ಬೆಳಗಾವಿಯ ಪೀರನವಾಡಿ ಮತ್ತು ಮಚ್ಛೆ ಗ್ರಾಮ ಪಂಚಾಯತಿಗಳನ್ನು ನಗರಸಭೆಗಳನ್ನಾಗಿ ಮೇಲ್ದರ್ಜೆಗೊಳಿಸುವಂತೆ ಜಿಲ್ಲಾ ಉಸ್ತುವಾರಿ ಸಚಿವ ರಮೇಶ ಜಾರಕಿಹೊಳಿ ಅವರಿಗೆ ವಿಧಾನಪರಿಷತ್‍ನ ಸರ್ಕಾರದ ಮುಖ್ಯಸಚೇತಕ ಮಹಾಂತೇಶ ಕವಟಗಿಮಠ ಒತ್ತಾಯಿಸಿದರು.
ಸೋಮವಾರ ಜಿಲ್ಲಾ ಪಂಚಾಯತಿಯ ಸಭಾಂಗಣದಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ರಮೇಶ ಜಾರಕಿಹೊಳಿ ನೇತೃತ್ವದಲ್ಲಿ ಬೆಳಗಾವಿ ತಾಲೂಕಿನ ಸರ್ಕಾರದ ವಿವಿಧ ಕಾರ್ಯಕ್ರಮಗಳ ಅನುಷ್ಠಾನದ ಪ್ರಗತಿ ಪರಿಶೀಲನಾ ಸಭೆಯನ್ನು ಹಮ್ಮಿಕೊಳ್ಳಲಾಗಿತ್ತು. ಈ ವೇಳೆ ವಿಧಾನಪರಿಷತ್ ಸದಸ್ಯ ಮಹಾಂತೇಶ ಕವಟಗಿಮಠ ಅವರು ಪೀರನವಾಡಿ ಮತ್ತು ಮಚ್ಛೆ ಗ್ರಾಮ ಪಂಚಾಯತಿಯಲ್ಲಿ 50 ಸದಸ್ಯರನ್ನು ಹೊಂದಿದ್ದಾರೆ. ಅಷ್ಟೇ ಅಲ್ಲದೇ 25 ಸಾವಿರ ಜನಸಂಖ್ಯೆಯನ್ನು ಹೊಂದಿವೆ.
ಹೀಗಾಗಿ ಈ ಎರಡೂ ಪಂಚಾಯತಿಗಳನ್ನು ಮೇಲ್ದರ್ಜೆಗೆ ಏರಿಸಬೇಕು ಎಂದು ಸಭೆಯಲ್ಲಿ ಒತ್ತಾಯಿಸಿದರು. ಇದಕ್ಕೆ ಉತ್ತರಿಸಿದ ಸಚಿವ ರಮೇಶ ಜಾರಕಿಹೊಳಿ ಅವರು ಈಗ ಸೂಕ್ಷ್ಮ ಪರಿಸ್ಥಿತಿಯಿದೆ. ಹೀಗಾಗಿ ಸರ್ಕಾರದ ನಿರ್ದೇಶನ ಇಲ್ಲದೇ ಏನೂ ಮಾಡಲು ಸಾಧ್ಯವಿಲ್ಲ. ಆದ್ದರಿಂದ ಮುಂದಿನ ಡಿಸೆಂಬರ್ ಒಳಗೆ ಸಾಂಬ್ರಾ, ಗಣೇಶಪುರ, ಮಚ್ಛೆ, ಪೀರನವಾಡಿ ಸೇರಿ ಜಿಲ್ಲೆಯ ಹಲವು ಗ್ರಾಮಗಳನ್ನು ಮೇಲ್ದರ್ಜೆಗೆ ಏರಿಸಲು ಸರ್ಕಾರಕ್ಕೆ ಪ್ರಸ್ತಾವನೆ ಕಳಿಸುವಂತೆ ಅಧಿಕಾರಿಗಳಿಗೆ ಸೂಚಿಸಿದರು.
ಇದೇ ವೇಳೆ ಮಾತನಾಡಿದ ಶಾಸಕ ಅಭಯ್ ಪಾಟೀಲ್ ಅವರು ಮಚ್ಛೆ ಮತ್ತು ಪೀರನವಾಡಿ ಎರಡೂ ಈಗಾಗಲೇ ಕೂಡಿವೆ. ಹೀಗಾಗಿ ನಗರಸಭೆಯನ್ನಾಗಿ ಮಾಡುವಂತೆ ಜಿಲ್ಲಾ ಉಸ್ತುವಾರಿ ಸಚಿವರಲ್ಲಿ ಮನವಿ ಮಾಡಿಕೊಂಡರು. ಬಳಿಕ ಮಾತನಾಡಿ ರಮೇಶ ಜಾರಕಿಹೊಳಿ ಅವರು ಜಿಲ್ಲೆಯಲ್ಲಿ ಅಂಕಲಗಿ, ಧೂಪದಾಳ ಸೇರಿದಂತೆ ಸಾಕಷ್ಟು ದೊಡ್ಡ ದೊಡ್ಡ ಗ್ರಾಮಗಳಿವೆ. ಅವುಗಳನ್ನು ಪಟ್ಟಣ ಪಂಚಾಯತಿ, ನಗರಸಭೆ, ಪುರಸಭೆ ಮಾಡುವ ನಿಟ್ಟಿನಲ್ಲಿ ಕ್ರಮ ಕೈಗೊಳ್ಳುವುದಾಗಿ ತಿಳಿಸಿದರು.
ಸಭೆಯಲ್ಲಿ ಕೇಂದ್ರ ಸಚಿವ ಸುರೇಶ ಅಂಗಡಿ, ಶಾಸಕರಾದ ಲಕ್ಷ್ಮೀ ಹೆಬ್ಬಾಳ್ಕರ್, ಅಭಯ್ ಪಾಟೀಲ್, ಅನಿಲ್ ಬೆನಕೆ, ಜಿ.ಪಂ.ಅಧ್ಯಕ್ಷೆ ಆಶಾ ಐಹೊಳೆ, ಜಿಲ್ಲಾಧಿಕಾರಿ ಡಾ.ಎಸ್.ಬಿ.ಬೊಮ್ಮನಹಳ್ಳಿ, ಜಿ.ಪಂ.ಸಿಇಓ ಡಾ.ರಾಜೇಂದ್ರ ಕೆ.ವ್ಹಿ ಸೇರಿ ಇನ್ನಿತರರು ಉಪಸ್ಥಿತರಿದ್ದರು