ಫೆಬ್ರುವರಿ ತಿಂಗಳಲ್ಲಿ ಕರಗಾಂವ ಏತ ನೀರಾವರಿ ಯೋಜನಗೆ ಚಾಲನೆ:ಶಾಸಕ ದುರ್ಯೋಧನ ಐಹೊಳೆ
ಚಿಕ್ಕೋಡಿ:ಸಹಸ್ರಾರು ಎಕರೆ ಜಮೀನು ಹಸಿರಾಗಲಿರುವ ಕರಗಾಂವ ಏತ ನೀರಾವರಿ ಯೋಜನೆಗೆ ಫೆಬ್ರುವರಿ ತಿಂಗಳಲ್ಲಿ ಭೂಮಿಪೂಜೆ ನೆರವೇರಿಸಲಾಗುವುದು. 100 ಕೋಟಿ ರೂ.ಮೊತ್ತದಲ್ಲಿ ಮೊದಲ ಹಂತದ ಕಾಮಗಾರಿಯನ್ನು ಕೈಗೆತ್ತಿಕೊಳ್ಳಲು ಸಕಲ ಸಿದ್ಧತೆ ನಡೆದಿದೆ” ಎಂದು ರಾಯಬಾಗ ಶಾಸಕ ದುರ್ಯೋಧನ ಐಹೊಳೆ ಹೇಳಿದರು.
ಚಿಕ್ಕೋಡಿ ತಾಲೂಕಿನ ಕರೋಶಿ ಗ್ರಾಮದಲ್ಲಿ 2 ಕೋಟಿ ರೂ. ಮೊತ್ತದ ರಸ್ತೆ ಸುಧಾರಣಾ ಕಾಮಗಾರಿಗೆ ಭೂಮಿಪೂಜೆ ನೆರವೇರಿಸಿ ಮಾತನಾಡಿ, “ರಾಜ್ಯ ಸರ್ಕಾರದ ಬಳಿ ಅನುದಾನದ ಕೊರತೆ ಇದ್ದು, ಕೇಂದ್ರ ಸರ್ಕಾರದ ಕೇಂದ್ರ ರಸ್ತೆ ನಿಧಿ ಯೋಜನೆ ಅಡಿಯಲ್ಲಿ 2 ಕೋಟಿ ರೂ ಅನುದಾನದಲ್ಲಿ 1.7 ಕಿ.ಮೀ ಉದ್ದದ ರಸ್ತೆ ಅಭಿವೃದ್ಧಿ ಕಾಮಗಾರಿ ಕೈಗೊಳ್ಳಲಾಗುತ್ತಿದ್ದು, ಗುಣಮಟ್ಟದ ರಸ್ತೆ ನಿರ್ಮಾಣ ಮಾಡುವಂತೆ ಅಧಿಕಾರಿಗಳಿಗೆ ಹಾಗೂ ಗುತ್ತಿಗೆದಾರರಿಗೆ ಸಲಹೆ ನೀಡಿದರು.
ಮಾಜಿ ಜಿಲ್ಲಾ ಪಂಚಾಯಿತಿ ಸದಸ್ಯ ಮಹೇಶ ಭಾತೆ ಮಾತನಾಡಿ, “ಕಳೆದ ಹಲವು ವರ್ಷಗಳಿಂದ ಕರೋಶಿ ಗ್ರಾಮದ ಮುಖ್ಯ ರಸ್ತೆಯನ್ನು ಅಭಿವೃದ್ಧಿ ಮಾಡುವಂತೆ ಕೇಂದ್ರ ಸರ್ಕಾರಕ್ಕೆ ಶಾಸಕ ಐಹೊಳೆ ಪ್ರಸ್ತಾವನೆ ಸಲ್ಲಿಸಿದರು. ಇದೀಗ ಅನುದಾನ ಬಿಡುಗಡೆಯಾಗಿದ್ದು, ಉತ್ತಮ ರಸ್ತೆ ನಿರ್ಮಾಣ ಮಾಡಿ ಸಾರ್ವಜನಿಕರಿಗೆ ಅನುಕೂಲ ಮಾಡಿಕೊಡಬೇಕೆಂದು ಒತ್ತಾಯಿಸಿದರು.
ಈ ಸಂದರ್ಭದಲ್ಲಿ ಕರೋಶಿ ಗ್ರಾಮ ಪಂಚಾಯಿತಿ ಅಧ್ಯಕ್ಷ ಪಂಚಾಕ್ಷರಿ ಹಳಿಜೋಳಿ, ಮುಖಂಡ ವಿಜಯ ಕೋಠಿವಾಲೆ, ಸದಾಶಿವ ಘೋರ್ಪಡೆ, ಎಸ್ ಬಿ ಜಮಾದಾರ, ಕಲ್ಲಪ್ಪ ಕುರುಬರ, ಬಾಬುರಾವ ಪಾಟೀಲ, ರಾಜು ಹರಗನ್ನವರ, ವಿಜಯ ಮಾಂಜರೇಕರ, ಅಧಿಕಾರಿಗಳಾದ ಕಾಕೋಳ, ಜಾಲಿಹಾಳ ಮುಂತಾದವರು ಉಪಸ್ಥಿತರಿದ್ದರು.