ಬೆಳಗಾವಿ : ತೀವ್ರವಾಗಿ ಜ್ವರದಿಂದ ಬಳಲುತ್ತಿದ್ದ ಮಹಿಳೆಯನ್ನು ಗ್ರಾಮಸ್ಥರು ಕಟ್ಟಿಗೆಯ ಸ್ಟ್ರೇಚರ್ ನಲ್ಲಿ ಹಾಕಿ ಸುಮಾರು ಐದು ಕಿ.ಮೀಟರ್ ವರೆಗೆ ನಡೆದುಕೊಂಡು ಆಸ್ಪತ್ರೆಗೆ ಸೇರಿಸಿದ ಘಟನೆ ಖಾನಾಪುರ ತಾಲೂಕಿನ ಅಂಗಾವ್ ಗ್ರಾಮದಲ್ಲಿ ನಡೆದಿದೆ.
36 ವರ್ಷದ ಹರ್ಷದಾ ಘಾಡಿ ಎಂಬ ಮಹಿಳೆ ತೀವ್ರ ಜ್ವರದಿಂದ ಬಳಲುತ್ತಿದ್ದರು. ಆದರೆ ಖಾನಾಪುರ ಘಟ್ಟ ಪ್ರದೇಶದ ಕಾಡಂಚಿನಲ್ಲಿರುವ ಅಂಗಾವ್ ಗ್ರಾಮಕ್ಕೆ ರಸ್ತೆ ಸಂಪರ್ಕ ಸೇತುವೆ ಯಾವುದೂ ಇಲ್ಲ.
ಮೋಬೈಲ್ ನೆಟ್ವರ್ಕ್ ಬೇಕಾದರೆ ಗ್ರಾಮದಿಂದ ಒಂದು ಕಿ.ಮೀಟರ್ ದೂರ ಸಾಗಬೇಕು. ಇಂತಹ ಪರಿಸ್ಥಿತಿಯಲ್ಲಿ ಗ್ರಾಮದ ಜನ ಮಹಿಳೆಗೆ ಹೆಗಲು ಕೊಟ್ಟು ಪ್ರಾಣ ಉಳಿಸಿದ್ದಾರೆ.
ನಿರಂತರ ಮಳೆ ಸುರಿಯುತ್ತಿರುವ ಮಧ್ಯೆಯೇ ಅಸ್ವಸ್ಥ ಮಹಿಳೆಯನ್ನು ಕಟ್ಟಿಗೆಮೇಲೆ ಇಟ್ಟುಕೊಂಡು ಸಾಗಿದ ಜನರು ಸುಮಾರು ಒಂದು ಕಿ. ಮೀಟರ್ ಕ್ರಮಿಸಿದಾಗ ಮೋಬೈಲ್ ಟವರ್ ಹಿಡಿದು 108 ಕರೆ ಮಾಡಿದ್ದಾರೆ.
ಆ್ಯಂಬುಲೆನ್ಸ್ ಬರುವ ರಸ್ತೆ ಇರುವ ಅರಣ್ಯ ಇಲಾಖೆ ಚೆಕ್ ಪೋಸ್ಟ್ ಚಿಕಲೆ ವರೆಗೂ ಮಹಿಳೆಯನ್ನು ಹೊತ್ತುತಂದಿದ್ದಾರೆ.