ಅನ್ಯಾಯವಾದ ರೈತರಿಗೆ ನ್ಯಾಯ ಸಿಗದೇ ಹೋದರೆ ವಿಷಸೇವಿಸಿ ಆತ್ಮಹತ್ಯೆ
ಚಿಕ್ಕೋಡಿ ಹಿರಿಯ ಉಪನೋಂದಣಾಧಿಕಾರಿ ವಿರುದ್ಧ ರೈತರು ಪ್ರತಿಭಟನೆ
ಚಿಕ್ಕೋಡಿ: ಭೂಮಿ ಖರೀದಿಯ ವ್ಯಾಜ್ಯವು ನ್ಯಾಯಾಲಯದಲ್ಲಿ ಇರುವಾಗಲೇ ಚಿಕ್ಕೋಡಿ ಉಪನೋಂದನಾಧಿಕಾರಿ ಮತ್ತೊಬ್ಬರಿಗೆ ಆಸ್ತಿಗಳನ್ನು ಮಾರಾಟ ಮಾಡಿ ನ್ಯಾಯಾಲಯದ ಆದೇಶ ಉಲ್ಲಂಘಿಸಿ ರೈತರಿಗೆ ಅನ್ಯಾಯ ಮಾಡಿದ್ದಾರೆ. ಬರುವ ಹದಿನೈದು ದಿನಗಳ ಒಳಗಾಗಿ ರೈತರಿಗೆ ನ್ಯಾಯ ಸಿಗದೇ ಹೋದರೆ ಮಿನಿವಿಧಾನಸೌಧದ ಮುಂಭಾಗದಲ್ಲಿ ವಿಷ ಸೇವಿಸಿ ಆತ್ಮಹತ್ಯೆ ಮಾಡಿಕೊಳ್ಳುವುದಾಗಿ ರೈತರು ಸರ್ಕಾರಕ್ಕೆ ಎಚ್ಚರಿಕೆ ನೀಡಿದರು.
ಚಿಕ್ಕೋಡಿ ಹಿರಿಯ ಉಪನೋಂದನಾಧಿಕಾರಿಗಳು ಮಾಡಿರುವ ಅನ್ಯಾಯದ ವಿರುದ್ಧ ಪ್ರತಿಭಟನೆ ನಡೆಸಿದ ರೈತರು ತಪ್ಪಿತಸ್ಥ ಅಧಿಕಾರಿಗಳ ವಿರುದ್ಧ ಸೂಕ್ತ ಕ್ರಮ ಜರುಗಿಸಬೇಕೆಂದು ಆಗ್ರಹಿಸಿ ಚಿಕ್ಕೋಡಿ ಪ್ರವಾಸಿ ಮಂದಿರದಿಂದ ಮಿನಿವಿಧಾನಸೌಧದವರೆಗೆ ಪ್ರತಿಭಟನೆ ನಡೆಸಿ ತಹಶೀಲ್ದಾರ ಅವರಿಗೆ ಮನವಿ ಸಲ್ಲಿಸಿದರು.
ಚಿಕ್ಕೋಡಿ ತಾಲೂಕಿನ ನಾಗರಮುನ್ನೋಳ್ಳಿ ಗ್ರಾಮದ ಸಿದ್ದಪ್ಪ ಕರೇಪ್ಪ ಬಂಬಲವಾಡೆ ಅವರ ಅಣ್ಣ-ತಮ್ಮಂದಿರ ನಡುವೆ ಹಿರಿಯರ ಆಸ್ತಿಗಳ ಕುರಿತು ನ್ಯಾಯಾಲಯದಲ್ಲಿ ವ್ಯಾಜ್ಯಗಳು ಇದ್ದವು. ಆಸ್ತಿಗಳ ವ್ಯಾಜ್ಯಗಳು ಮುಗಿಯುತನಕ ಆಸ್ತಿಗಳನ್ನು ಮಾರಾಟ ಮಾಡಬಾರದೆಂದು ನ್ಯಾಯಾಲಯವು ಆದೇಶ ನೀಡಿದೆ. ಆದರೆ ಹಿರಿಯ ಉಪನೋಂದಣಾಧಿಕಾರಿಗಳು ಬೇರೆಯವರ ಒತ್ತಡಕ್ಕೆ ಮಣಿದು ಆಸ್ತಿಗಳನ್ನು ಮಾರಾಟ ಮಾಡಿ ಅನ್ಯಾಯ ಮಾಡಿದ್ದಾರೆ ಎಂದು ರೈತ ಸಿದ್ದಪ್ಪ ಬಂಬಲವಾಡೆ ಆಕ್ರೋಶ ವ್ಯಕ್ತಪಡಿಸಿದರು