ನವದೆಹಲಿ, ಏ.22- ವಿಶ್ವಾದ್ಯಂತ ಕಾಡಿರುವ ಕೊರೊನಾ ಸೋಂಕನ್ನು ಹಿಮ್ಮೆಟ್ಟಿರುವ ನಿಟ್ಟಿನಲ್ಲಿ ಈಗಾಗಲೇ ಹಲವಾರು ರಾಷ್ಟ್ರಗಳಲ್ಲಿ ಲಾಕ್‍ಡೌನ್‍ಅನ್ನು ಜೂನ್‍ವರೆಗೂ ಮುಂದುವರಿಸಲಾಗಿದೆ. ಇದರ ನಡುವೆ ಭಾರತದಲ್ಲೂ ಮೇ 3ರ ನಂತರ ಮತ್ತೆ ಇದೇ ಪರಿಸ್ಥಿತಿ ಮುಂದುವರಿಯಲಿದೆಯೇ ಎಂಬ ಚರ್ಚೆ ಶುರುವಾಗಿದೆ.
ಅಮೆರಿಕ, ಸ್ಪೇನ್, ಇಟಲಿ, ಫ್ರಾನ್ಸ್, ರಷ್ಯಾ ಸೇರಿದಂತೆ ಮುಂದುವರಿದ ರಾಷ್ಟ್ರಗಳು ಕೊರೊನಾ ಹತೋಟಿಗೆ ತರಲು ಲಾಕ್‍ಡೌನ್‍ಅನ್ನು ಕಟ್ಟುನಿಟ್ಟಾಗಿ ಜಾರಿಗೆ ತಂದು ಮುಂಬರುವ ಮೇ ಅಂತ್ಯದವರೆಗೆ ಯಾವುದೇ ರೀತಿಯಲ್ಲೂ ಸೋಂಕು ಹರಡದಂತೆ ಮುನ್ನೆಚ್ಚರಿಕೆ ಕ್ರಮ ಕೈಗೊಳ್ಳುತ್ತಿದೆ
ಏಷ್ಯಾದ ರಾಷ್ಟ್ರಗಳಾದ ಸಿಂಗಪೂರ್, ಮಲೇಷಿಯಾ, ಇಂಡೋನೇಷ್ಯಾ ಸೇರಿದಂತೆ ಇತರ ರಾಷ್ಟ್ರಗಳಲ್ಲಿ ಜೂನ್ 1ರ ವರೆಗೆ ಲಾಕ್‍ಡೌನ್ ಘೋಷಿಸಿದೆ.ಇದರ ನಡುವೆ ಭಾರತದಲ್ಲಿ ಸೋಂಕಿನ ಪ್ರಮಾಣ ಹಾಗೂ ವೈದ್ಯಕೀಯ ಚಿಕಿತ್ಸೆಯನ್ನು ಗಮನದಲ್ಲಿಟ್ಟುಕೊಂಡು ಪ್ರಧಾನಿ ನರೇಂದ್ರ ಮೋದಿ ಅವರಿಗೆ ಕ್ಷಣ ಕ್ಷಣದ ಮಾಹಿತಿ ನೀಡಲಾಗುತ್ತಿದೆ.
ಮೂಲಗಳ ಪ್ರಕಾರ, ವಿಶ್ವ ಆರೋಗ್ಯ ಸಂಸ್ಥೆ ಲಾಕ್‍ಡೌನ್ ಹಿಂಪಡೆಯುವುದು ಬೇಡ ಎಂಬ ಸೂಚನೆ ನೀಡಿದೆ. ಕೆಲ ಅಧಿಕಾರಿಗಳು ಸಹ ಭಾರತದಲ್ಲಿ ಲಾಕ್‍ಡೌನ್ ಮುಂದುವರಿಸುವ ಅನಿವಾರ್ಯತೆಯನ್ನು ಮುಂದಿಟ್ಟಿದ್ದಾರೆ ಎಂದು ಹೇಳಲಾಗುತ್ತಿದೆ.
ಪರಿಸ್ಥಿತಿ ಅವಲೋಕಿಸಿ ಪ್ರಧಾನಿ ನರೇಂದ್ರ ಮೋದಿ ಅವರು ಮುಂದಿನ ವಾರದೊಳಗೆ ಸೂಕ್ತ ನಿರ್ಧಾರ ಕೈಗೊಳ್ಳುತ್ತಾರೆ ಎಂದು ಹಿರಿಯ ಅಧಿಕಾರಿಗಳು ತಿಳಿಸಿದ್ದಾರೆ. ಇದರಿಂದಾಗಿ ಲಾಕ್‍ಡೌನ್ ಮುಂದುವರಿಯುತ್ತದೆ ಎಂಬ ಮಾತುಗಳು ಕೇಳಿಬರುತ್ತಿವೆ