Home / ಜಿಲ್ಲೆ / 5 ಕೋಟಿ ಕೊಟ್ಟು 50 ಕೋಟಿ ತಂದರು,ಬಡಜನರಿಗೆ ದೊಡ್ಡ ಪ್ರಮಾಣದ ನೆರವನ್ನು ಸರಕಾರದಿಂದ ಪಡೆದಿದ್ದಾರೆ.:ಬಾಲಚಂದ್ರ ಜಾರಕಿಹೊಳಿ

5 ಕೋಟಿ ಕೊಟ್ಟು 50 ಕೋಟಿ ತಂದರು,ಬಡಜನರಿಗೆ ದೊಡ್ಡ ಪ್ರಮಾಣದ ನೆರವನ್ನು ಸರಕಾರದಿಂದ ಪಡೆದಿದ್ದಾರೆ.:ಬಾಲಚಂದ್ರ ಜಾರಕಿಹೊಳಿ

Spread the love

ಬೆಳಗಾವಿ ಜಿಲ್ಲೆ ರಾಜಕಾರಣದಲ್ಲಿ ರಾಜ್ಯದಲ್ಲೇ ಮುಂಚೂಣಿಯಲ್ಲಿದೆ. ಯಾವುದೇ ಪಕ್ಷವಿರಲಿ ಸರಕಾರದ ಸ್ಥಿರತೆ ಮತ್ತು ಅಸ್ಥಿರತೆ ಎರಡರಲ್ಲೂ ಜಿಲ್ಲೆಯ ಪಾತ್ರ ಪ್ರಾಮುಖ್ಯತೆ ವಹಿಸುತ್ತದೆ.

ಜಿಲ್ಲೆಯಲ್ಲಿ ಸಾಹುಕಾರರೆಂದು ಕರೆಸಿಕೊಳ್ಳುವ  3 ಮನೆತನಗಳು ಇತ್ತೀಚಿನ ದಿನಗಳಲ್ಲಿ ರಾಜ್ಯ ರಾಜಕಾರಣದಲ್ಲಿ ನಿರಂತರ ಸುದ್ದಿ ಮಾಡುತ್ತಿವೆ. ಒಬ್ಬರು ಒಂದು ಸರಕಾರ ಬೀಳಿಸಿ ಮತ್ತೊಂದು ಸರಕಾರ ತಂದು ನಿಲ್ಲಿಸಿದರೆ, ಮತ್ತೊಬ್ಬರು ಹಿರಿಯರಾಗಿಯೂ ಸಚಿವಸ್ಥಾನ ಸಿಗದೆ ಸರಕಾರವನ್ನು ಸದಾ ತುದಿಗಾಲಲ್ಲಿ ನಿಲ್ಲುವಂತೆ ಮಾಡಿದ್ದಾರೆ. ಇನ್ನೊಬ್ಬರು ಚುನಾವಣೆಯಲ್ಲಿ ಸೋತು ಹೋಗಿದ್ದರೂ ಉಪಮುಖ್ಯಮಂತ್ರಿ ಸ್ಥಾನದಂತಹ ದೊಡ್ಡ ಸ್ಥಾನಕ್ಕೇರಿ ಇಡೀ ರಾಜ್ಯವೇ ಹುಬ್ಬೇರುವಂತೆ ಮಾಡಿದರು.

ಇವರೇ ಜಾರಕಿಹೊಳಿ ಸಾಹುಕಾರರು, ಕತ್ತಿ ಸಾಹುಕಾರರು ಹಾಗೂ ಸವದಿ ಸಾಹುಕಾರರು. 

ಈ ಬಾರಿ ಸಮ್ಮಿಶ್ರ ಸರಕಾರ ಕೆಡವಿ ಬಿಜೆಪಿ ಸರಕಾರ ತಂದು ನಿಲ್ಲಿಸಿದ್ದು ಗೋಕಾಕ ಸಾಹುಕಾರರು. ಮೇಲ್ನೋಟಕ್ಕೆ ರಮೇಶ ಜಾರಕಿಹೊಳಿ ಕಂಡರೂ ಅವರ ಹಿಂದಿನ ಶಕ್ತಿ ಬಾಲಚಂದ್ರ ಜಾರಕಿಹೊಳಿ. ತಂತ್ರ ಹೆಣೆದಿದ್ದೆಲ್ಲ ಅವರೇ. ಆದರೆ ಸರಕಾರ ರಚನೆಯಾದಾಗ ಕುಟುಂಬದಲ್ಲಿ ಇಬ್ಬರಿಗೆ ಸಚಿವಸ್ಥಾನ ಕೇಳುವುದು ಸಮಂಜಸವಲ್ಲ ಎನ್ನುವುದನ್ನು ಅರಿತು ಚಾಣಾಕ್ಷತೆಯಿಂದ ಹಿಂದೆ ಸರಿದು ಕೆಎಂಎಫ್ ಅಧ್ಯಕ್ಷಸ್ಥಾನ ಪಡೆದುಕೊಂಡರು.

