Breaking News
Home / ಜಿಲ್ಲೆ / ರಾಜ್ಯಸಭೆಗೆ ಚುನಾವಣೆಗೆ ಬಿಜೆಪಿಯಿಂದ ತೇಜಸ್ವಿನಿ-ಸುಧಾಮೂರ್ತಿ ಸ್ಪರ್ಧೆ…?

ರಾಜ್ಯಸಭೆಗೆ ಚುನಾವಣೆಗೆ ಬಿಜೆಪಿಯಿಂದ ತೇಜಸ್ವಿನಿ-ಸುಧಾಮೂರ್ತಿ ಸ್ಪರ್ಧೆ…?

Spread the love

ಬೆಂಗಳೂರು,ಜೂ.3- ಇದೇ 19ರಂದು ರಾಜ್ಯಸಭೆಗೆ ನಡೆಯುವ ಚುನಾವಣೆಗೆ ಆಡಳಿತಾರೂಢ ಬಿಜೆಪಿಯಿಂದ ಕೇಂದ್ರದ ಮಾಜಿ ಸಚಿವ ದಿವಂಗತ ಅನಂತಕುಮಾರ್ ಪತ್ನಿ ತೇಜಸ್ವಿನಿ ಅನಂತಕುಮಾರ್ ಹಾಗೂ ಇನ್ಫೋಸಿಸ್ ಸುಧಾಮೂರ್ತಿ ಹೆಸರುಗಳು ಕೇಳಿಬಂದಿವೆ.

ಬಿಜೆಪಿಯಿಂದ ರಾಜ್ಯಸಭೆಗೆ ಇಬ್ಬರು ಆಯ್ಕೆಯಾಗುವ ಅವಕಾಶ ಇರುವುದರಿಂದ ಸಮಾಜ ಸೇವೆ ಕೋಟಾದಡಿ ಈ ಇಬ್ಬರಲ್ಲಿ ಒಬ್ಬರನ್ನು ರಾಜ್ಯಸಭೆಗೆ ಕಳುಹಿಸಲು ಪಕ್ಷದ ವಲಯದಲ್ಲಿ ಚಿಂತನೆ ನಡೆದಿದೆ.

ಹಾಲಿ ರಾಜ್ಯಸಭಾ ಸದಸ್ಯರಾಗಿರುವ ಪ್ರಭಾಕರ್ ಕೋರೆ ಅವರ ಅಧಿಕಾರ ಅವಧಿ ಈ ತಿಂಗಳ ಅಂತ್ಯಕ್ಕೆ ಮುಕ್ತಾಯವಾಗಲಿದೆ. ಇಬ್ಬರನ್ನು ಆಯ್ಕೆ ಮಾಡಲು ಅವಕಾಶವಿರುವುದರಿಂದ ಮಹಿಳೆಯರಿಗೆ ಒಂದು ಸ್ಥಾನ ನೀಡಲು ಪಕ್ಷದ ವಲಯದಲ್ಲಿ ಮಾತುಕತೆ ನಡೆದಿದೆ.

ಈ ವಾರದ ಅಂತ್ಯಕ್ಕೆ ಅಭ್ಯರ್ಥಿ ಆಯ್ಕೆ ಸಂಬಂಧ ಪಕ್ಷದ ರಾಜ್ಯಾಧ್ಯಕ್ಷ ನಳೀನ್‍ಕುಮಾರ್ ಕಟೀಲ್, ರಾಜ್ಯ ಉಸ್ತುವಾರಿ ಮುರುಳೀಧರ್ ರಾವ್, ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ, ಕೇಂದ್ರ ಸಚಿವರಾದ ಪ್ರಹ್ಲಾದ್ ಜೋಷಿ, ಡಿ.ವಿ.ಸದಾನಂದಗೌಡ, ಸುರೇಶ್ ಅಂಗಡಿ ಸೇರಿದಂತೆ ಕೋರ್ ಕಮಿಟಿ ಮುಖಂಡರು ಸಭೆ ಸೇರಿ ಅಭ್ಯರ್ಥಿ ಹೆಸರನ್ನು ಅಂತಿಮಗೊಳಿಸಲಿದ್ದಾರೆ.

ಮೂಲಗಳ ಪ್ರಕಾರ ತೇಜಸ್ವಿನಿ ಅನಂತಕುಮಾರ್ ಅವರನ್ನು ರಾಜ್ಯಸಭೆಗೆ ಆಯ್ಕೆ ಮಾಡುವಂತೆ ಪಕ್ಷದ ಒಂದು ಗುಂಪು ವರಿಷ್ಠರಿಗೆ ಒತ್ತಡ ಹಾಕಿದೆ. ಕರ್ನಾಟಕದಲ್ಲಿ ಬಿಜೆಪಿಯನ್ನು ಯಡಿಯೂರಪ್ಪನವರ ಸರಿಸಮಾನಕ್ಕೆ ಬೆಳೆಸಿರುವ ಪ್ರಮುಖರಲ್ಲಿ ಅವರು ಒಬ್ಬರು. ಕಳೆದ ಲೋಕಸಭೆ ಚುನಾವಣಾ ಸಂದರ್ಭದಲ್ಲಿ ಬೆಂಗಳೂರು-ದಕ್ಷಿಣ ಲೋಕಸಭಾ ಕ್ಷೇತ್ರದಿಂದ ಅವರಿಗೆ ಟಿಕೆಟ್ ನೀಡಬೇಕೆಂಬ ಕೂಗು ಕೇಳಿಬಂದಿತ್ತು.

