Home / ಜಿಲ್ಲೆ / ಬಿ.ಎಸ್.ಯಡಿಯೂರಪ್ಪ ಡ್ಯಾಮೇಜ್ ಕಂಟ್ರೋಲ್‍ಗೆ ಮುಂದಾಗಿದ್ದಾರೆ………

ಬಿ.ಎಸ್.ಯಡಿಯೂರಪ್ಪ ಡ್ಯಾಮೇಜ್ ಕಂಟ್ರೋಲ್‍ಗೆ ಮುಂದಾಗಿದ್ದಾರೆ………

Spread the love

ಬೆಂಗಳೂರು, ಜೂ.1- ತಮ್ಮ ನಾಯಕತ್ವದ ವಿರುದ್ಧ ಅಸಮಾಧಾನಗೊಂಡು ಪ್ರತ್ಯೇಕ ಸಭೆ ನಡೆಸಿರುವ ಭಿನ್ನಮತೀಯರ ನಡೆಯನ್ನು ಗಂಭೀರವಾಗಿ ಪರಿಗಣಿಸಿರುವ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಡ್ಯಾಮೇಜ್ ಕಂಟ್ರೋಲ್‍ಗೆ ಮುಂದಾಗಿದ್ದಾರೆ. ಒಂದೆರಡು ದಿನಗಳಲ್ಲಿ ಶಾಸಕರು ಮತ್ತೆ ಸಭೆ ನಡೆಸಬಹುದೆಂಬ ಸುಳಿವು ದೊರೆತಿರುವ ಹಿನ್ನೆಲೆಯಲ್ಲಿ ಅಸಮಾಧಾನಿತ ಶಾಸಕರ ಜೊತೆ ಸಭೆ ನಡೆಸಿ ಅವರ ಬೇಕುಬೇಡುಗಳನ್ನು ಆಲಿಸಲಿದ್ದಾರೆ.

ಮೂರ್ನಾಲ್ಕು ದಿನಗಳೊಳಗೆ ಯಡಿಯೂರಪ್ಪನವರು ತಮ್ಮ ನಿವಾಸ ಕಾವೇರಿಯಲ್ಲಿ ಶಾಸಕರ ಸಭೆ ನಡೆಸಲಿದ್ದು, ಕ್ಷೇತ್ರಗಳಿಗೆ ಬೇಕಾದ ಅನುದಾನ, ಅಧಿಕಾರಿಗಳ ವರ್ಗಾವಣೆ, ಮಂಜೂರಾಗಬೇಕಾದ ಕಾಮಗಾರಿಗಳು ಸೇರಿದಂತೆ ಶಾಸಕರ ಬೇಡಿಕೆಗಳ ಪಟ್ಟಿಯನ್ನು ಸಿದ್ದಪಡಿಸಿಕೊಳ್ಳುವಂತೆ ಸೂಚನೆ ಕೊಟ್ಟಿದ್ದಾರೆ.

ಈಗಾಗಲೇ ಹಿರಿಯ ಸಚಿವರಾದ ಜಗದೀಶ್ ಶೆಟ್ಟರ್, ಗೋವಿಂದಕಾರಜೋಳ, ಬಸವರಾಜ್ ಬೊಮ್ಮಾಯಿ ಸೇರಿದಂತೆ ತಮ್ಮ ಆಪ್ತರ ಜೊತೆ ಮಾತುಕತೆ ನಡೆಸಿರುವ ಯಡಿಯೂರಪ್ಪ, ಪರಿಸ್ಥಿತಿ ಕೈಮೀರಿ ಹೋಗದಂತೆ ಭಿನ್ನಮತವನ್ನು ಪ್ರಾರಂಭದಲ್ಲೇ ಚಿವುಟಿ ಹಾಕಲು ಮುಂದಾಗಿದ್ದಾರೆ.

