ಮುಧೋಳ : ಅತ್ಯಾಚಾರದಂತಹ ಹೇಯ ಕೃತ್ಯದಲ್ಲಿ ಯಾವುದೇ ಧರ್ಮದವರು ಭಾಗಿಯಾದರೂ ದೊಡ್ಡ ಅಪರಾಧ. ಅಂತಹ ಅಪರಾಧಿಗಳಿಗೆ ಕಠಿಣ ಶಿಕ್ಷೆ ವಿಧಸಿಬೇಕು ಎಂದು ಸಾಮಾಜಿಕ ಹೋರಾಟಗಾರ ಯಲ್ಲಪ್ಪ ಹೆಗಡೆ ಸರ್ಕಾರಕ್ಕೆ ಒತ್ತಾಯಿಸಿದರು.
ನಗರದ ಬಾಲಕಿ ಮೇಲೆ ನಡೆದ ಲೈಂಗಿಕ ದೌರ್ಜನ್ಯ ಖಂಡಿಸಿ ಅಲ್ಪಸಂಖ್ಯಾತ ಸೌಹಾರ್ದ ಸಂಘಟನೆಗಳ ಒಕ್ಕೂಟದ ನೇತೃತ್ವದಲ್ಲಿ ಸೋಮವಾರ ಹಮ್ಮಿಕೊಂಡಿದ್ದ ಪ್ರತಿಭಟನೆಯಲ್ಲಿ ಪಾಲ್ಗೊಂಡು ತಹಸೀಲ್ದಾರ್ ಗೆ ಮನವಿ ಸಲ್ಲಿಸಿ ಮಾತನಾಡಿದ ಅವರು, ಅತ್ಯಾಚಾರದಂತಹ ಪ್ರಕರಣಗಳನ್ನು ಮುಂದಿಟ್ಟುಕೊಂಡು ಕೆಲವು ಕೋಮುವಾದ ಸಂಘಟನೆಗಳು ಸಮಾಜದಲ್ಲಿ ಸ್ವಾಸ್ಥ್ಯ ಹಾಳುಮಾಡಲು ಮುಂದಾಗುತ್ತಿವೆ.
ಇದರಿಂದ ಸಮಾಜದ ಸಾಮರಸ್ಯಕ್ಕೆ ಧಕ್ಕೆಯುಂಟಾಗುತ್ತದೆ. ಅತ್ಯಾಚಾರಿಗಳಿಗೆ ಉಗ್ರ ಶಿಕ್ಷೆಯಾಗಲಿ. ಆದರೆ ಇಂತಹ ಘಟನೆಗಳನ್ನು ಮುಂದಿಟ್ಟುಕೊಂಡು ಸಮಾಜದ ಸ್ವಾಸ್ಥ್ಯ ಹಾಳುಮಾಡುವ ಶಕ್ತಿಗಳನ್ನು ಮಟ್ಟಹಾಕಬೇಕು ಎಂದು ಒತ್ತಾಯಿಸಿದರು.
ಕೋಮುವಾದಿ ಸಂಘಟನೆಗಳು ಇಂತಹ ಪ್ರಕರಣಗಳನ್ನು ಕೇವಲ ಒಂದು ಕೋಮುವಾದಿಗೆ ಮೀಸಲಾಗಿಸಬಾರದು. ಎಲ್ಲ ವರ್ಗದ ಹೆಣ್ಣುಮಕ್ಕಳಿಗೆ ಅನ್ಯಾಯವಾದಾಗ ಪ್ರತಿಯೊಂದು ಸಂಘಟನೆಗಳು ಹೋರಾಟಕ್ಕೆ ಇಳಿಯಬೇಕು. ಇತ್ತೀಚೆಗೆ ಲೋಕಾಪುರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಬಾಲಕಿ ಮೇಲೆ ನಡೆದ ಅತ್ಯಾಚಾರವನ್ನು ಖಂಡಿಸದೆ, ಇದೀಗ ಎರಡು ಕೋಮುಗಳ ನಡುವೆ ನಡೆದಿರುವ ಪ್ರಕಣವನ್ನು ಖಂಡಿಸಲು ಮುಂದಾಗಿರುವುದು ಕೋಮುವಾದ ಸಂಘಟನೆ ಇಬ್ಬಗೆ ನೀತಿ ತೋರಿಸುತ್ತದೆ ಎಂದು ಹೇಳಿದರು.