ನಿರಂತರ ಕ್ರಿಯಾಶೀಲತೆ

ಬಾಲಚಂದ್ರ ಜಾರಕಿಹೊಳಿ ಕೆಎಂಎಫ್ ಅಧ್ಯಕ್ಷಸ್ಥಾನಕ್ಕೇರಿದ ನಂತರ ರಾಜ್ಯಾದ್ಯಂತ ಅದಕ್ಕೊಂದು ಕ್ರಿಯಾಶೀಲತೆ ತಂದುಕೊಟ್ಟಿದ್ದಾರೆ. ನಿರಂತರ ಸುದ್ದಿಯಲ್ಲಿರುವಂತೆ ಮಾಡಿದ್ದಾರೆ. ಅಧ್ಯಕ್ಷರಾದಾಗಿನಿಂದಲೂ ಬೆಂಗಳೂರಿನಲ್ಲೇ ನೆಲೆಯೂರಿ ಒಂದಿಲ್ಲೊಂದು ಯೋಜನೆಗಳನ್ನು ರೂಪಿಸುತ್ತಿದ್ದಾರೆ. ಹಾಲಿನ ದರ ಏರಿಸಿದರೂ ಸಂಪೂರ್ಣ ಹಾಲು ಉತ್ಪಾದಕರಿಗೆ ವರ್ಗಾಯಿಸಿ ಅವರ ಹಿತ ಕಾಪಾಡಿದರು.

ಪ್ರವಾಹ ಸಂದರ್ಭದಲ್ಲಿ ಮುಖ್ಯಮಂತ್ರಿಗಳ ಪರಿಹಾರ ನಿಧಿಗೆ ಕೆಎಂಎಫ್ ನಿಂದ 3 ಕೋಟಿ ರೂ. ಕೊಟ್ಟಿದ್ದ ಬಾಲಚಂದ್ರ ಜಾರಕಿಹೊಳಿ, ಪ್ರವಾಹದಿಂದ ತತ್ತರಿಸಿದ್ದ ಹಾಲು ಉತ್ಪಾದಕರಿಗೆ ಸರಕಾರದಿಂದ ನೀಡುತ್ತಿದ್ದ ಪ್ರೋತ್ಸಾಹ ಧನವನ್ನು 5 ರೂ.ಗಳಿಂದ 6 ರೂ.ಗಳಿಗೆ ಏರಿಸಿ ನೆರವಾಗಿದ್ದರು.

5 ಕೋಟಿ ಕೊಟ್ಟು 50 ಕೋಟಿ ತಂದರು

ಇದೀಗ ಕೊರೋನಾ ಸಂಕಷ್ಟದಲ್ಲಿ ಮುಖ್ಯಮಂತ್ರಿಗಳ ಪರಿಹಾರ ನಿಧಿಗೆ ಕೆಎಂಎಫ್ ನಿಂದ 5 ಕೋಟಿ ರೂ.ಗಳನ್ನು ಬಾಲಚಂದ್ರ ಜಾರಕಿಹೊಳಿ ನೀಡಿದ್ದಾರೆ. ಹಣ ನೀಡಿ ಸುಮ್ಮನೇ ಕುಳಿತುಕೊಳ್ಳದೆ ಸರಕಾರದಿಂದ ಹಾಲು ಉತ್ಪಾದಕರಿಗೆ ಮತ್ತು ರಾಜ್ಯದ ಬಡಜನರಿಗೆ ದೊಡ್ಡ ಪ್ರಮಾಣದ ನೆರವನ್ನು ಸರಕಾರದಿಂದ ಪಡೆದಿದ್ದಾರೆ.

ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಜೊತೆ ಮಾತನಾಡಿ, ಕೊರೋನಾ ಲಾಕ್ ಡೌನ್ ಹಿನ್ನೆಲೆಯಲ್ಲಿ ರಾಜ್ಯದ ಹಲವು ಹಾಲು ಒಕ್ಕೂಟಗಳಲ್ಲಿ ಹಾಲು ಮಾರಾಟವಾಗದೆ ಉಳಿಯುತ್ತಿವೆ, ಹಾಗಾಗಾಗಿ ಕೆಲವು ಒಕ್ಕೂಟಗಳು ಹಾಲು ಖರೀದಿ ನಿಲ್ಲಿಸಲು ಮುಂದಾಗಿವೆ. ಇದರಿಂದ ಉತ್ಪಾದಕರಿಗೂ ದೊಡ್ಡ ನಷ್ಟ ಉಂಟಾಗುತ್ತದೆ  ಅವುಗಳನ್ನು ಸರಕಾರವೇ ಖರೀದಿಸಿ ಬಡವರಿಗೆ ಹಂಚಿದರೆ ಉತ್ಪಾದಕರ ಸಂಕಷ್ಟವೂ ನಿವಾರಣೆಯಾಗಲಿದೆ, ಬಡವರಿಗೂ ಸರಕಾರದ ಮೇಲೆ ಗೌರವ ಹೆಚ್ಚಲಿದೆ ಎಂದು ಮನವೊಲಿಸಿದ್ದಾರೆ.

