ಗದಗ: ಸಂವಿಧಾನ ಎತ್ತಿ ಹಿಡಿಯುವ, ನ್ಯಾಯಾಂಗದ ಬಗ್ಗೆ ಪ್ರಶ್ನಿಸಬಾರದು ಹಾಗೂ ಗೌರವದಿಂದ ಇರಬೇಕಾದ ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ಅವರು ಜಸ್ಟಿಸ್ ಮೈಕೆಲ್ ಕುನ್ನಾ ಅವರ ಬಗ್ಗೆ ಏಜೆಂಟ್ ಎಂದು ಹೇಳಿರುವುದು, ಆಯೋಗದ ಬಗ್ಗೆ ಲಘುವಾಗಿ ಟೀಕೆ ಮಾಡಿರುವುದು ಅತ್ಯಂತ ದುರ್ದೈವದ ಸಂಗತಿಯಾಗಿದ್ದು, ಪ್ರಹ್ಲಾದ್ ಜೋಶಿ ಅವರು ಕೂಡಲೇ ರಾಜೀನಾಮೆ ನೀಡಬೇಕು ಎಂದು ಕಾನೂನು, ಪ್ರವಾಸೋದ್ಯಮ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಎಚ್.ಕೆ. ಪಾಟೀಲ್ ಆಗ್ರಹಿಸಿದರು.
ನಗರದಲ್ಲಿ ಬುಧವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ‘ಕಳೆದ ಕೆಲ ದಿನಗಳಿಂದ ಉನ್ನತ ಹಾಗೂ ಎತ್ತರದ ಹುದ್ದೆಗಳಲ್ಲಿರುವ ಜವಾಬ್ದಾರಿ ವ್ಯಕ್ತಿಗಳು ಮನಬಂದಂತೆ ಮಾತನಾಡುತ್ತಿದ್ದಾರೆ. ನ್ಯಾಯಾಂಗದ ಭಾಗವಾಗಿರುವ ನ್ಯಾಯಮೂರ್ತಿಗಳು ಹಾಗೂ ತನಿಖಾ ಸಂಸ್ಥೆಯ ನೇತೃತ್ವ ಹೊಂದಿರುವ ಆಯೋಗಗಳಿಗೂ ಮನಬಂದಂತೆ ಮಾತನಾಡಿರುವುದು ಅಕ್ಷಮ್ಯ ಅಪರಾಧವಾಗಿದೆ’ ಎಂದರು.
‘ಪ್ರಹ್ಲಾದ್ ಜೋಶಿ ನಮ್ಮ ರಾಜ್ಯದ ತನಿಖಾ ಆಯೋಗದಕ್ಕೆ ಅಗೌರವ ಹಾಗೂ ಅಸಂಬದ್ಧ ರೀತಿ ನಡೆದುಕೊಂಡಿರುವುದು ಅಕ್ಷಮ್ಯ ಅಪರಾಧವಾಗಿದ್ದು, ರಾಷ್ಟ್ರಪತಿಗಳು ಅವರನ್ನು ತಕ್ಷಣ ಮಂತ್ರಿ ಸ್ಥಾನದಿಂದ ತೆಗೆದುಹಾಕಬೇಕು. ಅಲ್ಲದೇ ರಾಜಕೀಯ ಭಯ, ಸತ್ಯಾನ್ವೇಶನೆ ನಡೆಯಬಾರದು, ಭ್ರಷ್ಟಾಚಾರಿಗಳಿಗೆ ಶಿಕ್ಷೆ ಆಗಬಾರದು ಎಂಬ ಹಾದಿಯಲ್ಲಿ ಹೊರಟಿರುವ ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ಅವರ ಮೇಲೆ ರಾಷ್ಟ್ರಪತಿಗಳು ಕಾನೂನು ಕ್ರಮಕೈಗೊಳ್ಳುವ ಮೊದಲೇ ತಕ್ಷಣ ರಾಜೀನಾಮೆ ನೀಡಬೇಕು’ ಎಂದು ಒತ್ತಾಯಿಸಿದರು.
‘ಜಸ್ಟಿಸ್ ಮೈಕೆಲ್ ಕುನ್ನಾ ಅವರು ಕಡತಗಳನ್ನು ಪರಿಶೀಲಿಸಿ 7223 ಕೋಟಿ ರೂ. ಅವ್ಯವಹಾರದ ಸತ್ಯಶೋಧನೆ ನಡೆಸಿದ್ದಾರೆ. ನೂರಾರು ಕೋಟಿ ರೂ. ವೆಚ್ಚಗಳ ಕುರಿತು ಲೆಕ್ಕಪತ್ರಗಳಿಲ್ಲ, ಕಾಗದಗಳೂ ಇಲ್ಲ. ಯಡಿಯೂರಪ್ಪ ಸಿಎಂ ಹಾಗೂ ಶ್ರೀರಾಮುಲು ಆರೋಗ್ಯ ಸಚಿವರಾಗಿದ್ದ ಸಂದರ್ಭದಲ್ಲಿ ಬ್ರಹ್ಮಾಂಡ ಭ್ರಷ್ಟಾಚಾರ ವನ್ನು ಎಳೆಎಳೆಯಾಗಿ ಬಿಚ್ಚಿಟ್ಟಿದಾರೆ’ ಎಂದರು.
