ಬೆಂಗಳೂರು, ಏ.22- ಪಾದರಾಯನಪುರ ಘಟನೆಗೆ ಸಂಬಂಧಿಸಿದಂತೆ ಈವರೆಗೂ 126 ಮಂದಿಯನ್ನು ಬಂಧಿಸಲಾಗಿದೆ ಎಂದು ಬೆಂಗಳೂರು ನಗರದ ಪಶ್ಚಿಮ ವಲಯದ ಹೆಚ್ಚುವರಿ ಪೊಲೀಸ್ ಆಯುಕ್ತ ಸೌಮೇಂದು ಮುಖರ್ಜಿ ತಿಳಿಸಿದ್ದಾರೆ.
ಈ ಸಂಜೆಯೊಂದಿಗೆ ಮಾತನಾಡಿದ ಅವರು, ಅಂದಿನ ಘಟನೆಗೆ ಸಂಬಂಧಿಸಿದಂತೆ ಇನ್ನೂ ಕೆಲವರು ತಲೆಮರೆಸಿಕೊಂಡಿದ್ದಾರೆ. ಅವರಿಗಾಗಿ ಶೋಧ ಮಾಡುತ್ತಿದ್ದೇವೆ ಎಂದು ಹೇಳಿದರು. ಅಂದಿನ ಘಟನೆಯಲ್ಲಿ ಭಾಗಿಯಾಗಿ ತಲೆಮರೆಸಿಕೊಂಡಿರುವ ಪ್ರಮುಖ ಆರೋಪಿ ಸಂಘಟನೆಯೊಂದರ ಕಾರ್ಯಕರ್ತನಾಗಿದ್ದು, ಈತನಿಗಾಗಿ ವ್ಯಾಪಕ ಶೋಧ ಮಾಡಲಾಗುತ್ತಿದೆ.
ಬಂಧಿತ ಆರೋಪಿಗಳಲ್ಲಿ ಮಹಿಳೆ ಸೇರಿದಂತೆ ನಾಲ್ವರನ್ನು ವಶಕ್ಕೆ ತೆಗೆದುಕೊಂಡು ಹೆಚ್ಚಿನ ವಿಚಾರಣೆಗೊಳಪಡಿಸಿ ಮಾಹಿತಿ ಪಡೆಯಲಾಗುತ್ತಿದೆ. ತಲೆಮರೆಸಿಕೊಂಡಿರುವ ಆರೋಪಿಗಳಿಗಾಗಿ ವಿಶೇಷ ತಂಡಗಳನ್ನು ರಚಿಸಲಾಗಿದ್ದು, ಈ ತಂಡಗಳು ಈಗಾಗಲೇ ಕಾರ್ಯೋನ್ಮುಖವಾಗಿವೆ ಎಂದು ಹೇಳಿದರು.
ಪಾದರಾಯನಪುರದಲ್ಲಿ ಸೀಲ್‍ಡೌನ್ ಹಿನ್ನೆಲೆಯಲ್ಲಿ ಪೊಲೀಸರು ಬಿಗಿ ಬಂದೋಬಸ್ತ್ ಮಾಡಲಾಗಿದ್ದು, ಅಧಿಕಾರಿಗಳು, ಸಿಬ್ಬಂದಿ ಸೇರಿದಂತೆ 800 ಮಂದಿ ಕರ್ತವ್ಯದಲ್ಲಿದ್ದಾರೆ. ಪ್ರಸ್ತುತ ಪರಿಸ್ಥಿತಿ ಶಾಂತರೀತಿಯಲ್ಲಿದೆ. ನಿನ್ನೆವರೆಗೆ 119 ಮಂದಿಯನ್ನು ಬಂಧಿಸಲಾಗಿತ್ತು. ಇಂದು 7 ಮಂದಿಯನ್ನು ಬಂಧಿಸಲಾಗಿದೆ ಎಂದು ಅವರು ತಿಳಿಸಿದರು.