ಬೆಂಗಳೂರು, ಏ.22- ಬೇಕಾಬಿಟ್ಟಿ ವಾಹನ ಸಂಚಾರದಿಂದ ನಿನ್ನೆ ನಗರದಲ್ಲಿ ವಾಹನ ದಟ್ಟಣೆ ಹೆಚ್ಚಾಗಿದ್ದ ಹಿನ್ನೆಲೆಯಲ್ಲಿ ಎಚ್ಚೆತ್ತುಕೊಂಡಿರುವ ಸಂಚಾರಿ ಪೊಲೀಸರು ಇಂದು ನಗರದಲ್ಲಿ ಲಾಕ್‍ಡೌನ್ ಬಿಗಿಗೊಳಿಸಿದ್ದಾರೆ. ಬೆಳ್ಳಂಬೆಳಗ್ಗೆ ಕಾರ್ಯಾಚರಣೆಗಿಳಿದ ಪೊಲೀಸರು ಪ್ರಮುಖ ರಸ್ತೆಗಳಲ್ಲಿ ಬ್ಯಾರಿಕೇಡ್‍ಗಳನ್ನು ಹಾಕಿ ಪ್ರತಿಯೊಂದು ವಾಹನಗಳ ತಪಾಸಣೆ ನಡೆಸಿ ಅನಗತ್ಯವಾಗಿ ಓಡಾಡುತ್ತಿದ್ದ 1000ಕ್ಕೂ ಹೆಚ್ಚು ವಾಹನಗಳನ್ನು ವಶಪಡಿಸಿಕೊಂಡಿದ್ದಾರೆ.
ಇದುವರೆಗೂ 759 ವಾಹನಗಳನ್ನು ವಶಪಡಿಸಿಕೊಂಡಿದ್ದು, ತಪಾಸಣೆ ಮುಂದುವರಿಸಿರುವ ಪೊಲೀಸರು ರಸ್ತೆಯಲ್ಲಿ ಓಡಾಡುವ ಪ್ರತಿಯೊಂದು ವಾಹನಗಳ ನಂಬರ್ ನೋಟ್ ಮಾಡಿಕೊಳ್ಳುತ್ತಿದ್ದು, ವಾಹನ ಸವಾರರ ಮಾಹಿತಿ ಪಡೆದುಕೊಳ್ಳುತ್ತಿದ್ದಾರೆ
ನಿನ್ನೆಯವರೆಗೂ 39 ಸಾವಿರ ವಾಹನಗಳನ್ನು ವಶಪಡಿಸಿಕೊಂಡಿದ್ದ ಪೊಲೀಸರು ಸೀಜ್ ಮಾಡಲಾಗಿದ್ದ ವಾಹನಗಳನ್ನು ಆರ್‍ಟಿ ನಗರದ ಮೈದಾನದಲ್ಲಿರಿಸಿದ್ದಾರೆ. ಅಗತ್ಯ ಸೇವೆ ಯೋಜನೆಯಡಿ ಓಡಾಡುವ ಬಿಬಿಎಂಪಿ, ಬಿಡಬ್ಲ್ಯೂಎಸ್‍ಎಸ್‍ಬಿ, ಆರೋಗ್ಯ ಇಲಾಖೆ ಸಿಬ್ಬಂದಿಗಳ ವಾಹನಗಳನ್ನು ತಪಾಸಣೆ ನಡೆಸಲಾಗುತ್ತದೆ.
ಪಾಸ್ ಇಲ್ಲದೆ ಸಂಚಾರ ಮಾಡುತ್ತಿದ್ದ ವಾಹನಗಳನ್ನು ನಿರ್ದಾಕ್ಷಿಣ್ಯವಾಗಿ ಸೀಜ್ ಮಾಡಲಾಗುತ್ತಿದೆ. ಮೈಸೂರು ರಸ್ತೆಯಲ್ಲಿ ವ್ಯಕ್ತಿಯೊಬ್ಬ ಬೈಕ್ ಮೇಲೆ ಮಲ್ಯ ಆಸ್ಪತ್ರೆ ಸಿಬ್ಬಂದಿ ಎಂದು ಬೋರ್ಡ್ ಹಾಕಿಕೊಂಡು ಓಡಾಡುತ್ತಿದ್ದ. ಆತನ ಐಡಿ ಕಾರ್ಡ್ ಕೇಳಿದಾಗ ಮನೆಯಲ್ಲಿ ಬಿಟ್ಟು ಬಂದಿದ್ದೇನೆ ಎಂದು ಪೊಲೀಸರೊಂದಿಗೆ ವಾಗ್ವಾದಕ್ಕಿಳಿದ. ಆದರೆ, ಇದಾವುದನ್ನೂ ಲೆಕ್ಕಿಸದ ಪೊಲೀಸರು ಆತನ ವಾಹನವನ್ನು ಸೀಜ್ ಮಾಡಿದ್ದಾರೆ.
ಇದೇ ರೀತಿ ನಗರದ ಅಷ್ಟ ದಿಕ್ಕುಗಳಲ್ಲೂ ದಿಗ್ಬಂಧನ ವಿಧಿಸಿರುವ ಪೊಲೀಸರು ಪ್ರತಿಯೊಂದು ವಾಹನವನ್ನೂ ತಪಾಸಣೆ ನಡೆಸುತ್ತಿದ್ದಾರೆ. ಪರ್ಯಾಯ ರಸ್ತೆ ಬಂದ್: ರಸ್ತೆಗಳಲ್ಲಿ ಬೇಕಾಬಿಟ್ಟಿ ವಾಹನ ಓಡಾಡುವುದನ್ನು ತಗ್ಗಿಸಲು ನಗರದ ಪರ್ಯಾಯ ರಸ್ತೆಗಳನ್ನು ಪೊಲೀಸರು ಸಂಪೂರ್ಣ ಬಂದ್ ಮಾಡಿದ್ದಾರೆ.
ಅರ್ಧ ಕಿಲೋ ಮೀಟರ್ ಸಾಗಬೇಕಾದರೆ ಐದು ಕಿಲೋ ಮೀಟರ್‍ಗೂ ಹೆಚ್ಚು ಪ್ರದೇಶವನ್ನು ಸುತ್ತಿಹಾಕಿಕೊಂಡು ಬರುವಂತೆ ವ್ಯವಸ್ಥೆ ಮಾಡಿದ್ದಾರೆ.
ಕೆಲವು ಪರ್ಯಾಯ ಮಾರ್ಗಗಳನ್ನು ಸಂಪೂರ್ಣ ಬಂದ್ ಮಾಡಲಾಗಿದ್ದು, ವಾಹನ ಸವಾರರು ಪ್ರಮುಖ ರಸ್ತೆಗಳಲ್ಲೇ ಸಂಚರಿಸಬೇಕಾಗಿದೆ.