ಜಸ್ಟಿಸ್ ಮೈಕೆಲ್ ಕುನ್ನಾ ಅವರ ಆಯೋಗವು ಸಲ್ಲಿಸಿದ ಮಧ್ಯಂತರ ವರದಿಯಲ್ಲಿ ಯಡಿಯೂರಪ್ಪ ಅವರು ಸಿಎಂ ಹಾಗೂ ಶ್ರೀರಾಮುಲು ಅವರು ಆರೋಗ್ಯ ಸಚಿವರಾಗಿದ್ದ ಸಂದರ್ಭದಲ್ಲಿ 3 ಲಕ್ಷ ಪಿಪಿಇ ಕಿಟ್ ಗಳನ್ನು 2,117 ರೂ. ನಂತೆ ಖರೀದಿಸಿ ಮಾರಾಟ ಮಾಡಿದ್ದಾರೆ.ಕೇಂದ್ರ ಸರ್ಕಾರದ ನಿಯಮಗಳನ್ನು ಉಲ್ಲಂಘಿಸಿ ಮಾನ್ಯತೆ ಇಲ್ಲದ 14 ಖಾಸಗಿ ಲ್ಯಾಬೊರೇಟೊರಿಗಳಿಗೆ ಕೋಟ್ಯಂತರ ಹಣ ಸಂದಾಯ ಮಾಡಿದ್ದಾರೆ. ಮತ್ತು ಇನ್ನೂ 8 ಲ್ಯಾಬೊರೇಟೊರಿಗಳಿಗೆ 4 ಕೋಟಿ ಗೂ ಅಧಿಕ ಹಣ ಸಂದಾಯ ಮಾಡಿರುವುದುದನ್ನು ಆಯೋಗ ತರಾಟೆ ತೆಗೆದುಕೊಂಡಿದೆ.
‘ಕೋವಿಡ್ ಸನ್ನಿವೇಶದಲ್ಲಿ ಭ್ರಷ್ಟಾಚಾರ ಮಾಡಿರುವುದನ್ನು ಆಯೋಗ ಹೇಳಿದೆ. ಅದನ್ನು ಸಹಿಸಿಕೊಳ್ಳಲಾಗದೇ ಜೋಶಿ ಅವರು ಪ್ರತಿಕ್ರಿಯಿಸಿದ್ದಾರೆ. ಸತ್ಯವನ್ನು ಎದುರಿಸುವ ಧೈರ್ಯ ಇಲ್ಲದ ಜೋಶಿ ಅವರು ಜಸ್ಟಿಸ್ ಕುನ್ನಾ ಅವರ ಆಯೋಗದ ಬಗ್ಗೆ ಏಜೆಂಟ್ ಎಂದು ಕರೆದಿರುವುದು, ಮದ್ಯಂತರ ವರದಿಗಳ ಬಗ್ಗೆ ಟೀಕೆ ಮಾಡಿರುವುದು ಸಂವಿಧಾನಕ್ಕೆ ಮಾಡಿದ ಅಪಚಾರ, ಕಾನೂನು ಬಾಹಿರವಾಗಿರುವ ಅವರ ಮಾತು ಇದೊಂದು ಗುನ್ನೆಯ ಹಾಗೆ ಎಂದು ಭಾವಿಸುತ್ತೇನೆ’ ಎಂದರು.
‘ಜೋಶಿ ಅವರ ಉದ್ದೇಶ ಇಂತಹ ಮಹತ್ವದ ತೀರ್ಪು ಬರುವ ಸಂದರ್ಭದಲ್ಲಿ ಸತ್ಯ ಸಂಶೋಧನೆ, ಸತ್ಯಾನ್ವೇಶನೆಯನ್ನು ತಡೆಯಲು ಜೋಶಿ ಅವರು ಆಡಿದ ಮಾತುಗಳು ಆಯೋಗದ ಘನತೆಯನ್ನು, ಗೌರವವನ್ನು ಕಡಿಮೆ ಮಾಡಬೇಕು, ಅವರ ಅಧಿಕಾರದ ಹುದ್ದೆಯಿಂದ ಬೆದರಿಕೆಯ ರೂಪದಲ್ಲಿ ರಾಜಕೀಯ ಇಂಟಪ್ರಿಯನ್ಸ್ ಮಾಡುವ ಮೂಲಕ ಶಿಕ್ಷಾರ್ಹವಾಗಿರುವ ಹೇಳಿಕೆ ನೀಡಿದ್ದಾರೆ’ ಎಂದರು.