, ಮೂಡಲಗಿ, ಕಾಗವಾಡ, ಗೋಕಾಕ ಹಾಗೂ ಚಿಕ್ಕೋಡಿಯಲ್ಲಿ ವಾಡಿಕೆಗಿಂತಲೂ ಹೆಚ್ಚು ಮಳೆಯಾಗಿದೆ. ಸವದತ್ತಿಯಲ್ಲಿ 7.6 ಸೆಂ.ಮೀ ವಾಡಿಕೆ ಮಳೆಗೆ ಹೋಲಿಸಿದರೆ 19.9 ಸೆಂ.ಮೀ ಮಳೆಯಾಗಿದೆ. ಸುಮಾರು ಎರಡೂವರೆ ಪಟ್ಟು ಹೆಚ್ಚಾಗಿದೆ. ಇದೇ ರೀತಿ ರಾಯಬಾಗದಲ್ಲೂ 7.4 ಸೆಂ.ಮೀ ವಾಡಿಕೆ ಮಳೆಗೆ ಹೋಲಿಸಿದರೆ 17.0 ಸೆಂ.ಮೀ ಮಳೆಯಾಗಿದೆ.

ಇದಕ್ಕೆ ತದ್ವಿರುದ್ಧ ಎನ್ನುವಂತೆ ಖಾನಾಪುರ, ಬೆಳಗಾವಿ ಸೇರಿದಂತೆ ಮಲೆನಾಡು ಪ್ರದೇಶಗಳಲ್ಲಿ ವಾಡಿಕೆಗಿಂತ ಅರ್ಧಕ್ಕಿಂತಲೂ ಕಡಿಮೆ ಮಳೆಯಾಗಿದೆ. ಜಿಲ್ಲೆಯಲ್ಲಿ ಅತಿ ಹೆಚ್ಚು ಮಳೆ ಸುರಿಯುವ ಖಾನಾಪುರದಲ್ಲಿ ವಾಡಿಕೆ ಮಳೆ 75.6 ಸೆಂ.ಮೀ.ಗೆ ಹೋಲಿಸಿದರೆ ಕೇವಲ 33.3 ಸೆಂ.ಮೀ ಮಳೆಯಾಗಿದೆ. ಇದೇ ರೀತಿ ಬೆಳಗಾವಿಯಲ್ಲಿ ವಾಡಿಕೆ ಮಳೆ 45.5 ಸೆಂ.ಮೀ.ಗೆ ಹೋಲಿಸಿದರೆ ಕೇವಲ 24.1 ಸೆಂ.ಮೀ ಮಳೆಯಾಗಿದೆ.

ಕುಡಿಯುವ ನೀರಿಗೆ ತೊಂದರೆಯಿಲ್ಲ: ಕಳೆದ ವರ್ಷ ಸುರಿದ ಅಪಾರ ಮಳೆಯ ನೀರು ಹಾಗೂ ಜೂನ್‌ ತಿಂಗಳ ನೀರು ಜಲಾಶಯಗಳಲ್ಲಿ, ಕೆರೆ, ನದಿಗಳಲ್ಲಿ ಸಂಗ್ರಹವಿದೆ. ಬೆಳಗಾವಿ ನಗರಕ್ಕೆ ನೀರು ಪೂರೈಸುವ ರಾಕ್ಕಸಕೊಪ್ಪ ಜಲಾಶಯ, ಹಿಡಕಲ್‌ ಜಲಾಶಯ ಹಾಗೂ ನವಿಲುತೀರ್ಥ ಜಲಾಶಯಗಳಲ್ಲಿ ಸಾಕಷ್ಟು ನೀರು ಇದೆ. ಸದ್ಯಕ್ಕೆ ಕುಡಿಯುವ ನೀರಿಗೆ ಕೊರತೆ ಉಂಟಾಗದು. ಆದರೆ, 8-10 ದಿನಗಳಲ್ಲಿ ಮತ್ತೆ ಮಳೆ ಅಬ್ಬರಿಸದಿದ್ದರೆ ಕೃಷಿಯ ಮೇಲೆ ಪರಿಣಾಮ ಬೀರುವ ಆತಂಕ ಎದುರಾಗಿದೆ.

