ಬೆಂಗಳೂರು: ಪಾದರಾಯನಪುರದಲ್ಲಿ ಕೊರೊನಾ ಅಟ್ಟಹಾಸ ಮುಂದುವರಿದಿದ್ದು, ಇಂದು ಮತ್ತೆ ಐದು ಪ್ರಕರಣಗಳು ಪತ್ತೆಯಾಗಿವೆ.
ಕ್ವಾರಂಟೈನ್ ಮಾಡಿದ್ದವರಲ್ಲಿ ಸೋಂಕು ಪತ್ತೆಯಾಗಿದ್ದು, ಸೋಂಕಿತ ವ್ಯಕ್ತಿಯೊಂದಿಗೆ ದ್ವಿತೀಯ ಸಂಪರ್ಕ ಹೊಂದಿದ್ದವರಲ್ಲಿ ಸೋಂಕು ಪತ್ತೆಯಾಗಿದೆ. ಒಟ್ಟು 22 ಜನರನ್ನು ಪರೀಕ್ಷೆಗೆ ಒಳಪಡಿಸಲಾಗಿತ್ತು. ಇದರಲ್ಲಿ ಐವರಿಗೆ ಕೊರೊನಾ ಸೋಂಕಿರುವುದು ದೃಢಪಟ್ಟಿದೆ. ಈ ಮೂಲಕ ಪಾದರಾಯನಪುರ ಒಂದರಲ್ಲೇ ಈ ವರೆಗೆ 55 ಪ್ರಕರಣಗಳು ಪತ್ತೆಯಾದಂತಾಗಿವೆ ಎಂದು ಬಿಬಿಎಂಪಿ ಪಶ್ಚಿಮ ವಲಯದ
ಜಂಟಿ ಆಯುಕ್ತ ಚಿದಾನಂದ್ ಪಬ್ಲಿಕ್ ಟಿವಿಗೆ ಮಾಹಿತಿ ನೀಡಿದ್ದಾರೆ.
ಇನ್ನೂ ಭಯಾನಕ ವಿಚಾರವೆಂದರೆ ರ್‍ಯಾಂಡಮ್ ಟೆಸ್ಟ್ ಮಾಡುವ ವೇಳೆ ಈ ಐವರಿಗೆ ಸೋಂಕು ತಗುಲಿರುವುದು ದೃಢಪಟ್ಟಿದೆ. ಈ ಐದು ಜನ 3 ಕುಟುಂಬದವರು, ಒಂದೇ ಕಟ್ಟಡದಲ್ಲಿ ವಾಸಿಸುತ್ತಿದ್ದರು. ಕ್ವಾರಂಟೈನ್ ಮಾಡಿದ್ದರಿಂದ ರ್‍ಯಾಂಡಮ್ ಟೆಸ್ಟ್ ಮಾಡಲಾಗಿದ್ದು, ಈ ವೇಳೆ ಸೋಂಕು ತಗುಲಿರುವುದು ದೃಢಪಟ್ಟಿದೆ. ಒಂದೇ ಕುಟುಂಬದ ಗಂಡ ಹೆಂಡತಿಗೆ ಸೋಂಕು ತಗುಲಿದ್ದು, ಅಲ್ಲದೆ ಒಂದೇ ಕುಟುಂಬದ 10 ವರ್ಷದ ಇಬ್ಬರು ಗಂಡು ಮಕ್ಕಳಿಗೆ ಸೋಂಕು ತಗುಲಿದೆ. ಮೂರು ವರ್ಷದ ಒಬ್ಬ ಹುಡುಗನಿಗೆ ಸೋಂಕು ತಗುಲಿದೆ.
ರೋಗಿ ಸಂಖ್ಯೆ 554 ಹಾಗೂ 555 ಈ ಇಬ್ಬರಿಗೆ ರ್‍ಯಾಂಡಮ್ ಟೆಸ್ಟ್ ವೇಳೆ ಕೊರೊನಾ ಸೋಂಕು ತಗುಲಿರುವುದು ದೃಢಪಟ್ಟಿತ್ತು. ಇವರ ಸಂಪರ್ಕ ಸಂಬಂಧ ಐದು ಜನರನ್ನು ಕ್ವಾರಂಟೈನ್ ಮಾಡಲಾಗಿತ್ತು. ಹೀಗ ಇವರಿಗೆ ಸೊಂಕು ತಗುಲಿದೆ. ರೋಗಿ ಸಂಖ್ಯೆ 554 ರಿಂದ 4 ಜನಕ್ಕೆ ಹಾಗೂ ರೋಗಿ ಸಂಖ್ಯೆ 555 ರಿಂದ ಒಬ್ಬರಿಗೆ ಸೋಂಕು ತಗುಲಿದೆ.