ಅಂತಿಮವಾಗಿ ಯಡಿಯೂರಪ್ಪ ಲಾಕ್ ಡೌನ್ ಸಮಯದಲ್ಲಿ ಕೆಎಂಎಫ್ ನಿಂದ ಹಾಲು ಖರೀದಿಸಿ ರಾಜ್ಯಾದ್ಯಂತ ಬಡವರಿಗೆ ಹಂಚುವ ಯೋಜನೆಗೆ ಒಪ್ಪಿಗೆ ಸೂಚಿಸಿದರು. ಈವರೆಗೆ ಸರಕಾರ 2 ಹಂತಗಳಲ್ಲಿ 50 ಕೋಟಿ ರೂ.ಗಳಷ್ಟು ಹಣವನ್ನು ಕೆಎಎಫ್ ಗೆ ನೀಡಿ ಹಾಲನ್ನು ಖರೀದಿಸಿ ಬಡವರಿಗೆ ಹಂಚಿದೆ.

KMF Corporate Office | KMF - Nandini

ಕೆಎಂಎಫ್ ನಿಂದ ಸಿಎಂ ಪರಿಹಾರ ನಿಧಿಗೆ 5 ಕೋಟಿ ರೂ. ಕೊಟ್ಟು ಕೆಎಎಫ್ ಗೆ 50 ಕೋಟಿ ರೂ.ಗಳನ್ನು ಸರಕಾರದಿಂದ ಪಡೆಯುವಲ್ಲಿ ಬಾಲಚಂದ್ರ ಜಾರಕಿಹೊಳಿ ಯಶಸ್ವಿಯಾಗಿದ್ದಾರೆ. ಇದರಿಂದಾಗಿ ಒಂದೇ ಕಲ್ಲಿನಲ್ಲಿ 2 ಹಕ್ಕಿಗಳನ್ನು ಹೊಡೆದಿದ್ದಾರೆ. ಹಾಲು ಖರೀದಿ ನಿಲ್ಲಿಸಿ ಉತ್ಪಾದಕರಿಗೆ ಆಗಲಿದ್ದ ನಷ್ಟವನ್ನು ತಪ್ಪಿಸಿದ ಬಾಲಚಂದ್ರ ಜಾರಕಿಹೊಳಿ, ಬಡವರಿಗೆ ಉಚಿತವಾಗಿ ಹಂಚುವ ಮೂಲಕ ಸರಕಾರಕ್ಕೆ ಮತ್ತು ಕೆಎಂಎಫ್ ಗೆ ಒಂದಿಷ್ಟು ಕ್ರೆಡಿಟ್ ತಂದುಕೊಡುವಲ್ಲೂ ಯಶಸ್ವಿಯಾದರು.

ವಿಶೇಷವೆಂದರೆ, ಕೆಎಂಎಫ್ ಗೆ ಆರ್ಥಿಕ ಹೊರೆಯಾಗದ ರೀತಿಯಲ್ಲಿ ಎಲ್ಲವನ್ನೂ ಮ್ಯಾನೇಜ್ ಮಾಡಿದರು.

ಜಾರಕಿಹೊಳಿ ಸಹೋದರರಲ್ಲಿ ಉಳಿದವರಿಗಿಂತ ಭಿನ್ನವಾಗಿ ನಿಲ್ಲುವ ಬಾಲಚಂದ್ರ ಜಾರಕಿಹೊಳಿ, ಹೆಚ್ಚು ಮಾತನಾಡದೆ ಮೌನವಾಗಿದ್ದು, ಮುಗುಳ್ನಗುತ್ತಲೇ ಕೆಲಸ ಮಾಡಿ ಮುಗಿಸುವ ಚಾಣಾಕ್ಷರು. 


Spread the love

About Laxminews 24x7

Check Also

ಬುಧವಾರದಂದು ಪ್ರಧಾನಿಗಳು ಆಗಮಿಸುವ ಸ್ಥಳವನ್ನು ಪರಿಶೀಲಿಸಿದ : ಬಾಲಚಂದ್ರ & ರಮೇಶ್ ಜಾರಕಿಹೊಳಿ

Spread the loveಬೆಳಗಾವಿ- ಪ್ರಧಾನಿ ನರೇಂದ್ರ ಮೋದಿಯವರು ಬೆಳಗಾವಿ ಬಿಜೆಪಿ ಅಭ್ಯರ್ಥಿ ಜಗದೀಶ್ ಶೆಟ್ಟರ್ ಅವರ ಪ್ರಚಾರಾರ್ಥವಾಗಿ ಬೆಳಗಾವಿಗೆ ಬರುವ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