ಶೇ 96ರಷ್ಟು ಬಿತ್ತನೆ: ಮುಂಗಾರು ಪೂರ್ವ ಹಾಗೂ ಜೂನ್ ತಿಂಗಳಲ್ಲಿ ಉತ್ತಮ ಮಳೆಯಾಗಿದ್ದರಿಂದ ಜಿಲ್ಲೆಯಾದ್ಯಂತ ಬಿತ್ತನೆ ಕಾರ್ಯ ನಡೆದಿತ್ತು. ಶೇ 96ರಷ್ಟು ಪ್ರದೇಶದಲ್ಲಿ ಬಿತ್ತನೆಯಾಗಿದೆ. ಬಿತ್ತಿರುವ ಬೀಜ ಮೊಳಕೆಯೊಡೆದು, ಮೇಲೇರುತ್ತಿದ್ದು ಮಳೆಯ ಅವಶ್ಯಕತೆ ಬಿದ್ದಿದೆ. ಸದ್ಯದಲ್ಲಿಯೇ ಮಳೆಯಾಗದಿದ್ದರೆ ಬೆಳೆ ನಾಶವಾಗುವ ಭೀತಿ ಮೂಡಿಸಿದೆ.

‘ಭತ್ತ, ಜೋಳ, ಮುಸುಕಿನ ಜೋಳ, ಹೆಸರು, ಸೋಯಾ ಅವರೆ ಸೇರಿದಂತೆ ಪ್ರಮುಖ ಬೆಳೆಗಳ ಬಿತ್ತನೆ ಮಾಡಲಾಗಿದೆ. 6,88,120 ಹೆಕ್ಟೇರ್‌ ಭೂಮಿಯ ಪೈಕಿ 6,65,398 ಹೆಕ್ಟೇರ್‌ ಬಿತ್ತನೆ ಮಾಡಲಾಗಿದೆ. ತಂಬಾಕು, ಕಬ್ಬಿನ ಬಿತ್ತನೆ ಇನ್ನಷ್ಟೇ ಆಗಬೇಕಾಗಿದೆ. ಸದ್ಯಕ್ಕೆ ಭೂಮಿಯಲ್ಲಿ ತೇವಾಂಶವಿದೆ. ಮುಂಬರುವ ದಿನಗಳಲ್ಲಿ ಮಳೆಯಾಗದಿದ್ದರೆ ಬೆಳೆಗಳಿಗೆ ತೊಂದರೆಯಾಗಲಿದೆ’ ಎಂದು ಕೃಷಿ ಇಲಾಖೆಯ ಅಧಿಕಾರಿಗಳು ಹೇಳಿದ್ದಾರೆ.


Spread the love

About Laxminews 24x7

Check Also

ಗಟ್ಟಿಯಾಗಿ ಬಿಜೆಪಿಗೆ ವೋಟ್ ಮಾಡಿ, ಕಾಂಗ್ರೆಸ್ಸಿಗರ ಸುಳ್ಳು ವದಂತಿಗಳನ್ನು ನಂಬಬೇಡಿ- ಶಾಸಕ ಬಾಲಚಂದ್ರ ಜಾರಕಿಹೊಳಿ

Spread the love  ಬೆಳಗಾವಿಗೆ ಬೆಂಗಳೂರು ಸ್ಥಾನಮಾನಕ್ಕೆ ಪ್ರಯತ್ನ- ಜಗದೀಶ ಶೆಟ್ಟರ್ ಮೂಡಲಗಿಯಲ್ಲಿ ಬಿಜೆಪಿ ಪ್ರಚಾರ ಸಭೆಯಲ್ಲಿ ಶೆಟ್ಟರ್ ಪರ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