ಈ ಹಿಂದೆ 2008ರಲ್ಲಿ ತಮ್ಮ ನಾಯಕತ್ವದ ವಿರುದ್ಧ ಅಂದು ರೆಡ್ಡಿ ಸಹೋದರರು ಸಿಡಿದೆದ್ದರು. ಭಿನ್ನಮತವನ್ನು ಹತ್ತಿಕ್ಕುವಲ್ಲಿ ವಿಫಲವಾಗಿದ್ದರಿಂದ ಕೊನೆಗೆ ಕೇಂದ್ರ ವರಿಷ್ಠರು ಮಧ್ಯಪ್ರವೇಶಿಸಿ ಸಂಧಾನ ನಡೆಸಿದ್ದರು. ಇದೀಗ ಅಂಥ ಪರಿಸ್ಥಿತಿ ಪುನಃ ಉದ್ಭವವಾದರೆ ವಿರೋಧ ಪಕ್ಷಗಳು ಹಾಗೂ ಸಾರ್ವಜನಿಕರ ಮುಂದೆ ನಗೆಪಾಟಲಿಗೆ ಈಡಾಗಬೇಕಾಗುತ್ತದೆ ಎಂಬ ಕಾರಣಕ್ಕಾಗಿ ಬಿಎಸ್‍ವೈ ಅತ್ಯಂತ ಎಚ್ಚರಿಕೆಯ ಹೆಜ್ಜೆ ಇಡಲು ಮುಂದಾಗಿದ್ದಾರೆ.

ನೆನೆಗುದಿಗೆ ಬಿದ್ದಿರುವ ಸಂಪುಟ ವಿಸ್ತರಣೆ ಮಾಡಲು ಯಡಿಯೂರಪ್ಪನವರಿಗೆ ಆಸಕ್ತಿ ಇದೆ. ಒಂದು ವರ್ಷದ ಅವಧಿಯಲ್ಲಿ ತಮ್ಮ ನಿರೀಕ್ಷೆಗೆ ತಕ್ಕಂತೆ ಕೆಲಸ ಮಾಡದ ನಾಲ್ಕೈದು ಸಚಿವರಿಗೆ ಕೋಕ್ ನೀಡಿ ಅಸಮಾಧಾನಗೊಂಡಿರುವವರನ್ನು ಸಂಪುಟಕ್ಕೆ ತೆಗೆದುಕೊಳ್ಳುವ ಲೆಕ್ಕಾಚಾರದಲ್ಲಿದ್ದಾರೆ. ಆದರೆ ಪ್ರತಿಯೊಂದು ದೆಹಲಿ ವರಿಷ್ಠರ ತೀರ್ಮಾನದ ಮೇಲೆ ನಿರ್ಧಾರವಾಗುವುದರಿಂದ ಸಂಪುಟ ವಿಸ್ತರಣೆಗೆ ಅವಕಾಶ ನೀಡುವಂತೆ ಮನವಿ ಮಾಡುವ ಸಾಧ್ಯತೆ ಇದೆ.

ದೆಹಲಿ ನಾಯಕರ ಅನುಮತಿ ಇಲ್ಲದೆ ನಾನು ಯಾವುದೇ ತೀರ್ಮಾನವನ್ನು ತೆಗೆದುಕೊಳ್ಳುವಂತಿಲ್ಲ. ಕೆಲವು ಕಾಣದ ಕೈಗಳಿಂದ ನನ್ನನ್ನು ಕಟ್ಟಿ ಹಾಕಲಾಗಿದೆ. 2008ರಲ್ಲಿ ನಾನೇ ತೀರ್ಮಾನಗಳನ್ನು ತೆಗೆದುಕೊಳ್ಳುತ್ತಿದ್ದ ಕಾರಣ ನನ್ನ ನಂಬಿದವರನ್ನು ಕೈಬಿಟ್ಟಿರಲಿಲ್ಲ.  ಈಗ ಒಂದು ನಿಗಮಮಂಡಳಿಗೆ ಅಧ್ಯಕ್ಷರನ್ನು ನೇಮಕ ಮಾಡಬೇಕೆಂದರೂ ದೆಹಲಿ ಅನುಮತಿ ಬೇಕು. ಸಂಪುಟ ವಿಸ್ತರಣೆ ಮಾಡುವಂತೆ ವರಿಷ್ಠರನ್ನು ಕೇಳಿಕೊಳ್ಳುತ್ತೇನೆ. ಪ್ರತ್ಯೇಕ ಸಭೆ ನಡೆಸಿ ಸರ್ಕಾರಕ್ಕೆ ಮುಜುಗರ ಮಾಡಬೇಡಿ ಎಂದು ಶಾಸಕರಿಗೆ ಮನವಿ ಬಿಎಸ್‍ವೈ ಮಾಡಿದ್ದಾರೆ.