ಆದರೆ ಕೊನೆ ಕ್ಷಣದಲ್ಲಿ ಅಚ್ಚರಿ ಬೆಳೆವಣಿಗೆಯಲ್ಲಿ ತೇಜಸ್ವಿ ಸೂರ್ಯಗೆ ಟಿಕೆಟ್ ನೀಡಲಾಯಿತು. ಇದರಿಂದ ತೇಜಸ್ವಿನಿ ಅನಂತಕುಮಾರ್ ಮುನಿಸಿಕೊಂಡ ನಂತರ ಪಕ್ಷದ ಮುಖಂಡರ ಸಂಧಾನದಿಂದ ಬಿಕ್ಕಟ್ಟು ಶಮನವಾಗಿತ್ತು. ತೇಜಸ್ವಿನಿ ಅನಂತಕುಮಾರ್ ಕಳೆದ ಹಲವು ವರ್ಷಗಳಿಂದ ತಮ್ಮ ಅಧಮ್ಯ ಚೇತನ ಟ್ರಸ್ಟ್ ಮೂಲಕ ಸಮಾಜಸೇವೆಯಲ್ಲೂ ತೊಡಗಿಸಿಕೊಂಡಿದ್ದಾರೆ.

ಜತೆಗೆ ಪರಿಸರ ಕಾಳ ಕುರಿತಂತೆ ಅನೇಕ ವರ್ಷಗಳಿಂದ ಜನರಲ್ಲಿ ಜಾಗೃತಿಯನ್ನು ಮೂಡಿಸುವ ಮೂಲಕ ತಮ್ಮದೇ ಆದ ಸಮಾಜ ಸೇವೆ ಸಲ್ಲಿಸಿದ್ದಾರೆ. ಹೀಗಾಗಿ ಈ ಬಾರಿ ತೇಜಸ್ವಿನಿ ಅವರನ್ನು ರಾಜ್ಯಸಭೆಗೆ ಆಯ್ಕೆ ಮಾಡುವ ಮೂಲಕ ಅನಂತಕುಮಾರ್ ಅವರಿಗೆ ಗೌರವ ಸಮರ್ಪಿಸುತ್ತಿದ್ದಂತಾಗುತ್ತದೆ ಎಂಬ ಅಭಿಪ್ರಾಯ ಕೇಳಿಬಂದಿದೆ.

ಇನ್ನು ಇನ್ಫೋಸಿಸ್‍ನ ಸುಧಾ ನಾರಾಯಣಮೂರ್ತಿ ಅವರ ಹೆಸರು ಕೂಡ ಚಾಲ್ತಿಯಲ್ಲಿದೆ. ಕಳೆದ ಹಲವು ವರ್ಷಗಳಿಂದ ಸಮಾಜ ಸೇವೆಯಲ್ಲಿ ತೊಡಗಿಸಿಕೊಂಡಿರುವ ಸುಧಾಮೂರ್ತಿ ಅವರನ್ನೂ ಸಹ ರಾಜ್ಯಸಭೆಗೆ ಆಯ್ಕೆ ಮಾಡಲು ಚಿಂತನೆ ನಡೆದಿದೆ. ನಾಡುನುಡಿ, ಸಾಹಿತ್ಯ ಸೇರಿದಂತೆ ಸಮಾಜಸೇವೆಯಲ್ಲಿ ತೊಡಗಿಸಿಕೊಂಡಿರುವ ಅವರನ್ನು ರಾಜ್ಯಸಭೆಗೆ ಆಯ್ಕೆ ಮಾಡಿದರೆ ರಾಜ್ಯದ ಪರವಾಗಿ ಕೇಂದ್ರದಲ್ಲಿ ಧ್ವನಿ ಎತ್ತಲಿದ್ದಾರೆ ಎಂಬ ಅಭಿಪ್ರಾಯ ವ್ಯಕ್ತವಾಗಿದೆ.

ಇದರ ನಡುವೆ ಬಿಜೆಪಿ ಉಸ್ತುವಾರಿ ಮುರುಳೀಧರ್ ರಾವ್ ಕೂಡ ಪ್ರಬಲ ಆಕಾಂಕ್ಷಿಯಾಗಿದ್ದಾರೆ. ಇರುವ ಎರಡು ಸ್ಥಾನಕ್ಕೆ ಡಜನ್‍ಗೂ ಅಧಿಕ ಆಕಾಂಕ್ಷಿಗಳಿರುವುದರಿಂದ ಸರ್ವಸಮ್ಮತದ ಅಭ್ಯರ್ಥಿಗಳನ್ನು ಆಯ್ಕೆ ಮಾಡುವುದೇ ತಲೆನೋವಾಗಿ ಪರಿಣಮಿಸಿದೆ.


Spread the love

About Laxminews 24x7

Check Also

ಚಿದಾನಂದ ಸವದಿ‌ಗೆ ಚಿಕ್ಕೋಡಿ ಕ್ಷೇತ್ರಕ್ಕೆ ಟಿಕೆಟ್ ನೀಡುವ ಸಾಧ್ಯತೆ

Spread the loveಬೆಳಗಾವಿ, : ಲೋಕಸಭಾ ಚುನಾವಣೆ (Lok Sabha Elections )ಸಮೀಪಿಸುತ್ತಿದ್ದಂತೆ ಕಾಂಗ್ರೆಸ್ (Congress) ಎಚ್ಚರಿಕೆಯಿಂದ ಹೆಜ್ಜೆ ಇಡುತ್ತಿದೆ. ಅಳೆದು …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