ಬೆಂಗಳೂರು: ಕರ್ನಾಟಕದಲ್ಲಿ ಕೊರೊನಾ ಸೋಂಕಿತರ ಸಂಖ್ಯೆ ದಿನದಿಂದ ದಿನಕ್ಕೆ ಏರಿಕೆ ಆಗುತ್ತಿದೆ. ಇತ್ತ ಸಾವಿನ ಸಂಖ್ಯೆಯೂ ದಿನಕಳೆದಂತೆ ಹೆಚ್ಚಾಗುತ್ತಿದೆ. ಹೀಗಾಗಿ ಕೇಂದ್ರ ಆರೋಗ್ಯ ಇಲಾಖೆ ಸಾವಿನ ಸಂಖ್ಯೆ ಹೆಚ್ಚಾಗುತ್ತಿದ್ದು ಇದಕ್ಕೆ ಕಡಿವಾಣ ಹಾಕಿ ಎಂದು ಕರ್ನಾಟಕಕ್ಕೆ ಎಚ್ಚರಿಕೆ ನೀಡಿದೆ.
ಕೇರಳದಲ್ಲಿ ಕೊರೊನಾ ವೈರಸ್‍ನಿಂದ ಮೂವರು ಮೃತಪಟ್ಟಿದ್ದಾರೆ. ಆದರೆ ಕರ್ನಾಟಕದಲ್ಲಿ 14 ಮಂದಿ ಸಾವನ್ನಪ್ಪಿದ್ದಾರೆ. ಕೇರಳಕ್ಕಿಂತ ಕರ್ನಾಟಕದಲ್ಲಿ ಕೊರೊನಾ ಕಡಿಮೆ ಇದ್ದರೂ ಸಾವಿನ ಸಂಖ್ಯೆ ಹೆಚ್ಚಳವಾಗಿದೆ. ಹೀಗಾಗಿ ಕರ್ನಾಟಕಕ್ಕೆ ಕೇಂದ್ರ ಆರೋಗ್ಯ ಇಲಾಖೆ ಎಚ್ಚರಿಕೆ ನೀಡಿದೆ. ಈ ಎಚ್ಚರಿಕೆ ಬೆನ್ನಲ್ಲೇ ರಾಜ್ಯ ಸರ್ಕಾರ ತಜ್ಞ ವೈದ್ಯರ ಅಭಿಪ್ರಾಯ ಪಡೆದಿದೆ.
ಕೊರೊನಾದಿಂದ ಸಾವು ಹೇಗೆ ಸಂಭವಿಸುತ್ತೆ ಎನ್ನುವುದನ್ನು ಸಮರ್ಪಕವಾಗಿ ಇದುವರೆಗೂ ಪತ್ತೆ ಮಾಡಲು ಸಾಧ್ಯವಾಗಿಲ್ಲ. ಶ್ವಾಸಕೋಶಕ್ಕೆ ಆಟ್ಯಾಕ್ ಆದಾಗ ಯಾವ ಸಂದರ್ಭದಲ್ಲಿ ರೋಗಿಯ ರೋಗನಿರೋಧಕ ಶಕ್ತಿ ಕಳೆದುಕೊಳ್ಳುತ್ತಾನೆ ಎನ್ನುವುದು ಇನ್ನೂ ನಿಗೂಢವಾಗಿದೆ. ಹೀಗಾಗಿ ಕರ್ನಾಟಕ ಸರ್ಕಾರ ವೈದ್ಯರ ಅಭಿಪ್ರಾಯ ಕಲೆಹಾಕಿದೆ.
ಕರ್ನಾಟಕದಲ್ಲಿ ಅತ್ಯಾಧುನಿಕ ವೈದ್ಯಕೀಯ ಸಲಕರಣೆ ಇದ್ದರೂ ರೋಗಿಗಳು ಸಾವನ್ನಪ್ಪುತ್ತಿರುವುದು ಆತಂಕವಾಗಿದೆ. ರೋಗ ಪತ್ತೆ ಮಾಡುವುದು ತಡವಾಗುತ್ತಿದೆ. ಸೋಂಕಿತ ವ್ಯಕ್ತಿಯ ಪರಿಸ್ಥಿತಿ ಕೈ ಮೀರಿದಾಗ ಪ್ರಕರಣ ತಿಳಿಯುತ್ತದೆ. ಕೊನೆ ಕ್ಷಣದಲ್ಲಿ ರೋಗಿಗಳು ಆಸ್ಪತ್ರೆಗೆ ದಾಖಲಾಗುತ್ತಿದ್ದಾರೆ. ಹೀಗಾಗಿ ಕರ್ನಾಟಕದಲ್ಲಿ ಕೊರೊನಾ ಜ್ವರ ಪರೀಕ್ಷೆ ಇನ್ನಷ್ಟು ವೇಗದಲ್ಲಿ ಆಗಬೇಕು. ಮೃತ 14 ಮಂದಿಯಲ್ಲಿ ಬಹುತೇಕ ರೋಗಿಗಳು 60 ವರ್ಷ ಮೇಲ್ಪಟ್ಟವರು. ಹೆಚ್ಚಿನವರಲ್ಲಿ ಹೃದ್ರೋಗ, ಕಿಡ್ನಿ, ಸಕ್ಕರೆ ಕಾಯಿಲೆ ಇದೆ. ಅಲ್ಲದೇ ಶ್ವಾಸಕೋಸದ ತೊಂದರೆ ಇರುವ ಕೊರೊನಾ ರೋಗಿಗಳ ಮೇಲೆ ಇನ್ನಷ್ಟು ನಿಗಾ ವಹಿಸಬೇಕು ಎಂದು ತಜ್ಞ ವೈದ್ಯರು ಮುನ್ನೆಚ್ಚರಿಕಾ ವರದಿ ಸಲ್ಲಿಸಿದ್ದಾರೆ.
ಹಿರಿಯ ರೋಗಿಗಳಲ್ಲಿ ಯಾವಾಗ ಆಕ್ಸಿಜನ್ ಕಡಿಮೆಯಾಗುತ್ತೆ ಎನ್ನುವ ಮಾಹಿತಿ ಮಾನಿಟರ್ ಸರಿಯಾಗಿ ಆಗುತ್ತಿಲ್ಲ. ಹೀಗಾಗಿ ಈ ಬಗ್ಗೆ ನಿಗಾ ವಹಿಸಬೇಕು. ಕೊರೊನಾ ರೋಗ ಪೀಡಿತರ ಚಿಕಿತ್ಸೆ ವೆಂಟಿಲೇಟರ್ ಹೆಚ್ಚಾಗಬೇಕು. ಜೊತೆಗೆ ಕೊರೊನಾದಿಂದ ಗುಣಮುಖರಾದವರ ರೋಗ ನಿರೋಧಕ ಶಕ್ತಿ ಬಗ್ಗೆ ಅಧ್ಯಯನ ಮಾಡಬೇಕು. ಸಂಪೂರ್ಣ ಕೇರಳ ಮಾದರಿಗೆ ಮೊರೆ ಹೋಗಬೇಕು ಅಂತ ತಜ್ಞರು ಶಿಫಾರಸ್ಸು ಮಾಡಿದ್ದಾರೆ.