ಬೆಂಗಳೂರು, ಜೂ.11- ಕೊರೊನಾ ಸಂಕಷ್ಟದ ಹಿನ್ನೆಲೆಯಲ್ಲಿ ಪರೀಕ್ಷೆ ನಡೆಸದೆ ವಿದ್ಯಾರ್ಥಿಗಳನ್ನು ಪಾಸ್ ಮಾಡಬೇಕು. ಆನ್‍ಲೈನ್ ತರಗತಿಗಳು ಬೇಡ ಎಂದು ಆಗ್ರಹಿಸಿ ಕನ್ನಡ ಚಳವಳಿ ವಾಟಾಳ್ ನಾಗರಾಜ್ ವಿಧಾನಸೌಧದ ಎದುರು ಇಂದು ವಿನೂತನ ಚಳವಳಿ ನಡೆಸಿದರು.
ಈ ಸಂದರ್ಭದಲ್ಲಿ ಮಾತನಾಡಿದ ಅವರು, ಆಂಧ್ರ, ತೆಲಂಗಾಣ ಮುಂತಾದ ರಾಜ್ಯಗಳಲ್ಲಿ ಎಸ್‍ಎಸ್‍ಎಲ್‍ಸಿ ಪರೀಕ್ಷೆ ರದ್ದು ಮಾಡಲಾಗಿದೆ. ಅದೇ ರೀತಿ ನಮ್ಮ ರಾಜ್ಯದಲ್ಲೂ ಎಸ್‍ಎಸ್‍ಎಲ್‍ಸಿ ಪರೀಕ್ಷೆ ರದ್ದು ಮಾಡಿ ವಿದ್ಯಾರ್ಥಿಗಳನ್ನು ಪಾಸ್ ಮಾಡಬೇಕು.
ಫಾರ್ಮಸಿ, ಎಂಜಿನಿಯರಿಂಗ್, ಡಿಪ್ಲೊಮಾ ಸೇರಿದಂತೆ ಎಲ್ಲ ಪದವಿ ಪರೀಕ್ಷೆಗಳನ್ನು ಸಂಪೂರ್ಣ ರದ್ದುಗೊಳಿಸಿ ವಿದ್ಯಾರ್ಥಿಗಳನ್ನು ಪಾಸ್ ಮಾಡಬೇಕು ಎಂದು ಆಗ್ರಹಿಸಿದ ಅವರು, ಕೊರೊನಾ ಮಹಾಮಾರಿ ದಿನದಿಂದ ದಿನಕ್ಕೆ ತನ್ನ ಕಬಂಧ ಬಾಹುವನ್ನು ಚಾಚುತ್ತಲೇ ಇದೆ.
ವಿದ್ಯಾರ್ಥಿಗಳಿಗೆ ಸೋಂಕು ವ್ಯಾಪಿಸಿದರೆ ಕುಟುಂಬಗಳು ಪರಿತಪಿಸಬೇಕಾಗುತ್ತದೆ. ಹಾಗಾಗಿ ಸೋಂಕು ನಿವಾರಣೆಯಾಗುವವರೆಗೂ ಶಾಲೆಗಳು ಆರಂಭವಾಗಲಿ, ಪರೀಕ್ಷೆ ನಡೆಸುವುದನ್ನಾಗಲಿ ಮಾಡಬಾರದು. ಸರ್ಕಾರ ಸೋಂಕು ನಿವಾರಣೆಯತ್ತ ಹೆಚ್ಚಿನ ಗಮನ ಕೊಡಬೇಕು ಎಂದು ಅವರು ಹೇಳಿದರು.