ಉತ್ತರ ಕರ್ನಾಟಕದ ಶಾಸಕರ ಜೊತೆ ಸಭೆ ನಡೆಸಲು ಅವರ ಜೊತೆ ಮಾತನಾಡುವಂತೆ ಈಗಾಗಲೇ ಬಿಎಸ್‍ವೈ ಇಬ್ಬರು ಹಿರಿಯ ಸಚಿವರಿಗೆ ಸಂಧಾನದ ಹೊಣೆಗಾರಿಕೆಯನ್ನು ನೀಡಿದ್ದಾರೆ. ಶಾಸಕರ ಜೊತೆ ಸಂಪರ್ಕ ಸಾಧಿಸಿರುವ ಹಿರಿಯ ಸಚಿವರು ಮಾತುಕತೆಗೆ ಸಮಯ ಹಾಗೂ ಸ್ಥಳ ನಿಗದಿಪಡಿಸುವತ್ತ ಚಿತ್ತಹರಿಸಿದ್ದಾರೆ.

#ನಿಗಮಮಂಡಳಿಯಲ್ಲೂ ಅವಕಾಶ:
ಸಂಪುಟದಲ್ಲಿ ಎಲ್ಲರಿಗೂ ಅವಕಾಶ ನೀಡಲು ಸಾಧ್ಯವಿಲ್ಲದ ಕಾರಣ ಕೆಲವು ಅತೃಪ್ತರಿಗೆ ನಿಗಮಮಂಡಳಿಯಲ್ಲಿ ಸ್ಥಾನ ಕಲ್ಪಿಸುವ ಬಗ್ಗೆ ಚಿಂತನೆ ನಡೆದಿದೆ. ರಾಜ್ಯದಲ್ಲಿ ಬಿಜೆಪಿ ಅಧಿಕಾರಕ್ಕೆ ಬಂದನಂತರ ಕೆಲವು ನಿಗಮಗಳನ್ನು ಹೊರತುಪಡಿಸಿದರೆ ಇನ್ನು ಅನೇಕ ನಿಗಮಗಳು ಖಾಲಿ ಉಳಿದಿವೆ. ಅದರಲ್ಲಿ ಕೆಲವು ಪ್ರಮುಖ ಮಂಡಳಿಗಳಿಗೆ ಅಸಮಾಧಾನಿತರನ್ನು ನೇಮಿಸಿ ಪರಿಸ್ಥಿತಿ ತಿಳಿಗೊಳಿಸುವ ಲೆಕ್ಕಾಚಾರದಲ್ಲಿ ಸಿಎಂ ಇದ್ದಾರೆ.

ಸದ್ಯ ರಾಜ್ಯದಲ್ಲಿ ಕೊರೊನಾ ನಿಯಂತ್ರಣ ಹಾಗೂ ಮುಂದಿನ ವಾರದಿಂದ ಇನ್ನು ಕೆಲವು ವಾಣಿಜ್ಯ ಚಟುವಟಿಕೆಗಳಿಗೆ ಅವಕಾಶ ಕಲ್ಪಿಸಬೇಕಾಗಿದೆ. ಜೊತೆಗೆ ಸರ್ಕಾರದ ಬೊಕ್ಕಸಕ್ಕೆ ಬರುತ್ತಿದ್ದ ವರಮಾನವು ನಿಂತುಹೋಗಿದೆ. ಇದರ ಕಡೆ ಹೆಚ್ಚು ಗಮನನೀಡಬೇಕಾಗಿದೆ.  ಇದರ ನಡುವೆಯೇ ಸರ್ಕಾರವನ್ನು ಸುಗಮವಾಗಿ ನಡೆಸಿಕೊಂಡು ಹೋಗಬೇಕಾದ ಹಿನ್ನೆಲೆಯಲ್ಲಿ ಮುಖ್ಯಮಂತ್ರಿ ಯಡಿಯೂರಪ್ಪ ಭಿನ್ನಮತ ಚಟುವಟಿಕೆಗಳಿಗೆ ಕಡಿವಾಣ ಹಾಕುವತ್ತ ಗಮನಹರಿಸಿದ್ದಾರೆ.


Spread the love

About Laxminews 24x7

Check Also

ಚಿದಾನಂದ ಸವದಿ‌ಗೆ ಚಿಕ್ಕೋಡಿ ಕ್ಷೇತ್ರಕ್ಕೆ ಟಿಕೆಟ್ ನೀಡುವ ಸಾಧ್ಯತೆ

Spread the loveಬೆಳಗಾವಿ, : ಲೋಕಸಭಾ ಚುನಾವಣೆ (Lok Sabha Elections )ಸಮೀಪಿಸುತ್ತಿದ್ದಂತೆ ಕಾಂಗ್ರೆಸ್ (Congress) ಎಚ್ಚರಿಕೆಯಿಂದ ಹೆಜ್ಜೆ ಇಡುತ್ತಿದೆ. ಅಳೆದು …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