ಬಾಗಲಕೋಟೆ : “ತಾಯಿ ನಿನ್ನ ಭಜನೆ ನಾನು ಮರೆಯಲಾರೆನು” ಎಂದು ಮನೆ, ಮನೆಗೂ ತೆರಳಿ ಹಾಡುತ್ತಿದ್ದ ಗೋಂಧಳಿ ವೆಂಕಪ್ಪನನ್ನು ದೇವರೂ ಮರೆತಿಲ್ಲ. ಶಾಲೆಯ ಮೆಟ್ಟಿಲನ್ನೇ ಹತ್ತದ ವೆಂಕಪ್ಪ ಗೌರವ ಡಾಕ್ಟರೇಟ್ ಪಡೆದಿದ್ದರಲ್ಲದೇ ಈಗ ಪದ್ಮಶ್ರೀ ಪ್ರಶಸ್ತಿ ಪಡೆಯುವುದರ ಮೂಲಕ ದೇಶವೇ ಬಾಗಲಕೋಟೆಯತ್ತ ತಿರುಗಿ ನೋಡುವಂತೆ ಮಾಡಿದ್ದಾರೆ.
ಅಂಬಾಜಿ ನಡೆದು ಬಂದ ಹಾದಿಯೇ ರೋಚಕ: ಹೌದು, ಪದ್ಮಶ್ರೀ ಪ್ರಶಸ್ತಿಗೆ ಭಾಜನರಾಗಿರುವ ಡಾ. ಅಂಬಾಜಿ ವೆಂಕಪ್ಪ ಸುಗುತೇಕರ ನಡೆದು ಬಂದ ಹಾದಿಯೇ ರೋಚಕ. ಕಿತ್ತು ತಿನ್ನುವ ಬಡತನದ ಮಧ್ಯೆಯೂ ಎಂದಿಗೂ ದೇವಿಸ್ಮರಣೆಯನ್ನು ಬಿಟ್ಟವರಲ್ಲ. ಜನ ಒಪ್ಪಲಿ, ಒಪ್ಪದೇ ಇರಲಿ ಮನೆ, ಮನೆಗೆ ತೆರಳಿ ದೇವಿ ಹಾಡು ಹಾಡುತ್ತ ಭಿಕ್ಷೆ ಬೇಡಿ ಜೀವನ ಸಾಗಿಸಿದ ವೆಂಕಪ್ಪ ಸುಗುತೇಕರ ಅವರನ್ನು ದೇವರು ಎಂದಿಗೂ ಕೈ ಬಿಟ್ಟಿಲ್ಲ. ಸದಾ ಹಸನ್ಮುಖಿಯಾಗಿರುತ್ತಿದ್ದ ವೆಂಕಪ್ಪ ತಮ್ಮ ಮೇಲೆ ಯಾರೇ ರೇಗಿದರೂ ತಾನೆಂದೂ ಸಿಟ್ಟು ತೋರುತ್ತಿರಲಿಲ್ಲ. ಆ ವಿನಯತೆಯೇ ಇಂದು ಅವರನ್ನು ಪದ್ಮಶ್ರೀ ಗರಿಗೆ ತಂದು ನಿಲ್ಲಿಸಿದೆ. ಕಾಲಿಗೆ ಚಪ್ಪಲಿಯನ್ನೂ ಮೆಟ್ಟದೇ ಗೋಂಧಳಿ ಹಾಡು ಹಾಡುತ್ತಿದ್ದ ಸಾಮಾನ್ಯನೊಬ್ಬ ಪದ್ಮಶ್ರೀ ಪಡೆಯುತ್ತಿರುವುದು ಎಂಥವರೂ ಎದ್ದು ನಿಂತು ಕುಣಿಯುವಷ್ಟು ಸಂಭ್ರಮವನ್ನು ಹೊತ್ತು ತಂದಿದೆ.
ಕಾಲಿಗೆ ಚಪ್ಪಲಿಯನ್ನೇ ಹಾಕದ ವೆಂಕಪ್ಪ ಜೀವನದ ಹಾದಿ ಇದು: ಮೇ 1 1943ರಲ್ಲಿ ಜನಿಸಿದ ವೆಂಕಪ್ಪ ಸುಗುತೇಕರ ತಮ್ಮ ತಂದೆ ಅಂಬಾಜಿ ಸುಗುತೇಕರ ಅವರಿಂದ ಪ್ರಭಾವಿತರಾಗಿ ಗೋಂಧಳಿ ಕಲಿತರು. ಇವರಿಗೆ ಮೂವರು ಹೆಣ್ಣುಮಕ್ಕಳು, ಇಬ್ಬರು ಗಂಡು ಮಕ್ಕಳಿದ್ದು, ಮಕ್ಕಳಾದ ಹಣಮಂತ ಹಾಗೂ ಅಂಬಾಜಿ ಕೂಡ ಗೋಂಧಳಿ ಕಲೆಯನ್ನು ಮುಂದುವರೆಸಿದ್ದಾರೆ.
ಸಾವಿರಕ್ಕೂ ಹೆಚ್ಚು ಗೋಂದಳಿ ಪದ ಹಾಡಿದ ಗರಿಮೆ: ಗೋಂಧಳಿ ಕಲೆಯನ್ನು ಚಿಕ್ಕಂದಿನಿಂದಲೂ ಕಲಿತಿರುವ ವೆಂಕಪ್ಪ ಎಂದಿಗೂ ಶಾಲೆ ಮೆಟ್ಟಿಲು ಹತ್ತಿದವರಲ್ಲ. ಸಾವಿರಕ್ಕೂ ಹೆಚ್ಚು ಗೋಂಧಳಿ ಪದ, ನೂರಕ್ಕೂ ಅಧಿಕ ಗೋಂಧಳಿ ಕಥೆಗಳನ್ನು ಹೇಳುವ ಅವರು ತಮ್ಮ ಕುಟುಂಬಕ್ಕೂ ಇದೇ ಗೋಂಧಳಿ ಸಂಸ್ಕಾರ ನೀಡಿದ್ದಾರೆ.
ಆಕಾಶವಾಣಿಯಲ್ಲಿ 52 ಬಾರಿ, ದೂರದರ್ಶನದಲ್ಲಿ 18 ಬಾರಿ ಸೇರಿ ದೇಶದ ನಾನಾ ಭಾಗಗಳಲ್ಲಿ ಅವರು ಕಾರ್ಯಕ್ರಮಗಳನ್ನು ನೀಡಿದ್ದಾರೆ.
ಕಳೆದ ವರ್ಷ ಮನ್ ಕಿ ಬಾತ್‌ನಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರು ಗೋಂಧಳಿ ಪರಂಪರೆ ಉಳಿಸಿಕೊಂಡು ಬಂದಿರುವ ವೆಂಕಪ್ಪ ಸುಗುತೇಕರ ಸಾಧನೆಯನ್ನು ಸ್ಮರಿಸಿದ್ದರು. ಭಾನುವಾರ ನಡೆಯಲಿರುವ ಗಣರಾಜ್ಯೋತ್ಸವ ಪರೇಡ್ ವೀಕ್ಷಣೆಗೂ ಅವರಿಗೆ ಕೇಂದ್ರ ಸರ್ಕಾರದ ಅಧಿಕೃತ ಆಹ್ವಾನ ಬಂದಿದ್ದು, ಶನಿವಾರ ಸಂಜೆಯೇ ಅವರು ದೆಹಲಿಗೆ ತೆರಳಿದ್ದಾರೆ.